Nandini Curd - Milk Price: "ನಾವು ಕಾಫಿ ಕುಡಿಯೋರು ಸಾರ್, ಎಣ್ಣೆ ಹೊಡಿಯೋರಲ್ಲ'... ಮೊಸರು ಬೆಲೆ ಇಳಿಕೆ ಮಾಡಿದ ಸಿಎಂ
ಕರ್ನಾಟಕದಲ್ಲಿ ಹಾಲು ಮತ್ತು ಮೊಸರು ಸೇರಿದಂತೆ ವಿವಿಧ ಹಾಲಿನ ಉತ್ಪನ್ನಗಳ ಬೆಲೆಯು ಹೆಚ್ಚಳವಾಗಿದ್ದು, ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಇದೀಗ ಮೊಸರು ಬೆಲೆ ಕಡಿಮೆ ಮಾಡುವುದಾಗಿ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ. ಆದರೆ, ಕನ್ನಡಿಗರ ಆಕ್ರೋಶ ಈ ವಿಚಾರದಲ್ಲಿ ಕಡಿಮೆ ಆಗಿಲ್ಲ, ಬೆಲೆ ಏರಿಕೆ ಹಾಗೂ ಮೊಸರು ಬೆಲೆ ಇಳಿಸುವ ಬಗ್ಗೆ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಳಿದ್ದೇನು ಹಾಗೂ ಇದಕ್ಕೆ ನೆಟ್ಟಿಗರು ಹೇಗೆ ಪ್ರತಿಕ್ರಿಯೆ ನೀಡಿದ್ದಾರೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ಮೊಸರಿನ ಬೆಲೆ ಕಡಿಮೆ ಮಾಡಲು ಸೂಚನೆ ನೀಡಿರುವುದಾಗಿ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ತಿಳಿಸಿದ್ದಾರೆ. ಕೆಎಂಎಫ್ ಪದಾಧಿಕಾರಿಗಳೊಂದಿಗೆ ನಡೆದ ಚರ್ಚೆ ನಡೆಸಿದ ಸಂದರ್ಭದಲ್ಲಿ, ಗ್ರಾಹಕರ ಹಿತದೃಷ್ಟಿಯಿಂದ ಮೊಸರಿನ ಬೆಲೆಯನ್ನು ಕಡಿಮೆ ಮಾಡುವಂತೆ ಸೂಚನೆ ನೀಡಿದ್ದೇನೆ. ಸಾಮಾನ್ಯ ಜನರ ಮೇಲೆ ಬೆಲೆ ಏರಿಕೆಯ ಹೊರೆ ಬೀಳಬಾರದು. ಜನಸಾಮಾನ್ಯರಿಗೆ ಅಗತ್ಯ ವಸ್ತುಗಳು ಕೈಗೆಟುಕುವ ದರದಲ್ಲಿ ದೊರೆಯುವುದು ನಮ್ಮ ಆದ್ಯತೆ. ಹೈನುಗಾರರ ಹಿತಾಸಕ್ತಿ ಕಾಪಾಡುವ ಜೊತೆಗೆ ಗ್ರಾಹಕರಿಗೂ ಹೊರೆಯಾಗದಂತೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ. ಸಾರ್ವಜನಿಕರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಬದ್ಧವಾಗಿದೆ ಎಂದೂ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.

"ನಾವು ಕಾಫಿ ಕುಡಿಯೋರು ಸಾರ್, ಎಣ್ಣೆ ಹೊಡಿಯೋರಲ್ಲ'...
ಒಳ್ಳೆಯ ಐಡಿಯಾ .. 14 ರೂಪಾಯಿ ಹೆಚ್ಚಳ ಮಾಡಿ 4 ರೂಪಾಯಿ ಇಳಿಸೋದು. ಈಗ ಎಲ್ಲ ರೇಟ್ ಜಾಸ್ತಿ ಮಾಡಿ ಆಮೇಲೆ ಚುನಾವಣೆಯಲ್ಲಿ ವೋಟ್ ಚೋರಿ ಅಂತ ಹೇಳೋದು ಕಾಂಗ್ರೆಸ್ ಮುಂದಿನ ಸಲ ಧೂಳಿಪಟವಾಗಲಿದೆ ಎಂದು ಕನ್ನಡಿಗರು ಆಕ್ರೋಶ ಹೊರ ಹಾಕಿದ್ದಾರೆ. ಹೋಟೆಲ್‌ಗಳಿಗೂ ಒಂದು ಸುತ್ತೋಲೆ ಹೊರಡಿಸಿ, ನೀವು 8 ರೂಪಾಯಿ 1ಲೀಟರ್‌ಗೆ ಹಾಲಿನ ಬೆಲೆ ಏರಿಸಿದ್ರೆ, ಹೋಟೆಲ್ ಅವರು ಒಂದು ಲೋಟ ಕಾಫಿ ಬೆಲೆ 5 ರೂಪಾಯಿ ಜಾಸ್ತಿ ಮಾಡಿದ್ದಾರೆ. "ನಾವು ಕಾಫಿ ಕುಡಿಯೋರು ಸಾರ್, ಎಣ್ಣೆ ಹೊಡಿಯೋರಲ್ಲ'.. ಅಂತ ನೆಟ್ಟಿಗರು ರಿಯಾಕ್ಟ್ ಮಾಡಿದ್ದಾರೆ.
