ಭಾರತ – ಬ್ರಿಟನ್ ಹೊಸ ವ್ಯಾಪಾರ ಒಪ್ಪಂದ ಜುಲೈ 15ರಿಂದ ಜಾರಿ: ಜವಳಿ ಮತ್ತು ಉಡುಪು ರಫ್ತಿಗೆ 11,600 ಕೋಟಿ ರೂ. ಲಾಭದ ನಿರೀಕ್ಷೆ
ಭಾರತವು ಬ್ರಿಟನ್ ಸೇರಿದಂತೆ ವಿವಿಧ ರಾಷ್ಟ್ರಗಳೊಂದಿಗೆ ಮಾಡಿಕೊಂಡಿರುವ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದವು ಭಾರತದಲ್ಲಿನ ಬಟ್ಟೆ ಮತ್ತು ಜವಳಿ ಉತ್ಪನ್ನಗಳ ವಿನ್ಯಾಸ, ಉತ್ಪಾದನೆ ಮತ್ತು ಮಾರಾಟಕ್ಕೆ ಭರ್ಜರಿ ಲಾಭವನ್ನು ತಂದುಕೊಡಲಿದೆ ಎಂದು ಹೇಳಲಾಗಿದೆ. ಜುಲೈ 15ರಂದು ಜಾರಿಗೆ ಬರಲಿರುವ ಭಾರತ - ಯುಕೆ ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದ (CETA)ಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ, ಈ ಒಪ್ಪಂದವು ಬ್ರಿಟನ್ ಮಾರುಕಟ್ಟೆಗೆ ಭಾರತದ ರಫ್ತಿನ ಸುಮಾರು ಶೇ.99ರಷ್ಟು ಉತ್ಪನ್ನಗಳ ಮೇಲೆ ಸುಂಕಮುಕ್ತ ಅವಕಾಶವನ್ನು ಕಲ್ಪಿಸಲಿದೆ. ಇದರಿಂದ ಭಾರತದ ಉಡುಪು ವಲಯಕ್ಕೆ ಪ್ರಮುಖ ಉತ್ತೇಜನ ಸಿಗಲಿದೆ ಎಂದೇ ಅಂದಾಜಿಸಲಾಗಿದೆ.
ಬ್ರಿಟನ್‌ಗೆ ರಫ್ತು ಮಾಡುವ ಜವಳಿ ಮತ್ತು ಉಡುಪುಗಳ ಮೇಲಿನ ಶೇ.12ರವರೆಗಿನ ತೆರಿಗೆಯು ಶೂನ್ಯಕ್ಕೆ ಇಳಿಯಲಿದ್ದು, ಮುಂದಿನ ಮೂರರಿಂದ ಐದು ವರ್ಷಗಳಲ್ಲಿ ಭಾರತದ ಉಡುಪು ರಫ್ತು ಆದಾಯಕ್ಕೆ ವಾರ್ಷಿಕವಾಗಿ 1.35 ಬಿಲಿಯನ್ ಡಾಲರ್ (1.35 ಬಿಲಿಯನ್ ಅಮೆರಿಕನ್ ಡಾಲರ್ - 11,610 ಕೋಟಿ ರೂ.) ಸೇರ್ಪಡೆಯಾಗುವ ಸಾಧ್ಯತೆ ಇದೆ. ಜೊತೆಗೆ, ಯುಕೆ ಉಡುಪು ಆಮದು ಮಾರುಕಟ್ಟೆಯಲ್ಲಿ ಭಾರತದ ಪಾಲು ಶೇ.6ರಿಂದ ಶೇ.12ಕ್ಕೆ ದ್ವಿಗುಣಗೊಳ್ಳುವ ನಿರೀಕ್ಷೆಯಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ವಿವಿಧ ಉತ್ಪನ್ನಗಳ ಮೇಲೆ ವಿಪರೀತ ತೆರಿಗೆ ವಿಧಿಸಿದ್ದು ಭಾರೀ ಹೊಡೆತವನ್ನು ಕೊಟ್ಟಿತ್ತು. ಇದೀಗ ಹೊಸ ಒಪ್ಪಂದವು ಭಾರತಕ್ಕೆ ಭರ್ಜರಿ ಲಾಭವನ್ನು ತಂದುಕೊಡಲಿದೆ.

