ಅಧಿಕಾರಿಗಳ ನಿರ್ಲಕ್ಷ್ಯ: ಮಂಡ್ಯ ನಗರಸಭೆಯಲ್ಲಿ ಮೂಲೆಗುಂಪಾದ ಜನರ ಆಸ್ತಿ ತೆರಿಗೆ ದಾಖಲೆ
ಮಂಡ್ಯ, ಡಿಸೆಂಬರ್, 02: ನಗರಸಭೆಯೊಳಗೆ ಆಸ್ತಿ ತೆರಿಗೆ ದಾಖಲು ಅಯೋಮಯವಾಗಿದೆ. 2002-03ರಿಂದ ಸಮರ್ಪಕವಾಗಿ ಜನರು ಪಾವತಿಸಿದ ಆಸ್ತಿ ತೆರಿಗೆಯನ್ನು ರಿಜಿಸ್ಟರ್‌ನಲ್ಲಿ ದಾಖಲಿಸದೆ ನಗರಸಭೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದು, ಇದೀಗ ಸರ್ಕಾರದ ಆದೇಶದಂತೆ 20 ವರ್ಷಗಳ ಆಸ್ತಿ ತೆರಿಗೆಯನ್ನು ಪುಸ್ತಕದಲ್ಲಿ ದಾಖಲಿಸುವ ಪ್ರಕ್ರಿಯೆ ಮಂಡ್ಯ ನಗರಸಭೆಯೊಳಗೆ ಸದ್ದಿಲ್ಲದೆ ಶುರುವಾಗಿದೆ.
ನಗರದ ಜನರು ಆಸ್ತಿ ತೆರಿಗೆ ಪಾವತಿಸಿದ ಬಳಿಕ ಅದನ್ನು ರಿಜಿಸ್ಟರ್‌ನಲ್ಲಿ ದಾಖಲಿಸಿಕೊಂಡು ಸುರಕ್ಷಿತವಾಗಿಡುವುದು ನಗರಸಭೆ ಅಧಿಕಾರಿಗಳ ಕರ್ತವ್ಯವಾಗಿದೆ. ಆದರೆ, ಜನರಿಂದ ಆಸ್ತಿ ತೆರಿಗೆಯನ್ನು ಸಕಾಲದಲ್ಲಿ ಕಟ್ಟಿಸಿಕೊಳ್ಳುವುದಕ್ಕೆ ಹೆಚ್ಚಿನ ಆಸಕ್ತಿ ತೋರುತ್ತಿದ್ದ ಅಧಿಕಾರಿಗಳು ಅದನ್ನು ದಾಖಲೆ ರೂಪದಲ್ಲಿ ಇಡುವುದಕ್ಕೆ ಬೇಜವಾಬ್ದಾರಿ ತೋರಿಸುತ್ತಾ ಬಂದಿದ್ದರು. ನಗರದಲ್ಲಿ ವಸತಿ ಇರುವ ಬಹುತೇಕ ಜನರು ನಗರಸಭೆಗೆ ಪ್ರತಿ ವರ್ಷ ಆಸ್ತಿ ತೆರಿಗೆ ಪಾವತಿಯನ್ನಷ್ಟೇ ಮಾಡುತ್ತಲೇ ಬಂದಿದ್ದಾರೆ. ಆದರೆ ನಗರಸಭೆಯಲ್ಲಿ ತೆರಿಗೆ ಕಟ್ಟಿದ ರಶೀದಿಗಳನ್ನು ಸುರಕ್ಷಿತವಾಗಿ ಇಟ್ಟುಕೊಂಡಿಲ್ಲ.
