ವೈಭವ್ ಸೂರ್ಯವಂಶಿ ಕೈಬಿಟ್ಟ ಬಗ್ಗೆ ಚರ್ಚೆ ಬೆನ್ನಲ್ಲೇ ಬಿರುಗಾಳಿ ಎಬ್ಬಿಸಿದ ಸಂಗಕ್ಕಾರ ಬಿಚ್ಚಿಟ್ಟ ಡ್ರೆಸ್ಸಿಂಗ್ ರೂಮ್ ರಹಸ್ಯ
Vaibhav Sooryavanshi: ಬೆಲ್‌ಫಾಸ್ಟ್‌ನಲ್ಲಿ ನಡೆದ ಭಾರತ ಹಾಗೂ ಐರ್ಲೆಂಡ್ ನಡುವಿನ ಮೊದಲ ಟಿ20 ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಅವರನ್ನು ಪ್ಲೇಯಿಂಗ್ 11ರಿಂದ ಹೊರಗಿಟ್ಟಿರುವುದು ಭಾರಿ ಚರ್ಚೆಗೆ ಕಾರಣವಾಗಿದೆ. ಇದರ ಬೆನ್ನಲ್ಲೇ ರಾಜಸ್ಥಾನ್ ರಾಯಲ್ಸ್ ತಂಡದ ಮುಖ್ಯ ಕೋಚ್ ಹಾಗೂ ಶ್ರೀಲಂಕಾದ ಕ್ರಿಕೆಟ್ ದಿಗ್ಗಜ ಕುಮಾರ್ ಸಂಗಕ್ಕಾರ ಅವರು ಈ 15 ವರ್ಷದ ಯುವ ಆಟಗಾರನ ಡ್ರೆಸ್ಸಿಂಗ್ ರೂಮ್ ರೋಚಕ ರಹಸ್ಯವನ್ನ ರಿವೀಲ್ ಮಾಡಿದ್ದಾರೆ.
ಸ್ಕೈ ಸ್ಪೋರ್ಟ್ಸ್ ಜೊತೆಗಿನ ಸಂವಾದದಲ್ಲಿ ಮಾತನಾಡಿದ ಸಂಗಕ್ಕಾ ಅವರು, ಐಪಿಎಲ್ 2026ರ ಸೀಸನ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದ ವೇಳೆ ನಡೆದ ಅಚ್ಚರಿಯ ಪ್ರಸಂಗವನ್ನು ನೆನಪಿಸಿಕೊಂಡಿದ್ದಾರೆ. ಆ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು ಪಂದ್ಯಾವಳಿಯಲ್ಲಿ ಉಳಿದುಕೊಳ್ಳಲು 221 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಬೇಕಿತ್ತು. ಒತ್ತಡದ ಈ ಪರಿಸ್ಥಿತಿಯಲ್ಲಿ ಬ್ಯಾಟಿಂಗ್‌ಗೆ ಹೊರಡುವ ಮುನ್ನ ವೈಭವ್ ತೋರಿದ ಧೈರ್ಯ ಅಚ್ಚರಿಗೆ ಒಳಗಾಗುವಂತೆ ಮಾಡಿತ್ತು. ಈ ಕುರಿತು ಸ್ವಂತಃ ಸಂಗಕ್ಕಾರ ಅವರೇ ಮಹತ್ವದ ಹೇಳಿಕೆ ನೀಡಿದ್ದಾರೆ.

'ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ನಾವು 221 ರನ್ ಚೇಸ್ ಮಾಡಬೇಕಿತ್ತು. ವೈಭವ್ ಬ್ಯಾಟಿಂಗ್ ಮಾಡಲು ಮೈದಾನಕ್ಕೆ ಹೊರಡುವಾಗ ನನ್ನ ಕಡೆ ನೋಡಿ ಕಣ್ಣು ಹೊಡೆಯುತ್ತಾ, ಕೋಚ್ ನೀವು ಯಾವುದೇ ಚಿಂತೆ ಮಾಡಬೇಡಿ. ಪಂದ್ಯ ಮುಗಿಯಿತು ಅಂತಲೇ ಅಂದುಕೊಳ್ಳಿ ಎಂದು ಹೇಳಿ ಕಣಕ್ಕಿಳಿದಿದ್ದ,' ಅಂತಾ ಸಂಗಕ್ಕಾರ ಅವರು ನೆನಪಿಸಿಕೊಂಡಿದ್ದಾರೆ.
