ಮೈಕ್ರೋಸಾಫ್ಟ್ನಲ್ಲಿ 5 ವರ್ಷ ಕೆಲಸ ಮಾಡಿದರೂ ಬೇಸರವೇ ಇಲ್ಲ! ಬೆಂಗಳೂರಿನ ಮಹಿಳೆಯ ಪೋಸ್ಟ್ ವೈರಲ್
ಐದು ವರ್ಷಗಳಿಗೂ ಹೆಚ್ಚು ಕಾಲ ಒಂದೇ ಕಂಪನಿಯಲ್ಲಿ ಕೆಲಸ ಮಾಡಿದ ನಂತರವೂ ಪ್ರತಿದಿನ ಕಚೇರಿಗೆ ಹೋಗುವ ಉತ್ಸಾಹ ಹಾಗೆಯೇ ಇದೆ ಎಂದು ಬೆಂಗಳೂರಿನ ಮಹಿಳೆಯೊಬ್ಬರು ಹಂಚಿಕೊಂಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮೈಕ್ರೋಸಾಫ್ಟ್ನಲ್ಲಿ ಕೆಲಸ ಮಾಡುತ್ತಿರುವ ದೀಪಿಕಾ ಕೌಲ್ ತಮ್ಮ ಉದ್ಯೋಗದ ಅನುಭವವನ್ನು ಹಂಚಿಕೊಂಡಿದ್ದು, ಕಂಪನಿಯ ಕೆಲಸದ ಸಂಸ್ಕೃತಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ದೀಪಿಕಾ ಕೌಲ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಬೆಂಗಳೂರು ಮೈಕ್ರೋಸಾಫ್ಟ್ ಕಚೇರಿಯಲ್ಲಿನ ತಮ್ಮ ದಿನನಿತ್ಯದ ಜೀವನದ ಕೆಲವು ಕ್ಷಣಗಳನ್ನು ಒಳಗೊಂಡ ವಿಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಅದಕ್ಕೆ, "ಮೈಕ್ರೋಸಾಫ್ಟ್ನಲ್ಲಿ 5 ವರ್ಷ ಕೆಲಸ ಮಾಡಿದ ಅನುಭವ ನಿಜವಾಗಿ ಹೀಗಿರುತ್ತದೆ" ಎಂಬ ಶೀರ್ಷಿಕೆ ನೀಡಿದ್ದಾರೆ.

ವಿಡಿಯೊದಲ್ಲಿ ಮಾತನಾಡಿರುವ ದೀಪಿಕಾ, ತಮಗೆ ತಮ್ಮ ಕೆಲಸ ಹಾಗೂ ಕಚೇರಿಯ ಮೇಲಿರುವ ಪ್ರೀತಿಯನ್ನು ಹಂಚಿಕೊಂಡಿದ್ದಾರೆ. "ಕಳೆದ ಐದು ವರ್ಷಗಳಿಂದ ನಾನು ಇದೇ ಕಚೇರಿಗೆ ಬರುತ್ತಿದ್ದರೂ, ಪ್ರತಿದಿನ ಇಲ್ಲಿಗೆ ಕಾಲಿಡುವಾಗ ಯಾವುದೆ ಬೇಸರ ಇರುವುದಿಲ್ಲ; ಬದಲಿಗೆ ಹೊಸ ಉತ್ಸಾಹ ಮೂಡುತ್ತದೆ. ಇದು ಕೇಳಲು ಸ್ವಲ್ಪ ವಿಚಿತ್ರ ಎನಿಸಿದರೂ ತಮಗೆ ಮಾತ್ರ ಇದು ನಿಜ," ಎಂದು ಅವರು ಹೇಳಿದ್ದಾರೆ.
ತಮ್ಮ ಈ ಕೆಲಸದ ಉತ್ಸಾಹಕ್ಕೆ ಕೇವಲ ಕಂಪನಿಯ ಬ್ರ್ಯಾಂಡ್ ಹೆಸರು ಕಾರಣವಲ್ಲ, ಬದಲಿಗೆ ಅಲ್ಲಿನ ಅತ್ಯುತ್ತಮ ಕೆಲಸದ ವಾತಾವರಣ ಮತ್ತು ಸದಾ ಬೆಂಬಲ ನೀಡುವ ಸಹೋದ್ಯೋಗಿಗಳೇ ನಿಜವಾದ ಸ್ಫೂರ್ತಿ ಎಂದು ದೀಪಿಕಾ ಸ್ಪಷ್ಟಪಡಿಸಿದ್ದಾರೆ.