ಇದು ಮೋಸದ ಬೆಲೆ ಏರಿಕೆ, ಹಾಲಿಗೆ 8 ರೂಪಾಯಿ ಜಾಸ್ತಿ ಅಂತ ಹೇಳಿ 14 ರೂಪಾಯಿ ಜಾಸ್ತಿ ಮಾಡಿ ಕೃಷಿಕರಿಗೆ ಕೇವಲ 7 ರೂಪಾಯಿ ಕೊಟ್ಟಿದ್ದಾರೆ ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರು ಹಾಲಿನ ಸಂಪೂರ್ಣ ಹೆಚ್ಚಿನ ಬೆಲೆ ಗ್ರಹಕರಿಂದ ತೊಗೊಂಡಮೇಲೆ, ಮೊಸರಿಗೆ ಯಾಕೆ ಹೆಚ್ಚು ಮಾಡಬೇಕು? ಒಂದು ಬಾರಿ ಬಿಜೆಪಿಗೆ 28ರಲ್ಲಿ ಬಹುಮತ ಬಂದಿದ್ದೆ ಆದರೇ ಮತ್ತೆ ಕರ್ನಾಟಕದಲ್ಲಿ ಮರೆತು ಬಿಡಿ ಅಂತಲೂ ಕೆಲವರು ಹೇಳಿದ್ದಾರೆ. ಹಾಲಿನ ದರ ಇಳಿಕೆಯಾಗದಿದ್ದರೆ ಮುಂದಿನ ದಿನಗಳಲ್ಲಿ ಜನರೇ ಬುದ್ಧಿ ಕಲಿಸಲಿದ್ದಾರೆ ಎಂದೂ ಕೆಲವರು ಹೇಳಿದ್ದಾರೆ.
ಬೆಲೆ ಏರಿಕೆ ಮಾಡಿದ ಸಂದರ್ಭದಲ್ಲಿ ಡಿ.ಕೆ ಶಿವಕುಮಾರ್ ಹೇಳಿದ್ದೇನು ?
ಇನ್ನು ಹಾಲು ಮತ್ತು ಮೊಸರು ಸೇರಿದಂತೆ ವಿವಿಧ ಉತ್ಪನ್ನಗಳ ಬೆಲೆ ಏರಿಕೆ ಮಾಡುವುದಕ್ಕಿಂತ ಮುಂಚೆ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು, ನಮ್ಮ ಹೈನುಗಾರರ ಜೀವನೋಪಾಯವನ್ನು ರಕ್ಷಿಸುವ ಹಾಗೂ ಗ್ರಾಹಕರಿಗೆ 'ನಂದಿನಿ' ಉತ್ಪನ್ನಗಳನ್ನು ಕೈಗೆಟುಕುವ ದರದಲ್ಲಿ ಒದಗಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು ಸದಾ ಬದ್ಧವಾಗಿದೆ.
ನವೆಂಬರ್ 1ರಿಂದ ಅನ್ವಯವಾಗುವಂತೆ ಪ್ರತಿ ಲೀಟರ್ ಹಾಲಿನ ದರವನ್ನು ₹8ರಷ್ಟು ಹೆಚ್ಚಿಸಲಾಗಿದೆ. ಜಾನುವಾರುಗಳ ಮೇವು ಮತ್ತು ಹಿಂಡಿ ದರದಲ್ಲಿನ ಹೆಚ್ಚಳ, ಇಂಧನ ಹಾಗೂ ಪ್ಯಾಕೇಜಿಂಗ್ ವೆಚ್ಚದ ಏರಿಕೆ ಮತ್ತು ಬರಗಾಲದ ಪರಿಣಾಮವಾಗಿ ದೈನಂದಿನ ಹಾಲಿನ ಸಂಗ್ರಹಣೆಯಲ್ಲಿ ಉಂಟಾಗಿರುವ ಕುಸಿತ ಈ ಅನಿವಾರ್ಯ ಪರಿಷ್ಕರಣೆಗೆ ಪ್ರಮುಖ ಕಾರಣಗಳಾಗಿವೆ ಎಂದಿದ್ದರು. ಅಲ್ಲದೆ ಈ ₹8ರ ಹೆಚ್ಚಳದಲ್ಲಿ ₹7 ನೇರವಾಗಿ ರೈತರಿಗೆ ತಲುಪಲಿದ್ದು, ಪ್ರತಿ ಲೀಟರ್‌ಗೆ ₹35ರಿಂದ ₹42ಕ್ಕೆ ಏರಿಕೆಯಾಗಲಿದೆ. ಸರ್ಕಾರ ನೀಡುವ ₹5 ಪ್ರೋತ್ಸಾಹಧನ ಸೇರಿ ರೈತರಿಗೆ ಪ್ರತಿ ಲೀಟರ್ ಹಾಲಿಗೆ ₹47 ಕೈಸೇರಲಿದೆ.