ಡ್ರೆಸ್ಸಿಂಗ್ ರೂಮ್ ರಹಸ್ಯ ಬಿಚ್ಚಿಟ್ಟ ಕೋಚ್
ಕೇವಲ ಕೋಚ್‌ಗೆ ಭರವಸೆ ನೀಡುವುದಷ್ಟೇ ಅಲ್ಲದೆ, ಡ್ರೆಸ್ಸಿಂಗ್ ರೂಮ್‌ನಲ್ಲಿ ತನ್ನ ಸಹ ಆಟಗಾರರಾದ ಡೊನೊವನ್ ಫೆರೇರಾ ಮತ್ತು ಲುಹಾನ್-ಡ್ರೆ ಪ್ರಿಟೋರಿಯಸ್ ಎದುರು ವೈಭವ್ ಮಾಡಿದ್ದ ಶಪಥ ಎಲ್ಲರನ್ನೂ ಅಚ್ಚರಿಗೊಳಿಸಿತ್ತು. ಈ ಬಗ್ಗೆ ಮಾತನಾಡಿದ ಅವರು, 'ಡ್ರೆಸ್ಸಿಂಗ್ ರೂಮ್‌ಗೆ ಬಂದ ವೈಭವ್ ನಿಮ್ಮಿಬ್ಬರಿಗೂ ಒಂದು ಮಾತು ಹೇಳ್ತೀನಿ ಕೇಳಿ. ನಾನು ಈಗ ಮೈದಾನಕ್ಕೆ ಹೋಗಿ ಕನಿಷ್ಠ 13 ಸಿಕ್ಸರ್‌ಗಳನ್ನು ಬಾರಿಸುತ್ತೇನೆ. ನಾನು ಆ ಕೆಲಸ ಮಾಡಿದ ತಕ್ಷಣ ಉಳಿದ ರನ್‌ಗಳನ್ನು ನೀವು ಹೊಡೆದು ಪಂದ್ಯ ಮುಗಿಸಿ ಎಂದು ಹೇಳಿದ್ದ,' ಎಂದು ತಿಳಿಸಿದ್ದಾರೆ.
ವೈಭವ್ ಆಟಕ್ಕೆ ಅಚ್ಚರಿಗೊಂಡಿದ್ದ ಸಹ ಆಟಗಾರರು
ವೈಭವ್ ಸೂರ್ಯವಂಶಿ ಕ್ರೀಸ್‌ಗೆ ಇಳಿದು ಅಬ್ಬರಿಸಲು ಶುರು ಮಾಡಿದಾಗ ಮೊದಲು ಆತನ ಮಾತನ್ನು ತಮಾಷೆಯಾಗಿ ತಗೆದುಕೊಂಡಿದ್ದ ಆಟಗಾರರು ಗಂಭೀರವಾಗತೊಡಗಿದರು. ಆತ 5 ಸಿಕ್ಸರ್ ಬಾರಿಸುತ್ತಿದ್ದಂತೆ ಡೊನೊವನ್ ಮತ್ತು ಪ್ರಿಟೋರಿಯಸ್ ಅಚ್ಚರಿಗೆ ಒಳಗಾದರು. 'ಈ ಹುಡುಗ ಹೇಳಿದ್ದನ್ನು ನಿಜವಾಗಿಯೂ ಮಾಡುವಂತಿದ್ದಾನೆ, ನಾವು ಸಿಕ್ಸರ್‌ಗಳನ್ನು ಕೌಂಟ್ ಮಾಡುವುದು ಒಳ್ಳೆಯದು,' ಎಂದು ಕುಳಿತು ಲೆಕ್ಕ ಇಡಲು ಪ್ರಾರಂಭಿಸಿದರಂತೆ.
