JEE ಪರೀಕ್ಷೆಯಲ್ಲಿ ಫೇಲ್ ಆಗಿದ್ದವರು ಇಂದು ಐಐಟಿ ಮದ್ರಾಸ್ ನಿರ್ದೇಶಕ! ಇದು ಪದ್ಮಶ್ರೀ ಪ್ರೊ. ಕಾಮಕೋಟಿ ಯಶೋಗಾಥೆ
ಜೀವನದಲ್ಲಿ ಒಂದು ಸೋಲು ಅಥವಾ ಕೇವಲ ಒಂದು ಪರೀಕ್ಷೆಯ ಫಲಿತಾಂಶ ನಮ್ಮ ಇಡೀ ಭವಿಷ್ಯವನ್ನು ನಿರ್ಧರಿಸುವುದಿಲ್ಲ ಎಂಬುದಕ್ಕೆ ಐಐಟಿ ಮದ್ರಾಸ್ ನಿರ್ದೇಶಕ ಪ್ರೊಫೆಸರ್ ವಿ. ಕಾಮಕೋಟಿ ಅವರ ಜೀವನವೇ ಒಂದು ಅತ್ಯುತ್ತಮ ಉದಾಹರಣೆ.
ಹೌದು, ಒಮ್ಮೆ ರಸಾಯನಶಾಸ್ತ್ರ ವಿಷಯದಲ್ಲಿ ಕೇವಲ ಒಂದು ಅಂಕ ಪಡೆದು, ಭಾರತದ ಅತ್ಯಂತ ಕಠಿಣ ಹಾಗೂ ಪ್ರತಿಷ್ಠಿತ ಜೆಇಇ ಪ್ರವೇಶ ಪರೀಕ್ಷೆಯಲ್ಲಿ ವಿಫಲರಾಗಿದ್ದ ಸಾಮಾನ್ಯ ವಿದ್ಯಾರ್ಥಿಯೊಬ್ಬರು, ಇಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾಗಿ ಇಡೀ ದೇಶಕ್ಕೆ ಮಾದರಿಯಾಗಿದ್ದಾರೆ. ಇದು ಕೇವಲ ಅಂಕಗಳ ಹಿಂದೆ ಓಡದೆ, ನಿರಂತರ ಕಲಿಕೆ ಮತ್ತು ಪರಿಶ್ರಮವನ್ನು ನಂಬಿದ ಅಪ್ಪಟ ಸಾಧಕನೊಬ್ಬನ ಬೆರಗುಗೊಳಿಸುವ ಹಾಗೂ ಸ್ಪೂರ್ತಿದಾಯಕ ಯಶೋಗಾಥೆ.

ಜೆಇಇ ಪರೀಕ್ಷೆಯಲ್ಲಿ ಸೋಲು
1985ರ ವರ್ಷ ಅದು. ವಿ. ಕಾಮಕೋಟಿ ಅವರು ಇತರೆ ಲಕ್ಷಾಂತರ ವಿದ್ಯಾರ್ಥಿಗಳಂತೆ ಜೆಇಇ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಕನಸು ಕಂಡಿದ್ದರು, ಆದರೆ ಆ ಪರೀಕ್ಷೆಯನ್ನು ಪಾಸ್ ಮಾಡಿಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ. ಆದರೆ ಅವರು ಈ ಆರಂಭಿಕ ಸೋಲಿನಿಂದ ಎಂದಿಗೂ ಎದೆಗುಂದಲಿಲ್ಲ.
ಬದಲಾಗಿ, ಚೆನ್ನೈನ ಶ್ರೀ ವೆಂಕಟೇಶ್ವರ ಇಂಜಿನಿಯರಿಂಗ್ ಕಾಲೇಜು ಎನ್ನುವ ಖಾಸಗಿ ಕಾಲೇಜಿಗೆ ಸೇರ್ಪಡೆಯಾಗಿ, ತಮ್ಮ ಇಂಜಿನಿಯರಿಂಗ್ ಪದವಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು. ಕಲಿಯುವ ತೀವ್ರ ಹಂಬಲ ಮತ್ತು ಸಾಧಿಸುವ ಛಲವಿದ್ದ ಅವರು, ತಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಮುಂದುವರಿದು, ನಂತರ ಭಾರತದ ಪ್ರತಿಷ್ಠಿತ ಐಐಟಿ ಮದ್ರಾಸ್‌ನಲ್ಲಿಯೇ ತಮ್ಮ ಎಂ.ಎಸ್ (ರಿಸರ್ಚ್) ಮತ್ತು ಪಿಎಚ್‌ಡಿ ಪದವಿಯನ್ನು ಅತ್ಯುನ್ನತ ಶ್ರೇಣಿಯಲ್ಲಿ ಪಡೆದರು.
