K Bhagyaraj: ಕನ್ನಡಕ್ಕೆ ರಿಮೇಕ್ ಆಗಿ ಬ್ಲಾಕ್‌ಬಸ್ಟರ್ ಆಗಿದ್ದವು ನಿರ್ದೇಶಕ ಕೆ.ಭಾಗ್ಯರಾಜ್ ಅವರ ಈ ಸಿನಿಮಾಗಳು
ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ಹಾಗೂ ನಟ ಕೆ.ಭಾಗ್ಯರಾಜ್ (73) ಅವರು ಚೆನ್ನೈನಲ್ಲಿ ನಿಧನರಾಗಿದ್ದಾರೆ. ತೀವ್ರ ಹೃದಯಾಘಾತಕ್ಕೆ ಒಳಗಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದರೂ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ತಮಿಳು ಚಿತ್ರರಂಗದ ದಿಗ್ಗಜನಾಗಿದ್ದರೂ, ಕೆ. ಭಾಗ್ಯರಾಜ್ ಅವರಿಗೆ ಕನ್ನಡ ಸಿನಿಮಾ ಲೋಕ ಮತ್ತು ಕನ್ನಡಿಗರ ಮೇಲೆ ಅಪಾರ ಗೌರವವಿತ್ತು. ಅವರ ಸಿನಿಮಾಗಳು ಕನ್ನಡಕ್ಕೂ ರಿಮೇಕ್ ಆಗಿತ್ತು.
ಕನ್ನಡ ಚಿತ್ರದಲ್ಲಿ ಅಭಿನಯ
2015ರಲ್ಲಿ ತೆರೆಕಂಡ ಕನ್ನಡದ ಪ್ರಸಿದ್ಧ 'ರೆಡ್ ಅಲರ್ಟ್' ಸಿನಿಮಾದಲ್ಲಿ ಕೆ. ಭಾಗ್ಯರಾಜ್ ಅವರು ವಿಶೇಷ ಅತಿಥಿ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು. ಆ ಮೂಲಕ ನೇರವಾಗಿ ಕನ್ನಡ ಪ್ರೇಕ್ಷಕರನ್ನು ರಂಜಿಸಿ, ಸ್ಯಾಂಡಲ್‌ವುಡ್‌ಗೆ ಹೆಜ್ಜೆ ಇಟ್ಟಿದ್ದರು. ಇನ್ನು ರವಿಚಂದ್ರನ್ ಅವರ 'ಅಣ್ಣಯ್ಯ' ಚಿತ್ರಕ್ಕೆ ಇವರದ್ದೇ ಕಥೆ. ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ಸಾರ್ವಕಾಲಿಕ ಬ್ಲಾಕ್‌ಬಸ್ಟರ್ ಚಿತ್ರ 'ಅಣ್ಣಯ್ಯ' ಸಿನಿಮಾದ ಮೂಲ ಕಥೆಗಾರರೇ ಕೆ. ಭಾಗ್ಯರಾಜ್. ಇವರು ತಮಿಳಿನಲ್ಲಿ ಸೂಪರ್ ಹಿಟ್ ಮಾಡಿದ್ದ 'ಎಂಗ ಚಿನ್ನ ರಾಸಾ' ಕಥೆಯೇ ಕನ್ನಡದಲ್ಲಿ 'ಅಣ್ಣಯ್ಯ' ಆಗಿ ಮೂಡಿಬಂದಿತ್ತು.

ದ್ವಾರಕೀಶ್ ಚಿತ್ರಕ್ಕೂ ಭಾಗ್ಯರಾಜ್ ಮೂಲ
ಹಿರಿಯ ನಟ-ನಿರ್ದೇಶಕ ದ್ವಾರಕೀಶ್ ಅವರು 1991ರಲ್ಲಿ ನಿರ್ದೇಶಿಸಿ, ನಿರ್ಮಿಸಿದ್ದ 'ಗೌರಿ ಕಲ್ಯಾಣ' (ಹರ್ಷವರ್ಧನ್ ಮತ್ತು ನಿತ್ಯ ಅಭಿನಯದ) ಚಿತ್ರದ ಕಥೆ ಕೂಡ ಭಾಗ್ಯರಾಜ್ ಅವರದ್ದೇ ಆಗಿತ್ತು. ಇವರು ತಮಿಳಿನಲ್ಲಿ ಬರೆದು ನಿರ್ದೇಶಿಸಿದ್ದ 'ತೂರಲ್ ನಿನ್ನು ಪೋಚು' (1982) ಸಿನಿಮಾವನ್ನು ದ್ವಾರಕೀಶ್ ಅವರು ಕನ್ನಡಕ್ಕೆ ತಂದಿದ್ದರು. ಹೀಗಾಗಿ ಭಾಗ್ಯರಾಜ್ ಕನ್ನಡಕ್ಕೆ ದೂರದವರೇನಲ್ಲ.
