ಇಂಟರ್ನೆಟ್ನ ಹೊಸ ಕ್ರಶ್ ಈ ಭಾರತೀಯ ಸೇನಾ ಮೇಜರ್! ರಾಷ್ಟ್ರಪತಿಯ ಪಕ್ಕದಲ್ಲೇ ನಿಂತು ವೈರಲ್ ಆದ ರಿಷಭ್ ಸಿಂಗ್ ಸಾಂಬ್ಯಾಲ್
ಇಂಟರ್ನೆಟ್ನ ಹೊಸ ಕ್ರಶ್ ಯಾರು ಗೊತ್ತಾ? ರಶ್ಮಿಕಾ ಮಂದಣ್ಣ ಅಲ್ಲ, ಅಕ್ಷಯ್ ಖನ್ನಾ ಕೂಡ ಅಲ್ಲ. ಸೈಲೆಂಟ್ ಆಗಿ ಹೆಂಗಳೆಯರ ಮನ ಗೆದ್ದಿರುವ ಈತ ಒಬ್ಬ ಭಾರತೀಯ ಸೇನಾ ಮೇಜರ್. ಮುಖ್ಯವಾಹಿನಿ ಸುದ್ದಿಗಳಲ್ಲಿ ಕಾಣಿಸಿಕೊಳ್ಳದ ಈ ವ್ಯಕ್ತಿ ಸದಾ ನಮ್ಮ ರಾಷ್ಟ್ರಪತಗಳ ಪಕ್ಕದಲ್ಲಿ ಇದ್ದೇ ಇಂಟರ್ನೆಟ್ ಸೆನ್ಸೇಶನ್ ಆಗಿದ್ದಾರೆ. ಇವರ ವಿಡಿಯೊಗಳು ವೈರಲ್ ಆಗುತ್ತಿವೆ. ಇವರೇ ಮೇಜರ್ ರಿಷಭ್ ಸಿಂಗ್ ಸಾಂಬ್ಯಾಲ್. ʼಮೋಸ್ಟ್ ಹ್ಯಾಂಡ್ಸಮ್ ಗಾರ್ಡ್ʼ ಅಂತಲೂ ಗುರುತಿಸಿಕೊಂಡಿದ್ದಾರೆ.
ಈ ವರ್ಷದ ಗಣರಾಜ್ಯೋತ್ಸವದ ಪರೇಡ್ ವೇಳೆ ಇಂಟರ್ನೆಟ್ ಸೆನ್ಸೇಶನ್ ಆದ ಈತ ಅಲ್ಲಿಂದೀಚೆಗೆ ಗಮನ ಸೆಳೆಯುವುದು ನಿಲ್ಲಿಸಿಲ್ಲ. ಹಾಗಂತ ಅವರೇನೂ ಚಿತ್ರವಿಚಿತ್ರವಾಗಿ ವರ್ತಿಸೊಲ್ಲ. ಇತ್ತೀಚೆಗೆ ಒಂದು ವಿಡಿಯೋ ವೈರಲ್ ಆಯ್ತು. ಅದರಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಬರ್ತಿದಾರೆ. ಅವರ ಜೊತೆಗೆ ಮೇಜರ್ ರಿಷಭ್ ಸಿಂಗ್ ಸಾಂಬ್ಯಾಲ್. ಸಾಂಬ್ಯಾಲ್ ಬರುತ್ತಿರುವಾಗ ಅಲ್ಲೇ ನೆರೆದಿದ್ದ ಸುಮಾರು ಮಂದಿ ಹೆಣ್ಣುಮಕ್ಕಳು ಸಾಂಬ್ಯಾಲ್ ಹೆಸರು ಕೂಗಿ, ಶಿಳ್ಳೆ ಹಾಕಿ, ಆನಂದ ವ್ಯಕ್ತಪಡಿಸಿದ್ದಾರೆ. ಇದನ್ನು ನೋಡಿ ಸಾಂಬ್ಯಾಲ್ಗೆ ತುಸು ನಾಚಿಕೆ ಆಗಿದೆ. ಆದರೆ ತನ್ನ ಕೂಲ್ ಕಳೆದುಕೊಳ್ಳದ ಅವರು ಮುಖ ಎತ್ತಲೋ ತಿರುಗಿಸಿ ಸಣ್ಣಗೆ ನಗುತ್ತಿರುವುದು ಕಂಡುಬಂತು.

