DK Shivakumar: ಬೆಂಗಳೂರು ನಗರದ ಅಭಿವೃದ್ಧಿಗೆ 1.25 ಲಕ್ಷ ಕೋಟಿ ರೂ. ಡಿಕೆಶಿ ಗುಡ್‌ನ್ಯೂಸ್
ಬೆಂಗಳೂರು ನಗರಾಭಿವೃದ್ಧಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಭರ್ಜರಿ ಗುಡ್‌ನ್ಯೂಸ್ ಕೊಟ್ಟಿದ್ದಾರೆ. ಬೆಂಗಳೂರು ನಗರದ ಅಭಿವೃದ್ಧಿಗೆ 1.25 ಲಕ್ಷ ಕೋಟಿ ರೂ. ಮಂಜೂರು ಮಾಡುವ ಬಗ್ಗೆ ಡಿ.ಕೆ ಶಿವಕುಮಾರ್ ಅವರು ಮಾತನಾಡಿದ್ದಾರೆ. ಅದರ ಸಂಪೂರ್ಣ ವಿವರ ಈ ಲೇಖನದಲ್ಲಿದೆ. ನಗರದ ಅಭಿವೃದ್ದಿಗೆ 1.25 ಲಕ್ಷ ಕೋಟಿ ರೂ. ಕಾರ್ಯಕ್ರಮ ರೂಪಿಸಿದ್ದೇನೆ. ಬೆಂಗಳೂರು ಅಭಿವೃದ್ಧಿ ಎಂದರೆ ಜನಸಾಮಾನ್ಯರ ಅಭಿವೃದ್ಧಿ ಎಂದು ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.
ಶ್ರೀ ಕೆಂಪೇಗೌಡರ 517 ನೇ ಜಯಂತಿಯನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಅತ್ಯಂತ ಅರ್ಥಪೂರ್ಣವಾಗಿ, ವಿಜೃಂಭಣೆಯಿಂದ ಆಚರಿಸಲಾಯಿತು. ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರುವ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಬೃಹತ್ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಸಿಎಂ ಡಿ.ಕೆ. ಶಿವಕುಮಾರ್ ಅವರು 517 ನೇ ಕೆಂಪೇಗೌಡ ಜಯಂತಿಗೆ ಚಾಲನೆ ನೀಡಿದರು.

ಕೆಂಪೇಗೌಡರ, ಚಿಂತನೆ, ಆಚಾರ, ವಿಚಾರ ಎಲ್ಲವನ್ನು ಗಮನಲ್ಲಿಟ್ಟುಕೊಂಡು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮ್ಯಾರಥಾನ್ ಓಟ, ಬೆಂಗಳೂರಿನಲ್ಲಿ 15 ಲಕ್ಷ ಸಸಿ ನೆಡುವ ಕಾರ್ಯಕ್ರಮ, ಮಾಗಡಿಯಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ಕೆಂಪೇಗೌಡರ ಕೋಟೆ ಸಮಗ್ರ ಅಭಿವೃದ್ಧಿ ಕಾರ್ಯ ಹಮ್ಮಿಕೊಂಡಿದ್ದೇವೆ. ಮಾಗಡಿಯಲ್ಲಿರುವ ಕೆಂಪೇಗೌಡರ ಸಮಾಧಿ ಬಳಿ 10 ಎಕರೆ ಜಮೀನು ಸ್ವಾಧೀನ ಪ್ರಕ್ರಿಯೆ ಆರಂಭವಾಗಿದ್ದು, ಈಗಾಗಲೇ ಐದೂವರೆ ಎಕರೆ ಖರೀದಿ ಮಾಡಲಾಗಿದೆ ಎಂದರು.
