Job Cut: ಪ್ರಸಿದ್ಧ ಕಾರು ಕಂಪನಿಯಿಂದ ಬರೋಬ್ಬರಿ 1,00,000 ಉದ್ಯೋಗ ಕಡಿತಕ್ಕೆ ಬಿಗ್ ಪ್ಲಾನ್
Volkswagen Job Cut: ಈಗಲೂ ದೊಡ್ಡ ದೊಡ್ಡ ಕಂಪನಿಗಳಲ್ಲಿ ಉದ್ಯೋಗ ಕಡಿತ ಕಾರ್ಯ ಮುಂದುವರೆದಿದೆ. ಈ ನಡುವೆಯೇ ಇದೀಗ ಜರ್ಮನಿ ಮೂಲದ ಪ್ರಸಿದ್ಧ ಕಾರು ತಯಾರಿಕಾ ದೈತ್ಯ ಕಂಪನಿಯಾದ ವೋಕ್ಸ್‌ವ್ಯಾಗನ್ ದಾಖಲೆಯ ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ಮನೆಗೆ ಕಳುಹಿಸುವ ನಿರ್ಧಾರ ಮಾಡಿದೆ ಎನ್ನುವ ಶಾಕಿಂಗ್ ಮಾಹಿತಿ ಲಭ್ಯವಾಗಿದೆ. ಹಾಗಾದ್ರೆ ಕಾರಣ ಏನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಜರ್ಮನಿಯ ಪ್ರಸಿದ್ಧ ಕಾರು ತಯಾರಿಕಾ ದೈತ್ಯ ಕಂಪನಿಯಾದ ವೋಕ್ಸ್‌ವ್ಯಾಗನ್ ತನ್ನ 89 ವರ್ಷಗಳ ಸುದೀರ್ಘ ಇತಿಹಾಸದಲ್ಲೇ ಬಹುದೊಡ್ಡ ನಿರ್ಧಾರ ತೆಗೆದುಕೊಳ್ಳಲು ಮುಂದಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಎದುರಾಗಿರುವ ತೀವ್ರ ಪೈಪೋಟಿ ಮತ್ತು ಆರ್ಥಿಕ ನಷ್ಟದಿಂದ ಹೊರಬರಲು ಕಂಪನಿಯು ಸುಮಾರು ಬರೋಬ್ಬರಿ 1,00,000 ಉದ್ಯೋಗಿಗಳನ್ನು ವಜಾಗೊಳಿಸಲು ಹಾಗೂ ಜರ್ಮನಿಯಲ್ಲೇ ಇರುವ ತನ್ನ 4 ಪ್ರಮುಖ ಉತ್ಪಾದನಾ ಘಟಕಗಳನ್ನು ಶಾಶ್ವತವಾಗಿ ಮುಚ್ಚಲು ಸಜ್ಜಾಗಿದೆ ಎನ್ನುವ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.

ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಒಲಿವರ್ ಬ್ಲೂಮ್ ಮತ್ತು ಮುಖ್ಯ ಹಣಕಾಸು ಅಧಿಕಾರಿ ಆರ್ನೋ ಆಂಟ್ಲಿಟ್ಜ್ ಅವರು ಸಿದ್ಧಪಡಿಸಿರುವ ಈ ಮಹತ್ವದ ಯೋಜನೆಯನ್ನು ಈಗಾಗಲೇ ಕಂಪನಿಯ ಉನ್ನತ ಮಂಡಳಿಯ ಮುಂಡಿಸಲಾಗಿದೆ ಎನ್ನಲಾಗಿದೆ. ಮೂಲಗಳ ಪ್ರಕಾರ, ಈ ಸಂಸ್ಥೆಯು ಜರ್ಮನಿಯ ಹ್ಯಾನೋವರ್, ಜ್ವಿಕಾವ್, ಎಮ್ಡೆನ್ ಮತ್ತು ಕಂಪನಿಯ ಐಷಾರಾಮಿ ಬ್ರ್ಯಾಂಡ್ ಆದ ಆಡಿಯ ನೆಕರ್ಸಲ್ಮ್ ಉತ್ಪಾದನಾ ಘಟಕಗಳಲ್ಲಿ ಕಾರು ಉತ್ಪಾದನೆಯನ್ನು ಸಂಪೂರ್ಣವಾಗಿ ನಿಲ್ಲಿಸಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.
