ಮಳೆಗಾಲ ಮುಗಿಯುವ ಮುನ್ನವೇ ಕುದಿಯುತ್ತಿರುವ ಕರುನಾಡು: ಸೆಪ್ಟೆಂಬರ್ 8ರ ಹವಾಮಾನ ವರದಿಯಲ್ಲಿ ಏನಿದೆ?
ರಾಜ್ಯದಲ್ಲಿ ನೈರುತ್ಯ ಮುಂಗಾರು ಮಳೆಯ ಅಬ್ಬರ ಸಂಪೂರ್ಣವಾಗಿ ಕಣ್ಮರೆಯಾದಂತಾಗಿದೆ. ಮಳೆಗಾಲ ಮುಗಿಯಲು ಇನ್ನೂ ಸುಮಾರು ದಿನ ಬಾಕಿ ಇರುವಾಗಲೇ, ರಾಜ್ಯಾದ್ಯಂತ ಬೇಸಿಗೆಯನ್ನ ನೆನಪಿಸುವಂತಹ ಬಿಸಿಲಿನ ವಾತಾವರಣ ನಿರ್ಮಾಣವಾಗಿದೆ. ಇಂದಿನ (ಸೆಪ್ಟೆಂಬರ್ 08) ಕರ್ನಾಟಕ ಹವಾಮಾನ ವರದಿ ಗಮನಿಸಿದರೆ, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಮತ್ತು ಮೋಡಗಳು ಕಡಿಮೆಯಾಗಿ ಒಣಹವೆ ಬೀಸುತ್ತಿರುವುದು ಸ್ಪಷ್ಟವಾಗಿದೆ. ಇದರಿಂದಾಗಿ ವಾತಾವರಣದಲ್ಲಿ ತಾಪಮಾನ ದಿಢೀರ್ ಏರಿಕೆಯಾಗಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಸೆಪ್ಟೆಂಬರ್ ತಿಂಗಳಲ್ಲಿ ತಂಪಾದ ವಾತಾವರಣ ಇರುತ್ತದೆ. ಆದರೆ, ಈ ಬಾರಿ ಹವಾಮಾನ ಸಂಪೂರ್ಣವಾಗಿ ಬದಲಾಗಿದೆ. ಭಾನುವಾರ ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 31.7 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಕೇಂದ್ರ ಹವಾಮಾನ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ , ಇದು ಕಳೆದ ಮೂರು ವರ್ಷಗಳ ಬಳಿಕ ಸೆಪ್ಟೆಂಬರ್ ತಿಂಗಳಲ್ಲಿ ದಾಖಲಾದ ಅತಿ ಹೆಚ್ಚು ತಾಪಮಾನವಾಗಿದೆ.

2023ರಲ್ಲಿ ಸೆಪ್ಟೆಂಬರ್‌ನಲ್ಲಿ ಗರಿಷ್ಠ 32.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದನ್ನು ಹೊರತುಪಡಿಸಿದರೆ, ನಂತರದ ವರ್ಷಗಳಲ್ಲಿ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ದಾಟಿರಲಿಲ್ಲ. ಇನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿಯೂ ಬಿಸಿಲಿನ ತೀವ್ರತೆ ಹೆಚ್ಚಾಗಿದ್ದು, ಗರಿಷ್ಠ 33.1 ಡಿಗ್ರಿ ಸೆಲ್ಸಿಯಸ್ ತಾಪಮಾನ ವರದಿಯಾಗಿದೆ.
ರಾಜ್ಯದ ಇತರೆಡೆ ಮುಂಗಾರು ಮಳೆ ಕ್ಷೀಣ
ರಾಜ್ಯದ ಕರಾವಳಿ, ಮಲೆನಾಡು ಹಾಗೂ ಉತ್ತರ ಕರ್ನಾಟಕದ ಭಾಗಗಳಲ್ಲಿಯೂ ಮುಂಗಾರು ಮಳೆ ಸಂಪೂರ್ಣವಾಗಿ ದುರ್ಬಲಗೊಂಡಿದೆ. ಆಗಸ್ಟ್ ತಿಂಗಳಾಂತ್ಯದಲ್ಲಿ ಸುರಿದ ಸಾಧಾರಣ ಮಳೆಯಿಂದಾಗಿ ರೈತರು ಕೃಷಿ ಚಟುವಟಿಕೆಗಳನ್ನ ಚುರುಕುಗೊಳಿಸಿದ್ದರು. ಆದರೆ, ಇದೀಗ ಸೆಪ್ಟೆಂಬರ್ ಮೊದಲ ವಾರದಲ್ಲಿಯೇ ಮಳೆ ಕೈಕೊಟ್ಟಿದ್ದು, ತಾಪಮಾನದಲ್ಲಿ ಭಾರೀ ಏರಿಕೆಯಾಗುತ್ತಿದೆ.
