ದೆಹಲಿಯಲ್ಲಿ ಕಳೆದ 24 ಗಂಟೆಯಲ್ಲಿ ಹೊಸದಾಗಿ 1,009 ಕೊರೊನಾ ಕೇಸ್ ಪತ್ತೆ, ಓರ್ವ ಸಾವು
ದೆಹಲಿ, ಏಪ್ರಿಲ್ 21 : ದೇಶದಲ್ಲಿ ಕೊರೊನಾ ನಾಲ್ಕನೇ ಅಲೆ ಭೀತಿ ಶುರುವಾಗಿರುವ ಬೆನ್ನಲ್ಲೇ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದಿನೇ ದಿನೇ ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿರುವುದು ಮತ್ತಷ್ಟು ಆತಂಕವನ್ನು ಹೆಚ್ಚಿಸಿದೆ. ಕಳೆದ 24 ಗಂಟೆಯಲ್ಲೇ ದೆಹಲಿಯಲ್ಲಿ ಹೊಸದಾಗಿ 1,009 ಮಂದಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದು, ಓರ್ವ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.
ಫೆಬ್ರವರಿ 10 ರ ಬಳಿಕ ಇದೇ ಮೊದಲ ಬಾರಿಗೆ ನಗರ ಪ್ರದೇಶದಲ್ಲಿ ಸಾವಿರ ಕೊರೊನಾ ಪ್ರಕರಣಗಳು ಪತ್ತೆಯಾಗಿರುವುದು ಭಾರೀ ಆತಂಕಕ್ಕೆ ಕಾರಣವಾಗಿದೆ. ಪ್ರಸ್ತುತ ದೆಹಲಿಯಲ್ಲಿ ಪಾಸಿಟಿವಿಟಿ ದರ 5.7%ರಷ್ಟು ಏರಿಕೆಯಾಗಿದ್ದು, ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಒಟ್ಟು 2,641 ಸಕ್ರಿಯ ಪ್ರಕರಣಗಳಿದ್ದು, 314 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದಾರೆ.

ಇನ್ನು ನಿನ್ನೆ ಒಂದೇ ದಿನ ದೇಶದಲ್ಲಿ ಹೊಸದಾಗಿ 2,067 ಕೊರೊನಾ ಕೇಸ್ ಪತ್ತೆಯಾಗಿತ್ತು. 40 ಮಂದಿ ಕೊರೊನಾಗೆ ಸಾವನ್ನಪ್ಪಿದ್ದರು. ಸದ್ಯ ದೇಶದಲ್ಲಿ ಪತ್ತೆಯಾದ ಒಟ್ಟು ಕೊರೊನಾ ಪ್ರಕರಣಗಳ ಪೈಕಿ ದೆಹಲಿಯಲ್ಲೇ ಅತಿಹೆಚ್ಚು ಪ್ರಕರಣ ಪತ್ತೆಯಾಗಿರುವುದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ದೆಹಲಿ ಸರ್ಕಾರ ಕೂಡ ಕೊರೊನಾ ಪರೀಕ್ಷೆಯನ್ನ ಹೆಚ್ಚಿಸಿದ್ದು, ಮತ್ತೆ ಮಾಸ್ಕ್, ಸಾಮಾಜಿಕ ಅಂತರವನ್ನ ಎಲ್ಲಾ ಕಡೆ ಕಡ್ಡಾಯಗೊಳಿಸಿದೆ. ಹಾಗಿದ್ದರೂ ಕೂಡ ದಿನೇ ದಿನೇ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸೋಂಕು ನಿಯಂತ್ರಿಸಲು ಸರ್ಕಾರ ಕೂಡ ಹೆಣಗಾಡುತ್ತಿದೆ.

ದೇಶದಲ್ಲಿ ಮತ್ತೆ ಕೊರೊನಾ ನಾಲ್ಕನೇ ಅಲೆ ಆರಂಭವಾಗುವ ಎಲ್ಲಾ ಸಾಧ್ಯತೆಗಳು ಹೆಚ್ಚಾಗಿದ್ದು, ಈಗಾಗಲೇ ದೆಹಲಿ, ಕೇರಳ, ಉತ್ತರ ಪ್ರದೇಶ, ಇನ್ನಿತರ ರಾಜ್ಯಗಳಲ್ಲಿ ಕೊರೊನಾ ಏರುಗತಿಯಲ್ಲಿ ಸಾಗುತ್ತಿದೆ. ಈ ರಾಜ್ಯಗಳು ಈಗಾಗಲೇ ಕೊರೊನಾ ಕಠಿಣ ನಿಯಮಗಳನ್ನ ಜಾರಿಗೆ ತಂದಿದ್ದು, ಸೋಂಕು ನಿಯಂತ್ರಿಸಲು ಮುಂದಾಗಿದ್ದಾರೆ. ಸದ್ಯ ಕರ್ನಾಟಕದಲ್ಲೂ ಸೋಂಕು ಪ್ರಮಾಣ ಕಡಿಮೆ ಇದ್ದರೂ ಸಹ ನಾಲ್ಕನೇ ಅಲೆ ಭೀತಿ ಇರುವುದರಿಂದ ಜನರು ಹೆಚ್ಚು ಸುರಕ್ಷತೆ ವಹಿಸುವ ಅವಶ್ಯಕತೆ ಇದೆ. ಇನ್ನು ಸರ್ಕಾರ ಕೂಡ ಕೊರೊನಾ ಹರಡದಂತೆ ಮುಂಜಾಗೃತವಾಗಿ ಕ್ರಮಗಳನ್ನ ಕೈಗೊಳ್ಳಬೇಕಿದೆ.












Click it and Unblock the Notifications