ವಿದ್ಯಾರ್ಥಿಯಿಂದ ಐಐಟಿ ಮದ್ರಾಸ್ ನಿರ್ದೇಶಕ ಕಾಮಕೋಟಿ ಅವರಾಗಿ ಬೆಳೆದ ಹಾದಿ
ತಮ್ಮ ವಿದ್ಯಾಭ್ಯಾಸದ ಬಳಿಕ, 2001ರಲ್ಲಿ ಅವರು ಅದೇ ಐಐಟಿ ಮದ್ರಾಸ್‌ಗೆ ಪ್ರಾಧ್ಯಾಪಕರಾಗಿ ಹೆಮ್ಮೆಯಿಂದ ಮರಳಿದರು. ಮುಂದಿನ ಎರಡು ದಶಕಗಳಲ್ಲಿ ತಮ್ಮ ಅಪಾರ ಜ್ಞಾನ ಮತ್ತು ಸಂಶೋಧನೆಗಳ ಮೂಲಕ ಅವರು ಭಾರತದ ಪ್ರಮುಖ ಕಂಪ್ಯೂಟರ್ ವಿಜ್ಞಾನಿಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದರು.
ವಿಶೇಷವಾಗಿ ಭಾರತದ ಮೊಟ್ಟಮೊದಲ ಸ್ವದೇಶಿ ಓಪನ್-ಸೋರ್ಸ್ RISC-V ಮೈಕ್ರೋಪ್ರೊಸೆಸರ್ ಅಭಿವೃದ್ಧಿಪಡಿಸಿದ 'ಶಕ್ತಿ ಯೋಜನೆಯ ನೇತೃತ್ವವನ್ನು ಅವರು ವಹಿಸಿದ್ದರು. ಇದು ಭಾರತದ ಸೆಮಿಕಂಡಕ್ಟರ್ ಮತ್ತು ತಂತ್ರಜ್ಞಾನ ಕ್ಷೇತ್ರದ ಇತಿಹಾಸದಲ್ಲಿಯೇ ಒಂದು ಬಹುದೊಡ್ಡ ಮೈಲಿಗಲ್ಲಾಗಿದೆ.
ಅವರ ಈ ಅದ್ಭುತ ಸಾಧನೆಗಳನ್ನು ಮತ್ತು ದಾರ್ಶನಿಕತೆಯನ್ನು ಗುರುತಿಸಿ, 2022ರಲ್ಲಿ ಅವರನ್ನು ದೇಶದ ಅಗ್ರಗಣ್ಯ ಇಂಜಿನಿಯರಿಂಗ್ ಸಂಸ್ಥೆಯಾದ ಐಐಟಿ ಮದ್ರಾಸ್ ನಿರ್ದೇಶಕರನ್ನಾಗಿ ಕಾಮಕೋಟಿ ಅವರನ್ನ ನೇಮಿಸಲಾಯಿತು. ಅವರ ಸಮರ್ಥ ನಾಯಕತ್ವದಲ್ಲಿ, ತಾಂಜಾನಿಯಾದ ಜಂಜಿಬಾರ್‌ನಲ್ಲಿ ಐಐಟಿಯ ಮೊದಲ ಅಂತಾರಾಷ್ಟ್ರೀಯ ಕ್ಯಾಂಪಸ್ ಪ್ರಾರಂಭವಾಯಿತು ಮತ್ತು ಅನೇಕ ಶೈಕ್ಷಣಿಕ ಉಪಕ್ರಮಗಳು ಜಾರಿಗೆ ಬಂದವು.
ಕಾಮಕೋಟಿ ಅವರಿಗೆ ಒಲಿದ ಪದ್ಮಶ್ರೀ ಪುರಸ್ಕಾರ
ಅತ್ಯಂತ ಆಶ್ಚರ್ಯಕರ ಮತ್ತು ಹೆಮ್ಮೆಯ ಸಂಗತಿಯೆಂದರೆ, 1985ರಲ್ಲಿ ಯಾವ ಜೆಇಇ ಪರೀಕ್ಷೆಯಲ್ಲಿ ಅವರು ವಿಫಲರಾಗಿದ್ದರೋ, ಅದೇ ಪರೀಕ್ಷೆಯ (ಜೆಇಇ ಅಡ್ವಾನ್ಸ್ಡ್ 2024) ಅಧ್ಯಕ್ಷರಾಗಿ ಅವರು ಪ್ರಶ್ನೆಪತ್ರಿಕೆ ಮತ್ತು ಪರೀಕ್ಷಾ ವ್ಯವಸ್ಥೆಯ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದರು.
