Mango: ನಷ್ಟಕ್ಕೆ ಸಿಲುಕಿರುವ ಮಾವು ಬೆಳೆಗಾರರ ರಕ್ಷಣೆಗೆ ನಿಂತ ಹೆಚ್.ಡಿ.ಕುಮಾರಸ್ವಾಮಿ: ಕೇಂದ್ರದಿಂದ ಸಿಗಲಿದ್ಯಾ ಸಿಹಿ?
ನವದೆಹಲಿ: ಜಪಾನ್ ದೇಶವು ಇತ್ತೀಚೆಗೆ ಭಾರತದ ಮಾವು ನಮಗೆ ಬೇಡ ಎನ್ನುವ ಮೂಲಕ ನಿಷೇಧ ಹೇರಿತ್ತು. ಇದರಿಂದ ಕರ್ನಾಟಕದ ಮಾವು ಬೆಳೆಗಾರರು ಎದುರಿಸುತ್ತಿರುವ ತೀವ್ರ ಆರ್ಥಿಕ ಸಂಕಷ್ಟವನ್ನು ನಿವಾರಿಸಲು ಕೇಂದ್ರ ಭಾರಿ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ರಾಜ್ಯದ ಮಾವು ರೈತರ ನೆರವಿಗಾಗಿ ಮಾರುಕಟ್ಟೆ ಮಧ್ಯಸ್ಥಿಕೆ ಯೋಜನೆ (MIS) ಅಡಿಯಲ್ಲಿ 'ಬೆಲೆ ಕೊರತೆ ಪಾವತಿ ಯೋಜನೆ'ಯನ್ನು (PDPS) ಜಾರಿಗೆ ತರುವಂತೆ ಕೋರಿ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಕುಮಾರಸ್ವಾಮಿ ಅವರು ಪತ್ರ ಬರೆದಿದ್ದಾರೆ.
ಕೇಂದ್ರ ಕೃಷಿ ಸಚಿವರಿಗೆ ಬರೆದಿರುವ ಪತ್ರದಲ್ಲಿ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ರಾಜ್ಯದ ಮಾವು ಉದ್ಯಮದ ವಾಸ್ತವ ಸ್ಥಿತಿಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ದೇಶದಲ್ಲೇ ಅತಿ ಹೆಚ್ಚು ಮಾವು ಉತ್ಪಾದಿಸುವ ಪ್ರಮುಖ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದೆ. ರಾಜ್ಯದಲ್ಲಿ ಸುಮಾರು 1.45 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾವು ಕೃಷಿ ವ್ಯಾಪಿಸಿದ್ದು, ಪ್ರಸಕ್ತ ಹಂಗಾಮಿನಲ್ಲಿ ದಾಖಲೆಯ ಸುಮಾರು 10 ಲಕ್ಷ ಮೆಟ್ರಿಕ್ ಟನ್ ಮಾವು ಉತ್ಪಾದನೆಯಾಗುವ ಅಂದಾಜಿದೆ ಎಂದಿದ್ದಾರೆ.

ಲಕ್ಷಾಂತರ ಕುಟುಂಬಗಳಿಗೆ ಆಧಾರ
ಪ್ರಮುಖ ಮಾವು ಬೆಳೆಯುವ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ಗ್ರಾಮಾಂತರ, ಧಾರವಾಡ, ತುಮಕೂರು ಮತ್ತು ಹಾವೇರಿ ಜಿಲ್ಲೆಗಳ ಸಾವಿರಾರು ರೈತ ಕುಟುಂಬಗಳು ತಮ್ಮ ಜೀವನೋಪಾಯಕ್ಕಾಗಿ ಸಂಪೂರ್ಣವಾಗಿ ಈ ತೋಟಗಾರಿಕಾ ಬೆಲೆಯನ್ನೇ ನಂಬಿಕೊಂಡಿವೆ. ಪ್ರಸ್ತುತ ಮಾರುಕಟ್ಟೆಯಲ್ಲಿನ ತೀವ್ರ ಏರುಪೇರು, ಮಾರುಕಟ್ಟೆಗೆ ಏಕಕಾಲಕ್ಕೆ ಹಣ್ಣುಗಳ ಪೂರೈಕೆ ಹೆಚ್ಚಾಗಿರುವುದು ಸೇರಿದಂತೆ ವಿವಿಧ ಕಾರಣಗಳಿಂದಾಗಿ ಮಾವಿನ ಬೆಲೆ ಪಾತಾಳಕ್ಕೆ ಕುಸಿದಿದೆ. ಇದರಿಂದಾಗಿ ರೈತರು ತಾವು ಬೆಳೆದ ಬೆಳೆಯನ್ನು ಅನಿವಾರ್ಯವಾಗಿ ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದು, ತೀವ್ರ ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ವೆಚ್ಚಕ್ಕಿಂತ ಮಾರುಕಟ್ಟೆ ದರ ತೀರಾ ಕಡಿಮೆ
