• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಿಎಸ್‌ಸಿ ಪ್ರವೇಶಕ್ಕೆ ಸಿಇಟಿ ಕಡ್ಡಾಯ? ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ ಸ್ಪಷ್ಟನೆ!

|
Google Oneindia Kannada News

ಬೆಂಗಳೂರು, ಜೂ. 15: ಕೊರೊನಾ ವೈರಸ್‌ ಸೃಷ್ಟಿಸಿರುವ ಸಂಕಷ್ಟಗಳಿಂದ ಶೈಕ್ಷಣಿಕ ಕ್ಷೇತ್ರದ ಮೇಲೆ ಬಹಳಷ್ಟು ಕೆಟ್ಟ ಪರಿಣಾಮಗಳಾಗಿವೆ. ಇದೇ ಸಂದರ್ಭದಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಬೇಕಾದ ಅನಿವಾರ್ಯತೆಯಿದೆ. ಹೀಗಾಗಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಶಿಫಾರಸಿನಂತೆ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಪದವಿ ಕೋರ್ಸ್‌ಗಳನ್ನು ಆರಂಭಿಸುವಂತೆ ಉನ್ನತ ಶಿಕ್ಷಣ ಸಚಿವ ಡಾ. ಸಿ. ಎನ್.‌ ಅಶ್ವಥ್ ನಾರಾಯಣ ಅವರು ಕುಲಪತಿಗಳಿಗೆ ಸಲಹೆ ಮಾಡಿದ್ದಾರೆ.

2021-22ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ಎಲ್ಲ ಕುಲಪತಿಗಳ ಜತೆ ಬೆಂಗಳೂರಿನಲ್ಲಿ ಡಿಸಿಎಂ ಡಾ. ಅಶ್ವಥ್ ನಾರಾಯಣ ಅವರು ವರ್ಚುಯಲ್ ಚರ್ಚೆ ನಡೆಸಿದ್ದಾರೆ. "ಕೋವಿಡ್ ಕಾರಣಕ್ಕೆ ಪ್ರಸಕ್ತ ವರ್ಷದಲ್ಲಿ ಪಿಯುಸಿ ವಿದ್ಯಾರ್ಥಿಗಳೆಲ್ಲರೂ ಪಾಸಾಗಿದ್ದಾರೆ. ವಿವಿಧ ಕೋರ್ಸುಗಳಿಗೆ ಬಹಳ ಬೇಡಿಕೆ ಬರುತ್ತಿದೆ. ವಿವಿಗಳಿಗೆ ಇದೊಂದು ಸುವರ್ಣಾವಕಾಶ. ನಾಲ್ಕು ವರ್ಷದ ಪದವಿ ತರಗತಿಗಳನ್ನು ಆರಂಭ ಮಾಡುವ ಮೂಲಕ ವಿವಿಗಳು ಪದವಿ ವ್ಯಾಸಂಗದ ಅಭಿಲಾಶೆಯುಳ್ಳ ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಳ್ಳಲು ಕುಲಪತಿಗಳಿಗೆ ಸೂಚಿಸಲಾಗಿದೆ" ಎಂದು ವಿಡಿಯೋ ಕಾನ್ಫರೆನ್ಸ್ ಬಳಿಕೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಎನ್‌ಇಪಿ ಜಾರಿಗೆ ವಿಷಯವಾರು ಸಮಿತಿ ರಚನೆ

ಎನ್‌ಇಪಿ ಜಾರಿಗೆ ವಿಷಯವಾರು ಸಮಿತಿ ರಚನೆ

"ಈ ವರ್ಷದಿಂದಲೇ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಬರುತ್ತಿದೆ. ಅದಕ್ಕೆ ಸೂಕ್ತವಾದ ʼಕಾರ್ಯ ಚೌಕಟ್ಟುʼ ರೂಪಿಸಲು ವಿಷಯವಾರು ಸಮಿತಿ ರಚನೆ ಮಾಡುವಂತೆಯೂ ಕುಲಪತಿಗಳಿಗೆ ಸೂಚನೆ ನೀಡಲಾಗಿದ್ದು, ಜುಲೈ 15ರೊಳಗೆ ಈ ಸಮಿತಿಗಳು ವರದಿಗಳನ್ನು ಸಲ್ಲಿಸಬೇಕೆಂದು ತಿಳಿಸಲಾಗಿದೆ" ಎಂದು ಡಿಸಿಎಂ ಡಾ. ಅಶ್ವಥ್ ನಾರಾಯಣ ಅವರು ಹೇಳಿದ್ದಾರೆ.

