ನಾನೇನು ಮೊದಲನೆಯವನಲ್ಲ: ಆರ್.ಅಶ್ವಿನ್ ಬೆಂಬಲಕ್ಕೆ ನಿಂತ ಬೆನ್ನಲ್ಲೇ ಆರ್‌ಸಿಬಿ ಸ್ಟಾರ್ ಭುವನೇಶ್ವರ್ ಮಹತ್ವದ ಹೇಳಿಕೆ
Bhuvneshwar Kumar: ಈ ಬಾರಿ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿಯಾಗಿ ಗೆದ್ದು ಟ್ರೋಫಿ ಗೆದ್ದಿದೆ. ಇದೀಗ ಎಲ್ಲರ ಚಿತ್ತ 2027ರ ಏಕದಿನ ವರ್ಲ್ಡ್‌ಕಪ್ ಟೂರ್ನಿಯತ್ತ ನೆಟ್ಟಿದ್ದು, ಭಾರತದ ಪರ ಆರ್‌ಸಿಬಿ ಸ್ಟಾರ್ ಬೌಲರ್ ಭುವನೇಶ್ವರ್ ಕುಮಾರ್ ಅವರನ್ನು ಕಣಕ್ಕಿಳಿಸುವಂತೆ ಆರ್.ಅಶ್ವಿನ್ ಅವರು ಮನವಿ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿ ಭುವಿ ಮಹತ್ವದ ಹೇಳಿಕೆ ನೀಡಿದ್ದಾರೆ. ಇದು ಇದೀಗ ಸಖತ್ ಸದ್ದು ಮಾಡುತ್ತಿದೆ.
ಇತ್ತೀಚೆಗಷ್ಟೇ ಭಾರತದ ಮಾಜಿ ಕ್ರಿಕೆಟರ್ ರವಿಚಂದ್ರನ್ ಅಶ್ವಿನ್ ಅವರು, ಮುಂಬರುವ ಏಕದಿನ ವಿಶ್ವಕಪ್‌ಗೆ ಭುವನೇಶ್ವರ್ ಅವರನ್ನು ಟೀಮ್ ಇಂಡಿಯಾಗೆ ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಆಯ್ಕೆದಾರರಿಗೆ ಸಲಹೆ ನೀಡಿದ್ದರು. ಇದು ವೈರಲ್ ಆದ ಬೆನ್ನಲ್ಲೇ ಈ ಬಗ್ಗೆ ಮಾತನಾಡಿದ ಭುವನೇಶ್ವರ್ ಕುಮಾರ್ ಅವರು ರಾಷ್ಟ್ರೀಯ ತಂಡಕ್ಕೆ ಮರಳುವುದು ನನ್ನ ಈಗಿನ ಮುಖ್ಯ ಗುರಿಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಭುವನೇಶ್ವರ್ ಕುಮಾರ್ ಹೇಳಿದ್ದೇನು?
ಆರ್‌ಸಿಬಿ ಪಾಡ್‌ಕಾಸ್ಟ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಭುವನೇಶ್ವರ್ ಕುಮಾರ್ ಅವರು, 'ನಾನು ಈಗಾಗಲೇ ಭಾರತದ ಪರವಾಗಿ ಆಡಿದ್ದೇನೆ. ಅದನ್ನು ಮತ್ತೆ ಸಾಧಿಸಬೇಕಾದ ಒತ್ತಡ ನನಗಿಲ್ಲ. ಈಗ ಸಿಗುವ ಅವಕಾಶಗಳಿಗಿಂತ ಆಟದ ಮೇಲಿರುವ ಪ್ರೀತಿ ಮತ್ತು ಉತ್ಸಾಹವೇ ನನ್ನನ್ನು ಮೈದಾನಕ್ಕೆ ತರುತ್ತಿದೆ,' ಎಂದು ಹೇಳಿದ್ದಾರೆ. 2022ರ ನಂತರ ಟೀಮ್ ಇಂಡಿಯಾದಲ್ಲಿ ಅವಕಾಶ ಸಿಗದಿದ್ದರೂ ಐಪಿಎಲ್ ಹಾಗೂ ದೇಶೀಯ ಕ್ರಿಕೆಟ್‌ನಲ್ಲಿ ಅವರು ಮಿಂಚುತ್ತಿದ್ದಾರೆ.
'ಸದ್ಯ ಅತ್ಯಂತ ನೆಮ್ಮದಿಯಾಗಿದ್ದೇನೆ'
ತಂಡದಿಂದ ಹೊರಗುಳಿದ ನಂತರದ ದಿನಗಳ ಬಗ್ಗೆ ಮಾತನಾಡಿದ ಅವರು, 'ನಾನು ಸದ್ಯ ಇರುವ ಸ್ಥಿತಿಯಲ್ಲಿ ಅತ್ಯಂತ ನೆಮ್ಮದಿಯಾಗಿದ್ದೇನೆ. ಇದರ ಸಂಪೂರ್ಣ ಶ್ರೇಯಸ್ಸು ನನ್ನ ಕುಟುಂಬಕ್ಕೆ ಸಲ್ಲಬೇಕು. ನಮ್ಮ ಮನೆಯಲ್ಲಿ ನಾವು ಎಂದಿಗೂ ಕ್ರಿಕೆಟ್ ಬಗ್ಗೆ ಅಥವಾ ತಂಡಕ್ಕೆ ಏಕೆ ಆಯ್ಕೆ ಆಗಲಿಲ್ಲ ಎಂಬ ಬಗ್ಗೆ ಚರ್ಚಿಸುವುದಿಲ್ಲ. ಕ್ರೀಡೆಯಲ್ಲಿ ಆಟಗಾರರ ಬದಲಾವಣೆ ಸಹಜ. ಇದನ್ನು ಅನುಭವಿಸಿದ ಮೊದಲ ಆಟಗಾರ ನಾನಲ್ಲ ಮತ್ತು ಕೊನೆಯವನೂ ಅಲ್ಲ,' ಎಂದು ಸಕಾರಾತ್ಮಕವಾಗಿ ಹೇಳಿಕೆ ನೀಡಿ ಗಮನ ಸೆಳೆದಿದ್ದಾರೆ.