1 ಲಕ್ಷ ಉದ್ಯೋಗ ಕಡಿತಕ್ಕೆ ನಿರ್ಧಾರ
ಈ 4 ಕಾರ್ಖಾನೆಗಳನ್ನು ಮುಚ್ಚುವುದರಿಂದ ಸುಮಾರು 45,000 ಉದ್ಯೋಗಗಳು ನೇರವಾಗಿ ನಷ್ಟವಾಗಲಿವೆ. ಈಗಾಗಲೇ 2024ರ ಕೊನೆಯಲ್ಲಿ ಕಾರ್ಮಿಕ ಸಂಘಟನೆಗಳೊಂದಿಗೆ ಮಾಡಿಕೊಂಡಿದ್ದ ಒಪ್ಪಂದದ ಪ್ರಕಾರ 50,000 ಉದ್ಯೋಗಗಳನ್ನು ಕಡಿತಗೊಳಿಸಲು ನಿರ್ಧರಿಸಲಾಗಿತ್ತು. ಆದರೆ ಪ್ರಸ್ತುತ ಹೊಸ ಯೋಜನೆಯು ಜಾರಿಗೆ ಬಂದರೆ ಉದ್ಯೋಗ ಕಡಿತದ ಒಟ್ಟು ಸಂಖ್ಯೆ ಬರೋಬ್ಬರಿ 1 ಲಕ್ಷಕ್ಕೆ ತಲುಪಲಿದೆ.
ಪ್ರತ್ಯೇಕ ಘಟಕಗಳಾಗಿ ವಿಭಜಿಸುವ ಸಾಧ್ಯತೆ
ಖರ್ಚು ವೆಚ್ಚಗಳನ್ನು ನಿಯಂತ್ರಿಸುವ ಸಲುವಾಗಿ ವೋಕ್ಸ್‌ವ್ಯಾಗನ್ ಮುಂದಿನ ಐದು ವರ್ಷಗಳ ಕಾಲ ತನ್ನ ಸಂಶೋಧನೆ ಮತ್ತು ಬಜೆಟ್ ಅನ್ನು ಶೇಕಡಾ 15ರಷ್ಟು ಕಡಿತಗೊಳಿಸಲು ನಿರ್ಧರಿಸಿದೆ. ಜೊತೆಗೆ ಹೂಡಿಕೆಯ ಮೊತ್ತವನ್ನು 130 ಬಿಲಿಯನ್ ಯುರೋಗಳಿಗೆ (ಸುಮಾರು 148 ಬಿಲಿಯನ್ ಡಾಲರ್) ಸೀಮಿತಗೊಳಿಸಲಾಗುತ್ತಿದೆ. ಅಷ್ಟೇ ಅಲ್ಲದೆ ಪ್ರಮುಖ ವೋಕ್ಸ್‌ವ್ಯಾಗನ್ ಪ್ಯಾಸೆಂಜರ್ ಕಾರ್ ಬ್ರ್ಯಾಂಡ್ ಮತ್ತು ಅದರ ಬಿಡಿಭಾಗಗಳ ವಿಭಾಗವನ್ನು ಪ್ರತ್ಯೇಕ ಘಟಕಗಳಾಗಿ ವಿಭಜಿಸುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.
ಬಿಕ್ಕಟ್ಟಿಗೆ ಸಿಲುಕಲು ಕಾರಣ ಏನು?
