Mango: ಮಾವು ಬೆಳೆಗಾರರ ಸಂಕಷ್ಟಕ್ಕೆ ಮಿಡಿದ ಕೇಂದ್ರ; ಬೆಂಬಲ ಬೆಲೆ ನಿಗದಿ, ಈ ತಳಿಗೆ ಸಿಗಲಿದೆ ಕ್ವಿಂಟಾಲ್‌ಗೆ ₹1750

ಬೆಂಗಳೂರು: ಜಪಾನ್ ದೇಶವು ಭಾರತದ ಮಾವು ಆಮದನ್ನು ತಿರಸ್ಕರಿಸಿದ ಬೆನ್ನಲ್ಲೇ ಕಂಗಾಲಾಗಿದ್ದ ರಾಜ್ಯದ ಮಾವು ಬೆಳೆಗಾರರಿಗೆ ಕೇಂದ್ರ ಸರ್ಕಾರವು ಭರ್ಜರಿ ಸಿಹಿಸುದ್ದಿ ನೀಡಿದೆ. ಮಾರುಕಟ್ಟೆಯಲ್ಲಿ ದಿಢೀರ್ ಬೆಲೆ ಕುಸಿತ ಹಾಗೂ ಹವಾಮಾನ ವೈಪರೀತ್ಯದಿಂದ ನಷ್ಟದ ಸುಳಿಗೆ ಸಿಲುಕಿದ್ದ ರೈತರ ಕೈ ಹಿಡಿಯಲು ಕೇಂದ್ರ ಕೃಷಿ ಇಲಾಖೆಯು 'ಮಾರುಕಟ್ಟೆ ಹಸ್ತಕ್ಷೇಪ ಯೋಜನೆ' (MIS) ಅಡಿಯಲ್ಲಿ ಬೃಹತ್ ಆರ್ಥಿಕ ಪ್ಯಾಕೇಜ್ ಪ್ರಕಟಿಸಿದೆ. ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಅವರ ತುರ್ತು ಮನವಿಗೆ ತಕ್ಷಣ ಸ್ಪಂದಿಸಿರುವ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್, ಕರ್ನಾಟಕದ ಮಾವು ಬೆಳೆಗಾರರಿಗೆ ಪ್ರತಿ ಕ್ವಿಂಟಾಲ್ ಆಧಾರದ ಮೇಲೆ ಸಹಾಯಧನ ಬಿಡುಗಡೆ ಮಾಡಲು ಅಧಿಕೃತ ಒಪ್ಪಿಗೆ ನೀಡಿದ್ದಾರೆ.

ಜಪಾನ್ ನಿರ್ಧಾರದಿಂದ ಕಂಗಾಲಾಗಿದ್ದ ರೈತರು

ಇತ್ತೀಚೆಗೆ ಭಾರತದ ಮಾವಿನ ಹಣ್ಣುಗಳನ್ನು ಜಪಾನ್ ದೇಶವು ದಿಢೀರನೆ ತಿರಸ್ಕರಿಸಿತ್ತು. ಈ ಅಂತರರಾಷ್ಟ್ರೀಯ ಹೊಡೆತದಿಂದಾಗಿ ದೇಶದಿಂದ ಹೊರಹೋಗಬೇಕಿದ್ದ ಮಾವಿನ ರಫ್ತು ಪ್ರಮಾಣ ಕುಸಿದು ಬಿದ್ದಿತ್ತು. ಇದರ ನೇರ ಪರಿಣಾಮ ಸ್ಥಳೀಯ ಮಾರುಕಟ್ಟೆಯ ಮೇಲಾಗಿ, ಮಾವಿಗೆ ಕನಿಷ್ಠ ಬೆಲೆಯೂ ಸಿಗದೆ ರೈತರು ಕಣ್ಣೀರು ಹಾಕುವಂತಾಗಿತ್ತು. ಅದರಲ್ಲೂ ರಾಜ್ಯದಲ್ಲೇ ಅತಿ ಹೆಚ್ಚು ಮಾವು ಬೆಳೆಯುವ ಕೋಲಾರ ಮತ್ತು ಸುತ್ತಮುತ್ತಲಿನ ಜಿಲ್ಲೆಗಳ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು. ಈ ಗಂಭೀರ ಪರಿಸ್ಥಿತಿಯನ್ನು ಅರಿತ ಕೇಂದ್ರ ಸರ್ಕಾರ ಈಗ ಮಾರುಕಟ್ಟೆ ಮಧ್ಯಸ್ಥಿಕೆ ವಹಿಸಿದೆ.

