ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬಕ್ಕೆ ಚಾಲನೆ
ರಾಯಚೂರು, ಜೂನ್.27: ಜಿಲ್ಲೆಯ ಎಪಿಎಂಸಿ ರಾಜೇಂದ್ರ ಗಂಜ್ ಆವರಣದಲ್ಲಿ ಮೂರು ದಿನಗಳ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬ ಆರಂಭವಾಗಿದ್ದು, ಮೊದಲ ದಿನ ಬುಧವಾರ ಕರ್ನಾಟಕದ ಎತ್ತುಗಳಿಗಾಗಿ ಏರ್ಪಡಿಸಿದ 1.5 ಟನ್ ಭಾರದ ಕಲ್ಲು ಎಳೆಯುವ ಸ್ಪರ್ಧೆ ಭರ್ಜರಿಯಾಗಿ ನಡೆಯಿತು.
ಎತ್ತುಗಳಿಗೆ ಪೂಜೆ ಸಲ್ಲಿಸುವ ಮೂಲಕ ಹಬ್ಬಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವ ವೆಂಕಟರಾವ್ ನಾಡಗೌಡ, ಮುಂಗಾರು ಹಬ್ಬ ಪಶು ಸಂಗೋಪನಾ ಇಲಾಖೆಗೆ ಸಂಬಂಧಿಸಿದ್ದು, ಸಾಂಸ್ಕೃತಿಕ ಹಬ್ಬದಲ್ಲಿ ಭಾಗವಹಿಸಿದ ಹೆಮ್ಮೆ ನನಗಿದೆ.
ಭಾರವಾದ ಕಲ್ಲು ಎಳೆಯುವಾಗ ಎತ್ತುಗಳಿಗೆ ಹಿಂಸೆ ನೀಡುತ್ತಾರೆ ಎನ್ನುವುದು ಸರಿಯಲ್ಲ. ಆದರೆ ಎತ್ತುಗಳಿಗೆ ಹಿಂಸೆ ನೀಡುವುದು ಕಂಡು ಬಂದರೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇನೆ ಎಂದು ಸೂಚಿಸಿದರು.

ಸಮ್ಮಿಶ್ರ ಸರ್ಕಾರದ ಕುರಿತು ಮಾತನಾಡಿದ ಅವರು, ಸರ್ಕಾರದ ಆಯುಷ್ಯ ಎರಡೂವರೆ ವರ್ಷ ಎಂಬುದು ಮಾಧ್ಯಮಗಳ ಸೃಷ್ಟಿ. ಸರ್ಕಾರಕ್ಕೆ ದೇವರ ಕೃಪೆ ಇದೆ, ದೇವರೇ ಎಲ್ಲಾ ನೋಡಿಕೊಳ್ಳುತ್ತಾನೆ ಎಂದು ಮಾರ್ಮಿಕವಾಗಿ ನುಡಿದರು.
ಮುನ್ನೂರು ಕಾಪು ಸಮಾಜ, ಎಪಿಎಂಸಿ, ಹಟ್ಟಿಚಿನ್ನದಗಣಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು ಮತ್ತು ನಗರಸಭೆ ಸಹಯೋಗದಲ್ಲಿ ಜೂನ್ 27ರಿಂದ 29ರವರೆಗೆ ಮಾಜಿ ಶಾಸಕ ಹಾಗೂ ಮುಂಗಾರು ಸಾಂಸ್ಕೃತಿಕ ಹಬ್ಬದ ಅಧ್ಯಕ್ಷ ಎ.ಪಾಪರೆಡ್ಡಿ ಹಾಗೂ ಸಮಾಜದ ಅಧ್ಯಕ್ಷ ಬೆಲ್ಲಂ ನರಸರೆಡ್ಡಿ ಇವರ ನೇತೃತ್ವದಲ್ಲಿ ಮುಂಗಾರು ಹಬ್ಬ ಜರುಗಲಿದೆ.
ನಾಳೆಯ ಕಾರ್ಯಕ್ರಮ: ಗುರುವಾರ ಬೆಳಗ್ಗೆ 8ಗಂಟೆಗೆ ನಗರದ ರಾಜೇಂದ್ರ ಗಂಜ್ ಆವರಣದಲ್ಲಿ 2ಟನ್ ಭಾರವಾದ ಕಲ್ಲು ಎಳೆಯುವ ಅಖಿಲ ಭಾರತ ಮುಕ್ತ ಸ್ಪರ್ಧೆ ಜರುಗಲಿದ್ದು, ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಸಾನ್ನಿಧ್ಯ ವಹಿಸಲಿದ್ದು, ಸಂಸದ ಬಿ.ವಿ.ನಾಯಕ ಉದ್ಘಾಟಿಸಲಿದ್ದಾರೆ.
ಸಂಜೆ 4ಗಂಟೆಗೆ ಎತ್ತುಗಳ ಬೃಹತ್ ಮೆರವಣಿಗೆ ಕಾರ್ಯಕ್ರಮ ಜರುಗಲಿದ್ದು, ರಾಜ್ಯದ ಹಾಗೂ ವಿವಿಧ ಭಾಗಗಳಿಂದ ಆಗಮಿಸುವ ಕಲಾತಂಡಗಳ ಕಲಾಪ್ರದರ್ಶನ ನಗರದ ಪ್ರಮುಖ ಬೀದಿಗಳಲ್ಲಿ ನಡೆಯಲಿದೆ. ಸಂಜೆ 6ಗಂಟೆಗೆ ನಗರದ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಅಂತರರಾಜ್ಯ ಕಲಾವಿದರಿಂದ ನೃತ್ಯ ರೂಪಕ ಹಮ್ಮಿಕೊಂಡಿದೆ.
ಅಂತಿಮ ದಿನದ ಕಾರ್ಯಕ್ರಮ: ಅಂತಿಮ ದಿನ ಜೂ.29ರ ಶುಕ್ರವಾರ ಬೆಳಗ್ಗೆ 8ಗಂಟೆಗೆ ನಗರದ ರಾಜೇಂದ್ರ ಗಂಜ್ ಆವರಣದಲ್ಲಿ ಎರಡೂವರೆ ಟನ್ ಭಾರವಾದ ಕಲ್ಲು ಎಳೆಯುವ ಅಖಿಲ ಭಾರತ ಮುಕ್ತ ಸ್ಪರ್ಧೆ ನಡೆಯಲಿದ್ದು, ಚಿಕ್ಕಸೂಗೂರು ಚೌಕಿಮಠದ ಡಾ.ಸಿದ್ಧಲಿಂಗ ಶಿವಾಚಾರ್ಯರು ಸಾನ್ನಿಧ್ಯವಹಿಸಲಿದ್ದು, ಶಾಸಕ ಡಾ.ಶಿವರಾಜ್ ಪಾಟೀಲ್ ಉದ್ಘಾಟಿಸಲಿದ್ದಾರೆ.
ನಗರದ ಶ್ರೀ ಮಾತಾ ಲಕ್ಷ್ಮಮ್ಮದೇವಿ ಕಲ್ಯಾಣ ಮಂಟಪದ ಆವರಣದಲ್ಲಿ ಕಲ್ಲುಗುಂಡು ಹಾಗೂ ಉಸುಕಿನ ಚೀಲ ಎತ್ತುವ ಸ್ಪರ್ಧೆ ಜೂ.29ರ ಮಧ್ಯಾಹ್ನ 3ಗಂಟೆಗೆ ಜರುಗಲಿದೆ.












Click it and Unblock the Notifications