ಜೋಶ್ ಹ್ಯಾಜಲ್‌ವುಡ್ ಔಟ್, 7 ಕೋಟಿಯ ಆಟಗಾರನಿಗಿಲ್ಲ ಸ್ಥಾನ; ಅಶ್ವಿನ್ ಹೇಳಿದ ಆರ್‌ಸಿಬಿ ಸಂಭಾವ್ಯ ಪ್ಲೇಯಿಂಗ್ 11 ಇಲ್ಲಿದೆ
RCB Playing 11: ಐಪಿಎಲ್ 19ನೇ ಸೀಸನ್ ಮಾರ್ಚ್ 28ರಿಂದ ಆರಂಭವಾಗಲಿದ್ದು, ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆರ್‌ಸಿಬಿ ಮತ್ತು ಎಸ್‌ಆರ್‌ಹೆಚ್ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯದಕ್ಕಾಗಿ ಭಾರತದ ಸ್ಪಿನ್ ದಂತಕಥೆ ರವಿಚಂದ್ರನ್ ಅಶ್ವಿನ್ ಅವರು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಂಭಾವ್ಯ 11 ಆಟಗಾರರನ್ನು ಹೆಸರಿಸಿದ್ದಾರೆ.
ಕಳೆದ ವರ್ಷದ ಹರಾಜಿನಲ್ಲಿ ಆರ್‌ಸಿಬಿ 7 ಕೋಟಿ ರೂಪಾಯಿ ನೀಡಿ ಖರೀದಿಸಿದ್ದ ಎಡಗೈ ಆಲ್‌ರೌಂಡರ್ ವೆಂಕಟೇಶ್ ಅಯ್ಯರ್ ಅವರನ್ನು ಅಶ್ವಿನ್ ತಮ್ಮ ಪ್ಲೇಯಿಂಗ್ ಇಲೆವೆನ್‌ನಿಂದ ಹೊರಗಿಟ್ಟಿದ್ದಾರೆ. ಅಶ್ವಿನ್ ಅವರು ಇಂಗ್ಲೆಂಡ್‌ನ ಉದಯೋನ್ಮುಖ ಪ್ರತಿಭೆ ಜಾಕೋಬ್ ಬೆಥೆಲ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದ್ದಾರೆ.
ಬೆಥೆಲ್ ಸ್ಫೋಟಕ ಬ್ಯಾಟಿಂಗ್ ಶೈಲಿಯು ತಂಡಕ್ಕೆ ಹೆಚ್ಚಿನ ಬಲ ನೀಡಲಿದೆ. ಅವರ ಸೇರ್ಪಡೆಯೊಂದಿಗೆ ಆರ್‌ಸಿಬಿಯ ವಿದೇಶಿ ಆಟಗಾರರ ಸಂಯೋಜನೆಯು ಟೂರ್ನಿಯಲ್ಲೇ ಅತ್ಯಂತ ಬಲಿಷ್ಠವಾಗಿದೆ ಎಂದು ಆರ್.ಅಶ್ವಿನ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆರ್.ಅಶ್ವಿನ್ ಹೆಸರಿಸಿದ ಆಟಗಾರರು
ರವಿಚಂದ್ರನ್ ಅಶ್ವಿನ್ ಅವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮತನಾಡುತ್ತಾ, ಆರ್‌ಸಿಬಿಯ ಸಂಭಾವ್ಯ 11 ಆಟಗಾರರನ್ನು ಹೆಸರಿಸಿದ್ದಾರೆ. ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ಜಾಕೋಬ್ ಬೆಥೆಲ್, ರಜತ್ ಪಾಟೀದಾರ್, ಜಿತೇಶ್ ಶರ್ಮಾ, ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಮಂಗೇಶ್ ಯಾದವ್, ಯಶ್ ದಯಾಳ್ ಮತ್ತು ಸುಯಶ್ ಶರ್ಮಾ ಅವರ ಹೆಸರುಗಳನ್ನು ಹೆಸರಿಸಿದ್ದಾರೆ.
ಅಶ್ವಿನ್ ಆರಿಸಿದ ಆಟಗಾರರ ಸಾಮರ್ಥ್ಯ
* ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್ ಮತ್ತು ಬೆಥೆಲ್ ಅವರಂತಹ ಸ್ಫೋಟಕ ಆಟಗಾರರು ಅಗ್ರ ಕ್ರಮಾಂಕದಲ್ಲಿ ಆಡಲಿದ್ದಾರೆ.
* ಈ ಪಟ್ಟಿಯಲ್ಲಿ ಆಲ್‌ರೌಂಡರ್‌ಗಳನ್ನು ದಂಡೇ ಇದೆ. ರೊಮಾರಿಯೊ ಶೆಫರ್ಡ್ ಮತ್ತು ಕೃನಾಲ್ ಪಾಂಡ್ಯ ತಂಡದ ಉತ್ತಮ ಆಲ್‌ರೌಡರ್ ಆಗಿದ್ದಾರೆ.