"ಇನ್ನು ಸದ್ಯಕ್ಕೆ ನಮ್ಮನ್ನು ಕಾಡುತ್ತಿರುವ ಈ ವೈರಸ್‌ ಎಷ್ಟು ಕಾಲ ಇರುತ್ತೋ ಇಲ್ಲವೋ ಗೊತ್ತಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಆನ್‌ಲೈನ್‌ ಹಾಗೂ ಆಫ್‌ಲೈನ್‌ನಲ್ಲಿ ಕಲಿಯಲು ಅವಕಾಶ ಇರಲೇಬೇಕು. ಅದಕ್ಕೆ ಬೇಕಾದ ಎಲ್ಲ ತಾಂತ್ರಿಕ ಸೌಲಭ್ಯಗಳು ವಿದ್ಯಾಸಂಸ್ಥೆಗಳಲ್ಲಿ ಇರಬೇಕು. ಡಿಜಿಟಲ್‌ನಿಂದ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ವರ್ಚಯುಲ್ ಮೂಲಕ ಬೋಧನೆ ಮಾಡುವಂತೆ ಸೂಚಿಸಲಾಗಿದೆ" ಎಂದು ಡಾ. ಅಶ್ವಥ್ ನಾರಾಯಣ ತಿಳಿಸಿದ್ದಾರೆ.

ಹೊಸ ಶೈಕ್ಷಣಿಕ ವರ್ಷ ಘೋಷಣೆ!

ಹೊಸ ಶೈಕ್ಷಣಿಕ ವರ್ಷ ಘೋಷಣೆ!

ಇದೇ ಸಂದರ್ಭದಲ್ಲಿ ಎಲ್ಲ ವಿಶ್ವವಿದ್ಯಾಲಯಗಳ 2021-22ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಅಕ್ಟೋಬರ್‌ ಮೊದಲ ವಾರದಲ್ಲಿ ಈ ವರ್ಷದ ಶೈಕ್ಷಣಿಕ ವರ್ಷದ ಚಟುವಟಿಕೆಗಳು ಆರಂಭವಾಗಲಿದ್ದು, ಮೊದಲ ವರ್ಷದ ಪದವಿಗೆ ಅಕ್ಟೋಬರ್‌ ಮೊದಲ ವಾರದಿಂದಲೇ ದಾಖಲಾತಿ ಆರಂಭ ಮಾಡಲು ಉನ್ನತ ಶಿಕ್ಷಣ ಇಲಾಖೆ ತೀರ್ಮಾನ ಮಾಡಿದೆ.