ಹಾಲಿಗೆ ನೀರು ಮಿಶ್ರಣ ಪ್ರಕರಣ: ಪೊಲೀಸರ ಕ್ರಮ ಪ್ರಶ್ನಿಸಿ ಆರೋಪಿ ಸಲ್ಲಿಸಿದ್ದ ಅರ್ಜಿ ವಜಾ
ಎಷ್ಟೋ ಜನರು ತಮ್ಮ ಆಸ್ತಿ ಸುರಕ್ಷತೆಗಾಗಿ ನಮೂನೆ-3 ಪಡೆದುಕೊಳ್ಳುವ ಯೋಚನೆಗೂ ಮುಂದಾಗಿಲ್ಲ. ಏಕೆಂದರೆ, ಪ್ರತಿ ವರ್ಷ ತೆರಿಗೆಯನ್ನು ಪಾವತಿಸಿಕೊಂಡು ಬರುತ್ತಿದ್ದು, ಅದರ ದಾಖಲೆಗಳು ನಗರಸಭೆಯಲ್ಲಿವೆ ಎನ್ನುವ ಮಾಹಿತಿ ಅವರಲ್ಲಿತ್ತು. ನಗರಸಭೆಯಲ್ಲಿ ಪ್ರತಿ ವರ್ಷ ಸಾರ್ವಜನಿಕರಿಂದ ಪಾವತಿಸಿಕೊಳ್ಳುವ ಆಸ್ತಿ ತೆರಿಗೆಯನ್ನು ಕಟ್ಟಿಸಿಕೊಳ್ಳುತ್ತಾರೆ. ಆದರೆ ಕ್ರಮಬದ್ಧವಾಗಿ ಕಡತಗಳ ರೂಪದಲ್ಲಿ ದಾಖಲೆ ಸಂಗ್ರಹಿಸಿಡುವ ವ್ಯವಸ್ಥೆಯನ್ನೇ ಮಾಡಿಲ್ಲದಿರುವುದು ಬೆಳಕಿಗೆ ಬಂದಿದೆ.

ಮಂಡ್ಯದಲ್ಲಿ ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯ
ಪ್ರತಿ ವರ್ಷ ಜನರು ಆಸ್ತಿ ತೆರಿಗೆ ಪಾವತಿಸಿದ ಬಳಿಕ ಕಂದಾಯ ಇಲಾಖೆ ಸಿಬ್ಬಂದಿ ತಮ್ಮ ಬಳಿ ಇಟ್ಟುಕೊಳ್ಳುತ್ತಿದ್ದ ಒಂದು ಕಾಪಿಯನ್ನು ಗಂಟುಕಟ್ಟಿ ಮೂಲೆಗೆಸೆಯುತ್ತಿದ್ದರು. ಆದರೆ ಆ ಕಡತಗಳನ್ನು ಎಲ್ಲಿಯೂ ದಾಖಲಿಸಿಕೊಳ್ಳುತ್ತಿರಲಿಲ್ಲ. ಅನೇಕ ಜನರು ತಾವು ಪಾವತಿಸಿದ ಆಸ್ತಿ ತೆರಿಗೆಯ ರಶೀದಿಗಳನ್ನು ನಗರಸಭೆಯಲ್ಲಿ ಸುರಕ್ಷಿತವಾಗಿ ಇಟ್ಟುಕೊಂಡಿದ್ದಾರೆ ಎಂದು ತಿಳಿದಿದ್ದರು. ಇನ್ನು ಕೆಲವರು ರಶೀದಿಗಳನ್ನೇ ಇಟ್ಟುಕೊಂಡಿಲ್ಲದಿರುವುದು, ತೆರಿಗೆ ಪಾವತಿಸಿರುವುದಕ್ಕೆ ಪೂರಕವಾಗಿ ನಮೂನೆ-3 ಪಡೆದುಕೊಂಡು ಆಸ್ತಿ ಸಂರಕ್ಷಣೆ ಮಾಡಿಕೊಳ್ಳುವುದಕ್ಕೆ ಆಸಕ್ತಿ ತೋರದಿರುವುದು ಕಂಡುಬಂದಿದೆ.