ನನ್ನ ಈ ಸಂತೋಷಕ್ಕೆ ಕಾರಣ ಕಟ್ಟಡದ ಮೇಲಿರುವ ಕಂಪನಿಯ ಬ್ರ್ಯಾಂಡ್ ಹೆಸರಲ್ಲ, ಬದಲಿಗೆ ಅದರೊಳಗೆ ನಡೆಯುವ ಸಕಾರಾತ್ಮಕ ವಿಚಾರಗಳು. ಇಲ್ಲಿ ಯಾವುದೇ ಅನಗತ್ಯ ಪೈಪೋಟಿ ಇಲ್ಲದೆ, ಕೇವಲ ಒಬ್ಬರ ಬೆಳವಣಿಗೆಗೆ ಮತ್ತೊಬ್ಬರು ಹೆಗಲು ಕೊಡುವ ಅದ್ಭುತ ಸಹೋದ್ಯೋಗಿಗಳಿದ್ದಾರೆ. ಮುಕ್ತ ವಿಚಾರ ವಿನಿಮಯ ಮತ್ತು ನಿಜವಾದ ಚರ್ಚೆಗಳಿಗೆ ಇಲ್ಲಿ ಸಿಗುವ ಪ್ರೋತ್ಸಾಹವೇ ನನ್ನ ಯಶಸ್ಸಿನ ಗುಟ್ಟು ಎಂದು ಅವರು ಹಂಚಿಕೊಂಡಿದ್ದಾರೆ.
ಗೊಂದಲದ ಮನಸ್ಸಿನಿಂದ ಕಚೇರಿಗೆ ಹೋದರೂ ಸಂಜೆಯಾಗುವಷ್ಟರಲ್ಲಿ ಮನಸ್ಸು ಹಗುರಾಗಿ ಆಲೋಚನೆಗಳಲ್ಲಿ ಸ್ಪಷ್ಟತೆ ಮೂಡುತ್ತದೆ ಎಂದು ದೀಪಿಕಾ ಹೇಳಿದ್ದಾರೆ. ಒತ್ತಡದ ನಡುವೆಯೂ ಕಚೇರಿಯ ದಿನದ ಕೊನೆಯಲ್ಲಿ ನೆಮ್ಮದಿ ಸಿಗಲು ಅಲ್ಲಿನ ಪಾಸಿಟಿವ್ ಕೆಲಸದ ಸಂಸ್ಕೃತಿಯೇ ಕಾರಣ ಎಂದಿರುವ ಅವರು ಇದು ಯಾವುದೇ ಕಂಪನಿಯು ನೀಡುವ ಭೌತಿಕ ಸೌಲಭ್ಯಗಳಿಗಿಂತ ಮಿಗಿಲಾದದ್ದು ಎಂದು ಅಭಿಪ್ರಾಯಪಟ್ಟಿದ್ದಾರೆ.
ತಮ್ಮ ಸಂದೇಶದ ಮೂಲಕ ಇಂದಿನ ಯುವ ಪೀಳಿಗೆಗೆ ಕಿವಿಮಾತು ಹೇಳಿರುವ ದೀಪಿಕಾ, "ನಮ್ಮನ್ನು ವೃತ್ತಿಪರವಾಗಿ ಹಾಗೂ ವೈಯಕ್ತಿಕವಾಗಿ ಉತ್ತಮವಾಗಿ ರೂಪಿಸುವ ಆಫೀಸ್ ಸಿಕ್ಕರೆ ಅದರ ಮೌಲ್ಯವನ್ನು ಎಂದಿಗೂ ಕಡೆಗಣಿಸಬೇಡಿ" ಎಂದಿದ್ದಾರೆ. ಇವರ ಈ ಸ್ಪೂರ್ತಿದಾಯಕ ವಿಡಿಯೊಗೆ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದ್ದು, ಒಂದು ಅತ್ಯುತ್ತಮ ಕೆಲಸದ ವಾತಾವರಣ ಹೇಗಿರಬೇಕು ಎಂಬ ವಿಷಯದ ಬಗ್ಗೆ ಇಂಟರ್ನೆಟ್ನಲ್ಲಿ ದೊಡ್ಡ ಸಂವಾದವೇ ಸೃಷ್ಟಿಯಾಗಿದೆ.














Click it and Unblock the Notifications