ವೋಕ್ಸ್‌ವ್ಯಾಗನ್ ಈ ಮಟ್ಟದ ಬಿಕ್ಕಟ್ಟಿಗೆ ಸಿಲುಕಲು ಚೀನಾದ ಎಲೆಕ್ಟ್ರಿಕ್ ವಾಹನ ಕಂಪನಿಗಳೇ ಪ್ರಮುಖ ಕಾರಣವಾಗಿವೆ. ಚೀನಾದ ಮಾರುಕಟ್ಟೆಯಲ್ಲಿ ನಂಬರ್ 1 ಸ್ಥಾನದಲ್ಲಿದ್ದ ವೋಕ್ಸ್‌ವ್ಯಾಗನ್ ಅನ್ನು ಬಿವೈಡಿ ಮತ್ತು ಗೀಲಿನಂತಹ ಚೀನೀ ಇವಿ ಬ್ರ್ಯಾಂಡ್‌ಗಳು ಹಿಂದಿಕ್ಕಿವೆ. ಕೇವಲ ಚೀನಾದಲ್ಲಷ್ಟೇ ಅಲ್ಲದೆ, ಯುರೋಪ್ ಹಾಗೂ ಇತರ ಜಾಗತಿಕ ಮಾರುಕಟ್ಟೆಗಳಲ್ಲೂ ಚೀನೀ ಕಾರುಗಳು ವೋಕ್ಸ್‌ವ್ಯಾಗನ್ ಮಾರುಕಟ್ಟೆಯನ್ನು ಆಕ್ರಮಿಸಿಕೊಳ್ಳುತ್ತಿವೆ. ಜೊತೆಗೆ ಅಮೆರಿಕ ವಿಧಿಸಿರುವ ಸುಂಕಗಳು ಮತ್ತು ಯುರೋಪ್‌ನಲ್ಲಿ ಇವಿ ಕಾರುಗಳಿಗೆ ಬೇಡಿಕೆ ಕಡಿಮೆ ಆಗಿರುವುದು ಕಂಪನಿಗೆ ದೊಡ್ಡ ಹೊಡೆತ ನೀಡಿದೆ.
ಕಾರ್ಮಿಕ ಸಂಘಟನೆಗಳಿಂದ ಎಚ್ಚರಿಕೆ
ಈ ವರದಿಗಳು ಹೊರಬರುತ್ತಿದ್ದಂತೆ ಜರ್ಮನಿಯ ಪ್ರಭಾವಿ ಕಾರ್ಮಿಕ ಸಂಘಟನೆಯಾದ ಐಜಿ ಮೆಟಾಲ್ ಮತ್ತು ವೋಕ್ಸ್‌ವ್ಯಾಗನ್ ವರ್ಕ್ಸ್ ಕೌನ್ಸಿಲ್ ಹೇಳಿಕೆ ನೀಡಿವೆ. 'ಸರ್ಕಾರ ಮತ್ತು ಕಂಪನಿಗಳು ಈ ಹಿಂದೆ ಮಾಡಿಕೊಂಡಿರುವ ಒಪ್ಪಂದವನ್ನು ಉಲ್ಲಂಘಿಸಿ ಕಾರ್ಖಾನೆಗಳನ್ನು ಮುಚ್ಚಲು ಹಾಗೂ ಉದ್ಯೋಗಿಗಳನ್ನು ವಜಾಗೊಳಿಸಲು ಮುಂದಾದರೆ, ನಾವು ನಮ್ಮ ಸಂಪೂರ್ಣ ಶಕ್ತಿ ಬಳಸಿ ಇದನ್ನು ತಡೆಯುತ್ತೇವೆ,' ಎಂದು ಎಚ್ಚರಿಸಿದ್ದಾರೆ. ಈ ಆಡಳಿತಾತ್ಮಕ ಬದಲಾವಣೆಗಳು ಮತ್ತು ಭಾರಿ ಕಡಿತದ ಪ್ರಸ್ತಾಪಗಳ ನಡುವೆ ವೋಕ್ಸ್‌ವ್ಯಾಗನ್ ಕಂಪನಿಯ ಷೇರುಗಳು ಕಳೆದ 16 ವರ್ಷಗಳಲ್ಲೇ ಭಾರಿ ಪ್ರಮಾಣದಲ್ಲಿ ಕುಸಿದಿವೆ. ಈ ಯೋಜನೆಗಳ ಕುರಿತು ಜುಲೈ 9ರಂದು ನಡೆಯಲಿರುವ ಮಂಡಳಿಯ ಪ್ರಮುಖ ಸಭೆಯಲ್ಲಿ ಅಂತಿಮ ನಿರ್ಧಾರ ಹೊರಬೀಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.












Click it and Unblock the Notifications