* ವೇಗದ ಬೌಲಿಂಗ್ ವಿಭಾಗದಲ್ಲಿ, ಹೊಸ ಚೆಂಡಿನಲ್ಲಿ ಸ್ವಿಂಗ್ ಮಾಡಲು ಭುವನೇಶ್ವರ್ ಕುಮಾರ್ ಮತ್ತು ಡೆತ್ ಓವರ್‌ಗಳಿಗಾಗಿ ಯಶ್ ದಯಾಳ್ ಇದ್ದಾರೆ. ಇನ್ನೂ ಸುಯಶ್ ಶರ್ಮಾ ಮತ್ತು ಕೃನಾಲ್ ಪಾಂಡ್ಯ ಸ್ಪಿನ್ ಜವಾಬ್ದಾರಿ ಹೊರಲಿದ್ದಾರೆ.
ಒಂದು ಸ್ಥಾನಕ್ಕಾಗಿ ಭಾರೀ ಪೈಪೋಟಿ
ಗಾಯದ ಕಾರಣದಿಂದಾಗಿ ಆರ್‌ಸಿಬಿ ತಂಡದ ಆರಂಭಿಕ ಪಂದ್ಯಕ್ಕೆ ಆಸ್ಟ್ರೇಲಿಯಾದ ವೇಗಿ ಜೋಶ್ ಹ್ಯಾಜಲ್‌ವುಡ್ ಅಲಭ್ಯರಾಗಲಿದ್ದಾರೆ. ಐಪಿಎಲ್ 2025ರಲ್ಲಿ ಆರ್‌ಸಿಬಿ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಈ ಬಲಗೈ ವೇಗಿ, ಕಳೆದ ವರ್ಷದ ನವೆಂಬರ್‌ನಲ್ಲಿ ನಡೆದ 'ಶೆಫೀಲ್ಡ್ ಶೀಲ್ಡ್' ಪಂದ್ಯದ ವೇಳೆ ಗಾಯಕ್ಕೆ ಒಳಗಾದ ನಂತರ ಯಾವುದೇ ಪಂದ್ಯವನ್ನು ಆಡಿಲ್ಲ. ಆರಂಭಿಕ ಕೆಲವು ಪಂದ್ಯಗಳಲ್ಲಿ ಜೋಶ್ ಹ್ಯಾಜಲ್‌ವುಡ್ ಅಲಭ್ಯರಾಗಲಿದ್ದಾರೆ. ಈ ಸ್ಥಾನಕ್ಕಾಗಿ ಜಾಕೋಬ್ ಬೆಥೆಲ್, ಜಾಕೋಬ್ ಡಫಿ ಮತ್ತು ಮಂಗೇಶ್ ಯಾದವ್ ನಡುವೆ ತೀವ್ರ ಪೈಪೋಟಿ ನಡೆಯಲಿದೆ ಎಂದು ಆರ್.ಅಶ್ವಿನ್ ಹೇಳಿದ್ದಾರೆ.
"ಈಗ ಆರ್‌ಸಿಬಿ ತಂಡವು ಹ್ಯಾಜಲ್‌ವುಡ್ ಅವರ ಸ್ಥಾನವನ್ನು ಹೇಗೆ ತುಂಬಲಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅವರ ಬಳಿ ಯಶ್ ದಯಾಳ್ ಇದ್ದಾರೆ, ಒಂದು ವೇಳೆ ಅವರು ಇಲ್ಲದಿದ್ದರೆ ಈ ಪ್ರಶ್ನೆಗೆ ಉತ್ತರಿಸುವುದು ಕಷ್ಟವಾಗುತ್ತಿತ್ತು. ಆರ್‌ಸಿಬಿ ತಂಡದಲ್ಲಿ ಜಾಕೋಬ್ ಬೆಥೆಲ್, ಜಾಕೋಬ್ ಡಫಿ ಮತ್ತು ಮಂಗೇಶ್ ಯಾದವ್ ಕೂಡ ಇದ್ದು, ತೀವ್ರ ಪೈಪೋಟಿ ನಡೆಯಲಿದೆ," ಎಂದು ತಿಳಿಸಿದ್ದಾರೆ. ಒಟ್ಟಿನಲ್ಲಿ ಹೇಳುವುದಾದರೆ, ಆರ್.ಅಶ್ವಿನ್ ಅವರು ಆರ್‌ಸಿಬಿಯಲ್ಲಿ ಜೋಶ್ ಹ್ಯಾಜಲ್‌ವುಡ್ ಸ್ಥಾನ ತುಂಬಲು ಮೂವರು ಆಟಗಾರರು ಇದ್ದಾರೆ. ಯಾವುದೇ ಕೊರತೆ ಆಗುವುದಿಲ್ಲ, ಯಾರೇ ಹೊರಗುಳಿದರೂ ಆ ಸ್ಥಾನ ತುಂಬಬಲ್ಲ ಆಟಗಾರರು ತಂಡದಲ್ಲಿದ್ದಾರೆ ಎಂದು ಹೇಳಿದ್ದಾರೆ.












Click it and Unblock the Notifications