ಫ್ರಿಜ್ ಅವಶ್ಯಕತೆಯೇ ಇಲ್ಲ, ಈ ರೀತಿ ಇಡ್ಲಿ, ದೋಸೆ ಹಿಟ್ಟು ಮಾಡಿಟ್ಟರೆ ಆರು ತಿಂಗಳಾದರೂ ಕೆಡುವುದಿಲ್ಲ
ಮಹಿಳೆಯರ ಪಾಲಿನ ದೊಡ್ಡ ತಲೆನೋವು ಎಂದರೆ ಅಡುಗೆ ಮಾಡುವುದಲ್ಲ,ಏನು ಅಡುಗೆ ಮಾಡುವುದು ಎನ್ನುವುದನ್ನು ನಿರ್ಧರಿಸುವುದು. ಅದರಲ್ಲಿಯೂ ಆಧುನಿಕ ಜೀವನಶೈಲಿ, ಬೆಳಗಿನ ಅವಸರದ ಸಮಯ, ಆಫೀಸ್‌ಗೆ ಹೋಗುವ ಧಾವಂತ ಇದೆಲ್ಲದರ ನಡುವೆ ಆರೋಗ್ಯಕರ ತಿಂಡಿ ಮಾಡಿ ಬಡಿಸುವುದು ಹಲವರಿಗೆ ದೊಡ್ಡ ಸವಾಲು. ಇನ್ನು ಗಂಟೆಗಟ್ಟಲೆ ಅಕ್ಕಿ, ಬೇಳೆಗಳನ್ನು ನೆನೆಸಿಟ್ಟು, ರುಬ್ಬಿ, ಹುದುಗು ಬರುವವರೆಗೆ ಕಾಯುವ ತಾಳ್ಮೆ ಇಂದಿನ ದಿನಗಳಲ್ಲಿ ಯಾರಿಗೂ ಇಲ್ಲ. ಇದೇ ಕಾರಣಕ್ಕೆ ಇದೀಗ ಮಾರುಕಟ್ಟೆಯಲ್ಲಿ ಲಭ್ಯವಿರುವ 'ಇನ್‌ಸ್ಟೆಂಟ್ ಇಡ್ಲಿ-ದೋಸೆ ಮಿಕ್ಸ್' ಗಳತ್ತ ಮುಖ ಮಾಡುವವರೇ ಹೆಚ್ಚಾಗಿದ್ದಾರೆ.
ಆದರೆ ಮಾರುಕಟ್ಟೆಯಿಂದ ತರುವ ಈ ಇನ್ಸ್ಟೆಂಟ್ ಮಿಕ್ಸ್‌ಗಳ ಬದಲು ಮನೆಯಲ್ಲಿಯೇ ಸುಲಭವಾಗಿ ಹಿಟ್ಟು ತಯಾರಿಸಿಟ್ಟುಕೊಂಡು ಅದನ್ನೇ ಆರು ತಿಂಗಳವರೆಗೂ ಬಳಸುವ ಹಾಗಾದರೆ? ಇಲ್ಲಿ ಇನ್ನೊಂದು ಗಮನಿಸಬೇಕಾದ ಅಂಶ ಎಂದರೆ ಪ್ರತೀ ಸಲ ಅಕ್ಕಿ ಬೇಳೆಯನ್ನು ನೆನೆಸು, ರುಬ್ಬು, ಹುದುಗಲು ಇಡು ಇಂಥಹ ಯಾವ ತಾಪತ್ರಯವೂ ಇಲ್ಲದೆ ಹಿಟ್ಟು ತಯಾರಾಗುತ್ತದೆ. ಮತ್ತೊಂದು ವಿಶೇಷ ಎಂದರೆ ಈ ಹಿಟ್ಟನ್ನು ಫ್ರಿಜ್‌ನಲ್ಲಿ ಇಡುವ ಅವಶ್ಯಕತೆಯೂ ಇಲ್ಲ.

