ವಿಡಿಯೋ ಕಾಲ್‌ನಲ್ಲಿ ಲವ್, ಮದುವೆ ಮಂಟಪದಲ್ಲೇ ಫಸ್ಟ್ ಮೀಟ್! ಸ್ಯಾಂಡಲ್‌ವುಡ್ ನಟಿ ಮದುವೆ ವಿಷಯ ವೈರಲ್
ಸ್ಯಾಂಡಲ್‌ವುಡ್‌ನ ನಟಿಯೊಬ್ಬರ ಮದುವೆ ಸಿದ್ಧತೆ ಜೋರಾಗಿದೆ. ಆದರೆ, ಭಾವಿ ಪತಿಯನ್ನು ನಾನು ನೇರವಾಗಿ ನೋಡಿಯೇ ಇಲ್ಲ. ವರ ಮದುವೆಗಿಂತಲೂ ಒಂದು ವಾರ ಮುಂಚಿತವಾಗಿ ಕರ್ನಾಟಕಕ್ಕೆ ಬರಲಿದ್ದಾರೆ. ಆಗಲೇ ಅವರನ್ನು ಮೀಟ್ ಮಾಡಬೇಕು ಅಂತ ಹೇಳಿದ್ದಾರೆ. ಇದು ಕನ್ನಡಿಗರಲ್ಲಿ ಭಾರೀ ಅಚ್ಚರಿಯನ್ನುಂಟು ಮಾಡಿದೆ. ಕಾಲ ಬದಲಾದಂತೆ ಮದುವೆ, ನಿಶ್ಚಿತಾರ್ಥ ಸೇರಿದಂತೆ ಹಲವು ವಿಷಯಗಳಲ್ಲಿ ಸಿಕ್ಕಾಪಟ್ಟೆ ಬದಲಾವಣೆಗಳು ಆಗಿವೆ. ಇನ್ನು ನಟ - ನಟಿಯರ ಮದುವೆ ವಿಚಾರಗಳಲ್ಲಿ ಸಾಮಾನ್ಯ ಜನರಿಗಿಂತಲೂ ವೇಗವಾಗಿರುತ್ತಾರೆ ಎನ್ನುವ ಅಭಿಪ್ರಾಯ ಹಲವರಲ್ಲಿ ಇದೆ. ಆದರೆ, ಈ ಅಭಿಪ್ರಾಯಕ್ಕೆ ಸ್ಯಾಂಡಲ್‌ವುಡ್ ನಟಿ ರೂಪಿಕಾ ಭಿನ್ನ. ರೂಪಿಕಾ ಅವರು ಅಂಕಿತ್ ಎನ್ನುವವರನ್ನು ವರಿಸಲಿದ್ದಾರೆ. ಇವರ ಮದುವೆ ವಿಚಾರವು ಹಲವು ಕಾರಣಗಳಿಗೆ ಗಮನ ಸೆಳೆದಿದೆ. ಈಗಿನ ದಿನಗಳಲ್ಲಿ ಮದುವೆ ಆಗುವ ಹುಡುಗ - ಹುಡುಗಿ ಮದುವೆಗಿಂತ ಮುಂಚೆ ಭೇಟಿ ಮಾಡುವುದು ಸಾಮಾನ್ಯ. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದಕ್ಕೆ, ಇನ್ನೊಬ್ಬರ ಆಸೆ - ಇಷ್ಟಗಳನ್ನು ತಿಳಿದುಕೊಳ್ಳುವುದು ಸಾಮಾನ್ಯ. ಅದರಲ್ಲೂ ಹೊಸ ತಲೆಮಾರು ಹಾಗೂ ಈಗಿನ ಕಾಲದಲ್ಲಿ ಡೇಟಿಂಗ್ ಮಾಡುವುದು ಸರ್ವೇ ಸಾಮಾನ್ಯ. ಆದರೆ ರೂಪಿಕಾ ಅವರು ಹಳೆಯ ಕಾಲದಂತೆ ಗಂಡನನ್ನು ಮದುವೆಗಿಂತ ಮುಂಚೆ ನೋಡುತ್ತಿಲ್ಲ ಎನ್ನುವುದು ಭಾರೀ ಅಚ್ಚರಿ ಮೂಡಿಸಿದೆ.
ರೂಪಿಕಾ ಅವರು ಕಿರುತೆರೆ, ಹಿರಿತೆರೆ ಹಾಗೂ ಭರತನಾಟ್ಯ ನೃತ್ಯಗಾರ್ತಿಯಾಗಿ ಖ್ಯಾತಿ ಗಳಿಸಿದ್ದಾರೆ. ಕಿರುತೆರೆಯಿಂದ ಇವರ ಪಯಣ ಪ್ರಾರಂಭವಾಯಿತು. ಬೆಳ್ಳಿಚುಕ್ಕಿ, ಬದುಕು, ಅವಳ ಮನೆ ಹಾಗೂ ತ್ರಿವೇಣಿ ಸಂಗಮ ಧಾರಾವಾಹಿಗಳಲ್ಲಿ ಬಾಲನಟಿಯಾಗಿ ಮಿಂಚಿದ್ದರು. 2009ರಲ್ಲಿ ತೆರೆಕಂಡ ಚೆಲುವಿನ ಚಿಲಿಪಿಲಿ ಸಿನಿಮಾದ ಮೂಲಕ ಬೆಳ್ಳಿತೆರೆ ಬಿಗ್ ಎಂಟ್ರಿ ಕೊಟ್ಟರು. ತೀರ್ಥರೂಪ, ಮಾಯದಂಥ ಮಳೆ, ಬೀರ, ಥರ್ಡ್‌ಕ್ಲಾಸ್, ರುದ್ರಾಕ್ಷಿಪುರ, ಮಂಜರಿ, ನವರಂಗಿ ಹಾಗೂ ಡೈಮಂಡ್ ಕ್ರಾಸ್ ಸೇರಿದಂತೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದ್ದಾರೆ. ರೂಪಿಕಾ ಅವರು ತೆಲುಗಿನ ಚಿಲ್ ಬ್ರೋ ಎನ್ನುವ ಸಿನಿಮಾದಲ್ಲೂ ಅಭಿನಯಿಸಿದ್ದಾರೆ. ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ "ಲಕ್ಷ್ಮಿ ನಿವಾಸ" ಸೀರಿಯಲ್‌ನಲ್ಲಿ ಸಿಂಚನಾ ಎಂಬ ಪಾತ್ರದ ಮೂಲಕ ಮನೆ ಮಾತಾಗಿದ್ದಾರೆ.