ಹಾಗೆಯೇ ವಿಜ್ಞಾನ ಮತ್ತು ಇಂಜಿನಿಯರಿಂಗ್ ಕ್ಷೇತ್ರಕ್ಕೆ ಅವರು ನೀಡಿದ ಅಪಾರ ಮತ್ತು ನಿಸ್ವಾರ್ಥ ಕೊಡುಗೆಗಾಗಿ ಭಾರತ ಸರ್ಕಾರ ಇತ್ತೀಚೆಗೆ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ಮತ್ತು ಪದ್ಮಶ್ರೀ ಪುರಸ್ಕೃರ ನೀಡಿ ಗೌರವಿಸಿದೆ.
ಆದರೆ ಇಷ್ಟೆಲ್ಲಾ ಉನ್ನತ ಸಾಧನೆಗಳ ನಡುವೆಯೂ ಅವರ ಸರಳತೆ ಮತ್ತು ತಂದೆಯ ಮೇಲಿನ ಪ್ರೀತಿ ಎಲ್ಲರ ಗಮನ ಸೆಳೆಯುತ್ತದೆ. ಐಐಟಿ ನಿರ್ದೇಶಕರಾಗಿ ಅವರಿಗೆ ಭವ್ಯವಾದ ಅಧಿಕೃತ ಬಂಗಲೆ ಲಭ್ಯವಿದ್ದರೂ, ಅವರು ತಮ್ಮ ಹಳೆಯ ಮನೆಯಲ್ಲೇ ಉಳಿಯಲು ನಿರ್ಧರಿಸಿದರು.
ಇದಕ್ಕೆ ಕಾರಣ, ಪ್ರಖ್ಯಾತ ಸಂಸ್ಕೃತ ವಿದ್ವಾಂಸರಾಗಿದ್ದ ಅವರ ದಿವಂಗತ ತಂದೆ ಪ್ರೊ. ಎನ್. ವೀಝಿನಾಥನ್ ಅವರು ಜೀವಮಾನವಿಡೀ ಸಂಗ್ರಹಿಸಿದ್ದ ಅಪರೂಪದ ಪುಸ್ತಕಗಳ ಅಮೂಲ್ಯ ಗ್ರಂಥಾಲಯವನ್ನು ಹಾಗೆಯೇ ಸಂರಕ್ಷಿಸುವುದು ಅವರಿಗೆ ಬಹುಮುಖ್ಯವಾಗಿತ್ತು.
ಸೋಲೆಂಬುದು ಗೆಲುವಿನ ಮೆಟ್ಟಿಲು
ಇತ್ತೀಚೆಗೆ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರೊ. ಕಾಮಕೋಟಿ ಅವರು, "ಕಡಿಮೆ ಅಂಕ ಬಂತು ಅಥವಾ ಪರೀಕ್ಷೆಯಲ್ಲಿ ವಿಫಲರಾದೆವು ಎಂದು ಎಂದಿಗೂ ಕುಗ್ಗಬೇಡಿ. ನಾನೇ ರಸಾಯನಶಾಸ್ತ್ರದಲ್ಲಿ ಕೇವಲ 1 ಅಂಕ ಪಡೆದಿದ್ದೆ. ನಿಜವಾದ ಯಶಸ್ಸು ನಿಮ್ಮ ರ್‍ಯಾಂಕ್‌ನಿಂದ ಬರುವುದಿಲ್ಲ, ಬದಲಾಗಿ ನಿರಂತರ ಕಲಿಕೆ ಮತ್ತು ವೈಫಲ್ಯದ ನಂತರ ಮತ್ತೆ ಎದ್ದು ನಿಲ್ಲುವ ಸಾಮರ್ಥ್ಯದಿಂದ ಬರುತ್ತದೆ" ಎಂದು ಕಿವಿಮಾತು ಹೇಳಿದರು.
ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಪ್ರಸಿದ್ಧ ಸಾಲನ್ನು ನೆನಪಿಸಿದ ಅವರು, ಫೇಲ್ ಎಂದರೆ "First Attempt In Learning" (ಕಲಿಕೆಯಲ್ಲಿನ ಮೊದಲ ಪ್ರಯತ್ನ) ಎಂದು ಅತ್ಯಂತ ಸುಂದರವಾಗಿ ವಿವರಿಸಿದರು. ಸಾಧನೆಗೆ ಅಂಕಗಳೇ ಅಂತಿಮವಲ್ಲ, ಛಲವಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದನ್ನು ಕಾಮಕೋಟಿ ಅವರ ಜೀವನ ಎಲ್ಲರಿಗೂ ಸ್ಪಷ್ಟವಾಗಿ ಸಾಬೀತುಪಡಿಸುತ್ತದೆ.














Click it and Unblock the Notifications