ಮೇಜರ್ ರಿಷಭ್ ಸಿಂಗ್ ಸಾಂಬ್ಯಾಲ್ ಹೆಸರಿನಲ್ಲಿ ಇನ್ಸ್ಟಾಗ್ರಾಂ ಪೇಜ್ ಕೂಡ ಇದೆ. ಅದರಲ್ಲಿ ಯಾರೋ ಅವರ ಫೋಟೊ, ವಿಡಿಯೋ ಅಪ್ಲೋಡ್ ಮಾಡುತ್ತಾರೆ. ಅದಕ್ಕೆ 1.73 ಲಕ್ಷ ಫಾಲೋವರ್ಸ್ ಸಹ ಇದ್ದಾರೆ!
ಭಾರತೀಯ ಸೇನೆಯ 4 ಪ್ಯಾರಾ ಸ್ಪೆಷಲ್ ಫೋರ್ಸಸ್ ಘಟಕದ ಅಧಿಕಾರಿಯಾಗಿರುವ ಸಾಂಬ್ಯಾಲ್ ಪ್ರಸ್ತುತ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಎಯ್ಡ್-ಡಿ-ಕ್ಯಾಂಪ್ (Aide-de-Camp - ADC) ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ADCಗಳು ರಾಷ್ಟ್ರಪತಿ ಸೇರಿದಂತೆ ಉನ್ನತ ಹುದ್ದೆಯ ಗಣ್ಯರ ವೈಯಕ್ತಿಕ ಸೇನಾ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಾರೆ. ಆದರೆ ಮೇಜರ್ ರಿಷಭ್ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಜನಪ್ರಿಯರನ್ನಾಗಿಸಿದ್ದು ಅವರ ಆಕರ್ಷಕ ವ್ಯಕ್ತಿತ್ವ, ಮನಮೋಹಕ ನಗು ಮತ್ತು ಹಳೆಯ ಕಾಲದ ಸಿನೆಮಾ ನಾಯಕನನ್ನು ನೆನಪಿಸುವ ವ್ಯಕ್ತಿತ್ವ.
ಮೇಜರ್ ಸಾಂಬ್ಯಾಲ್ ಮೊದಲ ಬಾರಿಗೆ 2021ರಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದರು. ಆಗ ಅವರು ಜಾಟ್ ರೆಜಿಮೆಂಟ್ನ ಕ್ಯಾಪ್ಟನ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಅವರ ನೇತೃತ್ವದಲ್ಲಿ ಜಾಟ್ ರೆಜಿಮೆಂಟ್ನ ತಂಡ ಗಣರಾಜ್ಯೋತ್ಸವ ಪರೇಡ್ನ ಅತ್ಯುತ್ತಮ ಮಾರ್ಚಿಂಗ್ ಕಂಟಿಂಜೆಂಟ್ ಟ್ರೋಫಿ ಗೆದ್ದಿತ್ತು.
ನಂತರ ಅವರು ರಾಷ್ಟ್ರಪತಿಗಳ ಪಕ್ಕದಲ್ಲಿ ನಿಯುಕ್ತರಾದರು. ಸದಾ ಅವರ ಹಿಂದೆ ಅಕ್ಕಪಕ್ಕ ಕಾಣಿಸಿಕೊಳ್ಳುತ್ತಿದ್ದಾರೆ. ರಾಷ್ಟ್ರಪತಿ ಭಾವೋದ್ವೇಗಕ್ಕೊಳಗಾದ ಸಂದರ್ಭದಲ್ಲಿ ತಮ್ಮ ಕೈಯಲ್ಲಿದ್ದ ಕರವಸ್ತ್ರವನ್ನು ಅವರಿಗೆ ರಿಷಭ್ ನೀಡಿದ ಕ್ಷಣ ಹಾಗೂ ಮಳೆಯ ವೇಳೆ ಅವರ ತಲೆಯ ಮೇಲೆ ಛತ್ರಿ ಹಿಡಿದು ನಿಂತ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ಪಡೆದಿವೆ. ಈ ವರ್ಷ ನಡೆದ 2026ರ ಗಣರಾಜ್ಯೋತ್ಸವ ಪರೇಡ್ನಲ್ಲಿಯೂ ರಾಷ್ಟ್ರಪತಿಯೊಂದಿಗೆ ಮೇಜರ್ ರಿಷಭ್ ಕಾಣಿಸಿಕೊಂಡಾಗ, ಅವರ ಶಾಂತ ಸ್ವಭಾವ, ಆತ್ಮವಿಶ್ವಾಸ ಮತ್ತು ಕರ್ತವ್ಯನಿಷ್ಠೆ ಮತ್ತೊಮ್ಮೆ ಜನರ ಗಮನ ಸೆಳೆಯಿತು.