ಬೆಂಗಳೂರಿಗೆ ಬರುವವರಿಗೆ ಕೆಂಪೇಗೌಡರ ಗುರುತು ಪರಿಚಯಿಸಲು, ಟ್ರಂಪೆಟ್ ವೃತ್ತದಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ವಿಮಾನ ನಿಲ್ದಾಣ ಪ್ರಾಧಿಕಾರದವರಿಗೆ ಸೂಚನೆ ನೀಡಿದ್ದೇವೆ. ಅವರು ಸಧ್ಯದಲ್ಲೇ ಕಾರ್ಯಯೋಜನೆ ರೂಪಿಸಿ ಸರ್ಕಾರಕ್ಕೆ ಸಲ್ಲಿಸಲಿದ್ದಾರೆ. ಆ ಮೂಲಕ ಬೆಂಗಳೂರಿಗೆ ಬರುವವರು ಕೆಂಪೇಗೌಡರನ್ನು ಸ್ಮರಿಸುವಂತೆ ಮಾಡಲಾಗುವುದು. ಕಳೆದ ವರ್ಷ ಸುಮ್ಮನಹಳ್ಳಿ ಬಳಿ ಕೆಂಪೇಗೌಡ ಭವನ ನಿರ್ಮಾಣಕ್ಕೆ ಐದು ಎಕರೆ ಜಾಗವನ್ನು ನೀಡಿ ಭೂಮಿ ಪೂಜೆ ಮಾಡಿದ್ದೆವು. ಜೊತೆಗೆ ಅಲ್ಲಿ ಕೆಂಪೇಗೌಡರ ಹೆಸರಿನಲ್ಲಿ ಟೌನ್ ಪ್ಲಾನಿಂಗ್ ಕಾಲೇಜು ಮಾಡಲು ಮಾರ್ಗದರ್ಶನ ನೀಡಲಾಗಿದೆ. ಹಿಂದಿನ ಸರ್ಕಾರ ಈ ಪ್ರತಿಮೆಯನ್ನು ಚೆನ್ನಾಗಿ ಕಟ್ಟಿದೆ. ಆದರೆ ವಿಮಾನ ನಿಲ್ದಾಣಕ್ಕೆ ಬರುವವರಿಗೆ ಈ ಪ್ರತಿಮೆ ಕಾಣುತ್ತಿಲ್ಲ. ಇದರ ಬಗ್ಗೆ ಯಾವ ರೀತಿ ಕ್ರಮ ಕೈಗೊಳ್ಳಬಹುದು ಎಂದು ನಾನು, ಸ್ವಾಮೀಜಿಗಳು ಹಾಗೂ ಕೃಷ್ಣ ಬೈರೇಗೌಡರೊಂದಿಗೆ ಚರ್ಚೆ ಮಾಡಿ ವಿಮಾನ ನಿಲ್ದಾಣ ಪ್ರಾಧಿಕಾರವರಿಗೆ ನಿರ್ದೇಶನ ನೀಡಲಾಗಿದೆ ಎಂದಿದ್ದಾರೆ.
108 ಅಡಿಯ ಈ ಕಂಚಿನ ಪ್ರತಿಮೆ ಬಳಿ ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚು ಹಸಿರು ರೂಪಿಸಲಾಗಿದೆ. ಇಲ್ಲಿನ ಕಾಮಗಾರಿ ಮುಗಿದ ಬಳಿಕ ಇದನ್ನು ಉದ್ಘಾಟನೆ ಮಾಡುತ್ತೇವೆ. ಈ ಥೀಮ್ ಪಾರ್ಕ್ ಅನ್ನು ವಿಮಾನ ನಿಲ್ದಾಣ ಪ್ರಾಧಿಕಾರ ನಿರ್ವಹಣೆ ಮಾಡಲು ಸೂಚಿಸಿದ್ದೇನೆ. ಇದಕ್ಕೆ ಪ್ರಾಧಿಕಾರವೂ ಒಪ್ಪಿದ್ದು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಪ್ರತಿ ವರ್ಷ ಒಂದೊಂದು ವಿಧಾನಸಭಾ ಕ್ಷೇತ್ರಗಳಲ್ಲಿ ಕಾರ್ಯಕ್ರಮ
ಇನ್ನು ಮುಂದೆ ಕೆಂಪೇಗೌಡ ಜಯಂತಿ ಕಾರ್ಯಕ್ರಮವನ್ನು ಕೇವಲ ವಿಧಾನಸೌಧ ಹೊರತಾಗಿ, ಬೆಂಗಳೂರಿನ 28 ಕ್ಷೇತ್ರಗಳಲ್ಲಿ ಮಾಡಲು ತೀರ್ಮಾನಿಸಿದ್ದೇವೆ. ಇಂದು ಯಶವಂತಪುರದಲ್ಲಿ ಈ ಕಾರ್ಯಕ್ರಮ ಮಾಡುತ್ತಿದ್ದು, ಮುಂದಿನ ವರ್ಷ ಶಾಸಕರೊಂದಿಗೆ ಚರ್ಚಿಸಿ ಬ್ಯಾಟರಾಯನಪುರ, ಯಲಹಂಕ, ಕೆ.ಆರ್ ಪುರ ಅಥವಾ ಬೇರೆ ಕ್ಷೇತ್ರಗಳಲ್ಲಿ ಈ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಗುವುದು. ಅದರೊಂದಿಗೆ ಮುಂದಿನ 28 ವರ್ಷಗಳ ಕಾಲ ಒಂದೊಂದು ಕ್ಷೇತ್ರದಲ್ಲಿ ಆಚರಣೆ ಮಾಡಲಾಗುವುದು. ಇನ್ನು ರಾಜ್ಯಾದ್ಯಂತ ಎಲ್ಲಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹಾಗೂ ವಾರ್ಡ್ ಮಟ್ಟದಲ್ಲಿ ಈ ಕಾರ್ಯಕ್ರಮ ಆಚರಣೆಗೆ ಜಿಬಿಎ ವತಿಯಿಂದ ಆದೇಶ ಮಾಡಲಾಗಿದೆ ಎಂದರು.