ಟೀಮ್ ಇಂಡಿಯಾ ವೇಗದ ಬೌಲಿಂಗ್ ಬಗ್ಗೆ ಮಹತ್ವದ ಹೇಳಿಕೆ
ಭಾರತೀಯ ಕ್ರಿಕೆಟ್‌ನಲ್ಲಿ ವೇಗದ ಬೌಲಿಂಗ್ ಬೆಳವಣಿಗೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, 'ಐಪಿಎಲ್ ಯುವ ಆಟಗಾರರಿಗೆ ಉತ್ತಮ ವೇದಿಕೆಯಾಗಿದೆ,' ಎಂದು ಹೇಳಿದ್ದಾರೆ. ಜೊತೆಗೆ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ಮಾಜಿ ಕೋಚ್ ರವಿ ಶಾಸ್ತ್ರಿ ಅವರ ದೂರದೃಷ್ಟಿಯನ್ನು ಸ್ಮರಿಸಿದ ಭುವಿ, 'ವಿದೇಶಿ ಪ್ರವಾಸಕ್ಕೂ ಮುನ್ನ ಭಾರತದಲ್ಲೂ ವೇಗಿಗಳಿಗೆ ನೆರವಾಗುವ ಪಿಚ್‌ಗಳನ್ನು ಸಿದ್ಧಪಡಿಸುತ್ತಿದ್ದುದು ಬೌಲರ್‌ಗಳ ಆತ್ಮವಿಶ್ವಾಸ ಹೆಚ್ಚಿಸಿತು,' ಎಂದು ತಿಳಿಸಿದ್ದಾರೆ.
ತಮ್ಮ ಆರಂಭಿಕ ದಿನಗಳನ್ನು ನೆನೆದ ಅವರು, ಹಿರಿಯ ಬೌಲರ್ ಪ್ರವೀಣ್ ಕುಮಾರ್ ಅವರ ಬೌಲಿಂಗ್ ಶೈಲಿಯನ್ನು ನೋಡಿ ಸಾಕಷ್ಟು ವಿಷಯಗಳನ್ನು ಕಲಿತುಕೊಂಡಿದ್ದಾಗಿ ಹೇಳಿದ್ದಾರೆ. ಒಟ್ಟಿನಲ್ಲಿ ಮುಂಬರುವ ಏಕದಿನ ವಿಶ್ವಕಪ್ ಟೂರ್ನಿಗೆ ಆಯ್ಕೆ ಬಗ್ಗೆ ಅವರು ಸಕರಾತ್ಮಕ ಹೇಳಿಕೆ ನೀಡಿ ನೆಟ್ಟಿಗರು ಹಾಗೂ ಕ್ರೀಡಾಭಿಮಾನಿಗಳ ಮನ ಗೆದ್ದಿದ್ದಾರೆ.
ಆರ್.ಅಶ್ವಿನ್ ನೀಡಿದ ಸಲಹೆ ಏನು?
ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಆರ್.ಅಶ್ವಿನ್ ಅವರು, '2027ರ ಐಸಿಸಿ ಏಕದಿನ ವಿಶ್ವಕಪ್ ಸರಣಿಗೆ ಭುವನೇಶ್ವರ್ ಕುಮಾರ್ ಅವರನ್ನು ಆಯ್ಕೆ ಮಾಡಬೇಕು. ನಾನು ಅವರಲ್ಲಿ ವಿನಂತಿಸಿಕೊಳ್ಳುತ್ತೇನೆ ನೀವು ಪ್ರಥಮ ದರ್ಜೆ ಕ್ರಿಕೆಟ್ ಮತ್ತು ವಿಜಯ್ ಹಜಾರೆ ಟ್ರೋಫಿ ಸೇರಿದಂತೆ ಎಲ್ಲಾ ಪ್ರಮುಖ ದೇಶಿಯ ಸರಣಿಗಳನ್ನು ತಪ್ಪದೇ ಆಡಿ ಸಿದ್ಧರಾಗಿ ಅಂತಾ. ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ವಿಶ್ವಕಪ್‌ನಲ್ಲಿ ಭಾರತಕ್ಕೆ ಅವರಂತಹ ಅನುಭವಿ ಬೌಲರ್‌ನ ಅಗತ್ಯ ಹೆಚ್ಚಿರಲಿದೆ,' ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.


Click it and Unblock the Notifications
