ಮುಂಬೈ ಉತ್ತರ ಕ್ಷೇತ್ರದಿಂದ ಬಾಲಿವುಡ್ ನಟಿ ಕಾಂಗ್ರೆಸ್ ಅಭ್ಯರ್ಥಿ?
ಮುಂಬೈ, ಮಾರ್ಚ್ 26: ಮುಂಬೈ ಉತ್ತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಬಾಲಿವುಡ್ ನಟಿ ಊರ್ಮಿಳಾ ಮಾತೊಂಡ್ಕರ್ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಚಿಂತನೆ ನಡೆಸಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಊರ್ಮಿಳಾ ಮಾತೊಂಡ್ಕರ್ (45) ಅವರ ಹೆಸರು ಕಾಂಗ್ರೆಸ್ ಪಕ್ಷದ ನಾಯಕತ್ವದಲ್ಲಿ ಪರಿಗಣನೆಗೆ ಬಂದಿದೆ. ಈ ಕುರಿತು ಅಂತಿಮ ನಿರ್ಧಾರ ಶೀಘ್ರದಲ್ಲಿಯೇ ಹೊರಬರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಸೋಮವಾರವಷ್ಟೇ ಮುಂಬೈ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಮಿಲಿಂದ್ ದೇವೊರಾ ಅವರಿಗೆ ಬಿಟ್ಟುಕೊಟ್ಟ ಸಂಜಯ್ ನಿರುಪಮ್ ಅವರು ಈ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಮಹಾರಾಷ್ಟ್ರ ವಕ್ತಾರರು ಮತ್ತು ಊರ್ಮಿಳಾ ಅವರ ಕುಟುಂಬದ ಸದಸ್ಯರು ಕೂಡ ಈ ಕುರಿತು ಹೇಳಿಕೆ ನೀಡಲು ನಿರಾಕರಿಸಿದ್ದಾರೆ.

ಒಂದು ವೇಳೆ ಊರ್ಮಿಳಾ ಅವರ ಹೆಸರು ಅಂತಿಮಗೊಂಡರೆ ಅವರು ಬಿಜೆಪಿಯ ಹಾಲಿ ಸಂಸದ ಗೋಪಾಲ್ ಶೆಟ್ಟಿ ಅವರನ್ನು ಎದುರಿಸಲಿದ್ದಾರೆ. 2004ರಲ್ಲಿ ಇದೇ ಕ್ಷೇತ್ರದಿಂದ ನಟ ಗೋವಿಂದ ಪೆಟ್ರೋಲಿಯಂ ಖಾತೆ ಮಾಜಿ ಸಚಿವ ರಾಮ್ ನಾಯ್ಕ್ ಅವರನ್ನು ಸೋಲಿಸಿದ್ದರು.
2009ರಲ್ಲಿ ರಾಮ್ ನಾಯ್ಕ್ ಅವರು ಸಂಜಯ್ ನಿರುಪಮ್ ಅವರ ಎದುರು ಪುನಃ ಸೋಲು ಅನುಭವಿಸಿದ್ದರು. ಆದರೆ, 2014ರಲ್ಲಿ ಸಂಜಯ್ ನಿರುಪಮ್ ಅವರಿಗೆ ಗೋಪಾಲ್ ಶೆಟ್ಟಿ ಸೋಲುಣಿಸಿದ್ದರು.
1980ರಲ್ಲಿ ಬಾಲನಟಿಯಾಗಿ ಮರಾಠಿ ಸಿನಿಮಾ 'ಜಾಕೂಲ್'ನಿಂದ ಸಿನಿಮರಂಗ ಪ್ರವೇಶಿಸಿದ್ದ ಊರ್ಮಿಳಾ ಅವರು, ರಂಗೀಲಾ, ಕಲಿಯುಗ್, ನರಸಿಂಹ, ಭೂತ್, ಪಿಂಜರ್, ಮಸ್ತ್, ದಿಲ್ಲಗಿ, ಸತ್ಯ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.












Click it and Unblock the Notifications