ವಖ್ಫ್ ಬೋರ್ಡ್‌ನಿಂದ 15 ಜಿಲ್ಲೆಗಳ ಮಹಿಳಾ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್
ಕಲಬುರಗಿಯಲ್ಲಿ ನಡೆದ ರಾಜ್ಯ ಸರ್ಕಾರದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಅದರಲ್ಲಿ ಕರ್ನಾಟಕ ವಖ್ಫ್ ಬೋರ್ಡ್ ವತಿಯಿಂದ ಕಾಲೇಜುಗಳನ್ನು ನಿರ್ಮಾಣ ಮಾಡುವ ವಿಷಯವೂ ಪ್ರಧಾನವಾಗಿದೆ. ಕರ್ನಾಟಕದ ಹದಿನೈದು ಜಿಲ್ಲೆಗಳಲ್ಲಿ ಮಹಿಳಾ ಪದವಿ ಪೂರ್ವ ಕಾಲೇಜು ಸ್ಥಾಪನೆಗೆ ಅನುಮೋದನೆ ಸಿಕ್ಕಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಖ್ಫ್ ಸಚಿವ ಜಮೀರ್ ಅಹಮದ್ ಖಾನ್ ಅವರು ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ 47.76 ಕೋಟಿ ರೂ. ವೆಚ್ಚದಲ್ಲಿ 15 ಮಹಿಳಾ ಪದವಿ ಪೂರ್ವ ಕಾಲೇಜು ಸ್ಥಾಪನೆಗೆ ಅನುಮೋದನೆ ದೊರೆತಿದೆ. ಪ್ರತಿ ಕಾಲೇಜಿಗೆ 3.18 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಹೇಳಿದರು.

ಯಾವ ಜಿಲ್ಲೆಗಳಲ್ಲಿ ಮಹಿಳಾ ಕಾಲೇಜು
ವಖ್ಫ್ ಬೋರ್ಡ್‌ನಲ್ಲಿ ಜಮೆ ಆಗಿರುವ ಬಡ್ಡಿ ಮೊತ್ತ 47.76 ಕೋಟಿ ರೂಪಾಯಿಯಲ್ಲಿ ಬಾಗಲಕೋಟೆ, ಚಿತ್ರದುರ್ಗ, ಬೀದರ್, ಬಳ್ಳಾರಿ, ಕೊಪ್ಪಳ, ಮೈಸೂರು, ಬೆಂಗಳೂರು, ಚಿಕ್ಕಬಳ್ಳಾಪುರ, ವಿಜಯ ನಗರ, ಕಲಬುರಗಿ, ಉಡುಪಿ, ವಿಜಯಪುರ, ಕೋಲಾರ, ದಾವಣಗೆರೆ ಹಾಗೂ ಧಾರವಾಡದಲ್ಲಿ ಮಹಿಳಾ ಕಾಲೇಜು ಸ್ಥಾಪನೆ ಮಾಡಲಾಗುವುದು. ಮಹಿಳಾ ಕಾಲೇಜು ಸ್ಥಾಪನೆಯಿಂದ ಸಮುದಾಯದ ಮಕ್ಕಳಿಗೆ ಉನ್ನತ ಶಿಕ್ಷಣಕ್ಕೆ ನೆರವಾಗಲಿದೆ. ಅಲ್ಲದೇ ಅದರೊಂದಿಗೆ ಕರ್ನಾಟಕ ಗೃಹ ಮಂಡಳಿ ವತಿಯಿಂದ 50:50 ಅನುಪಾತದಲ್ಲಿ ಕಲಬುರಗಿಯ ತಾವರೆಗೆರೆ ಯಲ್ಲಿ 80 ಕೋಟಿ ರೂಪಾಯಿ ವೆಚ್ಚದಲ್ಲಿ ಒಟ್ಟು 286.28 ಎಕರೆ ಪೈಕಿ ಮೊದಲ ಹಂತದಲ್ಲಿ 87.34 ಎಕರೆ ಜಮೀನಿನಲ್ಲಿ ಹೊಸ ಬಡಾವಣೆ ನಿರ್ಮಿಸಲು ಸಂಪುಟ ಅನುಮೋದನೆ ನೀಡಿದೆ ಎಂದು ಹೇಳಿದರು.
ಹತ್ತು ವರ್ಷದ ಬಳಿಕ ಸಚಿವ ಸಂಪುಟ ಸಭೆ
ಹತ್ತು ವರ್ಷದ ಬಳಿಕ ಕಲ್ಯಾಣ ಕರ್ನಾಟಕದ ಕಲಬುರಗಿಯಲ್ಲಿ ಮಂಗಳವಾರ ಮತ್ತೆ ಸಚಿವ ಸಂಪುಟ ಸಭೆ ನಡೆಸಲಾಗಿದೆ. ಈ ಹಿಂದೆ ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕದ ಅಭಿವೃದ್ಧಿಯನ್ನು ಕೇಂದ್ರೀಕರಿಸಿ ಮೊದಲ ಬಾರಿಗೆ ಇಲ್ಲಿ ಸಭೆ ನಡೆಸಲಾಗಿತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವ ಸಂಪುಟ ಸಭೆಗೆ ಮುಂಚೆ ಸಂಪುಟ ಸಹೋದ್ಯೋಗಿಗಳ ಜೊತೆಗೆ ತೆಗೆಸಿಕೊಂಡ ಫೋಟೋವನ್ನು ಸಹ ಹಂಚಿಕೊಂಡಿದ್ದಾರೆ.
ಇನ್ನು ಕಲ್ಯಾಣ ಕರ್ನಾಟಕದ ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ ಹಿಂದಿನ ಯುಪಿಎ ಸರ್ಕಾರವು ಸಂವಿಧಾನ ತಿದ್ದುಪಡಿ ಮಾಡಿ, ವಿಶೇಷ ಪ್ರಾತಿನಿಧ್ಯ (371ಜೆ) ಕಲ್ಪಿಸಿದ ನಂತರ ಕಲ್ಯಾಣ ಕರ್ನಾಟಕದಲ್ಲಿ ಅಭಿವೃದ್ಧಿಯ ಹೊಸ ಯುಗ ಆರಂಭವಾಗಿದೆ ಎಂದು ಸಹ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಕಲ್ಯಾಣ ಕರ್ನಾಟಕ ವಿಶೇಷ ಪ್ರಾತಿನಿಧ್ಯದಡಿ ಕಳೆದ ಹತ್ತು ವರ್ಷಗಳಲ್ಲಿ ವೈದ್ಯಕೀಯ, ದಂತ ವೈದ್ಯಕೀಯ, ಇಂಜಿನಿಯರಿಂಗ್, ಪಶು ವೈದ್ಯಕೀಯ ಇನ್ನಿತರೆ ಕೋರ್ಸುಗಳಿಗೆ ಪ್ರಾತಿನಿಧ್ಯ ನೀಡಲಾಗಿದೆ ಎಂದೂ ವಿವರಿಸಿದ್ದಾರೆ.












Click it and Unblock the Notifications