ಆರೋಗ್ಯ ಸಚಿವ ಮನ್ಸುಖ್ ಜತೆ ಅದಾರ್ ಪೂನಾವಾಲಾ ಮಹತ್ವದ ಚರ್ಚೆ
ನವದೆಹಲಿ, ಆಗಸ್ಟ್ 06: ಸೀರಂ ಇನ್‌ಸ್ಟಿಟ್ಯೂಟ್‌ನ ಮುಖ್ಯಸ್ಥ ಅದಾರ್ ಪೂನಾವಾಲಾ ಇಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಈಗಾಗಲೇ ದೇಶಾದ್ಯಂತ ಕೋಟ್ಯಂತರ ಡೋಸ್ ಲಸಿಕೆ ವಿತರಣೆಯಾಗಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಪ್ರಮಾಣದ ಲಸಿಕೆ ಸರಬರಾಜು ಕುರಿತಂತೆ ಅದಾರ್ ಪೂನಾವಾಲಾರೊಂದಿಗೆ ಕೇಂದ್ರ ಸಚಿವ ಮನ್ಸುಖ್ ಮಾಂಡವಿಯಾ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಈ ಕುರಿತಂತೆ ಮಾಹಿತಿ ನೀಡಿರುವ ಅದಾರ್ ಪೂನಾವಾಲಾ ಅವರು, ಲಸಿಕೆ ಉತ್ಪಾದನೆಯನ್ನು ಹೆಚ್ಚಿಸುವ ಕುರಿತು ನಾವು ಚರ್ಚಿಸಿದ್ದೇವೆ. ಯುರೋಪಿನ 17 ಕ್ಕೂ ಹೆಚ್ಚು ದೇಶಗಳು ಈಗಾಗಲೇ ಕೋವಿಶೀಲ್ಡ್ ಲಸಿಕೆಯನ್ನು ಅನುಮೋದಿಸಿವೆ ಮತ್ತು ಇನ್ನೂ ಅನೇಕ ದೇಶಗಳು ಅನುಮೋದನೆ ನೀಡಲು ಸರದಿಯಲ್ಲಿವೆ. ಹೀಗಾಗಿ ಮುಂದಿನ ದಿನಗಳಲ್ಲಿ ಉತ್ಪಾದನಾ ಪ್ರಮಾಣ ಹೆಚ್ಚಿಸುವ ಕುರಿತು ಚರ್ಚೆ ನಡೆಸಲಾಯಿತು ಎಂದು ಹೇಳಿದರು.

ಮಾರಕ ಕೊರೊನಾ ವೈರಸ್ ಸಾಂಕ್ರಾಮಿಕದ ವಿರುದ್ಧ ಹೋರಾಟದಲ್ಲಿ ನಿರ್ಣಾಯಕ ಪಾತ್ರವಹಿಸಿರುವ ಲಸಿಕೆಗಳಲ್ಲಿ ಕೋವಿಶೀಲ್ಡ್ ಕೂಡ ಒಂದಾಗಿದ್ದು, ಈ ಲಸಿಕೆಯನ್ನು ಅದಾರ್ ಪೂನಾವಾಲ ಅವರ ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆ ತಯಾರಿಸುತ್ತಿದೆ.
ಅಸ್ಟ್ರಾಜೆನೆಕಾದ ಕೋವಿಶೀಲ್ಡ್ ಲಸಿಕೆ ಪಡೆದವರ ಮೇಲೆ ಅಧ್ಯಯನ ನಡೆಸಿದಾಗ ಈ ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದವರಿಗೆ 93% ಕಡಿಮೆ ಸೋಂಕು ಪತ್ತೆಯಾಗಿದೆ. 15.9 ಲಕ್ಷಕ್ಕೂ ಹೆಚ್ಚಿನ ಆರೋಗ್ಯ ಕಾರ್ಯಕರ್ತರು ಹಾಗೂ ಸರಕಾರದಿಂದ ನೇಮಕಗೊಂಡಿರುವ ಆರಕ್ಷಕ ದಳ, ಹೋಮ್‌ಗಾರ್ಡ್‌ಗಳಿಗೆ ಕೋವಿಶೀಲ್ಡ್‌ನ ಎರಡೂ ಡೋಸ್‌ಗಳನ್ನು ಪೂರ್ಣಗೊಳಿಸಲಾಗಿದ್ದು ಇವರ ಮೇಲೆ ಅಧ್ಯಯನ ನಡೆಸಿದಾಗ ಈ ಅಂಶ ಬೆಳಕಿಗೆ ಬಂದಿದೆ. ಕೋವಿಶೀಲ್ಡ್ ಲಸಿಕೆ ಪಡೆದವರಲ್ಲಿ ಸೋಂಕಿನ ಅಂಶ 93% ಇಳಿಕೆಯಾಗಿದೆ ಎಂಬುದು ತಿಳಿದು ಬಂದಿದೆ.
AFMCಯ ಈ ಅಧ್ಯಯನವು ವಿಶ್ವದಲ್ಲಿಯೇ ಇದುವರೆಗೆ ನಡೆಸಲಾದ ಅತಿದೊಡ್ಡ ಅಧ್ಯಯನ ಎಂಬುದಾಗಿ ಪರಿಗಣಿಸಲಾಗಿದೆ. ಸಂಶೋಧಕರ ಪ್ರಕಾರ ಇದುವರೆಗೆ ಮಾಡಿದ ಎಲ್ಲಾ ಅಧ್ಯಯನಗಳ ಮಾದರಿ ಗಾತ್ರವು 10 ಲಕ್ಷಕ್ಕಿಂತ ಕಡಿಮೆ ಎಂದು ತಿಳಿಸಿದ್ದು VIN-WIN cohort ಬಹುಶಃ ಲಸಿಕೆಯ ಪರಿಣಾಮಕಾರಿತ್ವದ ಕುರಿತು ವಿಶ್ವದಾದ್ಯಂತದ ನಡೆಸಿದ ಅತಿದೊಡ್ಡ ಅಧ್ಯಯನಗಳಲ್ಲಿ ಒಂದಾಗಿದೆ ಎಂದು ನಾವು ನಂಬುತ್ತೇವೆ.
