ಆಗಲೇ 2028ರ ಚುನಾವಣೆ ಮೇಲೆ ಕಣ್ಣಿಟ್ರಾ ಡಿ.ಕೆ.ಶಿವಕುಮಾರ್?
ರಾಜ್ಯದಲ್ಲಿ ಸದ್ಯ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಗೆದ್ದು ಬೀಗಿದೆ. ಮತ್ತೊಂದೆಡೆ ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆಯ ಮಾತುಗಳು ಜೋರಾಗಿ ಕೇಳಿಬರುತ್ತಿವೆ. ಇನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಆಗಲೇ 2028ರ ವಿಧಾನಸಭೆ ಚುನಾವಣೆಯ ಬಗ್ಗೆ ಮಾತನಾಡಿ ಗಮನ ಸೆಳೆದಿದ್ದಾರೆ. ಅಧಿಕಾರ ನಶ್ವರ, ಕಾಂಗ್ರೆಸ್ ಸಾಧನೆಗಳು ಅಜರಾಮರ. ಉಪಚುನಾವಣೆಯ ಗೆಲುವು 2028ರ ಚುನಾವಣೆಗೆ ಮುನ್ನುಡಿ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಹಾವೇರಿ ಜಿಲ್ಲಾ ಕಾಂಗ್ರೆಸ್ ಪಕ್ಷದ ವತಿಯಿಂದ ಇಂದು ಸವಣೂರಿನಲ್ಲಿ ಹಮ್ಮಿಕೊಂಡಿದ್ದ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಸಲ್ಲಿಸುವ ಸಮಾರಂಭದಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ. ಜೊತೆಗೂಡುವುದು ಆರಂಭ, ಜೊತೆಗೂಡಿ ಚರ್ಚಿಸುವುದು ಪ್ರಗತಿ, ಜೊತೆಗೂಡಿ ಕೆಲಸ ಮಾಡುವುದು ಯಶಸ್ಸು. ಅದರಂತೆ ನಮ್ಮ ಒಗ್ಗಟ್ಟು ಹಾಗೂ ನಿಮ್ಮ ಸಹಕಾರದಿಂದ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ನಾವು ಅಭೂತಪೂರ್ವ ಗೆಲುವು ಸಾಧಿಸಿದೆ ಎಂದಿದ್ದಾರೆ.

ನಮ್ಮ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್ ಅವರು ಇಂದು ಶಾಸಕರಾಗಿದ್ದಾರೆ. ಇದಕ್ಕೆ ಕಾರಣರಾದ ಈ ಕ್ಷೇತ್ರದ ಜನರಿಗೆ ನನ್ನ ಪ್ರೀತಿಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಪಠಾಣ್ ಅವರು ಮಾತು ಕೊಟ್ಟಂತೆ ಕ್ಷೇತ್ರದ ಅಭಿವೃದ್ಧಿಗೆ ಶ್ರಮವಹಿಸಿ ಕೆಲಸ ಮಾಡುತ್ತಾರೆ ಎಂದು ಭರವಸೆ ನೀಡಿದ್ದಾರೆ.
ಇನ್ನು ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಪಕ್ಷದ ವತಿಯಿಂದ ಇಂದು ಸಂಡೂರಿನಲ್ಲಿ ಹಮ್ಮಿಕೊಂಡಿದ್ದ ಸಂಡೂರು ವಿಧಾನಸಭಾ ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಸಲ್ಲಿಸುವ ಸಮಾರಂಭದಲ್ಲೂ ಡಿ.ಕೆ.ಶಿವಕುಮಾರ್ ಪಾಲ್ಗೊಂಡರು. ಸಂಡೂರಿನ ಜನತೆ ಉಪಚುನಾವಣೆಯಲ್ಲಿ ನಮ್ಮ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಅವರನ್ನು ಗೆಲ್ಲಿಸಿದ್ದಾರೆ. ಅವರಿಗೆ ನಾನು ಹೃದಯಪೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ. ನಮ್ಮ ಪಕ್ಷದ ಮೇಲೆ ನೀವು ನಂಬಿಕೆ ಇಟ್ಟು ಮತ ನೀಡಿದಕ್ಕೆ ಈ ಗೆಲುವು ನಮ್ಮದಾಗಿದೆ. ನಿಮ್ಮ ಸಹಕಾರ ಹಾಗೂ ಬೆಂಬಲ ಹೀಗೇ ಇರಲಿ ಎಂದು ಹೇಳಿದ್ದಾರೆ.

ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?: ಉಪಚುನಾವಣೆಯಲ್ಲಿ ಬಿಜೆಪಿಯ ಲೋಕಲ್ ಲೀಡರ್‌ಗಳಿಂದ ಪ್ರಧಾನಿ ಮೋದಿವರೆಗೂ ಸರಣಿ ಸುಳ್ಳುಗಳನ್ನು ಹೇಳಿದರು. ನೀವು ಆರೋಪ ಸಾಬೀತುಪಡಿಸಿ, ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ಮೋದಿಯವರಿಗೆ ಸವಾಲು ಹಾಕಿದ್ದೆ. ಆದರೆ ಅವರು ಸವಾಲು ಸ್ವೀಕರಿಸುವ ಧೈರ್ಯ ತೋರಿಸಲಿಲ್ಲ ಎಂದು ಕಾಲೆಳೆದರು.
ನಾನು ಮೂರು ದಿನಗಳ ಕಾಲ ಸಂಡೂರಿನಲ್ಲಿ ಪ್ರಚಾರ ಮಾಡಿದೆ. ಈ ವೇಳೆ ತುಕಾರಾಂ ಅವರು ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಗಮನಿಸಿದ್ದೇನೆ. ತುಕಾರಾಂ ಅವರಿಗೂ ಮೊದಲು ಸಂಡೂರು ಹೇಗಿತ್ತು ಎನ್ನುವುದನ್ನು ನಾನು ಕಂಡಿದ್ದೇನೆ. ಈಗ ತುಕಾರಾಮ್ ಅವರು ಒಳ್ಳೆಯ ಕೆಲಸಗಳನ್ನು ಮಾಡಿರುವುದನ್ನು ನಾನು ನೋಡಿದ್ದೇನೆ ಎಂದರು.
ನಮ್ಮ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದ್ದು, ನಾಡಿನ ಜನತೆ ಎದುರಿಗೆ ಕೊಟ್ಟ ಎಲ್ಲ ಭರವಸೆಗಳನ್ನೂ ಹಂತ ಹಂತವಾಗಿ ಈಡೇರಿಸುತ್ತಿದ್ದೇವೆ. ನಮ್ಮ ಜನರ ಆರ್ಥಿಕ ಶಕ್ತಿ ಮತ್ತು ಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುವ ಕಾರ್ಯಕ್ರಮಗಳನ್ನು ನಾವು ರೂಪಿಸಿ ಜಾರಿ ಮಾಡುವುದರ ಮೂಲಕ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ ಎಂದು ಹೇಳಿದರು.
ಮೂರು ಉಪಚುನಾವಣೆಯಲ್ಲಿ ಗೆಲ್ಲಿಸುವ ಮೂಲಕ ರಾಜ್ಯದ ಜನತೆ ನಮ್ಮ ಸರ್ಕಾರಕ್ಕೆ ದೊಡ್ಡ ಆಶೀರ್ವಾದ ಮಾಡಿದ್ದಾರೆ. ನನ್ನ ವಿರುದ್ಧ ಸುಳ್ಳು ಕೇಸ್, ಸುಳ್ಳು ಆರೋಪಗಳ ಮೂಲಕ ನನ್ನ ವಿರುದ್ಧ ಷಡ್ಯಂತ್ರ ನಡೆಸಿದ ಬಿಜೆಪಿಗೆ ರಾಜ್ಯದ ಜನತೆ ತಕ್ಕ ಉತ್ತರ ನೀಡಿದ್ದಾರೆ. ನಿಮ್ಮ ಆಶೀರ್ವಾದ ಇರುವವರೆಗೂ ಈ ಸಿದ್ದರಾಮಯ್ಯ ಯಾವುದೇ ಷಡ್ಯಂತ್ರ, ಸುಳ್ಳು ಕೇಸ್‌ಗಳಿಗೆ ಹೆದರಲ್ಲ ಎಂದು ಖಡಕ್ ಆಗಿ ಹೇಳಿದರು.












Click it and Unblock the Notifications