ಅವರ ವೈರಲ್ ಫೋಟೋಗಳು ಮತ್ತು ವಿಡಿಯೊಗಳ ಕಾಮೆಂಟ್ ವಿಭಾಗದಲ್ಲಿ ನೆಟ್ಟಿಗರು ಮೆಚ್ಚುಗೆಯ ಮಹಾಪೂರವನ್ನೇ ಹರಿಸಿದ್ದಾರೆ. ಒಬ್ಬರು, ʼಇವರು ತುಂಬಾ ಆಕರ್ಷಕ ವ್ಯಕ್ತಿ! ಅದರಲ್ಲೂ ಸೇನಾ ಸಮವಸ್ತ್ರ ಅವರ ವ್ಯಕ್ತಿತ್ವವನ್ನು ಇನ್ನಷ್ಟು ಮೆರಗುಗೊಳಿಸುತ್ತದೆ" ಎಂದು ಬರೆದಿದ್ದಾರೆ. ಮತ್ತೊಬ್ಬರು ತಮಾಷೆಯಾಗಿ, ʼಈಗ ನನಗೂ ರಾಷ್ಟ್ರಪತಿಯಾಗಬೇಕು ಅನ್ನಿಸುತ್ತಿದೆʼ ಎಂದು ಕಾಮೆಂಟ್ ಮಾಡಿದ್ದಾರೆ.
ಮೇಜರ್ ರಿಷಭ್ ಅವರ ಕರ್ತವ್ಯನಿಷ್ಠೆಯನ್ನು ಹೊಗಳಿದ ಮತ್ತೊಬ್ಬ ನೆಟಿಜೆನ್, ʼರಾಷ್ಟ್ರಪತಿಯ ಬಗ್ಗೆ ಅವರಲ್ಲಿರುವ ಕಾಳಜಿ ಅವರ ಮುಖದಲ್ಲೇ ಕಾಣುತ್ತದೆ. ಮಗನಂತೆ ಅವರನ್ನು ನೋಡಿಕೊಳ್ಳುವ ವ್ಯಕ್ತಿ ಸಿಕ್ಕಿರುವುದು ರಾಷ್ಟ್ರಪತಿಯವರ ಅದೃಷ್ಟʼ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಗಮನಿಸಬೇಕಾದ ಸಂಗತಿಯೆಂದರೆ, ಪ್ಯಾರಾ ಸ್ಪೆಷಲ್ ಫೋರ್ಸಸ್ ಭಾರತೀಯ ಸೇನೆಯ ಅತ್ಯಂತ ಕಠಿಣ ಮತ್ತು ಪ್ರತಿಷ್ಠಿತ ವಿಶೇಷ ಪಡೆಗಳಲ್ಲಿ ಒಂದಾಗಿದೆ. ಇಲ್ಲಿ ಸೇರ್ಪಡೆಯಾಗಲು ಅಸಾಧಾರಣ ಮಾನಸಿಕ ದೃಢತೆ, ದೈಹಿಕ ಸಾಮರ್ಥ್ಯ ಮತ್ತು ಅತ್ಯಂತ ಕಠಿಣ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಬೇಕು. ಆ ಪರೀಕ್ಷೆಗಳನ್ನು ಪೂರೈಸಿದ ಬಳಿಕವೇ ಯೋಧರಿಗೆ ಭಾರತೀಯ ಸೇನೆಯ ಅತ್ಯಂತ ಪ್ರತಿಷ್ಠಿತ ಗೌರವಗಳಲ್ಲಿ ಒಂದಾದ 'ಬಲಿದಾನ್ ಬ್ಯಾಡ್ಜ್' ಧರಿಸುವ ಅವಕಾಶ ದೊರೆಯುತ್ತದೆ. ಮೇಜರ್ ರಿಷಭ್ ಸಿಂಗ್ ಸಾಂಬ್ಯಾಲ್ ಕೂಡ ಆ ಗೌರವವನ್ನು ತಮ್ಮ ಕಠಿಣ ಪರಿಶ್ರಮ ಮತ್ತು ಸಮರ್ಪಣೆಯ ಮೂಲಕ ಗಳಿಸಿದ್ದಾರೆ.
ಮೇಜರ್ ರಿಷಭ್, ಭಾರತೀಯ ಸೇನೆಯ ಅತ್ಯಂತ ಹೆಮ್ಮೆಯ ಕಾಲಾಳು ಪಡೆಯಾದ ಜಾಟ್ ರೆಜಿಮೆಂಟ್ನಲ್ಲಿ ತಮ್ಮ ಸೇನಾ ಬದುಕನ್ನು ಆರಂಭಿಸಿದರು. 1795ರಲ್ಲಿ ಸ್ಥಾಪನೆಯಾದ ಈ ರೆಜಿಮೆಂಟ್ ಭಾರತೀಯ ಸೇನೆಯ ಅತ್ಯಂತ ಹಳೆಯ ಮತ್ತು ದಿಟ್ಟ ರೆಜಿಮೆಂಟ್ಗಳಲ್ಲಿ ಒಂದಾಗಿದೆ. ಹಲವು ಯುದ್ಧಗಳಲ್ಲಿ ಈ ರೆಜಿಮೆಂಟ್ ತನ್ನ ಸಾಹಸವನ್ನು ಸಾಬೀತುಪಡಿಸಿದೆ. ನಂತರ ಅವರು ಭಾರತೀಯ ಸೇನೆಯ ಅತ್ಯಂತ ಕಠಿಣ ಘಟಕಗಳಲ್ಲಿ ಒಂದಾದ ಪ್ಯಾರಾಚೂಟ್ ರೆಜಿಮೆಂಟ್ಗೆ ಸ್ವಯಂಪ್ರೇರಿತರಾಗಿ ಸೇರಿದರು.