ಕೋವಿಶೀಲ್ಡ್ ಲಸಿಕೆಯು ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾದ AZD-1222 ಫಾರ್ಮುಲೇಶನ್‌ನ ಭಾರತದಲ್ಲಿ ತಯಾರಾದ ವಾರಂಟಿ ಹೊಂದಿರುವ ಲಸಿಕೆಯಾಗಿದೆ. ಭಾರತದಲ್ಲಿ ಕೋವಿಡ್-19 ವಿರುದ್ಧ ಬಳಸುತ್ತಿರುವ ಲಸಿಕೆಗಳಲ್ಲಿ ಇದೂ ಒಂದಾಗಿದೆ.
ಈ ಅಧ್ಯಯನದಲ್ಲಿ ಪಾಲ್ಗೊಂಡ 15,95,630 ಸರಾಸರಿ ಜನರ ವಯಸ್ಸು 27 ವರ್ಷಗಳಾಗಿದ್ದು, 99% ಪುರುಷರಿದ್ದರು. 135 ದಿನಗಳ ಕಾಲ ನಡೆದ ಈ ಅಧ್ಯಯನದಲ್ಲಿ ಪಾಲ್ಗೊಂಡವರಲ್ಲಿ, ಮೇ 30ರ ವೇಳೆಗೆ, ಒಂದೇ ಡೋಸ್ ಪಡೆದ 95.4% ಜನರಿದ್ದರು ಮತ್ತು ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದ 82.2% ಜನರಿದ್ದರು. ಈ ಅಧ್ಯಯನದಲ್ಲಿ ಪಾಲ್ಗೊಂಡವರು ಲಸಿಕೆ ಹಾಕದವರಿಂದ ಭಾಗಶಃ ಲಸಿಕೆ ಹಾಕಿದ ಹಾಗೂ ಪೂರ್ಣ ಲಸಿಕೆ ಪಡೆದ ವಿಭಾಗಕ್ಕೆ ಬದಲಾಗುತ್ತಿದ್ದರು. ಈ ರೀತಿಯಾಗಿ ಪ್ರತಿ ವರ್ಗದ ಪಾಲ್ಗೊಳ್ಳುವವರ ಸಂಖ್ಯೆ ಬದಲಾಗುತ್ತಿತ್ತು.
ಬ್ರೇಕ್-ಥ್ರೂ ಸೋಂಕಿನ ಕುರಿತು ದೇಶದಲ್ಲಿ ಇದುವರೆಗೆ ಮಾಡಿದ ಅಧ್ಯಯನದ ಪ್ರಕಾರ ಲಸಿಕೆಯ ಹೊರತಾಗಿಯೂ ದೇಶದಲ್ಲಿ ಕೊರೊನಾ ದರ 1.6%ರಷ್ಟಿದೆ ಎಂದಾಗಿದೆ.
ಅಂದರೆ 1000 ಸಂಪೂರ್ಣ ಲಸಿಕೆ ಪಡೆದವರಲ್ಲಿ 16 ಜನರು ಮತ್ತೆ ಕೊರೊನಾ ಸೋಂಕಿಗೆ ಒಳಗಾಗಬಹುದು ಎಂದಾಗಿದೆ. ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದ ಎರಡು ವಾರಗಳ ನಂತರ ಮಾತ್ರವೇ ವ್ಯಕ್ತಿ ಸಂಪೂರ್ಣ ಲಸಿಕೆ ಪಡೆದಿದ್ದಾನೆ ಎಂಬುದನ್ನು ಖಚಿತಪಡಿಸಲಾಗುತ್ತದೆ.
ಬ್ರೇಕ್-ಥ್ರೂ ಸೋಂಕಿನ ದರವನ್ನು ಅಂದಾಜಿಸುವ ಈ ಅಧ್ಯಯನವನ್ನು ಚಂಡೀಗಢದ ಪಿಜಿಐ ಮಾಡಿದ್ದು ಇದನ್ನು ಪ್ರಸಿದ್ಧ ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್‌ನಲ್ಲಿ ಪ್ರಕಟಿಸಲಾಗಿದೆ.
ಕೊರೊನಾ ಸೋಂಕಿನಿಂದ ಚೇತರಿಸಿಕೊಂಡ ನಂತರ ಕೋವಿಶೀಲ್ಡ್ ಲಸಿಕೆಯ ಎರಡು ಡೋಸ್ ಪಡೆದವರಲ್ಲಿ ಡೆಲ್ಟಾ ರೂಪಾಂತರದ ವಿರುದ್ಧ ಹೋರಾಡಲು ಅತಿ ಹೆಚ್ಚಿನ ಪ್ರಮಾಣದಲ್ಲಿ ಪ್ರತಿಕಾಯಗಳು ಸೃಷ್ಟಿಯಾಗಿರುವುದಾಗಿ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ಹಾಗೂ ಸಾಂಕ್ರಾಮಿಕ ರೋಗಶಾಸ್ತ್ರದ ರಾಷ್ಟ್ರೀಯ ಸಂಸ್ಥೆಯ ಇತ್ತೀಚಿನ ಅಧ್ಯಯನ ತಿಳಿಸಿದೆ.












Click it and Unblock the Notifications