Dks Property: ಕನಕಪುರ ಬಂಡೆ ಡಿ.ಕೆ ಶಿವಕುಮಾರ್ ಹೊಸ ದಾಖಲೆ: ದೇಶದ ನಂ.1 ಶ್ರೀಮಂತ ಸಿಎಂ
ಕರ್ನಾಟಕದ ನೂತನ ಹಾಗೂ 25ನೇ ಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್ ಅವರು ಜೂನ್ 3ರಂದು ಪ್ರಮಾಣ ವಚನ ಸ್ವೀಕರಿಸಿದರು. ಕನಕಪುರ ಬಂಡೆ ಖ್ಯಾತಿಯ ಡಿಕೆಶಿ ಅವರು, 1,413 ಕೋಟಿ ರೂ. ಆಸ್ತಿ ಒಡೆಯ. ಅಪಾರ ಸಂಪತ್ತಿನ ಮೂಲಕ ಉತ್ತರ ಭಾರತದ 10 ರಾಜ್ಯಗಳ ಮುಖ್ಯಮಂತ್ರಿಗಳ ಒಟ್ಟು ಸಂಪತ್ತನ್ನು ಹಿಂದಿಕ್ಕಿದ್ದಾರೆ. ಭಾರತದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿ ಎನ್ನುವ ಖ್ಯಾತಿಗೆ ಡಿ.ಕೆ ಶಿವಕುಮಾರ್ ಪಾತ್ರರಾಗಿದ್ದಾರೆ. ಶಿವಕುಮಾರ್ ಅವರ ಒಟ್ಟು ನಿವ್ವಳ ಆಸ್ತಿ ಮೌಲ್ಯವು 2023ರ ಚುನಾವಣಾ ಅಫಿಡವಿಟ್‌ನಲ್ಲಿ ಕೊನೆಯದಾಗಿ ಘೋಷಿಸಲಾಗಿತ್ತು. ಡಿಕೆಶಿ ಹೊಂದಿರುವ ಕೃಷಿ, ವಸತಿ ಮತ್ತು ವಾಣಿಜ್ಯ - ಭೂಮಿಯ ಮೌಲ್ಯದ ಹೆಚ್ಚಳದಿಂದಾಗಿ ಆಸ್ತಿ ಮೌಲ್ಯ ಹೆಚ್ಚಾಗಿದೆ. ಬೆಂಗಳೂರು ದಕ್ಷಿಣ (ಈ ಹಿಂದಿನ ರಾಮನಗರ) ಜಿಲ್ಲೆಯ ಆಸ್ತಿಯೂ ಸಹ ಸೇರಿದೆ.
ದೇಶದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್
ಇನ್ನು ದೇಶದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಆಗಿದ್ದಾರೆ. ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು 931 ಕೋಟಿ ರೂ. ಒಟ್ಟು ಆಸ್ತಿಯೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ತಮಿಳುನಾಡಿನ ಜೋಸೆಫ್ ವಿಜಯ್ ಅವರು 648 ಕೋಟಿ ರೂ. ಆಸ್ತಿ ಹೊಂದಿದ್ದಾರೆ. ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರ ಬಳಿ 30 ಕೋಟಿ ರೂ. ಆಸ್ತಿ ಇರುವುದಾಗಿ ಘೋಷಿಸಿಕೊಂಡಿದ್ದಾರೆ. ಕೇರಳದ ನೂತನ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರ ಬಳಿ 6.6 ಕೋಟಿ ರೂ. ಆಸ್ತಿ ಇದೆ. ಈ ಮುಖ್ಯಮಂತ್ರಿಗಳು ದಕ್ಷಿಣ ಭಾರತದಲ್ಲಿಯೇ ಶ್ರೀಮಂತ ಮುಖ್ಯಮಂತ್ರಿಯಾಗಿದ್ದಾರೆ. ಉಳಿದ ರಾಜ್ಯದ ಮುಖ್ಯಮಂತ್ರಿಗಳಿಗೆ ಹೋಲಿಕೆ ಮಾಡಿದರೆ, ಕೇರಳದ ಮುಖ್ಯಮಂತ್ರಿ ಬಳಿ ಕಡಿಮೆ ಸಂಪತ್ತು ಇದೆ.

