ಗೋಕರ್ಣ ಮೂಲದ ವಿಜ್ಞಾನಿಗೆ ಗೌರವ ಸಲ್ಲಿಸಿದ ಅಮೇರಿಕ ನಿಯತಕಾಲಿಕೆ
ಕಾರವಾರ, ಜೂನ್.28: ಗೋಕರ್ಣ ಮೂಲದ ಡಾ.ನಾರಾಯಣ ಹೊಸ್ಮನೆ ಅವರು ಜೂನ್ 30ರಂದು ತಮ್ಮ 70ನೇ ವರ್ಷದ ಜನ್ಮ ದಿನ ಆಚರಿಸಿಕೊಳ್ಳುತ್ತಿದ್ದು, ತನ್ನಿಮಿತ್ತ ವಿಶ್ವದ ಹೆಸರಾಂತ "ಜರ್ನಲ್ ಆಫ್ ಆರ್ಗೆನೊ ಮೆಟಾಲಿಕ್ ಕೆಮಿಸ್ಟ್ರಿ"ಯು ವಿಶೇಷ ಸಂಚಿಕೆಯೊಂದನ್ನು ಪ್ರಕಟಿಸುವ ಮೂಲಕ ಗೌರವ ಸಮರ್ಪಿಸಿದೆ.
ಅಮೆರಿಕ, ರಷ್ಯಾ, ಕೊಲಂಬಿಯಾ, ಯುರೋಪ್ಗಳಲ್ಲಿ ಪ್ರಕಟವಾಗುವ ಈ ಜರ್ನಲ್ನ ಜೂನ್ ತಿಂಗಳ ಸಂಚಿಕೆಯು ಡಾ.ಹೊಸ್ಮನೆಯವರಿಗೆ ಸಮರ್ಪಿತವಾಗಿದೆ. ಜರ್ನಲ್ ನ ಸಂಪಾದಕರಾದ ರಿಚರ್ಡ್ ಎಡಮ್ಸ್ ಮತ್ತು ವ್ಲಾಡಿಮಿರ್ ಬ್ರೆಗಾಜೆ ಅವರು ತಮ್ಮ ಸಂಪಾದಕೀಯದಲ್ಲಿ ಹೊಸ್ಮನೆಯವರ ಸಂಶೋಧನೆಗಳ ಬಗ್ಗೆ ಬರೆದು ಶ್ಲಾಘಿಸಿದ್ದಾರೆ.
ಕ್ಯಾನ್ಸರ್ ಔಷಧ ಸಂಶೋಧನೆಯಲ್ಲಿ ಪ್ರಮುಖ ಪಾತ್ರ ವಹಿಸುವ ಬೋರಾನ್ ಕೆಮಿಸ್ಟ್ರಿ ಅಥವಾ ಅಲೋಹ ರಸಾಯನ ಶಾಸ್ತ್ರವನ್ನು ಅಮೆರಿಕದಲ್ಲಿ ಸಂಶೋಧಿಸಿರುವ ಕೀರ್ತಿ ಡಾ.ನಾರಾಯಣ ಹೊಸ್ಮನೆ ಅವರದ್ದಾಗಿದೆ ಎಂದು ಜರ್ನಲ್ ನಲ್ಲಿ ತಿಳಿಸಲಾಗಿದೆ.