ವಾರ್ಷಿಕವಾಗಿ 81 ಬಿಲಿಯನ್ ಡಾಲರ್ (ಸುಮಾರು 6.97 ಲಕ್ಷ ಕೋಟಿ ರೂ.) ಮೌಲ್ಯದ ವಿಶ್ವದ ಅತಿದೊಡ್ಡ ಉಡುಪು ಆಮದು ಮಾರುಕಟ್ಟೆಯಾಗಿರುವ ಅಮೆರಿಕದೊಂದಿಗೆ ಪೂರ್ಣ ಪ್ರಮಾಣದ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಅಂತಿಮಗೊಂಡರೆ, ಜಾಗತಿಕ ಉಡುಪು ವ್ಯಾಪಾರದ ಶೇ.80ಕ್ಕೂ ಹೆಚ್ಚು ಮಾರುಕಟ್ಟೆಗೆ ಭಾರತಕ್ಕೆ ಆದ್ಯತೆಯ ಪ್ರವೇಶ ದೊರೆಯುವ ಸಾಧ್ಯತೆಯಿದೆ. ಆದರೆ, ಭಾರತದ ಮುಕ್ತ ವ್ಯಾಪಾರ ಒಪ್ಪಂದಗಳ (FTA) ಬಳಕೆ ಇನ್ನೂ ಕಡಿಮೆಯಾಗಿದೆ. ಜುಲೈ 15ರಿಂದ ಜಾರಿಗೆ ಬರಲಿರುವ ಭಾರತ-ಯುಕೆ ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದ ಜಾರಿಯಾಗಲು ಕೆಲವೇ ದಿನಗಳು ಬಾಕಿ ಇವೆ. ಈ ಒಪ್ಪಂದದ ಮೂಲಕ ಬ್ರಿಟನ್ ಮಾರುಕಟ್ಟೆಗೆ ಭಾರತದ ರಫ್ತಿನ ಸುಮಾರು ಶೇ.99ರಷ್ಟು ಉತ್ಪನ್ನಗಳಿಗೆ ಸುಂಕ-ಮುಕ್ತ ಪ್ರವೇಶ ದೊರೆಯಲಿದ್ದು, ಭಾರತದ ಉಡುಪು ವಲಯಕ್ಕೆ ಇದು ಪ್ರಮುಖ ಉತ್ತೇಜನ ನೀಡಲಿದೆ.
ಭಾರತದ ಮುಕ್ತ ವ್ಯಾಪಾರ ಒಪ್ಪಂದದ ಬಳಕೆ ಕೇವಲ 25% ರಲ್ಲೇ ಇದೆ. ಆದ್ದರಿಂದ ಆ ಸಮಸ್ಯೆಯನ್ನು ಪರಿಹರಿಸಲು, ಉಡುಪು ರಫ್ತು ಉತ್ತೇಜನ ಮಂಡಳಿ (AEPC) ತನ್ನ ಪ್ಯಾನ್-ಇಂಡಿಯಾ ವಿಚಾರ ಸಂಕಿರಣವನ್ನು ಜೂನ್ 25 ರಂದು ಬೆಂಗಳೂರಿನಲ್ಲಿ ನಡೆಸಿತ್ತು. ಈ ಕಾರ್ಯಕ್ರಮದಲ್ಲಿ ಉಡುಪು ಉದ್ಯಮದ ಪರಿಣಿತರು, ಸರ್ಕಾರಿ ಅಧಿಕಾರಿಗಳು ಮತ್ತು ವ್ಯಾಪಾರ ತಜ್ಞರು ಭಾರತದ $13 ಬಿಲಿಯನ್ ಉಡುಪು ರಫ್ತಿನ ಎಂಜಿನ್ ವಿಷಯದ ಬಗ್ಗೆ ಚರ್ಚೆ ಮಾಡಿದರು.
FTA ಬಳಕೆಯು ಭಾರತದ ಅತ್ಯಂತ ಪ್ರಮುಖ ವ್ಯಾಪಾರ ಸವಾಲಾಗಿದೆ. ಈ ವಿಚಾರದ ಬಗ್ಗೆ ಪುಣೆಯ ಸಿಂಬಿಯೋಸಿಸ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ (SIMS) ನ ಅರ್ಥಶಾಸ್ತ್ರ ಮತ್ತು ಅಂತರರಾಷ್ಟ್ರೀಯ ವ್ಯಾಪಾರದ ಅಸೋಸಿಯೇಟ್ ಪ್ರೊಫೆಸರ್ ಡಾ. ಸಂಜಯ್ ಕುಮಾರ್ ಮಂಗ್ಲಾ ಅವರು ಮಾತನಾಡಿದರು. ಭಾರತವು ಪ್ರಸ್ತುತ 50 ಕ್ಕೂ ಹೆಚ್ಚು ದೇಶಗಳೊಂದಿಗೆ ಮುಕ್ತ ವ್ಯಾಪಾರ (FTA - Free Trade Agreement) ಒಪ್ಪಂದಗಳನ್ನು ಹೊಂದಿದೆ. ಒಟ್ಟು ಜನಸಂಖ್ಯೆ 1.75 ಶತಕೋಟಿ, ಇದು ಭಾರತದ ಸ್ವಂತ ದೇಶೀಯ ಮಾರುಕಟ್ಟೆಯಾದ 1.45 ಶತಕೋಟಿಗಿಂತ ದೊಡ್ಡದಾಗಿದೆ ಎಂದು ಹೇಳಿದರು.