ಕರ್ನಾಟಕ ಕೃಷಿ ಬೆಲೆ ಆಯೋಗದ ಸಮೀಕ್ಷೆಯನ್ನು ಪತ್ರದಲ್ಲಿ ಉಲ್ಲೇಖಿಸಿರುವ ಕುಮಾರಸ್ವಾಮಿ ಅವರು, "ರಾಜ್ಯದಲ್ಲಿ ಒಂದು ಕ್ವಿಂಟಾಲ್ ಮಾವು ಬೆಳೆಯಲು ರೈತರಿಗೆ ತಗಲುವ ಒಟ್ಟು ವೆಚ್ಚ ಸುಮಾರು 3,951 ರೂಪಾಯಿಗಳಾಗಿದೆ. ಆದರೆ, ಪ್ರಸ್ತುತ ಮಾರುಕಟ್ಟೆಯಲ್ಲಿ ಸಿಗುತ್ತಿರುವ ದರವು ಈ ಕನಿಷ್ಠ ವೆಚ್ಚಕ್ಕಿಂತಲೂ ತೀರಾ ಕಡಿಮೆಯಿದೆ. ಇದರಿಂದಾಗಿ ಕೃಷಿ, ನೀರಾವರಿ, ಕೂಲಿ ಮತ್ತು ಕೊಯ್ಲು ಪ್ರಕ್ರಿಯೆಗಳಿಗಾಗಿ ಭಾರೀ ಸಾಲ ಮಾಡಿ ಬಂಡವಾಳ ಹೂಡಿರುವ ರೈತರು ತೀವ್ರ ನಷ್ಟದ ಸುಳಿಗೆ ಸಿಲುಕಿದ್ದಾರೆ" ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಮಾವು ಬೆಳೆಗಾರರ ನೆರವಿಗೆ ಧಾವಿಸಿದ ಕೇಂದ್ರ ಸಚಿವರಾದ ಶ್ರೀ @hd_kumaraswamy ಅವರು
— Janata Dal Secular (@JanataDal_S) June 17, 2026
ಮಾವು ಬೆಳೆಗಾರರು ಎದುರಿಸುತ್ತಿರುವ ಬೆಲೆ ಕುಸಿತ ಹಾಗೂ ಆರ್ಥಿಕ ಸಂಕಷ್ಟವನ್ನು ಹೋಗಲಾಡಿಸಲು, ಮಾರುಕಟ್ಟೆ ಹಸ್ತಕ್ಷೇಪ ಯೋಜನೆಯಡಿ (MIS) 'ಬೆಲೆ ಕೊರತೆ ಪಾವತಿ ಯೋಜನೆ' (PDPS) ಜಾರಿಗೆ ತರುವಂತೆ ಕೇಂದ್ರ ಕೃಷಿ ಸಚಿವರಾದ ಶ್ರೀ @ChouhanShivraj… pic.twitter.com/84pFAaoYVT
ಮಾರುಕಟ್ಟೆಯ ಇಂತಹ ಏರುಪೇರುಗಳಿಂದ ರೈತರನ್ನು ರಕ್ಷಿಸಲು 'ಬೆಲೆ ಕೊರತೆ ಪಾವತಿ ಯೋಜನೆ' ಅತ್ಯಂತ ಅಗತ್ಯ. ಈ ಯೋಜನೆಯು ಮಾರುಕಟ್ಟೆ ದರ ಮತ್ತು ರೈತರ ನ್ಯಾಯಯುತ ಬೆಲೆಯ ನಡುವಿನ ವ್ಯತ್ಯಾಸದ ಮೊತ್ತವನ್ನು ನೇರವಾಗಿ ಭರ್ತಿ ಮಾಡಲು ನೆರವಾಗುತ್ತದೆ. ಇದರಿಂದ ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬಾಗಿರುವ ಕೋಲಾರದಂತಹ ಜಿಲ್ಲೆಗಳ ತೋಟಗಾರಿಕಾ ರೈತರಿಗೆ ದೊಡ್ಡ ಮಟ್ಟದ ಆದಾಯದ ರಕ್ಷಣೆ ಸಿಗಲಿದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.
ಕರ್ನಾಟಕದ ರೈತರ ಮತ್ತು ತೋಟಗಾರಿಕಾ ವಲಯದ ಹಿತದೃಷ್ಟಿಯಿಂದ ಕೇಂದ್ರ ಕೃಷಿ ಸಚಿವಾಲಯವು ಕರ್ನಾಟಕ ಸರ್ಕಾರದೊಂದಿಗೆ ಸೂಕ್ತ ಸಮನ್ವಯ ಸಾಧಿಸಿ, ಈ ಬಿಕ್ಕಟ್ಟನ್ನು ಮಾನವೀಯತೆಯ ಆಧಾರದ ಮೇಲೆ ಪರಿಶೀಲಿಸಬೇಕು ಎಂದು ಕುಮಾರಸ್ವಾಮಿ ವಿನಂತಿಸಿದ್ದಾರೆ. ತಕ್ಷಣವೇ ಅಗತ್ಯವಿರುವ ಎಲ್ಲ ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಆರಂಭಿಸಿ, ಮಾವು ಬೆಳೆಗಾರರಿಗೆ ಸೂಕ್ತ ಆರ್ಥಿಕ ಪ್ಯಾಕೇಜ್ ಅಥವಾ ನೆರವು ಪ್ರಕಟಿಸಬೇಕು ಎಂದು ಅವರು ಪತ್ರದ ಮೂಲಕ ಒತ್ತಾಯಿಸಿದ್ದಾರೆ.












Click it and Unblock the Notifications