ಈ ಬಗ್ಗೆ ಮಾಹಿತಿ ಕೊಟ್ಟಿರುವ ಡಾ. ಅಶ್ವಥ್ ನಾರಾಯಣ ಅವರು, "ಕೆಲವು ಕಡೆ ಪರೀಕ್ಷೆಗಳು ನಡೆದಿವೆ, ಇನ್ನು ಕೆಲವೆಡೆ ಆಗಿಲ್ಲ. ಈ ಬಗ್ಗೆ ಕೂಡ ಚರ್ಚೆ ನಡೆಸಲಾಯಿತು. ಇನ್ನು ಈಗಾಗಲೇ ದೈನಂದಿನ ತರಗತಿಗಳು ಶುರುವಾಗಿದ್ದು, ಅವುಗಳನ್ನು ಕೂಡ ಶೈಕ್ಷಣಿಕ ವರ್ಷದ ಚಟುವಟಿಕೆಗಳ ಆಧಾರದಲ್ಲೇ ನಡೆಸಲಾಗುವುದು. ಮುಂದಿನ ವರ್ಷದ ಪರೀಕ್ಷೆಗಳನ್ನು ಹೇಗೆ ನಡೆಸಬೇಕು ಹಾಗೂ ಗುಣಮಟ್ಟದ ಶಿಕ್ಷಣ ನೀಡಲು ಏನೆಲ್ಲ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ವಿವರವಾಗಿ ಇದೇ ವೇಳೆಯಲ್ಲಿ ಚರ್ಚಿಸಿದ್ದೇವೆ. ಜಾಗತಿಕ ಮಟ್ಟದಲ್ಲಿ ವಿದ್ಯಾರ್ಥಿಗಳು ಪೈಪೋಟಿ ನಡೆಸಬೇಕಾದರೆ ಕಲಿಕೆ ಮತ್ತು ಬೋಧನೆಯಲ್ಲಿ ಗುಣಮಟ್ಟ ಇರಬೇಕು ಎಂಬ ಬಗ್ಗೆ ವಿಸ್ತೃತವಾಗಿ ಸಮಾಲೋಚನೆ ನಡೆಸಲಾಗಿದೆ" ಎಂದು ಹೇಳಿದ್ದಾರೆ.

"ವಿದ್ಯಾರ್ಥಿಗಳು ತಂತ್ರಜ್ಞಾನ ಬಳಸಿಕೊಂಡು ವಿದ್ಯಾಭ್ಯಾಸ ನಡೆಸುವ ನಿಟ್ಟಿನಲ್ಲಿ ಎಲ್ಲರಿಗೂ ಟ್ಯಾಬ್‌ ನೀಡಲಾಗುತ್ತಿದೆ. ಸ್ಮಾರ್ಟ್‌ ಕ್ಲಾಸ್‌ಗಳು ಶುರುವಾಗುತ್ತಿವೆ. ಈಗಾಗಲೇ ಸಮಗ್ರ ಕಲಿಕಾ ನಿರ್ವಹಣಾ ವ್ಯವಸ್ಥೆ ಜಾರಿಗೆ ಬಂದಿದೆ" ಎಂದು ಅವರು ಹೇಳಿದ್ದಾರೆ.

ಏಕೀಕೃತ ನಿರ್ವಹಣಾ ವ್ಯವಸ್ಥೆ

ಏಕೀಕೃತ ನಿರ್ವಹಣಾ ವ್ಯವಸ್ಥೆ

ಮುಂದಿನ ದಿನಗಳಲ್ಲಿ ವಿಶ್ವವಿದ್ಯಾಲಯಗಳು ಹಾಗೂ ಕಾಲೇಜ್‌ಗಳನ್ನು ಅನುಸಂಧಾನಗೊಳಿಸಿ 'ಏಕೀಕೃತ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆʼ ಮೂಲಕ ಈ ವರ್ಷದಿಂದಲೇ ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಕೊಳ್ಳಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಇದಕ್ಕಾಗಿ ಪ್ರತ್ಯೇಕ ಡಿಜಿಟಲ್‌ ಪೋರ್ಟಲ್ ಸಿದ್ಧವಾಗುತ್ತಿದ್ದು, ಅದನ್ನು ಇ-ಗವರ್ನೆನ್ಸ್‌ ಇಲಾಖೆ ಅಭಿವೃದ್ಧಿಪಡಿಸುತ್ತಿದೆ ಎಂಬ ಮಾಹಿತಿಯಿದೆ.


"ಜೂನ್‌ 25ರಿಂದ ಪ್ರಾಯೋಗಿಕವಾಗಿ ಇದನ್ನು ಬಳಸಲು ಸರಕಾರ ಅನುಮತಿ ನೀಡಿದ್ದು, ಜುಲೈ 15ಕ್ಕೆ ಲೋಕಾರ್ಪಣೆ ಆಗಲಿದೆ. ದಾಖಲಾತಿಗೆ ನಿಗದಿ ಮಾಡಿರುವ ದಿನಾಂಕಕ್ಕೆ ಮುನ್ನವೇ ಎಲ್ಲ ಸರಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಈ ಪೋರ್ಟಲ್ ಬಳಕೆಗೆ ಸಿದ್ಧವಾಗಿರಬೇಕು" ಎಂದು ಕುಲಪತಿಗಳಿಗೆ ಸೂಚಿಸಲಾಗಿದೆ ಎಂದು ಡಾ. ಅಶ್ವಥ್ ನಾರಾಯಣ ಅವರು ಹೇಳಿದ್ದಾರೆ.


