ರೈತರ ಮೇಲೆ ದರ್ಪ, ವಿರೋಧ ಪಕ್ಷಗಳ ದನಿ ಅಡಗಿಸುವುದು ಬಿಜೆಪಿ ಹೊಸ ತಂತ್ರವೇ; ಶಿವಸೇನೆ
ಮುಂಬೈ, ಅಕ್ಟೋಬರ್ 05: ಉತ್ತರಪ್ರದೇಶದ ಲಖಿಂಪುರ ಖೇರ್‌ನಲ್ಲಿ ಘಟಿಸಿದ ಹಿಂಸಾಚಾರದ ಕುರಿತು ಪ್ರತಿಕ್ರಿಯಿಸಿರುವ ಶಿವಸೇನಾ ಮುಖ್ಯಸ್ಥ ಸಂಜಯ್ ರಾವತ್, 'ರೈತರ ಮೇಲೆ ದರ್ಪ ತೋರುವುದು ಹಾಗೂ ಅವರಿಗೆ ಬೆಂಬಲಿಸುವ ವಿರೋಧ ಪಕ್ಷದ ನಾಯಕರ ದನಿ ಅಡಗಿಸುವುದು ಬಿಜೆಪಿಯ ಹೊಸ ಕಾರ್ಯತಂತ್ರವಾಗಿದೆಯೇ?' ಎಂದು ಟೀಕಿಸಿದ್ದಾರೆ.
'ಮುಂಬೈನ ಸಾಕಿ ನಾಕಾದಲ್ಲಿ ಕಳೆದ ತಿಂಗಳು ಅತ್ಯಾಚಾರ ಪ್ರಕರಣ ನಡೆದಾಗ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿತು. ಆಡಳಿತ ಪಕ್ಷದ ಮೇಲೆ ಆರೋಪಗಳ ಮಳೆ ಸುರಿಸಿತು. ಆದರೆ ನಾವು ಯಾರನ್ನೂ ಅಪರಾಧ ನಡೆದ ಸ್ಥಳಗಳಿಗೆ ಹೋಗುವುದನ್ನು ತಡೆಯಲಿಲ್ಲ. ಇದೀಗ ಉತ್ತರ ಪ್ರದೇಶದಲ್ಲಿ ಸಚಿವರ ಪುತ್ರನ ಕಾರು ರೈತರ ಮೇಲೆ ಹರಿದು ನಾಲ್ವರು ರೈತರು ಸೇರಿದಂತೆ ಎಂಟು ಮಂದಿ ಸಾವನ್ನಪ್ಪಿದ್ದಾರೆ. ಇಂಥ ಕ್ರೌರ್ಯ ಎಲ್ಲಿಂದ ಬರಲು ಸಾಧ್ಯ?' ಎಂದು ಪ್ರಶ್ನಿಸಿದ್ದಾರೆ.
ಕೃಷಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬೆಂಬಲ ನೀಡಲು ಹೋದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಹಾಗೂ ಇತರೆ ವಿಪಕ್ಷ ನಾಯಕರು ಲಖಿಂಪುರ್ ಖೇರ್‌ಗೆ ತೆರಳಲು ಕೂಡ ತಡೆಒಡ್ಡಲಾಗಿದೆ ಎಂದು ದೂರಿದರು.

'ಬಿಜೆಪಿ ರೈತರನ್ನು ದಮನಿಸುವ ಹಾಗೂ ರೈತರ ಬೆಂಬಲಕ್ಕೆ ನಿಂತ ವಿರೋಧ ಪಕ್ಷದ ನಾಯಕರ ದನಿಯನ್ನು ನಿಗ್ರಹಿಸುವ ಹೊಸ ತಂತ್ರವನ್ನು ಹೊಂದಿದೆಯೇ ಎಂದು ಪ್ರಶ್ನಿಸಿದ್ದಾರೆ. ರೈತರ ಹಿತಾಸಕ್ತಿಗಳ ಕುರಿತು ಪ್ರಧಾನಿ ಮೋದಿ ಸಾಕಷ್ಟು ಮಾತನಾಡುತ್ತಾರೆ. ಆದರೆ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಕಾರನ್ನು ರೈತರ ಮೇಲೆ ಹರಿಸಿ ಅವರನ್ನು ಕೊಂದಿದೆ' ಎಂದು ಟೀಕಿಸಿದರು.
