ನಂಜನಗೂಡು: 12.5 ಲಕ್ಷ ವೆಚ್ಚದಲ್ಲಿ ಹೈಟೆಕ್ ಶೌಚಾಲಯ ನಿರ್ಮಾಣಕ್ಕೆ ಭೂಮಿ ಪೂಜೆ
ಮೈಸೂರು, ಅಕ್ಟೋಬರ್ 28: ನಂಜನಗೂಡು ನಗರದ ಶ್ರೀ ಕನಕದಾಸ ಸಾರ್ವಜನಿಕ ವಿದ್ಯಾರ್ಥಿ ನಿಲಯದಲ್ಲಿ 12.5 ಲಕ್ಷ ವೆಚ್ಚದಲ್ಲಿ ಹೈಟೆಕ್ ಶೌಚಾಲಯ ಮತ್ತು ಸ್ನಾನ ಗೃಹ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಈ ಬಗ್ಗೆ ಶ್ರೀ ಕನಕದಾಸ ಸಾರ್ವಜನಿಕ ಟ್ರಸ್ಟ್ ಅಧ್ಯಕ್ಷ ಹಾಗೂ ಜಿಪಂ ಮಾಜಿ ಅಧ್ಯಕ್ಷ ಬಿ.ಎಂ.ರಾಮು ವಿವರಿಸಿದ್ದಾರೆ.
ಕನಕದಾಸ ಸಾರ್ವಜನಿಕ ವಿದ್ಯಾರ್ಥಿ ನಿಲಯದ ಆವರಣದಲ್ಲಿ 12.5 ಲಕ್ಷ ವೆಚ್ಚದಲ್ಲಿ ಶೌಚಾಲಯ ಮತ್ತು ಸ್ನಾನ ಗೃಹ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಗಿದೆ. ದಿವಂಗತ ಎನ್. ರಾಚಯ್ಯನವರು ತಾಲೂಕಿನ ಹಿಂದುಳಿದ ವರ್ಗಗಳ ಸಮುದಾಯದ ಜನರ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಶ್ರೀ ಕನಕದಾಸ ಸಾರ್ವಜನಿಕ ಟ್ರಸ್ಟ್ ಸ್ಥಾಪಿಸಿ ಪ್ರೌಢಶಾಲೆ ಮತ್ತು ವಿದ್ಯಾರ್ಥಿ ನಿಲಯವನ್ನು ತೆರೆದು ಅನೇಕ ಬಡವರ ಮಕ್ಕಳ ಉಚಿತ ವಿದ್ಯಾಭ್ಯಾಸಕ್ಕೆ ನೇರವಾಗಿದ್ದಾರೆ.

ಈ ಸಾರ್ವಜನಿಕ ವಿದ್ಯಾರ್ಥಿ ನಿಲಯದ ಕಟ್ಟಡ ಸುಮಾರು 73 ವರ್ಷದಷ್ಟು ಹಳೆಯ ಕಟ್ಟಡವಾಗಿರುವುದರಿಂದ ಸ್ನಾನ ಗೃಹ ಮತ್ತು ಶೌಚಾಲಯ ಕೊರತೆಯಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿತ್ತು. ಆದ್ದರಿಂದ ಈ ಸಮಸ್ಯೆಯನ್ನು ಪರಿಹರಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ವಿಧಾನ ಪರಿಷತ್ ಸದಸ್ಯರಾದ ಡಾ. ಡಿ.ತಿಮ್ಮಯ್ಯ ರವರ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಸುಮಾರು 4.5 ಲಕ್ಷ, ಎಚ್ .ವಿಶ್ವನಾಥ್ ರವರ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ 3 ಲಕ್ಷ,
ಮರಿತಿಬ್ಬೇಗೌಡ ಅವರ ಪ್ರದೇಶಾಭಿವೃದ್ಧಿ ನಿಧಿಯಿಂದ 5 ಲಕ್ಷ, ಸೇರಿದಂತೆ ಒಟ್ಟು 12.5 ಲಕ್ಷ ಅನುದಾನವನ್ನು ಮಂಜೂರು ಮಾಡಿಸಿ ಹೈಟೆಕ್ ಶೌಚಾಲಯ ಮತ್ತು ಸ್ನಾನ ಗೃಹ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಕಾಮಗಾರಿ ಶೀಘ್ರವಾಗಿ ಮುಕ್ತಾಯಗೊಂಡು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಕಾಗಿನೆಲೆ ಪೀಠದ ಶ್ರೀ ಶಿವಾನಂದಪುರಿ ಸ್ವಾಮೀಜಿ ಶ್ರೀ ಕನಕದಾಸ ಸಾರ್ವಜನಿಕ ಟ್ರಸ್ಟ್ ನಿರ್ದೇಶಕರಾದ ನಂಜಯ್ಯ, ಶಿವಮಲ್ಲು, ಮಹದೇವಯ್ಯ, ಕೆಂಪಿಸಿದ್ದನಹುಂಡಿ ಮಹದೇವು, ಹುಚ್ಚಯ್ಯ, ಸೋಮಣ್ಣ, ಕೆಂಪಣ್ಣ ಸೇರಿದಂತೆ ಹಲವಾರು ಪ್ರಮುಖರು ಉಪಸ್ಥಿತರಿದ್ದರು.












Click it and Unblock the Notifications