ಕುಮಾರಸ್ವಾಮಿ ಕ್ಷೇತ್ರ ಬದಲಾವಣೆ: ಚನ್ನಪಟ್ಟಣದ ಮುಂದಿನ ಅಭ್ಯರ್ಥಿ ಬಗ್ಗೆ ಸಿಪಿವೈ ಹೇಳಿದ್ದೇನು..?
ರಾಮನಗರ, ಏಪ್ರಿಲ್ 03: ಈ ಬಾರಿ ಲೋಕಸಭಾ ಚುನಾವಣೆಗೆ ಬೆಂಗಳೂರು ಗ್ರಾಮಾಂತರದಿಂದ ಎನ್‌ಡಿಎ ಮೈತ್ರಿ ಅಭ್ಯರ್ಥಿಯಾಗಿ ಡಾ. ಮಂಜುನಾಥ್ ಸ್ಪರ್ಧೆ ಮಾಡುತ್ತಿದ್ದಾರೆ. ಹೃದ್ರೋಗ ತಜ್ಞರಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಅವರ ಸೇವೆಯನ್ನು ಜನರು ಈಗ ಮೆಲುಕು ಹಾಕುತ್ತಿದ್ದಾರೆ ಎಂದು ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ತಮ್ಮ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಆರಂಭಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ. ಸುರೇಶ್ ಮೂರು ಬಾರಿ ಸಂಸದರಾಗಿದ್ದರೂ ಕೂಡ ಅವರ ನಡವಳಿಕೆ ಸರಿ ಇಲ್ಲ. ಕ್ಷೇತ್ರದಲ್ಲಿ ಸದ್ಯ ಅವರ ವಿರುದ್ಧದ ಅಲೆ ಇದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದ 8 ಕ್ಷೇತ್ರದಲ್ಲೂ ಕೂಡ ಮಂಜುನಾಥ್ ಪರ ಜನರಿದ್ದಾರೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರ ಹೈವೋಲ್ಟೇಜ್ ಆಗಿದೆ. ಹೀಗಾಗಿ ಜನರು ಮೈತ್ರಿ ಅಭ್ಯರ್ಥಿ ಪರ ಪ್ರಚಾರಕ್ಕೆ ಇಳಿಯುತ್ತಿದ್ದಾರೆ ಎಂದರು.

ಈ ಹಿಂದೆ ಜೆಡಿಎಸ್ ಮತ್ತು ಬಿಜೆಪಿ ವಿರೋಧವಾಗಿದ್ದವು, ಆದರೆ ಈಗ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದೇವೆ. ಅತಿ ಹೆಚ್ಚಿನ ಮತಗಳು ಚನ್ನಪಟ್ಟಣ ಕ್ಷೇತ್ರದಿಂದ ಬರುತ್ತದೆ. ಹೀಗಾಗಿ ಇಲ್ಲಿ ರೋಡ್ ಶೋಗಳು ನಡೆಯುತ್ತಿವೆ. ಇದು 8 ಕ್ಷೇತ್ರಗಳ ಮೇಲೂ ಪ್ರಭಾವ ಬೀರುತ್ತಿದೆ ಎಂದು ಹೇಳಿದರು.
ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ ಸುರೇಶ್ ಪರ ಡಿಸಿಎಂ ಡಿ.ಕೆ ಶಿವಕುಮಾರ್ ಪ್ರಚಾರ ಮಾಡುವ ಬಗ್ಗೆ ಮಾತನಾಡಿದ ಅವರು, ಡಿ.ಕೆ ಶಿವಕುಮಾರ್ ಪರ ಪ್ರಚಾರ ಮಾಡುವುದರಿಂದ ನಮಗೆ ಒಳ್ಳೆಯದೆ ಆಗುತ್ತದೆ. ಅವರ ನಡವಳಿಕೆ, ನೆಗೆಟಿವಿಟಿ ನಮಗೆ ಸಪೋರ್ಟ್ ಮಾಡುತ್ತದೆ. ಡಿ.ಕೆ ಶಿವಕುಮಾರ್ ಮಂತ್ರಿ ಆದರೂ ಅವರ ಜಿಲ್ಲೆಯ ಬಗ್ಗೆ ಅಸಡ್ಡೆ ತೋರಿಸುತ್ತಾರೆ. ಹೀಗಾಗಿ ಜನರು ಕೂಡ ಅವರ ವಿರುದ್ಧವಾಗಿದ್ದಾರೆ. ಅವರಿಗೆ ನೆಗೆಟಿವ್ ಪ್ರಚಾರ ನಮಗೆ ಪಾಸಿಟಿವ್ ಪ್ರಚಾರ ಎಂದು ವ್ಯಂಗ್ಯವಾಡಿದರು.
ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕುಮಾರಸ್ವಾಮಿ ಸ್ಪರ್ಧೆಯಿಂದ ಚನ್ನಪಟ್ಟಣ ಕ್ಷೇತ್ರ ತೆರವಾಗಲಿದ್ದು, ಈ ಕ್ಷೇತ್ರದಲ್ಲಿ ಸಿ.ಪಿ ಯೋಗೇಶ್ವರ್ ಸ್ಪರ್ಧೆ ಎನ್ನುವ ವಿಚಾರವಾಗಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಮೈತ್ರಿ ಧರ್ಮ ಪಾಲನೆ ಮಾಡಬೇಕಾಗುತ್ತದೆ. ಇಬ್ಬರು ವರಿಷ್ಠರು ಆ ಸಂದರ್ಭದಲ್ಲಿ ಏನು ತೀರ್ಮಾನ ಮಾಡುತ್ತಾರೋ ಅದಕ್ಕೆ ನಾವು ತಲೆಬಾಗಿ ಕೆಲಸ ಮಾಡುತ್ತೇವೆ ಎಂದರು.












Click it and Unblock the Notifications