Mango

1.30 ಲಕ್ಷ ಮೆಟ್ರಿಕ್ ಟನ್‌ ಮಾವು ಖರೀದಿಗೆ ಗ್ರೀನ್ ಸಿಗ್ನಲ್

ರಾಜ್ಯದಲ್ಲಿ ಅತ್ಯಂತ ಪ್ರಮುಖ ವಾಣಿಜ್ಯ ತಳಿಯಾಗಿರುವ 'ತೋತಾಪುರಿ' ಮಾವು ಬೆಳೆಗಾರರ ಹಿತರಕ್ಷಣೆಗಾಗಿ ಕೇಂದ್ರ ಸರ್ಕಾರವು 'ಬೆಲೆ ಕೊರತೆ ಪಾವತಿ ಯೋಜನೆ' (PDPS) ಜಾರಿಗೆ ತಂದಿದೆ. ಮಾರುಕಟ್ಟೆ ಮಧ್ಯಸ್ಥಿಕೆ ಯೋಜನೆಯಡಿ ರಾಜ್ಯದ ಒಟ್ಟು 1,30,000 ಮೆಟ್ರಿಕ್ ಟನ್ ತೋತಾಪುರಿ ಮಾವಿಗೆ ಈ ಆರ್ಥಿಕ ನೆರವು ಅನ್ವಯಿಸಲಿದೆ. ಮಾರುಕಟ್ಟೆಯಲ್ಲಿ ಉಂಟಾಗಿರುವ ಬೆಲೆ ನಷ್ಟವನ್ನು ಸರಿದೂಗಿಸಲು ಪ್ರತಿ ಕ್ವಿಂಟಾಲ್ ಮಾವಿಗೆ ₹1,750 ಸಹಾಯಧನ ನಿಗದಿಪಡಿಸಲಾಗಿದೆ. ಮಧ್ಯವರ್ತಿಗಳು ಮತ್ತು ದಲ್ಲಾಳಿಗಳ ಹಾವಳಿ ತಪ್ಪಿಸಲು, ನೋಂದಾಯಿತ ರೈತರ ಆಧಾರ್ ಲಿಂಕ್ಡ್ ಬ್ಯಾಂಕ್ ಖಾತೆಗೇ ನೇರವಾಗಿ ಈ ಹಣ ಜಮೆಯಾಗಲಿದೆ.

Mango: ನಷ್ಟಕ್ಕೆ ಸಿಲುಕಿರುವ ಮಾವು ಬೆಳೆಗಾರರ ರಕ್ಷಣೆಗೆ ನಿಂತ ಹೆಚ್.ಡಿ.ಕುಮಾರಸ್ವಾಮಿ: ಕೇಂದ್ರದಿಂದ ಸಿಗಲಿದ್ಯಾ ಸಿಹಿ?
Mango: ನಷ್ಟಕ್ಕೆ ಸಿಲುಕಿರುವ ಮಾವು ಬೆಳೆಗಾರರ ರಕ್ಷಣೆಗೆ ನಿಂತ ಹೆಚ್.ಡಿ.ಕುಮಾರಸ್ವಾಮಿ: ಕೇಂದ್ರದಿಂದ ಸಿಗಲಿದ್ಯಾ ಸಿಹಿ?

ಯೋಜನೆ ಹೇಗೆ ಕೆಲಸ ಮಾಡುತ್ತದೆ? ರೈತರು ಏನು ಮಾಡಬೇಕು?

2026-27ರ ಪ್ರಸಕ್ತ ಮಾರುಕಟ್ಟೆ ಹಂಗಾಮಿನಲ್ಲಿ ಈ 'ಬೆಲೆ ಕೊರತೆ ಪಾವತಿ ಅನುಷ್ಠಾನ ಯೋಜನೆ' ಕೇವಲ ಒಂದು ತಿಂಗಳ ಅವಧಿಗೆ ಮಾತ್ರ ಜಾರಿಯಲ್ಲಿರಲಿದೆ. ಈ ಯೋಜನೆಯ ಲಾಭ ಪಡೆಯಬಯಸುವ ರೈತರು ತಮ್ಮ ಉತ್ಪನ್ನಗಳನ್ನು ಕರ್ನಾಟಕ ಸರ್ಕಾರದ ಅಧಿಸೂಚಿತ ಎಪಿಎಂಸಿ (APMC) ಮಂಡಿಗಳಲ್ಲಿಯೇ ಮಾರಾಟ ಮಾಡಬೇಕಾಗುತ್ತದೆ. ರಾಜ್ಯ ಸರ್ಕಾರವು ಪ್ರಸಕ್ತ ಹಂಗಾಮಿಗೆ ಅನ್ವಯಿಸುವಂತೆ ಎಂಐಎಸ್ (MIS) ಅಡಿಯಲ್ಲಿ ಅಧಿಕೃತ ತೋತಾಪುರಿ ಮಾವು ವ್ಯಾಪಾರಿಗಳ ಪಟ್ಟಿಯನ್ನು ಶೀಘ್ರದಲ್ಲೇ ಪ್ರಕಟಿಸಲಿದೆ. ಅವರ ಮೂಲಕವೇ ಖರೀದಿ ಪ್ರಕ್ರಿಯೆ ನಡೆಯಲಿದೆ.

