ನೀಟ್ ವಿಳಂಬ: ಕೋರ್ಸ್ ಬಿಟ್ಟ ವಿದ್ಯಾರ್ಥಿಗಳಿಗೆ ಶುಲ್ಕ ವಾಪಸ್
ಬೆಂಗಳೂರು: ನೀಟ್ ಪರೀಕ್ಷೆಯಲ್ಲಿ ಆಗಿರುವ ವಿಳಂಬದಿಂದಾಗಿ, ಈಗಾಗಲೇ ಎಂಜಿನಿಯರಿಂಗ್ ಸೀಟು ಪಡೆದುಕೊಂಡು ಈಗ ವೈದ್ಯಕೀಯ ಕೋರ್ಸಿಗೆ ಪ್ರವೇಶ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ವಿಧಿಸುತ್ತಿದ್ದ ದಂಡ ಶುಲ್ಕವನ್ನು ರದ್ದುಪಡಿಸಲಾಗಿದೆ.
ಹಾಗೆಯೇ ಈ ವರ್ಷ ವಿದ್ಯಾರ್ಥಿಗಳಿಂದ ಸಂಗ್ರಹ ಮಾಡಿದ್ದ ಶುಲ್ಕವನ್ನೂ ಹಿಂದಿರುಗಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಸೂಚಿಸಲಾಗಿದೆ. ಈ ವಿನಾಯಿತಿ ಈ ವರ್ಷಕ್ಕೆ ಮಾತ್ರ ಅನ್ವಯಿಸುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದ್ದಾರೆ.
'ಸಾಮಾನ್ಯವಾಗಿ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಸೀಟು ಹಂಚಿಕೆ ಒಟ್ಟಿಗೇ ನಡೆಯುತ್ತಿತ್ತು. ಆದರೆ ಈ ವರ್ಷ ನೀಟ್ ಪರೀಕ್ಷಾ ವಿಚಾರ ಕೋರ್ಟ್ ಮೆಟ್ಟಿಲೇರಿದ್ದರಿಂದ ವೈದ್ಯಕೀಯ ಸೀಟು ಹಂಚಿಕೆ ಪ್ರಕ್ರಿಯೆ ವಿಳಂಬವಾಗಿದೆ. ಹೀಗಾಗಿ, ಅನಿಶ್ಚಿತ ಪರಿಸ್ಥಿತಿ ತಲೆದೋರಿದೆ. ಇದರಿಂದಾಗಿ, ಈಗಾಗಲೇ ಎಂಜಿನಿಯರಿಂಗ್ ಪ್ರವೇಶಾತಿ ಪಡೆದಿರುವವರಿಗೆ ಈಗ ವೈದ್ಯಕೀಯ ಸೀಟು ಸಿಕ್ಕಿದ್ದರೆ, ಆಸಕ್ತರು ಅಲ್ಲಿಗೆ ಹೋಗಬಹುದು. ಅದಕ್ಕೆ ಯಾವುದೇ ದಂಡ ವಸೂಲಿ ಮಾಡುವುದಿಲ್ಲ. ಹಾಗೆಯೇ ಈ ವರ್ಷ ಕಟ್ಟಿದ್ದ ಶುಲ್ಕವನ್ನೂ ಮುಟ್ಟುಗೋಲು ಹಾಕಿಕೊಳ್ಳುವುದಿಲ್ಲ. ಬದಲಿಗೆ ವಿದ್ಯಾರ್ಥಿಗಳಿಗೆ ಹಿಂದಿರುಗಿಸಲಾಗುವುದು ಎಂದರು.

ಪ್ರವೇಶ ಪಡೆದ ನಂತರ ಸೀಟು ಬಿಟ್ಟು ಹೋಗುವವರಿಗೆ ಶುಲ್ಕದ ಐದು ಪಟ್ಟು ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶ ಇದೆ. ಆದರೆ ಈ ಬಾರಿ ಇದಕ್ಕೆ ವಿನಾಯಿತಿ ನೀಡಲಾಗಿದೆ ಎಂದರು.