ಆ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ 13 ಸಿಕ್ಸರ್ ಬಾರಿಸಲು ಸಾಧ್ಯ ಆಗದಿದ್ದರೂ, ಕೇವಲ 48 ಎಸೆತಗಳಲ್ಲಿ 10 ಭರ್ಜರಿ ಸಿಕ್ಸರ್‌ಗಳ ನೆರವಿನಿಂದ 93 ರನ್ ಸಿಡಿಸಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ 7 ವಿಕೆಟ್‌ಗಳ ಭರ್ಜರಿ ಜಯ ತಂದುಕೊಟ್ಟಿದ್ದರು.
ಅಲ್ಲದೆ, ರಾಹುಲ್ ದ್ರಾವಿಡ್ ಹೆಡ್ ಕೋಚ್ ಆಗಿದ್ದ ಅವಧಿಯಲ್ಲಿ ತಾವು ಮೊದಲ ಬಾರಿಗೆ ವೈಭವ್ ಬ್ಯಾಟಿಂಗ್ ನೋಡಿದ್ದನ್ನು ಸಂಗಕ್ಕಾರ ಸ್ಮರಿಸಿದ್ದಾರೆ.
ಆರ್ಚರ್ ಬೌಲಿಂಗ್‌ನಲ್ಲಿ ಮಿಂಚಿನ ಆಟ
'ನೆಟ್ಸ್‌ನಲ್ಲಿ ಇಂಗ್ಲೆಂಡ್‌ನ ಅನುಭವಿ ವೇಗಿ ಜೋಫ್ರಾ ಆರ್ಚರ್ ಹಾಗೂ ಸಂದೀಪ್ ಶರ್ಮಾ ಅವರ ಹೊಸ ಚೆಂಡಿನ ದಾಳಿಯನ್ನು ಎದುರಿಸಲು ಹಿರಿಯ ಆಟಗಾರರೇ ಹಿಂಜರಿಯುತ್ತಿರು. ಆಗ ಈ 14 ವರ್ಷದ ಬಾಲಕ ತಾನೇ ಮುಂದೆ ಬಂದು ಬ್ಯಾಟ್ ಮಾಡಿದ್ದನಂತೆ. ಆತನ ಬ್ಯಾಟ್‌ನಿಂದ ಬರುತ್ತಿದ್ದ ಶಬ್ದ ತೋಟದ ಬಂದೂಕಿನ ಸದ್ದಿನಂತಿತ್ತು. ಆತನ ಆಟ ಕಂಡು ಆರ್ಚರ್ ಅವರೇ ಅಚ್ಚರಿಯಿಂದ ನಕ್ಕಿದ್ದರು,' ಎಂದು ಸಂಗಕ್ಕಾರ ಅವರು ಹೇಳಿದ್ದಾರೆ.
ವೈಭವ್ ಸೂರ್ಯವಂಶಿ ಅವರು ಐಪಿಎಲ್ 2026ರಲ್ಲಿ ಒಟ್ಟು 776 ರನ್ ಗಳಿಸಿ ಆರೆಂಜ್ ಕ್ಯಾಪ್ ಗೆಲ್ಲುವುದರ ಜೊತೆಗೆ, ಕ್ರಿಸ್ ಗೇಲ್ ಅವರ ಒಂದು ಸೀಸನ್‌ನ ಗರಿಷ್ಠ ಸಿಕ್ಸರ್‌ಗಳ (72 ಸಿಕ್ಸರ್) ದಾಖಲೆಯನ್ನು ಮುರಿದರು. ಅವರಲ್ಲಿರುವ ಅದ್ಭುತ ಆತ್ಮವಿಶ್ವಾಸವೇ ಅವರನ್ನು ವಿಶೇಷ ಆಟಗಾರನನ್ನಾಗಿ ಮಾಡಿದೆ ಎಂದು ಸಂಗಕ್ಕಾರ ಅವರಿ ಮುಕ್ತಕಂಠದಿಂದ ಶ್ಲಾಘಿಸಿ ಗಮನ ಸೆಳೆದಿದ್ದಾರೆ.












Click it and Unblock the Notifications