ಐಐಟಿ ಆವಿಷ್ಕಾರ: ಐದೇ ಸೆಕೆಂಡ್‌ಗಳಲ್ಲಿ ಕೊರೊನಾ ಸೋಂಕು ಪತ್ತೆ ಹಚ್ಚಬಹುದು
ನವದೆಹಲಿ, ಏಪ್ರಿಲ್ 24: ಕೇವಲ ಐದೇ ಸೆಕೆಂಡುಗಳಲ್ಲಿ ಕೊರೊನಾ ಸೋಂಕು ಪತ್ತೆ ಹಚ್ಚಬಹುದಾದ ಸಾಫ್ಟ್‌ವೇರ್‌ನ್ನು ಐಐಟಿ ಪ್ರೊಫೆಸರ್ ಅಭಿವೃದ್ಧಿಪಡಿಸಿದ್ದಾರೆ.
ಶಂಕಿತ ರೋಗಿಗೆ ಎಕ್ಸ್ರೇ ಸ್ಕ್ಯಾನ್ ಮಾಡಿದರೆ ಸಾಕು ಅದರಿಂದ ಸೋಂಕನ್ನು ಪತ್ತೆ ಹಚ್ಚಬಹುದಾಗಿದೆ.
ಕಮಲ್ ಜೈನ್ ಅವರ ಸಾಫ್ಟ್ವೇರ್ ಮಿಕ್ಕ ಪತ್ತೆದಾರಿ ಕೆಲಸ ಮಾಡುತ್ತದೆ. ರೋಗಿಯ ನ್ಯುಮೋನಿಯಾ ರೋಗಕ್ಕೆ ಕೊವಿಡ್ ಕಾರಣವೇ ಅಥವಾ ಅವರಲ್ಲಿರುವ ಸೋಂಕು ಬೇರೆಯದ್ದೇ ಎಂಬುದನ್ನು ಈ ತಂತ್ರಾಂಶ ಕಂಡುಹಿಡಿಯಬಲ್ಲದಾಗಿದೆ.
ರೋಗಿಯ ಎಕ್ಸ್ ರೇ ಸ್ಕ್ಯಾನ್ ಮಾಡಿ ಆ ಚಿತ್ರವನ್ನು ಅಪ್ಲೋಡ್ ಮಾಡಬೇಕು. ಬಳಿಕ ಸಾಫ್ಟ್ವೇರ್ ಅನಲೈಸ್ ಮಾಡುತ್ತದೆ.ಕೊವಿಡ್ ಸೋಂಕು ಇದೆಯಾ, ಸೋಂಕಿನ ತೀವ್ರತೆ ಎಷ್ಟಿದೆ, ಬ್ಯಾಕ್ಟೀರಿಯಾದಿಂದ ಸೋಂಕು ತಗುಲಿದೆಯೇ ಎಂಬಿತ್ಯಾದಿಯನ್ನು ಈ ಸಾಫ್ಟ್ವೇರ್ ಐದು ಸೆಕೆಂಡಲ್ಲಿ ವಿಶ್ಲೇಷಿಸಿ ರಿಸಲ್ಟ್ ನೀಡಬಲ್ಲುದು ಎಂದು ಇವರು ಮಾಹಿತಿ ನೀಡಿದ್ದಾರೆ.

ಐಐಟಿ ಪ್ರೊಫೆಸರ್ ಅವರಿಗೆ ಈ ಸಾಫ್ಟ್ವೇರ್ ಅಭಿವೃದ್ಧಿಪಡಿಸಲು 40 ದಿನ ಬೇಕಾಯಿತಂತೆ. ಕಮಲ್ ಜೈನ್ ಅವರ ಈ ಆವಿಷ್ಕಾರಕ್ಕೆ ಇದೂವರೆಗೂ ಯಾವ ವೈದ್ಯಕೀಯ ಸಂಸ್ಥೆಯು ಮಾನ್ಯತೆ ನೀಡಿಲ್ಲ. ಆದರೆ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಅವರ ಪರಾಮರ್ಶೆಗೆ ಇವರು ಕಳುಹಿಸಿದ್ದಾರೆ. ಹಾಗೆಯೇ ತಮ್ಮ ತಂತ್ರಾಂಶಕ್ಕೆ ಪೇಟೆಂಟ್ ಪಡೆಯಲು ಅರ್ಜಿ ಹಾಕಿದ್ದಾರೆ.
ಕೊರೊನಾ ಪತ್ತೆಗೆ ಟೆಸ್ಟ್ ಕಿಟ್ಗಳು ನಿತ್ಯವೂ ಆವಿಷ್ಕಾರಗೊಳ್ಳುತ್ತಿವೆ. ಕೊರೊನಾ ಪರೀಕ್ಷೆಯ ಫಲಿತಾಂಶಕ್ಕೆ ಮೊದಲು ವಾರಗಟ್ಟಲೆ ಕಾಯಬೇಕಾಗಿತ್ತು. ಈಗ ಕೆಲವೇ ಗಂಟೆಯಲ್ಲಿ ಫಲಿತಾಂಶ ಲಭ್ಯ ಸಾಧ್ಯವಾಗಿದೆ. ಆದರೆ, ಐಐಟಿಯ ಪ್ರೊಫೆಸರ್ವೊಬ್ಬರು ಐದೇ ಸೆಕೆಂಡಲ್ಲಿ ಫಲಿತಾಂಶ ನೀಡುವ ತಂತ್ರಜ್ಞಾನ ಆವಿಷ್ಕರಿಸಿರುವುದಾಗಿ ಹೇಳಿಕೊಂಡಿದ್ದಾರೆ.
ಉತ್ತರಾಖಂಡ್ನಲ್ಲಿರುವ ರೂರ್ಕಿಯ ಐಐಟಿಯಲ್ಲಿ ಸಿವಿಲ್ ಎಂಜಿನಿಯರಿಂಗ್ ಪ್ರೊಫೆಸರ್ ಕಮಲ್ ಜೈನ್ ಅವರು ಕೊವಿಡ್ ಪತ್ತೆ ಪರೀಕ್ಷೆ ಮಾಡುವ ಸಾಫ್ಟ್ವೇರ್ ಅಭಿವೃದ್ಧಿಪಡಿಸಿರುವುದಾಗಿ ಹೇಳಿದ್ದಾರೆ.












Click it and Unblock the Notifications