ಆಧುನಿಕ ಜೀವನಶೈಲಿಯಲ್ಲಿ ರೆಫ್ರಿಜರೇಟರ್ ಇಲ್ಲದೆ ಅಡುಗೆಯನ್ನು ಹೆಚ್ಚು ದಿನಗಳ ಕಾಲ ಸಂರಕ್ಷಿಸುವುದು ದೊಡ್ಡ ಸವಾಲಾಗಿದೆ. ಅದರಲ್ಲೂ ಇಡ್ಲಿ-ದೋಸೆ ಹಿಟ್ಟನ್ನು ಹೊರಗಡೆ ಇಟ್ಟರೆ ಬೇಗ ಹುಳಿಯಾಗಿ, ಹಾಳಾಗಿಬಿಡುತ್ತದೆ. ಆದರೆ, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಒಂದು ವಿಶೇಷ ತಂತ್ರವು, ಫ್ರಿಜ್ ಇಲ್ಲದೆಯೇ ಹಿಟ್ಟನ್ನು ಆರು ತಿಂಗಳವರೆಗೆ ತಾಜಾವಾಗಿಟ್ಟುಕೊಳ್ಳಲು ಸಹಕಾರಿ ಎಂದು ಹೇಳಲಾಗುತ್ತಿದೆ.ಇಲ್ಲಿ ಇಡ್ಲಿ, ದೋಸೆ ಎರಡಕ್ಕೂ ಒಂದೇ ಹಿಟ್ಟನ್ನು ರೆಡಿ ಮಾಡಿ ಇಟ್ಟುಕೊಳ್ಳಬಹುದು.
ಇಡ್ಲಿ, ದೋಸೆ ಹಿಟ್ಟಿಗೆ ಬೇಕಾಗಿರುವ ಸಾಮಗ್ರಿಗಳು:
ಒಂದು ಕೆಜಿ ಅಕ್ಕಿ
250 ಗ್ರಾಂ ಉದ್ದಿನಬೇಳೆ,
100 ಗ್ರಾಂ ಅವಲಕ್ಕಿ
ಹಿಟ್ಟು ತಯಾರಿಸುವ ವಿಧಾನ:
ಒಂದು ಕೆ.ಜಿ ಅಕ್ಕಿಯನ್ನು ನೀರಿನಲ್ಲಿ ಚೆನ್ನಾಗಿ ತೊಳೆದು ಅದರಲ್ಲಿನ ನೀರಿನ ಅಂಶ ತೆಗೆದು ಹಾಕಲು ಒಂದೆರಡು ದಿನ ಬಿಸಿಲಿನಲ್ಲಿ ಅಥವಾ ಫ್ಯಾನ್ ಅಡಿಯಲ್ಲಿ ಬಿಡಿಸಿ ಇಡಬೇಕು. ನಂತರ ಈ ಅಕ್ಕಿಗೆ ಉದ್ದಿನ ಬೇಳೆ ಮತ್ತು ಅವಕ್ಕಿ ಸೇರಿಸಿ ನುಣ್ಣಗೆ ಪುಡಿ ಮಾಡಿಕೊಳ್ಳಬೇಕು. ಈ ಪುಡಿಯನ್ನು ಗಾಳಿಯಾಡಾದ ಡಬ್ಬದಲ್ಲಿ ಹಾಕಿ ಎತ್ತಿಟ್ಟುಕೊಳ್ಳಬೇಕು. ದೋಸೆ ಅಥವಾ ಇಡ್ಲಿ ಮಾಡುವ ಹಿಂದಿನ ದಿನ ಎಷ್ಟು ಬೇಕೋ ಅಷ್ಟು ಹಿಟ್ಟನ್ನು ತೆಗೆದುಕೊಡು ನೀರಿನಲ್ಲಿ ಕಲಸಿ ಫರ್ಮೆಂಟ್ ಆಗಲು ಬಿಡಬೇಕು. ಬೆಳಗ್ಗೆ ಎದ್ದು ಇಡ್ಲಿ ಅಥವಾ ದೋಸೆ ಮಾಡಲು ಹಿಟ್ಟು ರೆಡಿಯಾಗಿರುತ್ತದೆ.
ಈ ರೀತಿ ತಯಾರಿಸಿಟ್ಟ ಇಡ್ಲಿ, ದೋಸೆ ಪುಡಿಯನ್ನು ಆರರಿಂದ ಎಂಟು ತಿಂಗಳವರೆಗೆ ಆರಾಮಾಗಿ ಉಪಯೋಗಿಸಬಹುದು.
ಕೆಲಸಕ್ಕೆ ಹೋಗುವ ಮಹಿಳೆಯರಿಗಂತೂ ಇದು ಅತ್ಯಂತ ಸುಲಭ ವಿಧಾನ. ಒಂದು ರಜೆಯ ದಿನ ಪುಡಿ ಮಾಡುವ ಕೆಲಸ ಮುಗಿಸಿಕೊಂಡರೆ ಮತ್ತೆ ಎಂಟು ತಿಂಗಳು ನೆನಸುವುದು,ರುಬ್ಬುವುದು, ಹುದುಗಲು ಇಡುವ ರಗಳೆಯೇ ಇಲ್ಲ.