Koo Appಈ ಬಾರಿಯ NEET ಪರೀಕ್ಷೆ ವಿಳಂಬವಾದ ಕಾರಣ ಈಗಾಗಲೇ ಎಂಜಿನಿಯರಿಂಗ್ ಸೀಟು ಪಡೆದು ಈಗ ವೈದ್ಯಕೀಯ ಕೋರ್ಸ್ಗೆ ಪ್ರವೇಶ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ವಿಧಿಸುತ್ತಿದ್ದ ದಂಡ ಶುಲ್ಕ ರದ್ದುಪಡಿಸಲಾಗಿದೆ. ವಿದ್ಯಾರ್ಥಿಗಳಿಂದ ಸಂಗ್ರಹಿಸಿದ್ದ ಶುಲ್ಕವನ್ನೂ ಹಿಂದಿರುಗಿಸಲು ಸೂಚಿಸಲಾಗಿದ್ದು ಈ ವಿನಾಯಿತಿ ಈ ವರ್ಷಕ್ಕೆ ಮಾತ್ರ ಅನ್ವಯವಾಗುತ್ತದೆ. - Dr. Ashwathnarayan C. N. | ಡಾ. ಅಶ್ವಥ್ ನಾರಾಯಣ್ ಸಿ.ಎನ್. (@drashwathnarayan) 11 Feb 2022
ಪದವಿ ಸೆಮಿಸ್ಟರ್ ಪರೀಕ್ಷೆ: ಒಂದು ತಿಂಗಳು ಮುಂದೂಡಲು ಮನವಿ
ಕೊರೋನಾ ಮತ್ತು ಓಮೈಕ್ರಾನ್ ಸೋಂಕು ಹೆಚ್ಚಳ ಹಾಗೂ ಅತಿಥಿ ಉಪನ್ಯಾಸಕರ ಮುಷ್ಕರದಿಂದಾಗಿ ಬೋಧನಾ ಕಾರ್ಯ ಅಪೂರ್ಣವಾಗಿರುವ ಹಿನ್ನೆಲೆಯಲ್ಲಿ ಪದವಿ ಕೋರ್ಸುಗಳ ಸೆಮಿಸ್ಟರ್ ಪರೀಕ್ಷೆಯನ್ನು ಒಂದು ತಿಂಗಳಾದರೂ ಮುಂದೂಡುವಂತೆ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್ ಅವರು ಉನ್ನತ ಶಿಕ್ಷಣ ಇಲಾಖೆಯ ಹೆಚ್ಚವರಿ ಮುಖ್ಯ ಕಾರ್ಯದರ್ಶಿಯನ್ನು ಕೋರಿದ್ದಾರೆ.
ಈ ಬಗ್ಗೆ ಗುರುವಾರ ಪತ್ರ ಬರೆದಿರುವ ಅವರು, 'ಕೆಲವು ವಿ.ವಿ.ಗಳು ಈಗಾಗಲೇ ಸೆಮಿಸ್ಟರ್ ಪರೀಕ್ಷೆಯ ವೇಳಾಪಟ್ಟಿ ಪ್ರಕಟಿಸಿವೆ. ಆದರೆ, ಬೋಧನಾ ಕಾರ್ಯ ಇನ್ನೂ ಮುಗಿದಿಲ್ಲ. ಹೀಗಾಗಿ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪರೀಕ್ಷೆಯನ್ನು ಮುಂದೂಡುವಂತೆ ರಾಜ್ಯದ ಎಲ್ಲ ವಿ.ವಿ.ಗಳಿಗೂ ನಿರ್ದೇಶಿಸಬೇಕು' ಎಂದು ಅವರು ಕೋರಿದ್ದಾರೆ.












Click it and Unblock the Notifications