ಕೆಲ ದಿನಗಳ ಹಿಂದಷ್ಟೇ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ರಾಜ್ಯದ ಮಾವು ಬೆಳೆಗಾರರ ದುಃಸ್ಥಿತಿಯ ಬಗ್ಗೆ ಕೃಷಿ ಸಚಿವ ಶಿವರಾಜಸಿಂಗ್‌ ಚೌಹಾಣ್‌ ಅವರಿಗೆ ಪತ್ರ ಬರೆದು ಮನವರಿಕೆ ಮಾಡಿಕೊಟ್ಟಿದ್ದರು. ಮಾರುಕಟ್ಟೆಯಲ್ಲಿ ಉಂಟಾಗಿರುವ ಬೆಲೆ ಕುಸಿತದಿಂದ ರೈತರನ್ನು ರಕ್ಷಿಸಲು ತುರ್ತು ಪ್ಯಾಕೇಜ್ ಘೋಷಿಸುವಂತೆ ಒತ್ತಾಯಿಸಿದ್ದರು. ಜೋಶಿ ಅವರ ಮನವಿಗೆ ತಕ್ಷಣ ಸ್ಪಂದಿಸಿದ ಕೃಷಿ ಸಚಿವರು ಬಿಡುಗಡೆ ಮಾಡಿರುವ ಅನುಮೋದನಾ ಪತ್ರವನ್ನು ಹಂಚಿಕೊಂಡಿದ್ದಾರೆ. ಕೇಂದ್ರದ ಈ ತ್ವರಿತ ನಡೆಗೆ ಜೋಶಿ ಅವರು ಕರ್ನಾಟಕದ ರೈತರ ಪರವಾಗಿ ಕೃತಜ್ಞತೆ ಸಲ್ಲಿಸಿದ್ದಾರೆ.

Mango

ಈ ಪ್ರಮುಖ ಜಿಲ್ಲೆಗಳ ಲಕ್ಷಾಂತರ ರೈತರಿಗೆ ದೊಡ್ಡ ಆಸರೆ

ಕರ್ನಾಟಕದಲ್ಲಿ ತೋತಾಪುರಿ ತಳಿಯನ್ನು ವ್ಯಾಪಕವಾಗಿ ಬೆಳೆಯುವ ಜಿಲ್ಲೆಗಳ ಲಕ್ಷಾಂತರ ರೈತ ಕುಟುಂಬಗಳಿಗೆ ಕೇಂದ್ರದ ಈ ನಿರ್ಧಾರ ಸಂಜೀವಿನಿಯಾಗಲಿದೆ. ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಧಾರವಾಡ, ಬೆಳಗಾವಿ, ವಿಜಯಪುರ, ಬಾಗಲಕೋಟೆ, ತುಮಕೂರು, ಮಂಡ್ಯ, ಬಳ್ಳಾರಿ ಮತ್ತು ಹಾಸನದ ಚನ್ನರಾಯಪಟ್ಟಣ ಜಿಲ್ಲೆಗಳ ಮಾವು ಬೆಳೆಗಾರರಿಗೆ ಅನುಕೂಲವಾಗಲಿದೆ. ಹವಾಮಾನ ವೈಪರೀತ್ಯದ ಹೊಡೆತ ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆಯ ಹಿನ್ನಡೆಯಿಂದಾಗಿ ರಾಜ್ಯದ ಬೆಳೆಗಾರರಿಗೆ ಕಹಿ ಎನಿಸಿದ್ದ ಮಾವು, ಕೇಂದ್ರದ ಈ ಭರ್ಜರಿ ಆರ್ಥಿಕ ನೆರವಿನಿಂದಾಗಿ ಕೊನೆಗೂ ರೈತರ ಪಾಲಿಗೆ ಸಿಹಿಯಾಗಿ ಪರಿಣಮಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+