ಇದರಿಂದ ದಿನಕ್ಕೆ 10 ಲೀಟರ್ ಹಾಲು ಪೂರೈಸುವ ರೈತನಿಗೆ ತಿಂಗಳಿಗೆ ಸುಮಾರು ₹2,100 ಹೆಚ್ಚುವರಿ ಆದಾಯ ದೊರೆಯಲಿದೆ. ಅಲ್ಲದೆ, ಈ ದರ ಪರಿಷ್ಕರಣೆಯಿಂದ ರಾಜ್ಯದ ಗ್ರಾಮೀಣ ಹೈನುಗಾರರ ಕುಟುಂಬಗಳಿಗೆ ವಾರ್ಷಿಕ ಅಂದಾಜು ₹1,850 ಕೋಟಿಯಿಂದ ₹2,100 ಕೋಟಿವರೆಗೆ ಹೆಚ್ಚುವರಿ ಆದಾಯ ದೊರೆಯುವ ನಿರೀಕ್ಷೆಯಿದೆ. ಕರ್ನಾಟಕದಲ್ಲಿ ಒಟ್ಟು 28.84 ಲಕ್ಷ ಹೈನುಗಾರರಿದ್ದು, ಕೆಎಂಎಫ್ ಸದಸ್ಯರಲ್ಲಿ ಶೇ.67ರಷ್ಟು ಸಣ್ಣ ಮತ್ತು ಅತಿಸಣ್ಣ ರೈತರಾಗಿದ್ದಾರೆ. ಅವರ ಪರಿಶ್ರಮಕ್ಕೆ ನ್ಯಾಯಯುತ ಪ್ರತಿಫಲ ಒದಗಿಸುವ ನಿಟ್ಟಿನಲ್ಲಿ ಈ ನಿರ್ಧಾರ ಮಹತ್ವದ ಹೆಜ್ಜೆಯಾಗಿದೆ.
ದರ ಪರಿಷ್ಕರಣೆಯ ನಂತರವೂ ನಂದಿನಿ ಟೋನ್ಡ್ ಹಾಲಿನ ದರ ಪ್ರತಿ ಲೀಟರ್‌ಗೆ ₹54 ಇದ್ದು, ದೇಶದ ಹಲವು ಪ್ರಮುಖ ಡೈರಿ ಬ್ರ್ಯಾಂಡ್‌ಗಳಿಗಿಂತ ಕಡಿಮೆಯಿದೆ. ಅದೇ ರೀತಿ ನಂದಿನಿ ಶುಭಂ (4.5% ಕೊಬ್ಬಿನಾಂಶ) ಹಾಲಿನ ದರ ₹60 ಇದ್ದು, ಇತರೆ ಹತ್ತು ರಾಜ್ಯಗಳ ಸರಾಸರಿ ದರವಾದ ₹62.80ಕ್ಕಿಂತ ಕಡಿಮೆಯೇ ಇದೆ. ರೈತರ ಹಿತದ ರಕ್ಷಣೆ ಮತ್ತು ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಗುಣಮಟ್ಟದ ಹಾಲಿನ ಪೂರೈಕೆ, ಇವೆರಡಕ್ಕೂ ನಮ್ಮ ಸರ್ಕಾರ ಬದ್ಧವಾಗಿದೆ ಎಂದಿದ್ದರು. ಆದರೆ, ಹಾಲಿನ ದರವು 8 ರೂಪಾಯಿ ಹೆಚ್ಚಳಕ್ಕೆ ಸೀಮಿತವಾಗಿಲ್ಲ, ಪ್ರಮುಖ ನಂದಿನಿ ಹಾಲಿನ ಪ್ಯಾಕೇಟ್ ಮೇಲೆ 12 ರೂಪಾಯಿಯ ವರೆಗೆ ಹೆಚ್ಚಳವಾಗಿದೆ.


Click it and Unblock the Notifications
