Mango: ಭಾರತದ ಮಾವು ನಮಗೆ ಬೇಡ ಎಂದ ಜಪಾನ್; ಈ ಕಾರಣಕ್ಕೆ 20 ವರ್ಷಗಳಲ್ಲೇ ಮೊದಲ ಬಾರಿಗೆ ರಫ್ತು ನಿಷೇಧ
ವಿಶ್ವದಲ್ಲೇ ಅತ್ಯಂತ ಹೆಚ್ಚು ಮಾವು ಉತ್ಪಾದಿಸುವ ಭಾರತಕ್ಕೆ ಈಗ ಅಂತರರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಹಿನ್ನಡೆಯಾಗಿದೆ. ಗುಣಮಟ್ಟ ಹಾಗೂ ಕೀಟನಾಶಕ ನಿಯಂತ್ರಣ ಪ್ರಕ್ರಿಯೆಯಲ್ಲಿ ಲೋಪದೋಷಗಳು ಕಂಡುಬಂದ ಹಿನ್ನೆಲೆಯಲ್ಲಿ, ಜಪಾನ್ ಸರ್ಕಾರವು ಭಾರತದಿಂದ ಆಮದು ಮಾಡಿಕೊಳ್ಳಲಾಗುತ್ತಿದ್ದ ಮಾವಿನ ಹಣ್ಣುಗಳ ಮೇಲೆ ತಾತ್ಕಾಲಿಕ ನಿಷೇಧ ಹೇರಿದೆ.
ಈ ವರ್ಷದ ಆರಂಭದಲ್ಲಿ ಜಪಾನ್‌ನ ಕ್ವಾರಂಟೈನ್ ಅಧಿಕಾರಿಗಳು ಭಾರತದ ಮಾವು ಸಂಸ್ಕರಣಾ ಘಟಕಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಈ ದೋಷಗಳು ಪತ್ತೆಯಾಗಿವೆ. ಮಾವಿನ ಹಣ್ಣುಗಳ ಸೀಸನ್ ಭರದಿಂದ ಸಾಗುತ್ತಿರುವ ಈ ಪ್ರಮುಖ ಬೇಸಿಗೆಯ ಸಂದರ್ಭದಲ್ಲೇ ಜಪಾನ್ ಇಂತಹದೊಂದು ಕಠಿಣ ನಿರ್ಧಾರ ತಗೆದುಕೊಂಡಿರುವುದು ಭಾರತೀಯ ರಫ್ತುದಾರರು ಹಾಗೂ ಮಾವು ಬೆಳೆಗಾರರಿಗೆ ದೊಡ್ಡ ಆಘಾತ ತಂದಿದೆ. ಇದರಿಂದಾಗಿ ಭಾರತದ ಹೆಮ್ಮೆಯ ತಳಿಗಳಾದ ಅಲ್ಫಾನ್ಸೋ (ಬಾದಾಮಿ), ಕೇಸರ್, ಲಂಗ್ಡಾ ಮತ್ತು ಬಂಗನಪಲ್ಲಿ ಮಾವಿನ ಹಣ್ಣುಗಳ ರಫ್ತಿಗೆ ಭಾರಿ ಹೊಡೆತ ಬಿದ್ದಿದೆ.

20 ವರ್ಷಗಳ ಬಳಿಕ ಮೊದಲ ನಿಷೇಧ
ಕಳೆದ ಸುಮಾರು ಎರಡು ದಶಕಗಳ ಇತಿಹಾಸದಲ್ಲಿ ಜಪಾನ್ ದೇಶವು ಭಾರತದ ಮಾವಿನ ಮೇಲೆ ಇಂತಹ ನಿಷೇಧ ಹೇರಿರುವುದು ಇದೇ ಮೊದಲು ಎನ್ನಲಾಗಿದೆ. ಈ ಹಿಂದೆ ಮಾವಿನ ಹಣ್ಣುಗಳಲ್ಲಿ ಕಂಡುಬರುತ್ತಿದ್ದ ಹಣ್ಣಿನ ನೊಣಗಳ ಕಾಟದಿಂದಾಗಿ ಜಪಾನ್ ಭಾರತದ ಮಾವನ್ನು ನಿಷೇಧಿಸಿತ್ತು. ಆದರೆ, ಭಾರತವು ತನ್ನ ಕೀಟ ನಿಯಂತ್ರಣ ಮತ್ತು ಶುದ್ಧೀಕರಣ ಪ್ರಕ್ರಿಯೆಯನ್ನು ಗಟ್ಟಿಗೊಳಿಸಿದ ನಂತರ 2006ರಲ್ಲಿ ಜಪಾನ್ ಈ ನಿಷೇಧವನ್ನು ತೆರವುಗೊಳಿಸಿತ್ತು.
