IPL 2027: ಕುಲದೀಪ್ ಯಾದವ್ ಎಲ್‌ಎಸ್‌ಜಿ, ಪಂತ್ ಡೆಲ್ಲಿ ಕ್ಯಾಪಿಟಲ್ಸ್‌ಗೆ ಸೇರ್ಪಡೆ: ಮೊತ್ತ ಎಷ್ಟು?
IPL 2027: ಐಪಿಎಲ್ 2026 ಇತ್ತೀಚೆಗಷ್ಟೇ ಮುಕ್ತಾಯಗೊಂಡಿದ್ದು, ಆರ್‌ಸಿಬಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇದರ ಬೆನ್ನಲ್ಲೇ ಮುಂದಿನ ಸೀಸನ್ ಆರಂಭಕ್ಕೆ ಇನ್ನೂ ತುಂಬಾ ಸಮಯ ಇರುವಾಗಲೇ ಹಲವು ಫ್ರಾಂಚೈಸಿಗಳಲ್ಲಿ ಆಟಗಾರರ ಟ್ರೇಡ್ ಪ್ರಕ್ರಿಯೆ ತೆರೆಮರೆಯಲ್ಲಿ ನಡೆಯುತ್ತಿದೆ. ಇದೀಗ ರಿಷಭ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಕುಲದೀಪ್ ಯಾದವ್ ಅವರು ಲಕ್ನೋ ಸೂಪರ್ ಜೈಂಟ್ಸ್‌ಗೆ ಸೇರ್ಪಡೆಯಾಗಿದ್ದಾರೆ. ಹಾಗಾದ್ರೆ ಎಷ್ಟು ಮೊತ್ತಕ್ಕೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದೊಡ್ಡ ಟ್ರೇಡ್ ಪ್ರಕ್ರಿಯೆಯೊಂದು ಅಧಿಕೃತವಾಗಿ ನಡೆದಿದೆ. ಭಾರತ ತಂಡದ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ತಮ್ಮ ಹಳೆಯ ಫ್ರಾಂಚೈಸಿಯಾದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಮರಳಿದ್ದಾರೆ. ಮತ್ತೊಂದೆಡೆ, ಡೆಲ್ಲಿಯ ಪ್ರಮುಖ ಸ್ಪಿನ್ನರ್ ಕುಲದೀಪ್ ಯಾದವ್ ಅವರನ್ನು ಲಕ್ನೋ ಸೂಪರ್ ಜೈಂಟ್ಸ್‌ಗೆ ಬಿಟ್ಟುಕೊಡಲಾಗಿದೆ.

ಡೆಲ್ಲಿ ಕ್ಯಾಪಿಟಲ್ಸ್‌ಗೆ ಮರಳಿದ ರಿಷಭ್ ಪಂತ್
2025ರ ಐಪಿಎಲ್ ಮೆಗಾ ಹರಾಜಿನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವು ರಿಷಭ್ ಪಂತ್ ಅವರನ್ನು ಬರೋಬ್ಬರಿ 27 ಕೋಟಿ ರೂಪಾಯಿಗಳ ದಾಖಲೆಯ ಮೊತ್ತಕ್ಕೆ ಖರೀದಿಸಿ ಮಾಡಿತ್ತು. ಇದು ಐಪಿಎಲ್ ಇತಿಹಾಸದಲ್ಲೇ ಅತ್ಯಧಿಕ ಬಿಡ್ ಆಗಿತ್ತು. ಆದರೆ, ಇತ್ತೀಚೆಗೆ ಮುಕ್ತಾಯಗೊಂಡ 2026ರ ಐಪಿಎಲ್‌ನಲ್ಲಿ ಎಲ್‌ಎಸ್‌ಜಿ ಪಂತ್ ನಾಯಕತ್ವದಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿತ್ತು. ಇದರಿಂದ ಬೇಸತ್ತಿದ್ದ ಪಂತ್ ಲಕ್ನೋ ನಾಯಕತ್ವದಿಂದ ಕೆಳಗಿಳಿದು ತಂಡ ತೊರೆಯಲು ಬಯಸಿದ್ದರು.