ಉತ್ತರ ಒಳನಾಡಿನ ಜಿಲ್ಲೆಗಳಾದ ರಾಯಚೂರು, ಕಲಬುರಗಿ, ವಿಜಯಪುರ ಮತ್ತು ಬಳ್ಳಾರಿಯಲ್ಲಿ ಬಿಸಿಲಿನ ತಾಪ 33 ರಿಂದ 34 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿ ದಾಖಲಾಗುತ್ತಿದೆ. ಮಳೆಯ ಕೊರತೆ ಇಂದಾಗಿ ಬೆಳೆಗಳಿಗೆ ಹಾನಿಯಾಗುವ ಆತಂಕ ರೈತಾಪಿ ವರ್ಗದಲ್ಲಿ ಮನೆಮಾಡಿದೆ.
ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಮೈಸೂರು, ಮಂಡ್ಯ, ಹಾಸನ ಮತ್ತು ತುಮಕೂರು ಭಾಗಗಳಲ್ಲಿಯೂ ಇದೇ ರೀತಿಯ ವಾತಾವರಣವಿದೆ. ಬೆಳಗಿನ ಜಾವ ಕೊಂಚ ಚಳಿಯ ವಾತಾವರಣ ಇದ್ದರೂ, ಮಧ್ಯಾಹ್ನದ ವೇಳೆಗೆ ಬಿಸಿಲಿನ ಝಳ ಹೆಚ್ಚಾಗುತ್ತಿದೆ. ಮಳೆಗಾಲದ ಅವಧಿಯಲ್ಲಿ ಸಾಮಾನ್ಯವಾಗಿ ದಟ್ಟ ಮೋಡಗಳು ಸೂರ್ಯನ ಕಿರಣಗಳನ್ನ ತಡೆಯುತ್ತವೆ. ಆದರೆ, ಪ್ರಸ್ತುತ ಆಕಾಶ ಸ್ವಚ್ಛವಾದ ನೇರವಾದ ಸೂರ್ಯನ ಕಿರಣಗಳು ಭೂಮಿಗೆ ಬೀಳುತ್ತಿದ್ದು, ಇದು ಉಷ್ಣಾಂಶ ಏರಿಕೆಗೆ ಪ್ರಮುಖ ಕಾರಣವಾಗಿದೆ.
ಹವಾಮಾನ ಇಲಾಖೆಯ ಮುಂದಿನ ದಿನಗಳ ಮುನ್ಸೂಚನೆ
ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಸೆಪ್ಟೆಂಬರ್ 10ರವರೆಗೆ ರಾಜ್ಯದ ಬಹುತೇಕ ಕಡೆ ಇದೇ ರೀತಿಯ ಒಣಹವೆ ಮುಂದುವರಿಯಲಿದೆ. ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾಗಶಃ ಮೋಡಕವಿದ ವಾತಾವರಣ ಇರಲಿದೆಯಾದರೂ, ಮಳೆಯಾಗುವ ಯಾವುದೇ ಸಾಧ್ಯತೆಗಳಿಲ್ಲ.
ಮುಂದಿನ ಎರಡು ದಿನಗಳ ಕಾಲ ನಗರದ ತಾಪಮಾನ ಗರಿಷ್ಠ 32 ಡಿಗ್ರಿ ಸೆಲ್ಸಿಯಸ್‌ವರೆಗೆ ತಲುಪುವ ನಿರೀಕ್ಷೆಯಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡದ ಒಂದೆರಡು ಕಡೆಗಳಲ್ಲಿ ಮಾತ್ರ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
ಮುಂಬರುವ ದಿನಗಳಲ್ಲಿ ಬಂಗಾಳಕೊಲ್ಲಿಯಲ್ಲಿ ಹೊಸದಾಗಿ ಯಾವುದಾದರೂ ವಾಯುಭಾರ ಕುಸಿತ ಉಂಟಾದರೆ ಮಾತ್ರ ಮಳೆಯ ನಿರೀಕ್ಷೆ ಮಾಡಬಹುದು. ಅಲ್ಲಿಯವರೆಗೆ ರಾಜ್ಯದ ಜನತೆ ಈ ದಿಢೀರ್ ಬೆಚ್ಚಗಿನ ವಾತಾವರಣಕ್ಕೆ ಹೊಂದಿಕೊಳ್ಳಬೇಕಾದ ಅನಿವಾರ್ಯತೆ ಇದೆ.


Click it and Unblock the Notifications