ಆಸ್ತಿ ತೆರಿಗೆ ಪಾವತಿಸಿರುವುದಕ್ಕೆ ರಶೀದಿ ಅಥವಾ ನಮೂನೆ-3 ಇಟ್ಟುಕೊಂಡಿದ್ದರೆ ಅಂತಹ ಜನರು ಹೆದರುವ ಅವಶ್ಯಕತೆ ಇಲ್ಲ. ಒಂದುವೇಳೆ ರಶೀದಿ ಅಥವಾ ನಮೂನೆ-3 ಎರಡೂ ಇಟ್ಟುಕೊಳ್ಳದಿದ್ದರೆ ಅಂತಹವರು ಹಿಂದೆ ಎಲ್ಲಿಯವರೆಗೆ ತೆರಿಗೆ ಪಾವತಿಸಿದ್ದಿರೋ, ಅಲ್ಲಿಂದ ಇಲ್ಲಿಯವರೆಗೆ ಮತ್ತೆ ತೆರಿಗೆ ಪಾವತಿಸಬೇಕಾದ ಸಂದರ್ಭ ಎದುರಾಗುವ ಸಾಧ್ಯತೆಗಳಿವೆ. ಆಸ್ತಿ ತೆರಿಗೆ ಪಾವತಿಸಿದ್ದರೂ ಮತ್ತೆ ಪಾವತಿಸುವ ಅನಿವಾರ್ಯತೆ ಎದುರಾದರೆ ಯಾರು ಜವಾಬ್ದಾರರು ಎನ್ನುವ ಪ್ರಶ್ನೆಗೆ ನಗರಸಭೆಯ ಯಾರೊಬ್ಬರ ಬಳಿಯೂ ಉತ್ತರವೇ ಇಲ್ಲದಂತಾಗಿದೆ.

ಆದೇಶದ ಬಳಿಕ ಎಚ್ಚೆತ್ತ ನಗರಸಭೆ
ಸಾರ್ವಜನಿಕರಿಂದ ಸಂಗ್ರಹಿಸಲಾಗುವ ಆಸ್ತಿ ತೆರಿಗೆಯನ್ನು ರಿಜಿಸ್ಟರ್ ಪುಸ್ತಕದಲ್ಲಿ ದಾಖಲಿಸಿ ಕಡತಗಳ ರೂಪದಲ್ಲಿ ಸಂಗ್ರಹಿಸಿಡದಿರುವುದು ಮಂಡ್ಯದಲ್ಲಿ ಮಾತ್ರವೇ ಅಲ್ಲ. ಇಡೀ ರಾಜ್ಯದಲ್ಲೇ ಎಲ್ಲಿಯೂ ಈ ವ್ಯವಸ್ಥೆಯನ್ನು ಮಾಡಿಕೊಂಡಿಲ್ಲದಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ನಂತರ 2002-03ರಿಂದ ಈವರೆಗೆ ಆಸ್ತಿ ತೆರಿಗೆ ನೋಂದಣಿಯನ್ನು ರಿಜಿಸ್ಟರ್ ಪುಸ್ತಕದಲ್ಲಿ ದಾಖಲಿಸುವಂತೆ ಸರ್ಕಾರ ಆದೇಶ ಹೊರಡಿಸಿದೆ. ಬಳಿಕ ನಗರಸಭೆ ಅಧಿಕಾರಿಗಳು ಎಚ್ಚೆತ್ತುಕೊಂಡು ರಿಜಿಸ್ಟರ್‌ಗೆ ಆಸ್ತಿ ತೆರಿಗೆಯನ್ನು ದಾಖಲಿಸುವ ಕಾರ್ಯವನ್ನು ಕೈಗೆತ್ತಿಕೊಂಡಿದ್ದಾರೆ.

