ವಿದ್ಯಾರ್ಥಿಗಳಿಗೆ ಪ್ರೇಮ ಪಾಠ ಮಾಡುತ್ತಿದ್ದ ಕಾಮುಕ ಶಿಕ್ಷಕನಿಗೆ ಗ್ರಾಮಸ್ಥರಿಂದಲೇ ಪಾಠ
ಕೊಪ್ಪಳ, ಫೆಬ್ರವರಿ 9: ವಿದ್ಯಾರ್ಥಿಗಳಿಗೆ ಪ್ರೇಮ ಪಾಠ ಹೇಳುತ್ತಿದ್ದ ಕಾಮುಕ ಶಿಕ್ಷಕನಿಗೆ ಗ್ರಾಮಸ್ಥರೇ ಪಾಠ ಕಲಿಸಿದ ಘಟನೆ ಕೊಪ್ಪಳದಲ್ಲಿ ನಡೆದಿದೆ.
ಶಾಲೆಗಳಲ್ಲಿ ಲೈಂಗಿಕ ಕಿರುಕುಳ ಪ್ರಕರಣಗಳು ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ಇದಕ್ಕೆ ಪೂರಕವೆಂಬಂತೆ ಕೊಪ್ಪಳದಲ್ಲಿ ಘಟನೆಯೊಂದು ನಡೆದಿದೆ.
ಕೊಪ್ಪಳ ತಾಲೂಕಿನ ಅಳವಂಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡಬೇಕಿದ್ದ ಶಿಕ್ಷಕ ಇಬ್ರಾಹಿಂಗೆ ಗ್ರಾಮಸ್ಥರೇ ಪಾಠ ಮಾಡಿದ್ದಾರೆ.

ಶಿಕ್ಷಕ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎನ್ನುವ ಆರೋಪ ಕೇಳಿ ಬಂದಿದೆ. ಸ್ಟಾಫ್ ರೂಮಿಗೆ ಕರೆದು ಮುತ್ತು ಕೊಡುವಂತೆ ಆತನನ್ನು ಪ್ರೀತಿ ಮಾಡುವಂತೆ ಪೀಡಿಸಿದ್ದಾನೆ.
ವಿದ್ಯಾರ್ಥಿನಿಯೊಬ್ಬಳು ಶಿಕ್ಷಕನ ಕಿರುಕುಳದಿಂದ ಬೇಸತ್ತು ಶಾಲೆಗೆ ಹೋಗುವುದನ್ನೇ ನಿಲ್ಲಿಸಿದ್ದಾಳೆ. ಈ ಬಗ್ಗೆ ಮನೆಯಲ್ಲಿ ಪೋಷಕರು ವಿಚಾರಿಸಿದಾಗ ವಿದ್ಯಾರ್ಥಿನಿ ಶಿಕ್ಷಕ ತನ್ನ ಜೊತೆ ತೋರಿದ ಅನುಚಿತ ವರ್ತನೆಯ ಬಗ್ಗೆ ಬಾಯಿಬಿಟ್ಟಿದ್ದಾಳೆ.
ಇದರಿಂದ ಸಿಟ್ಟಿಗೆದ್ದ ಪೋಷಕರು ಹಾಗೂ ಗ್ರಾಮಸ್ಥರು ಶಾಲೆಗೆ ಆಗಮಿಸಿ ಇಂತಹ ಶಿಕ್ಷಕ ನಮ್ಮ ಶಾಲೆಗೆ ಬೇಡ ಕೂಡಲೇ ಈ ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಶಿಕ್ಷಕ ಇಬ್ರಾಹಿಂ ಇಂತಹ ಕೃತ್ಯವೆಸಗಿದ್ದು ಇದೇ ಮೊದಲಲ್ಲ. ಈ ಹಿಂದೆ ಅನೇಕ ಬಾರಿ ಕೂಡ ವಿದ್ಯಾರ್ಥಿನಿಯರ ಜೊತೆ ಅನುಚಿತ ವರ್ತನೆ ತೋರಿದ್ದಾನೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.












Click it and Unblock the Notifications