ಯಲಹಂಕ ಒಕ್ಕಲಿಗರ ಸಂಘಕ್ಕೆ ರಿಯಾಯಿತಿ ದರದಲ್ಲಿ ಕೆಎಚ್ ಬಿ ನಿವೇಶನ
ಕೆಎಚ್ ಬಿಯಿಂದ ಬೆಂಗಳೂರು ಉತ್ತರ ತಾಲ್ಲೂಕು ಒಕ್ಕಲಿಗರ ಸಂಘಕ್ಕೆ ನೀಡಿರುವ ನಿವೇಶನಕ್ಕೆ 3.5 ಕೋಟಿ ಕಟ್ಟಬೇಕು ಎಂದು ಹೇಳಲಾಗಿತ್ತು. ಇದರ ಬಗ್ಗೆ ಸಂಸದ ಸುಧಾಕರ್ ಅವರು, ಮಾಜಿ ಶಾಸಕರಾದ ಗಂಟಿಗಾನಹಳ್ಳಿ ಕೃಷ್ಣಪ್ಪ ಅವರು ದರ ಕಡಿಮೆಗೆ ಮನವಿ ಮಾಡಿದ್ದಾರೆ. ಎಲ್ಲರ ಮನವಿಯಂತೆ ಈ ಜಾಗಕ್ಕೆ ಶೇ 10 ರಷ್ಟು ದರ ನಿಗದಿ ಮಾಡಲಾಗುವುದು ಎಂದು ಡಿಕೆಶಿ ಹೇಳಿದ್ದಾರೆ.
ಬರಗಾಲ ಎದುರಿಸೋಣ
ಕಳೆದ ಮೂರು ವರ್ಷಗಳಿಂದ ಉತ್ತಮವಾಗಿ ಮಳೆ ಬಂದಿತ್ತು. ಆದರೆ ಈ ವರ್ಷ ಇಡೀ ದೇಶದಲ್ಲಿ ಬರಗಾಲ ಆಗುವ ಸಂಭವಿಸಿದೆ. ನಾವೆಲ್ಲರೂ ಸೇರಿ ಬರಗಾಲ ಎದುರಿಸಬೇಕು. ರೈತರನ್ನು ಉಳಿಸಬೇಕು ಎಂದು ಸಿಎಂ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ. ತುಂಗಭದ್ರಾ ಅಣೆಕಟ್ಟು ಉಳಿಸಲು ಮೂರು ರಾಜ್ಯದ ಮುಖ್ಯಮಂತ್ರಿಗಳು ಸೇರಿ ಕೇಂದ್ರ ಜಲಶಕ್ತಿ ಸಚಿವರ ಸಮ್ಮುಖದಲ್ಲಿ ತೀರ್ಮಾನ ಮಾಡಿದ್ದೇವೆ. ಈ ಹಿಂದೆ ಇಂದಿರಾಗಾಂಧಿ ಅವರ ನೇತೃತ್ವದಲ್ಲಿ ಕಾವೇರಿ ಕುಡಿಯುವ ನೀರಿನ ಬಗ್ಗೆ ತೀರ್ಮಾನ ಮಾಡಲಾಗಿತ್ತು. ಅದೇ ರೀತಿ ಕೇಂದ್ರ ಜಲಶಕ್ತಿ ಸಚಿವರ ನೇತೃತ್ವದಲ್ಲಿ ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ತೆಲಂಗಾಣ ಸಿಎಂ ರೇವಂತ ರೆಡ್ಡಿ ಹಾಗು ನಾನು ಸೇರಿ ಸಭೆ ನಡೆಸಿ ಒಂದು ಒಪ್ಪಂದಕ್ಕೆ ಬಂದಿದ್ದೇವೆ. ಈ ನೆಲ ಜಲಕ್ಕಾಗಿ ನಾವುಗಳೇ ಸಂಘರ್ಷ ಮಾಡಿಕೊಳ್ಳಬಾರದು. ನಾವೆಲ್ಲರೂ ಭಾರತೀಯರು, ಮಣ್ಣಿನ ಮಕ್ಕಳು. ಈ ಬೆಂಗಳೂರು ರೈತರ ತ್ಯಾಗದಿಂದ ಬೆಳೆದಿದೆ ಎಂದಿದ್ದಾರೆ.















Click it and Unblock the Notifications