ಇನ್ನು ಇಡ್ಲಿ, ದೋಸೆ ಆಯಿತು ದಿನಾ ಏನಾದರೊಂದು ಪಲ್ಯ, ಸಾಂಬಾರ್ ಆಗಲೇ ಬೇಕಲ್ಲ. ಯಾವತ್ತೋ ಒಂದು ದಿನ ಬಹಳ ಹೊತ್ತು ಅಡುಗೆ ಮನೆಯಲ್ಲಿ ಕಳೆಯಲು ಮನಸ್ಸಿಲ್ಲ, ಆಗ ಥಟ್ ಅಂತ ರೆಡಿಯಾಗುವ ಗ್ರೇವಿ, ಗೊಜ್ಜು, ಮಾಡಲು ಕೂಡಾ ಸಿಂಪಲ್ ವಿಧಾನ ಇದೆ. ಇಲ್ಲಿಯೂ ಈ ಗ್ರೇವಿ ಮಿಕ್ಸ್ ಅನ್ನು ಮೊದಲೇ ರೆಡಿ ಮಾಡಿ ಫ್ರೀಜರ್‌ನಲ್ಲಿ ಇಡಬೇಕು. ಯಾವಾಗ ಬೇಕೋ ಆಗ ಹೊರ ತೆಗೆದು ಗ್ರೇವಿಗೆ ಎರಡು ಮೂರು ಐಸ್ ಕ್ಯೂಬ್‌ಗಳನ್ನು ಹಾಕಿ ಒಂದು ಕುದಿ ಬರಿಸಿದರೆ ಸಾಕಾಗುತ್ತದೆ.
ರೆಡಿ ಗ್ರೇವಿ ಮಿಕ್ಸ್ ತಯಾರಿಸುವ ವಿಧಾನ :
ಬೇಕಾಗುವ ಸಾಮಗ್ರಿ:
2 ದೊಡ್ಡ ಈರುಳ್ಳಿ
6 ಟೊಮ್ಯಾಟೋ
ಮೆಣಸಿನ ಪುಡಿ
ಅರಶಿನ ಪುಡಿ
ಒಂದು ಟೀ ಚಮಚ ಸೋಂಫು
ಸ್ವಲ್ಪ ಗರಂ ಮಸಾಲ
ಆರರಿಂದ ಏಳು ಗೋಡಂಬಿ
ಮಾಡುವ ವಿಧಾನ:
ಈರುಳ್ಳಿ, ಟೊಮ್ಯಾಟೋ, ಗರಂ ಮಸಾಲ, ಸೋಂಫು, ಗೋಡಂಬಿ ಇದನ್ನು ಒಂದು ತವಾದಲ್ಲಿ ಹಾಕಿ ಚೆನ್ನಾಗಿ ಬೇಯಿಸಬೇಕು. ಇಲ್ಲಿ ಬೇಯಿಸುವುದಕ್ಕೆ ಒಂದೆರಡು ಚಮಚ ಎಣ್ಣೆ ಹಾಕಬೇಕು, ನೀರು ಸೇರಿಸಬಾರದು. ಈ ಎಲ್ಲಾ ಸಾಮಗ್ರಿಗಳು ಬೆಂದ ಬಳಿಕ ಅದನ್ನು ಮೆಣಸಿನ ಪುಡಿ ಮತ್ತು ಅರಶಿನ, ರುಚಿಗೆ ತಕ್ಕಂತೆ ಉಪ್ಪು ಸೇರಿಸಿ ರುಬ್ಬಿಕೊಳ್ಳಬೇಕು. ನುಣ್ಣಗೆ ರುಬ್ಬಿದ ಈ ಪೇಸ್ಟ್ ಅನ್ನು ಫ್ರೀಜರ್‌ನಲ್ಲಿ ಇಡಬೇಕು. ಅಗತ್ಯ ಎನಿಸಿದಾಗ ಫ್ರೀಜರ್‌ನಿಂದ ತೆಗೆದು ಎರಡರಿಂದ ಮೂರು ಐಸ್ ಕ್ಯೂಬ್ ಹಾಕಿ ಕುದಿ ಬರಿಸಬೇಕು. ಇಲ್ಲಿ ನಿಮಗೆ ತರಕಾರಿ ಸೇರಿಸಬೇಕು ಎಂದಿದ್ದರೆ ತರಕಾರಿಯನ್ನು ಮೊದಲೇ ಬೇಯಿಸಿ ಇಟ್ಟುಕೊಂಡರೆ ಗ್ರೇವಿ ಕುದಿ ಬಂದಾಗ ತರಕಾರಿ ಸೇರಿಸಿದರೆ ಆಯಿತು.
(ಬರಹ: ರಂಜಿತಾ ಆರ್.ಕೆ.)












Click it and Unblock the Notifications