ರೂಪಿಕಾ ಮದುವೆ ಆಗುತ್ತಿರುವ ಹುಡುಗ ಯಾರು
ನಟಿ ರೂಪಿಕಾ ಅವರು ಮದುವೆ ಆಗುತ್ತಿರುವ ಹುಡುಗನ ಹೆಸರು ಅಂಕಿತ್. ಅಂಕಿತ್ - ರೂಪಿಕಾ ದೂರದ ಬಂಧುಗಳು. ಅಂಕಿತ್ ಅವರು ಕೆನಡಾದ ಇನ್ವೆಸ್ಕೋ ಸಂಸ್ಥೆಯಲ್ಲಿ ಟ್ಯಾಕ್ಸ್ ಸ್ಪೆಷಲಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಮ್ಯೂಸಿಕಲ್ ಕಂಪೋಸರ್ ಸಹ ಹೌದು. ಅಂಕಿತ್ ಮೂಲತಃ ಬೆಂಗಳೂರಿನವರು 5 ವರ್ಷಗಳಿಂದ ಕೆನಡಾದಲ್ಲಿ ವಾಸವಾಗಿದ್ದಾರೆ. ಇದೀಗ ಇಬ್ಬರ ಮದುವೆ ಸಿದ್ಧತೆ ನಡೆದಿದೆ. ನಿಶ್ಚಿತಾರ್ಥ ನೆರವೇರಿದ್ದು, ಆಗಸ್ಟ್ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ಮದುವೆ ನಡೆಯಲಿದೆ. ಆದರೆ ಹುಡುಗನನ್ನು ನೇರವಾಗಿ ಭೇಟಿಯೇ ಮಾಡಿಲ್ಲ ಎಂದು ರೂಪಿಕಾ ಹೇಳಿಕೊಂಡಿದ್ದಾರೆ.
ರೂಪಿಕಾ ಮಾತುಗಳು ವೈರಲ್
ಅಂಕಿತ್ ಅವರನ್ನು ಮೊದಲು ಎಲ್ಲಿ ಭೇಟಿ ಮಾಡಿದಿರಿ ಎನ್ನುವ ಪ್ರಶ್ನೆಗೆ ರೂಪಿಕಾ ಅಚ್ಚರಿಯ ಹೇಳಿಕೆ ಕೊಟ್ಟಿದ್ದಾರೆ. ನಮ್ಮಿಬ್ಬರ ಮದುವೆ ಹಳೆಯ ಕಾಲದವರಂತೆ ಆಗಿದೆ. ನಮ್ಮ ಅಜ್ಜಿಯವರ ಕಾಲದಲ್ಲಿ ಮದುವೆಯ ಮಂಟಪದಲ್ಲಿ ನೋಡುತ್ತಿದ್ದರು. ನಾನು ಸಹ ಗಂಡನನ್ನು ಮದುವೆ ಮಂಟಪದಲ್ಲಿಯೇ ಭೇಟಿಯಾಗ್ತಿದ್ದಿನಿ ಅಂತ ಹೇಳಿದ್ದಾರೆ. ನಾವಿಬ್ಬರು ವಿಡಿಯೋ ಕಾಲ್‌ನಲ್ಲಿ ಮಾತಾಡಿದ್ದೀವಿ ಅಷ್ಟೇ ಅಂತ ಹೇಳಿದ್ದಾರೆ. ತುಂಬಾ ಜನ ನೀವಿಬ್ಬರು ಸಂಬಂಧಿಕರು ಅಂತ ಹೇಳ್ತೀರ, ಮೀಟ್ ಮಾಡದೆ ಇರೋಕೆ ಆಗುತ್ತಾ ಅಂತ ಕೇಳ್ತಾರೆ. ಆದರೆ ಫ್ಯಾಮಿಲಿ ಫಂಕ್ಷನ್‌ಗಳಲ್ಲಿ ಅವರು ಬರ್ತಾ ಇರಲಿಲ್ಲ. ಅವರು ವಿದೇಶಕ್ಕೆ ಹೋಗಿಯೇ 5 ವರ್ಷವಾಗಿದೆ. ಅವರನ್ನು ನೇರವಾಗಿ ನೋಡಿಯೇ 10 ವರ್ಷಗಳಾಗಿದೆ. ಅವರು ಬೆಂಗಳೂರಿಗೆ ಮದುವೆಗಿಂತ ಒಂದು ವಾರ ಮುಂಚೆ ಬರ್ತಾರೆ. ಆಗಲೇ ಅವರನ್ನು ನೇರವಾಗಿ ನೋಡಬೇಕು ಅಂತ ರೂಪಿಕಾ ಅವರು ಹೇಳಿಕೊಂಡಿದ್ದಾರೆ. ಇದೀಗ ರೂಪಿಕಾ ಅವರ ಈ ಮಾತು - ವಿಡಿಯೋ ವೈರಲ್ ಆಗಿದೆ.














Click it and Unblock the Notifications