"ಸ್ವಾಭಿಮಾನ, ಧೈರ್ಯ ಇದ್ದಿದ್ರೆ ಡಿ.ಕೆ.ಶಿವಕುಮಾರ್ ಕ್ಷಮೆ ಕೇಳಬಾರದಿತ್ತು"
ಕಾಂಗ್ರೆಸ್ ಪಕ್ಷದ ಅಧ್ಯಕ್ಷರೂ ಆದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ವಿಧಾನಸಭೆಯಲ್ಲಿ ಆರ್‌ಎಸ್‌ಎಸ್ ಗೀತೆ ಹಾಡಿದ ವಿಚಾರಕ್ಕೆ ಸ್ವಪಕ್ಷದಿಂದಲೇ ಭಾರಿ ವಿರೋಧ ವ್ಯಕ್ತವಾಗಿದೆ. ಈ ಹಿನ್ನೆಲೆ ಡಿಕೆ ಶಿವಕುಮಾರ್ ಅವರು ಕ್ಷಮೆಯೂ ಕೇಳಿ ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ವಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ. ಡಿ.ಕೆ.ಶಿವಕುಮಾರ್ ಅವರಿಗೆ ಕಿಂಚಿತ್ತಾದರೂ ಸ್ವಾಭಿಮಾನ ಇದ್ದಿದ್ದರೆ, ಕಿಂಚಿತ್ತಾದರೂ ಧೈರ್ಯ ಇದ್ದಿದ್ದರೆ, ಕ್ಷಮೆ ಕೇಳಬಾರದಿತ್ತು. ಕೇಳಲೇಬೇಕು ಎನ್ನುವ ಒತ್ತಡ ಇದ್ದಿದ್ದರೆ ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು ಎಂದಿದ್ದಾರೆ.
"ನಮಸ್ತೇ ಸದಾ ವತ್ಸಲೇ ಮಾತೃಭೂಮೇ" ಎಂದು ತಾಯಿ ಭಾರತಾಂಬೆಗೆ ನಮಸ್ಕರಿಸಿದ್ದಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಕ್ಷಮೆ ಕೇಳಬೇಕು ಎನ್ನುವುದಾದರೆ, ಕಾಂಗ್ರೆಸ್ ಪಕ್ಷದ ಪ್ರಕಾರ ಭಾರತೀಯರು ಇನ್ಯಾರಿಗೆ ಜಯಕಾರ ಹಾಕಬೇಕು? ಇಟಲಿ ಮಾತೆಗಾ? ಇಟಲಿಯಿಂದ ಬಂದ ಮೇಡಂಗಾ? ಎಂದು ಗೇಲಿ ಮಾಡಿದ್ದಾರೆ. ನಮ್ಮನ್ನೆಲ್ಲ ವಾತ್ಸಲ್ಯದಿಂದ ಸಾಕುತ್ತಿರುವ ಮಾತೃ ಸಮಾನಳಾದ ತಾಯಿ ಭಾರತಾಂಬೆಗೆ ನನ್ನ ನಮಸ್ಕಾರಗಳು ಎನ್ನುವುದು ಆರ್‌ಸ್ಎಸ್ ಪ್ರಾರ್ಥನಾ ಗೀತೆಯ ಮೊದಲನೆಯ ಸಾಲಿನ ಸಾರಾಂಶ. ಜನ್ಮ ಕೊಟ್ಟ ಮಾತೃಭೂಮಿ ಬಗ್ಗೆ ಈ ಭಾವನೆ ಇಟ್ಟುಕೊಳ್ಳುವುದು ತಪ್ಪೇ? ತಾಯ್ನೆಲಕ್ಕೆ ನಮಸ್ಕಾರ ಮಾಡುವುದೇ ತಪ್ಪೇ? ಎಂದು ಅಶೋಕ್ ಕೇಳಿದ್ದಾರೆ.

ಒಂದೆಡೆ ವಿಧಾನಸೌಧದಲ್ಲಿ "ಪಾಕಿಸ್ತಾನ ಜಿಂದಾಬಾದ್" ಎಂದು ಘೋಷಣೆ ಕೂಗಿದವರನ್ನ ಸಮರ್ಥನೆ ಮಾಡಿಕೊಳ್ಳುವ ಕಾಂಗ್ರೆಸ್ ಪಕ್ಷವು, ಮತ್ತೊಂದು ಕಡೆ ತಾಯಿ ಭಾರತಾಂಬೆಗೆ ನಮಸ್ಕರಿಸುವವರನ್ನ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತದೆ. ಇದನ್ನು ದೇಶದ್ರೋಹಿ ಮನಸ್ಥಿತಿ ಅನ್ನದೇ ಇನ್ನೇನೆನ್ನಲು ಸಾಧ್ಯ? ಇಷ್ಟಕ್ಕೂ ಡಿ.ಕೆ.ಶಿವಕುಮಾರ್ ಅವರು ಕ್ಷಮೆ ಕೇಳಬೇಕು ಎಂದು ಆದೇಶ ನೀಡಿದ್ದು ಯಾರು? ಸೋನಿಯಾ ಗಾಂಧಿ ಅವರಾ? ರಾಹುಲ್ ಗಾಂಧಿ ಅವರಾ? ಕೆ.ಸಿ.ವೇಣುಗೋಪಾಲ್ ಅವರಾ? ಸುರ್ಜೆವಾಲಾ ಅವರಾ? ಅಥವಾ ಬಿಕೆ ಹರಿಪ್ರಸಾದ್ ಹೇಳಿದ್ದಕ್ಕೆ ಕ್ಷಮೆ ಕೇಳಿದರಾ? ಎಂದು ಪ್ರಶ್ನೆಗಳನ್ನ ಮುಂದಿಟ್ಟಿದ್ದಾರೆ.
