ಮಾಸ್ಕ್ ಧರಿಸದಿದ್ದರೆ 2 ಸಾವಿರ ರೂ ದಂಡ: ದೆಹಲಿ ಸರ್ಕಾರ ಆದೇಶ
ನವದೆಹಲಿ, ನವೆಂಬರ್ 19: ದೆಹಲಿಯಲ್ಲಿ ಕೊರೊನಾ ಸೋಂಕಿನ ಮೂರನೇ ಅಲೆ ಜೋರಾಗಿದ್ದು, ನಿತ್ಯ 6-8 ಸಾವಿರ ಪ್ರಕರಣಗಳು ಪತ್ತೆಯಾಗುತ್ತಿವೆ.
ಹೀಗಾಗಿ ಜನರ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ದೆಹಲಿ ಸರ್ಕಾರ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದು, ಮಾಸ್ಕ್ ಧರಿಸದೆ ಇದ್ದವರು 2 ಸಾವಿರ ರೂ. ದಂಡ ಕಟ್ಟಬೇಕು ಎಂದು ಆದೇಶಿಸಿದೆ.
ಈ ಮೊದಲು ಇದ್ದ 500 ರೂ ದಂಡವನ್ನು 2 ಸಾವಿರಕ್ಕೆ ಏರಿಸಲಾಗಿದೆ. ಕೊರೊನಾ ಸೋಂಕು ಹೆಚ್ಚಳವಾಗುತ್ತಾ ಮೂರು ವಾರಗಳು ಕಳೆದಿದೆ.

ಪ್ರತಿಯೊಬ್ಬರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿ, ಮಾಸ್ಕ್ ಧರಿಸಿರಿ ಇಲ್ಲವಾದರೆ ಇನ್ನೂ ಅತ್ಯಂತ ಭಯಾನಕ ಸ್ಥಿತಿಯನ್ನು ಅನುಭವಿಸಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಎಚ್ಚರಿಕೆ ನೀಡಿದ್ದಾರೆ.
ಎಲ್ಲಾ ಪಕ್ಷಗಳು ಹಾಗೂ ಸಾಮಾಜಿಕ ಸಂಸ್ಥೆಗಳು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ವಿತರಣೆ ಮಾಡಬೇಕು.ದೀಪಾವಳಿ ಪಟಾಕಿಯಿಂದಾಗಿ ವಾಯು ಮಾಲಿನ್ಯ ಮತ್ತಷ್ಟು ಹದಗೆಟ್ಟಿದ, ಇದು ಕೊರೊನಾ ಸೋಂಕಿತರ ಆರೋಗ್ಯಕ್ಕೆ ಮತ್ತಷ್ಟು ಮಾರಕವಾಗಬಲ್ಲದು.
ಖಾಸಗಿ ಆಸ್ಪತ್ರೆಗಳಲ್ಲಿ ಶೇ.80ರಷ್ಟು ಐಸಿಯು ಹಾಸಿಗೆಗಳನ್ನು ಕೊರೊನಾ ಸೋಂಕಿತರಿಗಾಗಿ ಮೀಸಲಿಡಬೇಕು, ಶೇ.60ರಷ್ಟು ಸಾಮಾನ್ಯ ಹಾಸಿಗೆಗಳು ಕೊರೊನಾ ಸೋಂಕಿತರಿಗಾಗಿಯೇ ಇಡಬೇಕು ಎಂದು ಸೂಚನೆ ನೀಡಲಾಗಿದೆ.
ಕಳೆದ 24 ಗಂಟೆಗಳಲ್ಲಿ 7486 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಕೊರೊನಾ ಸೋಂಕಿತರ ಸಂಖ್ಯೆ 5 ಲಕ್ಷ ದಾಟಿದೆ. 24 ಗಂಟೆಗಳಲ್ಲಿ 131 ಮಂದಿ ಸಾವನ್ನಪ್ಪಿದ್ದಾರೆ.
ಕೆಲವು ದಿನಗಳ ಕಾಲ ರಾಜಕೀಯವನ್ನು ಬಿಟ್ಟು ಜನರ ಜೀವವನ್ನು ಕಾಪಾಡಲು ಎಲ್ಲರೂ ಒಂದಾಗೋಣ ಎಂದು ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.












Click it and Unblock the Notifications