ಗುಡ್‌ರಿಟರ್ನ್ ಜೊತೆಗಿನ ವಿಶೇಷ ಸಂವಾದದಲ್ಲಿ ಮಾತನಾಡಿದ ಎಇಪಿಸಿಯ ಪ್ರಧಾನ ಕಾರ್ಯದರ್ಶಿ ಮಿಥಿಲೇಶ್ವರ್ ಠಾಕೂರ್ ಅವರು, ಭಾರತ-ಯುಕೆ ಸಿಇಟಿಎ ಹಿಂದಿನ ವ್ಯಾಪಾರ ಒಪ್ಪಂದಗಳಿಗಿಂತ ಏಕೆ ಭಿನ್ನವಾಗಿದೆ ಎನ್ನುವುದನ್ನು ವಿವರಿಸಿದರು. ಯುಕೆ ಎಫ್‌ಟಿಎ ಇತರ ಎಫ್‌ಟಿಎಗಳಿಗಿಂತ ಹೆಚ್ಚಿನ ಅನುಕೂಲವನ್ನು ಹೊಂದಿದೆ ಎಂದು ಠಾಕೂರ್ ಹೇಳಿದರು.
ಯುಕೆ ಜತೆಗಿನ ಮುಕ್ತ ವ್ಯಾಪಾರ ಒಪ್ಪಂದ (FTA)ದಲ್ಲಿ ನಿಯಮಗಳು (Rules of Origin) ಸಾಕಷ್ಟು ಉದಾರವಾಗಿವೆ. ಈ ಒಪ್ಪಂದದ ಪ್ರಕಾರ, ಉತ್ಪನ್ನದ ಸುಂಕದ ವರ್ಗೀಕರಣದಲ್ಲಿ (Tariff Heading) ಬದಲಾವಣೆ ಆಗಿರಬೇಕು ಮತ್ತು ಸುಮಾರು ಶೇ.45ರಷ್ಟು ಮೌಲ್ಯವರ್ಧನೆ ಹೊಂದಿರಬೇಕು. ಆದರೆ, ಇದು 'ಫ್ಯಾಬ್ರಿಕ್-ಫಾರ್ವರ್ಡ್' ಅಥವಾ 'ನೂಲು-ಫಾರ್ವರ್ಡ್' ನಿಯಮವನ್ನು ಅನುಸರಿಸುವುದಿಲ್ಲ ಎಂದು ವಿವರಿಸಿದರು.
ಭಾರತೀಯ ರಫ್ತುದಾರರಿಗೆ ಈ ವ್ಯತ್ಯಾಸವು ಬಹಳ ಮುಖ್ಯವಾಗಿದೆ. ಭಾರತ-ಯುರೋಪಿಯನ್ ಒಕ್ಕೂಟದ ಎಫ್‌ಟಿಎಯಲ್ಲಿರುವ ಫ್ಯಾಬ್ರಿಕ್-ಫಾರ್ವರ್ಡ್ ನಿಯಮದ ಪ್ರಕಾರ, ಕಡಿಮೆ ಆಮದು ಸುಂಕದ ಸೌಲಭ್ಯ ಪಡೆಯಲು ಉಡುಪು ತಯಾರಿಕೆಯಲ್ಲಿ ಬಳಸುವ ಬಟ್ಟೆಯು ದೇಶದೊಳಗೇ ಉತ್ಪಾದನೆಯಾಗಿರಬೇಕು. ಭಾರತವು ಹತ್ತಿ ಜವಳಿ ಉತ್ಪಾದನೆಯಲ್ಲಿ ಪ್ರಬಲವಾಗಿದ್ದು, ಅಗತ್ಯವಿರುವ ಹೆಚ್ಚಿನ ಕಚ್ಚಾ ವಸ್ತುಗಳನ್ನು ದೇಶದಲ್ಲೇ ಉತ್ಪಾದಿಸುತ್ತದೆ. ಆದ್ದರಿಂದ ಹತ್ತಿ ಉಡುಪುಗಳು ಹೆಚ್ಚಿನ ಎಫ್‌ಟಿಎಗಳ ಅಡಿಯಲ್ಲಿ ಸುಲಭವಾಗಿ ಅರ್ಹತೆ ಪಡೆಯುತ್ತವೆ. ಆದರೆ, ಮಾನವ ನಿರ್ಮಿತ ನಾರು (MMF) ಬಳಸಿ ತಯಾರಿಸುವ ಉಡುಪುಗಳ ವಿಷಯದಲ್ಲಿ ಸವಾಲು ಇದೆ. ಏಕೆಂದರೆ, ಈ ಉಡುಪುಗಳ ತಯಾರಿಕೆಗೆ ಬೇಕಾಗುವ ಬಟ್ಟೆಯನ್ನು ಭಾರತ ಹೆಚ್ಚಾಗಿ ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ ಎಂದು ಹೇಳಿದರು.














Click it and Unblock the Notifications