ದೂರವಾಗಲಿರುವ ಆರ್ಥಿಕ ಹೊರೆ
ಮೊದಲು ಆಸ್ತಿ ತೆರಿಗೆ ಪಾವತಿಯಾಗಿರುವ ಬಗ್ಗೆ ರಿಜಿಸ್ಟರ್ ಪುಸ್ತಕಕ್ಕೆ ದಾಖಲಿಸಿಕೊಂಡು ನಂತರ ಅದನ್ನು ಆನ್‌ಲೈನ್‌ನಲ್ಲಿ ದಾಖಲಿಸಲಿದ್ದಾರೆ. ಇದೀಗ ನಗರದ ಜನರು ಪಾವತಿಸುವ ಆಸ್ತಿ ತೆರಿಗೆಯ ಪ್ರತಿಯೊಂದು ಮಾಹಿತಿಯೂ ದಾಖಲಾಗಲಿದೆ. ಇನ್ನು ಮುಂದೆ ಪ್ರತಿ ವರ್ಷ ಸಂಗ್ರಹವಾಗುವ ಆಸ್ತಿ ತೆರಿಗೆಯನ್ನು ಕಡ್ಡಾಯವಾಗಿ ಆನ್‌ಲೈನ್‌ನಲ್ಲಿ ದಾಖಲಿಸಬೇಕಿದೆ. ಇದರಿಂದ ತೆರಿಗೆಯನ್ನು ಪಾವತಿಸಿಯೂ ದಾಖಲೆಗಳನ್ನು ಇಟ್ಟುಕೊಳ್ಳದಿದ್ದವರ ಮೇಲೆ ಅನಗತ್ಯವಾಗಿ ಬೀಳುತ್ತಿದ್ದ ಆರ್ಥಿಕ ಹೊರೆ ದೂರವಾಗಲಿದೆ. ಸರ್ಕಾರ ಆದೇಶ ಹೊರಡಿಸಿದ ಬೆನ್ನಲ್ಲೇ ಮೂಲೆಗೆಸೆದಿದ್ದ ಹಾಗೂ ಧೂಳು ಹಿಡಿದಿದ್ದ ಕಡತಗಳನ್ನು ಪುಸ್ತಕಕ್ಕೆ ದಾಖಲಿಸುವ ಕಾರ್ಯಕ್ಕೆ ಮುಂದಾಗಿದೆ. ಹೀಗೆ ಕಂದಾಯ ವಿಭಾಗದ ಸಿಬ್ಬಂದಿ ಆಸ್ತಿ ತೆರಿಗೆಯ ಕಾಪಿಗಳನ್ನೆಲ್ಲಾ ಹೊರತೆಗೆದು ಪುಸ್ತಕಗಳಿಗೆ ದಾಖಲಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ನಗರಸಭೆಯಲ್ಲಿ ಇರುವ ಖಾತೆಗಳ ಸಂಖ್ಯೆ?
ಪ್ರತಿಯೊಬ್ಬ ಸಿಬ್ಬಂದಿಯೂ ದಿನಕ್ಕೆ ಇಂತಿಷ್ಟು ಖಾತೆಗಳ ಆಸ್ತಿ ತೆರಿಗೆಯನ್ನು ರಿಜಿಸ್ಟರ್ ಪುಸ್ತಕಕ್ಕೆ ದಾಖಲಿಸಲು ಗುರಿ ನಿಗದಿಪಡಿಸಲಾಗಿದೆ. ಇಲ್ಲದಿದ್ದರೆ ಷೋಕಾಸ್ ನೋಟೀಸ್ ಜಾರಿಮಾಡಲಾಗುತ್ತಿದೆ. ನಗರಸಭೆಯಲ್ಲಿ ಆಸ್ತಿ ತೆರಿಗೆ ಪಾವತಿಸಿರುವ ಖಾತೆದಾರರ ದಾಖಲೆಗಳಿವೆ ಎಂದು ಮೇಲ್ನೋಟಕ್ಕೆ ಹೇಳುತ್ತಿದ್ದಾರೆ. ದಾಖಲೆಗಳಿಲ್ಲದವರ ಖಾತೆ ಸಂಖ್ಯೆಯನ್ನು ದಾಖಲಿಸಿಕೊಂಡು ಅವರ ಮನೆಗೇ ಹೋಗಿ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ. ಇಂತಹ ಪ್ರಕರಣಗಳು ಸಾಕಷ್ಟು ಇರುವುದರಿಂದ ಖಾಸಗಿ ಸಂಸ್ಥೆಯೊಂದರ ಮೂಲಕ ಸರ್ವೆ ಮಾಡಿಸುವುದಕ್ಕೂ ನಗರಸಭೆ ಆಯುಕ್ತರು ಚಿಂತನೆ ನಡೆಸಿದ್ದಾರೆ. ನಗರಸಭೆಯಲ್ಲಿ 31,900 ಖಾತೆಗಳಿದ್ದು, ಇದರಲ್ಲಿ 11 ಸಾವಿರದಷ್ಟು ಜನರು ಇ-ಆಸ್ತಿ ಮಾಡಿಸಿಕೊಂಡಿದ್ದಾರೆ.