ಕಳೆದ ವರ್ಷ ಮೇ ತಿಂಗಳಲ್ಲಿ, ಕಾಂಗ್ರೆಸ್ ಸರ್ಕಾರವು ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡಿತು. ಉಪಮುಖ್ಯಮಂತ್ರಿಯಾಗಿದ್ದ ಡಿ.ಕೆ ಶಿವಕುಮಾರ್ ಈ ಯೋಜನೆಯನ್ನು ಜಾರಿಗೆ ತಂದರು. ಬೆಂಗಳೂರು ದಕ್ಷಿಣ ಜಿಲ್ಲೆಯ ಕನಕಪುರ ಸೇರಿದಂತೆ ಈ ಪ್ರದೇಶದಲ್ಲಿ ಹೆಸರು ಬದಲಾವಣೆಯ ನಂತರ ಪ್ರಾಪರ್ಟಿ ಬೆಲೆಯು ಭಾರೀ ಹೆಚ್ಚಳವಾಗಿದೆ. ಹೆಸರು ಮರುನಾಮಕರಣದ ನಂತರ ಈ ಕ್ಷೇತ್ರದ ಭೂಮಿಯ ಬೆಲೆಗಳು ಗಮನಾರ್ಹವಾಗಿ ಹೆಚ್ಚಾಗಲಿವೆ ಎಂದು ಡಿ.ಕೆ ಶಿವಕುಮಾರ್ ಅವರು ಈ ಭಾಗದ ಜನರಿಗೆ ಭರವಸೆ ನೀಡಿದ್ದರು.
ಶಿವಕುಮಾರ್ ಅವರು ತಮ್ಮ ಜಿಲ್ಲೆಯಲ್ಲಿ 10.37 ಕೋಟಿ ರೂ. ಮೌಲ್ಯದ 71 ಎಕರೆಗೂ ಹೆಚ್ಚು ಕೃಷಿ ಮತ್ತು ಇತರ ಆಸ್ತಿಗಳನ್ನು ಹೊಂದಿದ್ದಾರೆ ಎಂದು ಅವರ ಅಫಿಡವಿಟ್‌ಗಳಲ್ಲಿ ಉಲ್ಲೇಖಿಸಲಾಗಿದೆ. ಇನ್ನು ಡಿ.ಕೆ ಶಿವಕುಮಾರ್ ಅವರ ಸಹೋದರ, ಬೆಂಗಳೂರು ಗ್ರಾಮಾಂತರದ ಮಾಜಿ ಸಂಸದ ಡಿಕೆ ಸುರೇಶ್, ಜಿಲ್ಲೆಯಲ್ಲಿ 93.97 ಎಕರೆಗೂ ಹೆಚ್ಚು ಕೃಷಿ ಮತ್ತು ಇತರ ಆಸ್ತಿಗಳನ್ನು ಹೊಂದಿದ್ದು 8.35 ಕೋಟಿ ರೂ. ಮೌಲ್ಯದ ಆಸ್ತಿ ಇದೆ ಎಂದು ಘೋಷಿಸಿದ್ದಾರೆ.
1. ಡಿ.ಕೆ ಶಿವಕುಮಾರ್ - ₹1413 ಕೋಟಿ
2. ಚಂದ್ರಬಾಬು ನಾಯ್ಡು - ₹931 ಕೋಟಿ
3. ಜೋಸೆಫ್ ವಿಜಯ್ - ₹648 ಕೋಟಿ
4. ರೇವಂತ್ ರೆಡ್ಡಿ - ₹30 ಕೋಟಿ
5. ವಿ.ಡಿ ಸತೀಶನ್ - ₹6.6 ಕೋಟಿ
ಉತ್ತರ ಭಾರತದ ಮುಖ್ಯಮಂತ್ರಿಗಳು - ಆಸ್ತಿ ವಿವರ
1. ಮೋಹನ್ ಯಾದವ್ - ₹42 ಕೋಟಿ
2. ಹೇಮಂತ್ ಸೊರೇನ್ - ₹25 ಕೋಟಿ
3. ಸಮ್ರಾಟ್ ಚೌಧರಿ - ₹11 ಕೋಟಿ
4. ಸುಖವಿಂದರ್ ಸುಖು - ₹7.81 ಕೋಟಿ
5. ನಾಯಬ್ ಸಿಂಗ್ ಸೈನಿ - ₹5.8 ಕೋಟಿ
6. ರೇಖಾ ಗುಪ್ತಾ - ₹5 ಕೋಟಿ
7. ವಿಷ್ಣು ದೇವ್ ಸಾಯಿ - ₹3.8 ಕೋಟಿ
8. ಪುಷ್ಕರ್ ಸಿಂಗ್ ಧಾಮಿ - ₹3.34 ಕೋಟಿ
9. ಯೋಗಿ ಆದಿತ್ಯನಾಥ್ - ₹1.54 ಕೋಟಿ
10. ಭಜನ್ ಲಾಲ್ ಶರ್ಮಾ - ₹1.46 ಕೋಟಿ












Click it and Unblock the Notifications