ಇದೀಗ ತಮ್ಮ ನೆಚ್ಚಿನ ಡೆಲ್ಲಿ ತಂಡಕ್ಕೆ ಕಡಿಮೆ ಮೊತ್ತಕ್ಕೆ ಮರಳಿದ್ದಾರೆ. ಕೇವಲ 15 ಕೋಟಿ ರೂಪಾಯಿಗಳ ಒಪ್ಪಂದದೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಮರುಸೇರ್ಪಡೆಯಾಗಿದ್ದಾರೆ. ಡಿಸಿ ಪರ ಅವರು ಈ ಹಿಂದೆ 2016 ರಿಂದ 2024ರ ವರೆಗೆ 9 ಸೀಸನ್‌ಗಳಲ್ಲಿ 111 ಪಂದ್ಯಗಳನ್ನು ಆಡಿದ್ದು, ಆ ತಂಡದ ಪರ ಅತಿ ಹೆಚ್ಚು ಪಂದ್ಯವಾಡಿದ ಆಟಗಾರ ಎಂಬ ಹೆಗ್ಗಳಿಕೆ ಹೊಂದಿದ್ದಾರೆ.
ಲಕ್ನೋ ಪಾಲಾದ ಕುಲದೀಪ್ ಯಾದವ್
ಈ ಮೆಗಾ ಟ್ರೇಡ್ ಡೀಲ್‌ನ ಭಾಗವಾಗಿ ಡೆಲ್ಲಿ ಕ್ಯಾಪಿಟಲ್ಸ್ ತನ್ನ ಸ್ಟಾರ್ ಸ್ಪಿನ್ನರ್ ಕುಲದೀಪ್ ಯಾದವ್ ಅವರನ್ನು ಲಕ್ನೋ ತಂಡಕ್ಕೆ ಬಿಟ್ಟುಕೊಟ್ಟಿದೆ. ಕುಲದೀಪ್ ಕಳೆದ ಐದು ಸೀಸನ್‌ಗಳಿಂದ ಡೆಲ್ಲಿ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 2022ರಿಂದ ಡಿಸಿ ಪರ 65 ಪಂದ್ಯಗಳನ್ನಾಡಿರುವ ಅವರು 72 ವಿಕೆಟ್‌ಗಳನ್ನು ಕಬಳಿಸಿ ಅತ್ಯಂತ ಯಶಸ್ವಿ ವಿಕೆಟ್ ಟೇಕಿಂಗ್ ಬೌಲರ್ ಎನಿಸಿಕೊಂಡಿದ್ದರು. ಅವರು ತಮ್ಮ ಪ್ರಸ್ತುತ ಸಂಬಳವಾದ 13.50 ಕೋಟಿ ರೂಪಾಯಿಗಳ ಒಪ್ಪಂದದೊಂದಿಗೆ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಸೇರಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ದೊಡ್ಡ ಮಟ್ಟದ ಬದಲಾವಣೆಯ ಹಿಂದೆ ಟೀಮ್ ಇಂಡಿಯಾ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ಅವರ ಪಾತ್ರ ಇದೆ ಎಂದು ಹೇಳಲಾಗುತ್ತಿದೆ. ಯುವರಾಜ್ ಸಿಂಗ್ ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮುಖ್ಯ ಕೋಚ್ ಹುದ್ದೆಯನ್ನು ಅಲಂಕರಿಸುವ ಸಾಧ್ಯತೆಯಿದೆ. ಪಂತ್ ಅವರಿಗೆ ಯುವಿ ಮಾರ್ಗದರ್ಶನದಲ್ಲಿ ಆಡಲು ಹೆಚ್ಚು ಆಸಕ್ತಿ ಇದ್ದು, ಡೆಲ್ಲಿಗೆ ಮರಳಲು ಪ್ರಮುಖ ಕಾರಣ ಇದೇ ಎನ್ನಲಾಗಿದೆ.
ಈ ಟ್ರೇಡ್‌ನಿಂದಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ತನ್ನ ಹಳೆಯ ನಾಯಕ ಮರಳಿ ಸಿಕ್ಕಂತಾಗಿದೆ. ಲಕ್ನೋ ತಂಡಕ್ಕೆ ಪಂತ್ ಅವರ ಒಪ್ಪಂದದ ಹಣ ಉಳಿತಾಯ ಆಗುವುದರ ಜೊತೆಗೆ ಟೀಮ್ ಇಂಡಿಯಾ ನಂಬರ್ ಒನ್ ಸ್ಪಿನ್ನರ್‌ಗಳಲ್ಲಿ ಒಬ್ಬರಾದ ಕುಲದೀಪ್ ಯಾದವ್ ಅವರ ಬಲ ಸಿಕ್ಕಿದೆ. ಮುಂಬರುವ 2027ರ ಐಪಿಎಲ್ ಸೀಸನ್‌ಗೂ ಮುನ್ನ ನಡೆದಿರುವ ಈ ಬ್ಲಾಕ್‌ಬಸ್ಟರ್ ಡೀಲ್ ಕ್ರಿಕೆಟ್ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಸಿರುವುದಂತೂ ನಿಜ.












Click it and Unblock the Notifications