ಈಗ ಮತ್ತೊಮ್ಮೆ ಭಾರತದ ರಫ್ತು ಮಾವು ತನ್ನ ದೇಶದ ಕಟ್ಟುನಿಟ್ಟಾದ ಸಸ್ಯ ಆರೋಗ್ಯದ ಮಾನದಂಡಗಳನ್ನು ಪೂರೈಸುತ್ತಿಲ್ಲ ಎಂಬ ಗಂಭೀರ ಕಾಳಜಿಯನ್ನು ಜಪಾನ್ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಸ್ಥಳೀಯ ಕೃಷಿಗೆ ಭಾರಿ ಹಾನಿ ಉಂಟುಮಾಡುವ ಇಂತಹ ಆಕ್ರಮಣಕಾರಿ ಕೀಟಗಳ ವಿಷಯದಲ್ಲಿ ಜಪಾನ್ ಈ ಖಡಕ್ ನೀತಿಯನ್ನು ಅನುಸರಿಸುತ್ತದೆ.
ಜಪಾನಿ ಇನ್ಸ್‌ಪೆಕ್ಟರ್‌ಗಳಿಗೆ ಸಿಕ್ಕಿದ್ದೇನು?
ಪ್ರತಿ ವರ್ಷ ಮಾವಿನ ರಫ್ತು ಸೀಸನ್ ಆರಂಭವಾಗುವ ಮುನ್ನ, ಜಪಾನ್ ತನ್ನ ಕ್ವಾರಂಟೈನ್ ಅಧಿಕಾರಿಗಳನ್ನು ಭಾರತದಲ್ಲಿರುವ ವೇಪರ್ ಹೀಟ್ ಟ್ರೀಟ್‌ಮೆಂಟ್ ಘಟಕಗಳ ಪರಿಶೀಲನೆಗೆ ಕಳುಹಿಸುತ್ತದೆ. ಮಾವನ್ನು ವಿದೇಶಕ್ಕೆ ರಫ್ತು ಮಾಡುವ ಮುನ್ನ ಅವುಗಳಲ್ಲಿರುವ ಕೀಟಗಳು ಮತ್ತು ನೊಣಗಳ ಲಾರ್ವಾಗಳನ್ನು ನಾಶಪಡಿಸಲು ಈ ವಿಹೆಚ್‌ಟಿ ಪ್ರಕ್ರಿಯೆ ಕಡ್ಡಾಯವಾಗಿದೆ. ಇದು ಯಾವುದೇ ರಾಸಾಯನಿಕ ಬಳಸದೆ ಕೇವಲ ನಿಯಂತ್ರಿತ ಬಿಸಿ ಮತ್ತು ಆರ್ದ್ರ ಗಾಳಿಯ ವಾತಾವರಣದಲ್ಲಿ ಮಾವನ್ನು ಸಂಸ್ಕರಿಸುವ ಪ್ರಕೃತಿ ಸ್ನೇಹಿ ವಿಧಾನವಾಗಿದೆ.
ಈ ವರ್ಷದ ಮಾರ್ಚ್ ತಿಂಗಳಿನಲ್ಲಿ ಉತ್ತರ ಪ್ರದೇಶದ ರೆಹಮಾನ್‌ಪುರದಲ್ಲಿರುವ ವಿಎಚ್‌ಟಿ ಘಟಕದಲ್ಲಿ ಜಪಾನ್ ಅಧಿಕಾರಿಗಳು ತಪಾಸಣೆ ನಡೆಸಿದ್ದರು. ಈ ವೇಳೆ ಅಲ್ಲಿನ ಸೋಂಕು ನಿವಾರಕ ಪ್ರಕ್ರಿಯೆಗಳಲ್ಲಿ ಗಂಭೀರ ಲೋಪದೋಷಗಳು ಇರುವುದು ಪತ್ತೆಯಾಗಿದೆ. ಆದರೆ ತಾಂತ್ರಿಕವಾಗಿ ಅಲ್ಲಿ ನಿಖರವಾಗಿ ಏನು ದೋಷವಿತ್ತು ಎಂಬುದನ್ನು ಭಾರತ ಅಥವಾ ಜಪಾನ್ ಅಧಿಕೃತವಾಗಿ ಬಹಿರಂಗಪಡಿಸಿಲ್ಲ. ಈ ಭೇಟಿಯ ಬೆನ್ನಲ್ಲೇ ಜಪಾನ್‌ನ 'ಯೊಕೊಹಾಮಾ ಪ್ಲಾಂಟ್ ಪ್ರೊಟೆಕ್ಷನ್ ಅಸೋಸಿಯೇಷನ್', ಮಾರ್ಚ್ 25ರ ನಂತರ ನೀಡಲಾದ ತಪಾಸಣಾ ಪ್ರಮಾಣಪತ್ರಗಳನ್ನು ಹೊಂದಿರುವ ಯಾವುದೇ ಭಾರತೀಯ ಮಾವಿನ ಶಿಪ್‌ಮೆಂಟ್‌ಗಳನ್ನು ಸ್ವೀಕರಿಸುವುದಿಲ್ಲ ಎಂದು ಪ್ರಕಟಿಸಿದೆ.