ಇ-ಆಸ್ತಿಯಿಂದ ದೂರ ಉಳಿದವರೆಷ್ಟು?
ಒಟ್ಟಾರೆ ಶೇಕಡಾ 33ರಷ್ಟು ಜನರು ಮಾತ್ರ ಇ-ಆಸ್ತಿಯನ್ನು ಮಾಡಿಸಿಕೊಂಡಿದ್ದು, ಉಳಿದ ಶೇಕಡಾ 67ರಷ್ಟು ಜನ ಇ-ಆಸ್ತಿಯಿಂದ ದೂರವೇ ಉಳಿದಿದ್ದಾರೆ. ನಗರ ವ್ಯಾಪ್ತಿಯಲ್ಲಿರುವ 11 ಸಾವಿರ ಇ-ಆಸ್ತಿಯನ್ನೇ ದಾಖಲೆ ರೂಪದಲ್ಲಿಡಲು ಸಾಧ್ಯವಾಗದ ಕಂದಾಯ ಇಲಾಖೆ ಸಿಬ್ಬಂದಿ, ಇನ್ನು ಎಲ್ಲಾ ಖಾತೆದಾರರು ಇ-ಆಸ್ತಿಗೆ ಒಳಪಟ್ಟಿದ್ದರೆ ಹೇಗೆ ದಾಖಲಿಡುತ್ತಿದ್ದರು? ಎನ್ನುವುದೇ ಪ್ರಶ್ನೆಯಾಗಿದೆ. ಹಲವಾರು ವರ್ಷಗಳಿಂದ ಸಾರ್ವಜನಿಕರು ಪಾವತಿಸಿದ ಆಸ್ತಿ ತೆರಿಗೆಯನ್ನು ರಿಜಿಸ್ಟರ್‌ಗಳಲ್ಲಿ ಸಮರ್ಪಕವಾಗಿ ದಾಖಲಿಸಿರಲಿಲ್ಲ. ಇದೀಗ ರಾಜ್ಯ ಸರ್ಕಾರದ ಆದೇಶದಂತೆ ಆಸ್ತಿ ತೆರಿಗೆಯ ದಾಖಲೆಗಳನ್ನು ಮೊದಲು ಪುಸ್ತಕದಲ್ಲಿ ದಾಖಲಿಸಿಕೊಂಡು ನಂತರ ಆನ್‌ಲೈನ್‌ಗೆ ಅಪ್‌ಲೋಡ್ ಮಾಡಲಾಗುವುದು. ಇನ್ನು ಪ್ರತಿ ವರ್ಷದ ಆಸ್ತಿ ತೆರಿಗೆ ಆನ್‌ಲೈನ್‌ನಲ್ಲಿ ದಾಖಲಾಗಲಿದೆ. ನಗರಸಭೆ ವ್ಯಾಪ್ತಿಯೊಳಗೆ 31,900 ಖಾತೆಗಳಿದ್ದು, ಅದರಲ್ಲಿ 11,000 ಖಾತೆಗಳು ಇ-ಆಸ್ತಿ ವ್ಯಾಪ್ತಿಗೊಳಪಟ್ಟಿವೆ. ಉಳಿದವರು ತೆರಿಗೆ ಪಾವತಿಸಿ ಇ-ಸ್ವತ್ತು ಮಾಡಿಕೊಳ್ಳಬೇಕು ಎಂದು ನಗರಸಭೆ ಆಯುಕ್ತರು ಆರ್.ಮಂಜುನಾಥ್ ತಿಳಿಸಿದ್ದಾರೆ.