"ಜೊತೆಗೆ, ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಎಲ್ಲ ಚಟುವಟಿಕೆಗಳು ಇನ್ನು ಮುಂದೆ ಇ-ಆಫೀಸ್‌ ಮೂಲಕವೇ ನಡೆಯುತ್ತವೆ. ಕಾಗದ ಪತ್ರಗಳಿಗೆ ಅವಕಾಶ ಇಲ್ಲ" ಎಂದು ಇದೇ ವೇಳೆ ಅವರು ಸ್ಪಷ್ಟಪಡಿಸಿದ್ದಾರೆ.

  ಕೊರೊನಾ ಲಸಿಕೆಯಿಂದ ವ್ಯಕ್ತಿಯ ಸಾವಾಗಿದೆ ಅನ್ನೋದನ್ನ ಒಪ್ಪಿಕೊಂಡ ಕೇಂದ್ರ ಸರ್ಕಾರ | Oneindia Kannada
  ವಿಜ್ಞಾನ ಪದವಿಗೆ ಸಿಇಟಿ ಬೇಕಿಲ್ಲ!

  ವಿಜ್ಞಾನ ಪದವಿಗೆ ಸಿಇಟಿ ಬೇಕಿಲ್ಲ!

  "ಬಿಎಸ್‌ಸಿ ಪದವಿ ಪ್ರವೇಶ ಪಡೆಯಲು ಸಿಇಟಿ (ಸಾಮಾನ್ಯ ಪ್ರವೇಶ ಪರೀಕ್ಷೆ) ಕಡ್ಡಾಯ ಮಾಡುವ ಚಿಂತನೆಯನ್ನು ಸರಕಾರ ಕೈಬಿಟ್ಟಿದೆ" ಎಂದು ಎಂದು ಡಿಸಿಎಂ ಡಾ. ಅಶ್ವಥ್ ನಾರಾಯಣ ಅವರು ತಿಳಿಸಿದ್ದಾರೆ. "ವಿಜ್ಞಾನ ಬೋಧನೆ ಮತ್ತು ಕಲಿಕೆಯಲ್ಲಿ ಗುಣಮಟ್ಟಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ಪದವಿ ವಿಜ್ಞಾನ ಪ್ರವೇಶಕ್ಕೂ ಸಿಇಟಿ ತರುವ ಯೋಚನೆ ಇತ್ತು. ಆದರೆ, ಸದ್ಯಕ್ಕೆ ಕೈಬಿಡಲಾಗಿದೆ" ಎಂದಿದ್ದಾರೆ.

  "ಜೊತೆಗೆ ಸಿಇಟಿ ಪರೀಕ್ಷೆ ಬಗ್ಗೆ ಹೈಕೋರ್ಟ್‌ ನೀಡಿರುವ ಸೂಚನೆ ಬಗ್ಗೆ ಇನ್ನೂ ಮಾಹಿತಿ ಇಲ್ಲ. ಪ್ರಸಕ್ತ ವರ್ಷ ಪಿಯುಸಿ ಪಾಸಾದವರೆಲ್ಲ ಸಿಇಟಿ ಬರೆಯಬಹುದು. ನ್ಯಾಯಾಲಯ ನೀಡಿರುವ ಆದೇಶದ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮತ್ತು ಸಚಿವರ ಜತೆ ಚರ್ಚೆ ನಡೆಸಲಾಗುವುದು" ಎಂದು ಡಾ. ಅಶ್ವಥ್ ನಾರಾಯಣ ಅವರು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ.

  English summary
  The idea to make CET performance as the criteria for admission to B.Sc. courses has been dropped, DyCM& Higher education minister, Dr.C.N.Ashwatha Narayana, stated on Tuesday.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X