ರಫ್ತುದಾರರಿಗೆ ಭಾರಿ ಆರ್ಥಿಕ ನಷ್ಟ
ಭಾರತಕ್ಕೆ ಹೋಲಿಸಿದರೆ ಜಪಾನ್ ಅತಿ ದೊಡ್ಡ ಮಾವಿನ ಮಾರುಕಟ್ಟೆ ಇರಬಹುದು. ಆದರೆ, ಭಾರತದ ಪ್ರೀಮಿಯಂ ತಳಿಯ ಮಾವಿನ ಹಣ್ಣುಗಳಿಗೆ ಜಪಾನ್‌ನಲ್ಲಿ ಭಾರಿ ಬೇಡಿಕೆ ಇದ್ದು, ಅಲ್ಲಿ ಅತ್ಯಂತ ಹೆಚ್ಚಿನ ಬೆಲೆ ಸಿಗುತ್ತಿತ್ತು. ಹೀಗಾಗಿ ಈ ನಿಷೇಧ ರಫ್ತುದಾರರಿಗೆ ದೊಡ್ಡ ನಷ್ಟ ಉಂಟುಮಾಡಿದೆ. ಭಾರತವು ವಾರ್ಷಿಕವಾಗಿ ಸುಮಾರು 28 ಮಿಲಿಯನ್ ಮೆಟ್ರಿಕ್ ಟನ್ ಮಾವನ್ನು ಉತ್ಪಾದಿಸುವ ಮೂಲಕ ವಿಶ್ವದ ನಂ.1 ಮಾವು ಉತ್ಪಾದಕ ದೇಶವಾಗಿದೆ. ಇದರ ಬಹುಪಾಲು ದೇಶೀಯವಾಗಿ ಬಳಕೆಯಾಗುತ್ತದೆಯಾದರೂ, ಜಪಾನ್‌ನಂತಹ ಶ್ರೀಮಂತ ಮಾರುಕಟ್ಟೆಗಳಿಗೆ ರಫ್ತು ಮಾಡುವುದರಿಂದ ರೈತರಿಗೆ ಮತ್ತು ವ್ಯಾಪಾರಿಗಳಿಗೆ ಹೆಚ್ಚಿನ ಲಾಭ ಸಿಗುತ್ತಿತ್ತು. ಈ ನಿಷೇಧದಿಂದಾಗಿ ಜಾಗತಿಕ ಮಟ್ಟದಲ್ಲಿ ಭಾರತದ ಕೃಷಿ ಗುಣಮಟ್ಟದ ಮೇಲಿರುವ ವಿಶ್ವಾಸಕ್ಕೆ ಧಕ್ಕೆಯಾಗಬಹುದು ಎಂಬ ಆತಂಕ ರಫ್ತುದಾರರನ್ನು ಕಾಡುತ್ತಿದೆ.
ರೈತರಿಗೆ ಮತ್ತೊಂದು ಹೊಡೆತ
ಜಪಾನ್ ನಿಷೇಧ ಹೇರಿರುವ ಸಮಯ ಮಾವು ಬೆಳೆಗಾರರನ್ನು ಮತ್ತಷ್ಟು ಕಂಗಾಲು ಮಾಡಿದೆ. ವಿಶೇಷವಾಗಿ ಮಹಾರಾಷ್ಟ್ರದ ಅಲ್ಫಾನ್ಸೋ ಬೆಳೆಯುವ ಭಾಗದ ರೈತರು ಈಗಾಗಲೇ 'ಎಲ್ ನಿನೋ' ಹವಾಮಾನ ವೈಪರೀತ್ಯ ಹಾಗೂ ಅತಿಯಾದ ಬಿಸಿಲಿನ ಬೇಗೆಯಿಂದಾಗಿ ತೀವ್ರ ಬೆಳೆ ನಷ್ಟ ಅನುಭವಿಸಿದ್ದಾರೆ. ಕೆಲವು ಸರ್ಕಾರಿ ಸಮೀಕ್ಷೆಗಳ ಪ್ರಕಾರ, ಕೆಲವು ಪ್ರದೇಶಗಳಲ್ಲಿ ಶೇ 90ರಷ್ಟು ಮಾವಿನ ಬೆಳೆ ನಾಶವಾಗಿದೆ. ಈಗಾಗಲೇ ಇಳುವರಿ ಕುಸಿದು ಕಷ್ಟದಲ್ಲಿದ್ದ ರೈತರಿಗೆ, ರಫ್ತು ಸೀಸನ್‌ನ ಪ್ರಮುಖ ತಿಂಗಳಿನಲ್ಲೇ ಜಪಾನ್ ಮಾರುಕಟ್ಟೆ ಬಂದ್ ಆಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.













Click it and Unblock the Notifications