ಕಾಂಗ್ರೆಸ್‌ನಲ್ಲಿ ಕುರ್ಚಿಗಾಗಿ ದೇಶಪ್ರೇಮ ಬಿಡಬೇಕು
ಡಿ.ಕೆ.ಶಿವಕುಮಾರ್ ಅವರಿಗೆ ಕಿಂಚಿತ್ತಾದರೂ ಸ್ವಾಭಿಮಾನ ಇದ್ದಿದ್ದರೆ, ಕಿಂಚಿತ್ತಾದರೂ ಧೈರ್ಯ ಇದ್ದಿದ್ದರೆ, ಕ್ಷಮೆ ಕೇಳಬಾರದಿತ್ತು. ಒತ್ತಡ ಇದ್ದಿದ್ದರೆ ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಕೊಡಬೇಕಿತ್ತು. ತನ್ನ ಮಾತೃಭೂಮಿಯನ್ನು ಪ್ರೀತಿಸದವನು ಏನನ್ನೂ ಪ್ರೀತಿಸಲಾರ ಎನ್ನುವ ಮಾತಿದೆ. ಆದರೆ ಕಾಂಗ್ರೆಸ್ ಪಕ್ಷದಲ್ಲಿ "ಕುರ್ಚಿಯ ಮೇಲೆ ಪ್ರೀತಿ ಇದ್ದರೆ ದೇಶಪ್ರೇಮವನ್ನು ಬಿಡಬೇಕು" ಎನ್ನುವ ಪರಿಸ್ಥಿತಿ ಇದೆ. ಅಧಿಕಾರದ ಮೇಲಿನ ವ್ಯಾಮೋಹಕ್ಕೆ, ಜನ್ಮ ಕೊಟ್ಟ ತಾಯಿನೆಲವನ್ನೇ ಬಿಟ್ಟುಕೊಡುವ ಸೋ ಕಾಲ್ಡ್ ನಾಯಕರು ನಾಡಿನ ಮುಖ್ಯಮಂತ್ರಿಗಳಾಗಲು ಹೊರಟಿರುವುದು ನಮ್ಮ ನಾಡಿನ ಸದ್ಯದ ದೊಡ್ಡ ದುರಂತ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ಸಿಗನಾಗಿಯೇ ಸಾಯುತ್ತೇನೆ: ಡಿಕೆಶಿ
ಆರ್‌ಎಸ್‌ಎಸ್ ವಿವಾದದ ಬಗ್ಗೆ ಕ್ಷಮೆ ಕೇಳಿರುವ ಡಿಕೆ ಶಿವಕುಮಾರ್, ವಿಧಾನಸಭೆಯಲ್ಲಿ ಆರ್‌ಎಸ್‌ಎಸ್ ಗೀತೆ ಹಾಡಿರುವ ವಿಷಯವನ್ನ ರಾಜಕೀಯ ಮಾಡುವುದು ಬೇಡ. ನನಗೂ ವಿರೋಧ ಪಕ್ಷದ ಸಿದ್ಧಾಂತದ ಬಗ್ಗೆ ಅರಿವಿದೆ ಎಂಬುದನ್ನು ಪ್ರಸ್ತಾಪಿಸಿದೆ ಹೊರತು, ನಾನು ಆರ್‌ಎಸ್‌ಎಸ್ ಅನ್ನು ಹೊಗಳಲು ಆ ಮಾತು ಹೇಳಿಲ್ಲ. ನಾನು ಹುಟ್ಟು ಕಾಂಗ್ರೆಸ್ಸಿಗ, ನಾನು ಕಾಂಗ್ರೆಸ್ಸಿಗನಾಗಿಯೇ ಸಾಯುತ್ತೇನೆ. ನನ್ನ ಪಕ್ಷನಿಷ್ಠೆಯನ್ನು ಪ್ರಶ್ನಿಸುವವರು ಮೂರ್ಖರು. ಯಾರಿಗೇ ಆಗಲಿ ನನ್ನಿಂದ ನೋವಾಗಿದ್ದರೆ ಕ್ಷಮೆ ಕೇಳಲು ಸಿದ್ಧ ಎಂದು ಹೇಳಿದ್ದಾರೆ.












Click it and Unblock the Notifications