ಲಖಿಂಪುರ್ ಖೇರಿ ಘಟನೆಯನ್ನು ಬಾಬು ಗೇನು ಕ್ರಾಂತಿಕಾರಿ ಘಟನೆಗೆ ರಾವತ್ ಹೋಲಿಸಿದ್ದಾರೆ. ಮುಂಬೈನಲ್ಲಿ ಸ್ವಾತಂತ್ರ್ಯ ಹೋರಾಟ ಸಂದರ್ಭ ಹೋರಾಟಗಾರನ ಮೇಲೆ ಬ್ರಿಟಿಷರು ಟ್ರಕ್ ಹರಿಸಿದ ಸಂಗತಿಯನ್ನು ಲಖಿಂಪುರ ಖೇರ್ ಘಟನೆಗೆ ಹೋಲಿಕೆ ಮಾಡಿದ್ದಾರೆ.
ಉತ್ತರ ಪ್ರದೇಶ ಸಚಿವ ಅಜಯ್ ಮಿಶ್ರಾ ತೆನಿ ಈಚೆಗೆ ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರ ಕುರಿತು ಕಟುವಾದ ಹೇಳಿಕೆ ನೀಡಿದ್ದಲ್ಲದೆ ಪ್ರತಿಭಟಿಸುವವರ ಮೇಲೆ ಕ್ರಮ ಕೈಗೊಳ್ಳುವ ಬಹಿರಂಗ ಬೆದರಿಕೆ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಅವರ ತವರು ಕ್ಷೇತ್ರ ಲಖಿಂಪುರ ಖೇರಿಯಲ್ಲಿ ಸೇರಿದ್ದ ರೈತರು ಸಚಿವರ ಹೇಳಿಕೆ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದರು. ಇದೇ ಸಂದರ್ಭ ರಸ್ತಾ ರೋಖೋ ನಡೆಸುತ್ತಿದ್ದ ರೈತರ ಮೇಲೆ ಬೆಂಗಾವಲು ವಾಹನ ಹರಿಸಲಾಗಿತ್ತು.
ಈ ಘಟನೆ ಸಂದರ್ಭ ಕಾರಿನಲ್ಲಿ ಕೇಂದ್ರ ರಾಜ್ಯ ಸಚಿವ ಅಜಯ್ ಮಿಶ್ರಾ ಪುತ್ರ ಇದ್ದರು ಎಂಬ ಆರೋಪ ಕೇಳಿಬಂದಿದ್ದು, ಸಚಿವರ ಪುತ್ರ ಆಶೀಶ್ ವಿರುದ್ದ ಕೊಲೆ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ. ಈ ಹಿಂಸಾಚಾರದಲ್ಲಿ ನಾಲ್ವರು ರೈತರು ಸೇರಿದಂತೆ ಒಟ್ಟು ಎಂಟು ಮಂದಿ ಸಾವನ್ನಪ್ಪಿದ್ದಾರೆ. ವಿರೋಧ ಪಕ್ಷಗಳು, ವಿವಿಧ ರೈತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ತುರ್ತಾಗಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿವೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಗೇಲ್, ಪಂಜಾಬ್ ಉಪ ಮುಖ್ಯಮಂತ್ರಿ ಸುಖಜಿಂದರ್ ಸಿಂಗ್ ರಾಂಧವ ಇನ್ನೂ ಮತ್ತಿತರರು ಲಖಿಂಪುರ ಖೇರಿಗೆ ಸೋಮವಾರ ಭೇಟಿ ನೀಡಲಿದ್ದರು. ಆದರೆ ಅವರನ್ನು ತಡೆಹಿಡಿಯಲಾಗಿದೆ.
ಈ ಬೆನ್ನಲ್ಲೇ ಹಿಂಸಾಚಾರದಲ್ಲಿ ಭಾನುವಾರ ಸಾವನ್ನಪ್ಪಿದ ನಾಲ್ವರು ರೈತರ ಕುಟುಂಬಕ್ಕೆ ರಾಜ್ಯ ಸರ್ಕಾರ 45 ಲಕ್ಷ ರೂ ಪರಿಹಾರ ಹಾಗೂ ಕುಟುಂಬದ ಒಬ್ಬರಿಗೆ ಸರ್ಕಾರಿ ನೌಕರಿ ನೀಡುವುದಾಗಿ ಘೋಷಿಸಿದೆ. ಇದರೊಂದಿಗೆ, ನಿವೃತ್ತ ಹೈಕೋರ್ಟ್ ನ್ಯಾಯಾಧೀಶರು ಈ ಘಟನೆ ಕುರಿತು ತನಿಖೆ ಕೈಗೊಳ್ಳಲಿರುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ.












Click it and Unblock the Notifications