ಇನ್ನು ನಟನೆಯಾಗಿ ಅವರ ವೃತ್ತಿಜೀವನದ ಕೊನೆಯ ಚಿತ್ರ 2025 ರಲ್ಲಿ ಬಿಡುಗಡೆಯಾದ 'ಕುಬೇರ'. ಈ ಸಿನಿಮಾದ ಮೂಲಕ ಅವರು ತಮ್ಮ ಸುದೀರ್ಘ ಹಾಗೂ ಸ್ಮರಣೀಯ ನಟನಾ ಪಯಣಕ್ಕೆ ವಿರಾಮ ಹಾಡಿದ್ದರು. ಕನ್ನಡ ಮಾತ್ರವಲ್ಲದೆ ಬಾಲಿವುಡ್‌ನಲ್ಲೂ ಇವರ ಕಥೆಗಳು ಭರ್ಜರಿ ಯಶಸ್ಸು ಕಂಡಿದ್ದವು. ಬಿಗ್ ಬಿ ಅಮಿತಾಭ್ ಬಚ್ಚನ್ ದ್ವಿಪಾತ್ರದಲ್ಲಿ ನಟಿಸಿದ್ದ ಆಲ್-ಟೈಮ್ ಹಿಟ್ ಸಿನಿಮಾ 'ಆಖ್ರಿ ರಾಸ್ತಾ' (1986), ಅನಿಲ್ ಕಪೂರ್-ಶ್ರೀದೇವಿ ನಟನೆಯ 'ಮಿಸ್ಟರ್ ಬೆಚಾರಾ' (1996) ಹಾಗೂ ಅನಿಲ್ ಕಪೂರ್-ಮಾಧುರಿ ದೀಕ್ಷಿತ್ ಜೋಡಿಯ 'ಬೀಟಾ' ಚಿತ್ರಗಳ ಯಶಸ್ಸಿನ ಹಿಂದಿನ ಶಕ್ತಿ ಇವರ ಚಿತ್ರಕಥೆಗಳೇ ಆಗಿದ್ದವು. ಹಾಗೆಯೇ ತೆಲುಗಿನಲ್ಲಿ 'ಮಾಯಾದಾರಿ ಮೊಗುಡು' ಸೇರಿದಂತೆ ಮೂರು ಸಿನಿಮಾಗಳನ್ನು ಇವರೇ ನಿರ್ದೇಶಿಸಿದ್ದರು.
ಬದಲಾಗುವ ಟ್ರೆಂಡ್‌ಗಳ ಮಧ್ಯೆಯೂ ಕೆ. ಭಾಗ್ಯರಾಜ್ ಅವರ ಕಥೆಗಳು ಇಂದಿಗೂ ಪ್ರಸ್ತುತವಾಗಿವೆ. ಅವರ ನಿಧನಕ್ಕೆ ಕನ್ನಡ ಚಿತ್ರರಂಗದ ಗಣ್ಯರು ಸೇರಿದಂತೆ ಇಡೀ ದಕ್ಷಿಣ ಭಾರತದ ಸಿನೆಮಾ ಲೋಕ ತೀವ್ರ ಕಂಬನಿ ಮಿಡಿದಿದೆ. ಇತ್ತೀಚೆಗಷ್ಟೇ ತಮಿಳು ಚಿತ್ರರಂಗದ ಮತ್ತೊಬ್ಬ ದಿಗ್ಗಜ, ಭಾಗ್ಯರಾಜ್ ಅವರ ಗುರುಗಳಾದ ಭಾರತಿರಾಜ ಅವರು ನಿಧನರಾಗಿದ್ದರು. ಆ ದುಃಖದ ಬೆನ್ನಲ್ಲೇ ಈಗ ಅವರ ಪ್ರೀತಿಯ ಶಿಷ್ಯ ಭಾಗ್ಯರಾಜ್ ಅವರೂ ಇಹಲೋಕ ತ್ಯಜಿಸಿರುವುದು ಇಡೀ ಚಿತ್ರರಂಗವನ್ನು ಆಘಾತಕ್ಕೆ ತಳ್ಳಿದೆ. ಹಿರಿಯ ಕಲಾವಿದನ ಅಗಲಿಕೆಗೆ ಗೌರವ ಸೂಚಿಸುವ ಸಲುವಾಗಿ, ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರು ಕೆ. ಭಾಗ್ಯರಾಜ್ ಅವರ ಅಂತಿಮ ಸಂಸ್ಕಾರವನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಗುವುದು ಎಂದು ಘೋಷಿಸಿದ್ದಾರೆ.













Click it and Unblock the Notifications