ಈ ರೆಜಿಮೆಂಟ್ನ ಮರೂನ್ ಬೆರೆಟ್ ಧರಿಸುವುದು ಸುಲಭದ ಮಾತಲ್ಲ. ಅದಕ್ಕೆ ದೈಹಿಕ ಸಾಮರ್ಥ್ಯ, ಮಾನಸಿಕ ದೃಢತೆ ಮತ್ತು ಅಸಾಧಾರಣ ಸಹನಶಕ್ತಿಯನ್ನು ಸಾಬೀತುಪಡಿಸಬೇಕು. ಇದೇ ರೆಜಿಮೆಂಟ್ನ ಭಾಗವೇ ವಿಶ್ವದ ಅತ್ಯುತ್ತಮ ವಿಶೇಷ ಕಾರ್ಯಾಚರಣೆ ಪಡೆಯೆಂದು ಪರಿಗಣಿಸಲ್ಪಡುವ ಪ್ಯಾರಾ ಸ್ಪೆಷಲ್ ಫೋರ್ಸಸ್ (Para SF). ಇಲ್ಲಿ ನಡೆಯುವ ತರಬೇತಿ ಸಾಮಾನ್ಯ ಸೈನಿಕ ತರಬೇತಿಯಲ್ಲ. ದಿನಗಟ್ಟಲೆ ನಿದ್ರೆಯಿಲ್ಲದೆ ಕಾರ್ಯಾಚರಣೆ, ಭಾರ ಹೊತ್ತು ದೀರ್ಘದೂರದ ನಡಿಗೆ, ಅತ್ಯಂತ ಅಪಾಯಕಾರಿ ಪ್ಯಾರಾಚೂಟ್ ಜಿಗಿತಗಳು, ಶತ್ರು ಪ್ರದೇಶದಲ್ಲಿ ಬದುಕುಳಿಯುವ ಕೌಶಲ- ಇವೆಲ್ಲವೂ ಇದರ ಭಾಗ.
ಮೇಜರ್ ಸಾಂಬ್ಯಾಲ್ ಅವರ ವೃತ್ತಿಜೀವನದ ಮತ್ತೊಂದು ವಿಶೇಷ ಅಧ್ಯಾಯ ಎಡಿಸಿ (Aide-de-Camp) ಆಗಿ ಸೇವೆ. ADC ಆಗಿ ಆಯ್ಕೆಯಾಗುವುದು ಪ್ರತಿಯೊಬ್ಬ ಅಧಿಕಾರಿಗೂ ಸಿಗುವ ಅವಕಾಶವಲ್ಲ. ಅತ್ಯುತ್ತಮ ಶಿಸ್ತು, ವ್ಯಕ್ತಿತ್ವ, ನಡವಳಿಕೆ ಮತ್ತು ವಿಶ್ವಾಸಾರ್ಹತೆಯನ್ನು ಹೊಂದಿರುವ ಅಧಿಕಾರಿಗಳಿಗೆ ಮಾತ್ರ ಈ ಜವಾಬ್ದಾರಿ. ರಾಜ್ಯಪಾಲರು, ರಾಷ್ಟ್ರಪತಿ ಅಥವಾ ಇತರ ಉನ್ನತ ಸಾಂವಿಧಾನಿಕ ಹುದ್ದೆಯಲ್ಲಿರುವ ಗಣ್ಯರ ಅಧಿಕೃತ ಕರ್ತವ್ಯಗಳಲ್ಲಿ ADC ಪ್ರಮುಖ ಪಾತ್ರವಹಿಸುತ್ತಾರೆ. ಇವರ ಪ್ರತಿ ಹೆಜ್ಜೆ, ಪ್ರತಿ ಸಲ್ಯೂಟ್, ಪ್ರತಿಯೊಂದು ಚಲನೆಯೂ ಭಾರತೀಯ ಸೇನೆಯ ಘನತೆಯನ್ನು ಪ್ರತಿಬಿಂಬಿಸುತ್ತದೆ.














Click it and Unblock the Notifications