70ರ ದಶಕದಲ್ಲಿ ಹೊಸ್ಮನೆಯವರು ಅಮೆರಿಕದಲ್ಲಿ ಪ್ರಾರಂಭಿಸಿದ ಬೋರನ್ ವಿಜ್ಞಾನ ಸಂಶೋಧನೆ ಕಳೆದ 4 ದಶಕಗಳಲ್ಲಿ ವಿಶ್ವದ ಗರಿಷ್ಠ ಗೌರವಕ್ಕೆ ಪಾತ್ರವಾಗಿದೆ. ಈ ನೆನಪಿಗಾಗಿ ಸಂಚಿಕೆಯನ್ನು ಅರ್ಪಿಸುವ ಮೂಲಕ ಜಾಗತಿಕ ಗೌರವ ಸಮರ್ಪಿಸಲಾಗುತ್ತಿದೆ ಎಂದಿದ್ದಾರೆ.
ಅವರು ಸದ್ಯ ಉತ್ತರ ಅಮೆರಿಕಾದ ಇಲಿನಾಯ್ ವಿಶ್ವ ವಿದ್ಯಾಲಯದಲ್ಲಿ ಜೀವ ರಸಾಯನ ವಿಜ್ಞಾನದ ಸಂಶೋಧನಾ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದು, ವಿಶ್ವದ ಅಗ್ರಗಣ್ಯ ಕ್ಯಾನ್ಸರ್ ಸಂಶೋಧನಾ ವಿಜ್ಞಾನಿ ಎಂಬ ಗೌರವಕ್ಕೆ ಕೂಡ ಪಾತ್ರರಾಗಿದ್ದಾರೆ.
ವಿಶ್ವ ಮಟ್ಟದಲ್ಲಿ ಕ್ಯಾನ್ಸರ್ ಕುರಿತು ನೂರಕ್ಕೂ ಅಧಿಕ ಸಂಶೋಧನಾ ವರದಿಗಳನ್ನು ಡಾ.ಹೊಸ್ಮನೆ ಪ್ರಕಟಿಸಿದ್ದಾರೆ. ಹಲವಾರು ಪ್ರತಿಷ್ಠಿತ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಅವರು ಪಡೆದಿದ್ದು, ವಿಶ್ವದ ಹಾಲಿ ಸಂಶೋಧಕ ವಿಜ್ಞಾನಿಗಳ (ಹೂ ಈಸ್ ಹೂ ಇನ್ ದಿ ವರ್ಡ್ಲ್) ಪಟ್ಟಿಯಲ್ಲಿ ಅವರ ಹೆಸರು ದಾಖಲಿಸಲ್ಪಟ್ಟಿದೆ.

ಗೋಕರ್ಣದ ವೈದಿಕ ಕುಟುಂಬದಲ್ಲಿ ಹುಟ್ಟಿದ ಇವರು, ಅತ್ಯಂತ ಬಡತನದಲ್ಲಿ ಗೋಕರ್ಣದ ಭದ್ರಕಾಳಿ ಪ್ರೌಢ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದರು. ನಂತರ ಧಾರವಾಡದ ಕರ್ನಾಟಕ ವಿ.ವಿ.ಯಲ್ಲಿ ಬಂಗಾರದ ಪದಕದೊಂದಿಗೆ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದರು.
ಆ ನಂತರ ಸ್ಕಾಟ್ಲೆಂಡಿನ ಎಡಿನ್ಬರ್ಗ್ ವಿಶ್ವವಿದ್ಯಾಲಯದಲ್ಲಿ ಬಯೋಕೆಮಿಸ್ಟ್ರಿಯಲ್ಲಿ ಡಾಕ್ಟರೇಟ್ ಪಡೆದಿದ್ದಾರೆ.
ಎಡಿನ್ಬರೊ ವಿಶ್ವವಿದ್ಯಾಲಯದ ವಿದ್ಯಾರ್ಥಿವೇತನ ಪಡೆದ ಏಕಮೇವ ವಿದೇಶಿ ವಿದ್ಯಾರ್ಥಿ ಡಾ.ಹೊಸ್ಮನೆಯವರಾಗಿದೆ. ಅವರು ಬೋರಾನ್ ಕೆಮಿಸ್ಟ್ರಿ ಬಗ್ಗೆ 350 ಸಂಶೋಧನಾ ವರದಿಗಳನ್ನು ಪ್ರಕಟಿಸಿದ್ದು, ಬೋರಾನ್ ಕುರಿತ ಅವರ 5 ಪುಸ್ತಕಗಳು ಜಾಗತಿಕ ಗೌರವಕ್ಕೆ ಪಾತ್ರವಾಗಿವೆ.












Click it and Unblock the Notifications