ರಾಜ್ಯದಲ್ಲಿ ಖಾಲಿ ಇರುವ ಸರ್ಕಾರಿ ಹುದ್ದೆಗಳ ಭರ್ತಿ ಕುರಿತು ಮಹತ್ವದ ಅಪ್ಡೇಟ್ ಕೊಟ್ಟ ಸಿಎಂ
ಬೆಂಗಳೂರು, ಆಗಸ್ಟ್ 15: ಮಾಣಿಕ್ ಷಾ ಮೈದಾನದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣದ ನಂತರ ಸಿಎಂ ಡಿಕೆ ಶಿವಕುಮಾರ್ ಅವರು ಮಹತ್ವದ ಮಾಹಿತಿಗಳನ್ನು ಹಂಚಿಕೊಂಡರು. ಈ ವೇಳೆ ಅವರು ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನ ಭರ್ತಿ ಮಾಡುವ ಕುರಿತು ಅಪ್ಡೇಟ್ ಕೊಟ್ಟಿದ್ದಾರೆ. ಸಂಪೂರ್ಣ ವಿವರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
'ಉದ್ಯೋಗಾಕಾಂಕ್ಷಿಗಳಿಗಾಗಿ ಮುಖ್ಯಮಂತ್ರಿ ಉದ್ಯೋಗ ಸಂಕಲ್ಪ ಯೋಜನೆ ಆರಂಭಿಸಲಾಗುತ್ತಿದೆ. ಸರ್ಕಾರಿ ವಲಯದ 72 ಸಾವಿರ ಪ್ರಮುಖ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆ ಆರಂಭವಾಗಿದೆ. ಮುಂದಿನ ಆರು ತಿಂಗಳಲ್ಲಿ ಈ ಎಲ್ಲಾ ಅಧಿಸೂಚನೆ ಹೊರಡಿಸಲಾಗುವುದು,' ಎಂದು ಭರವಸೆ ನೀಡಿದರು.

'ಹಿಂದುಳಿದ ಹತ್ತು ಜಿಲ್ಲೆಗಳಲ್ಲಿ ಉದ್ಯೋಗ ಸೃಷ್ಟಿಸುವ ಉದ್ಯಮಿಗಳಿಗೆ ಪ್ರೋತ್ಸಾಹ ನೀಡಲು 'ಉದ್ಯೋಗ ನಿಧಿ' ಯೋಜನೆ ಜಾರಿಯಾಗಲಿದೆ. ಪ್ರತಿ ಹೊಸ ಉದ್ಯೋಗಕ್ಕೆ ತಿಂಗಳಿಗೆ 2,500 ರೂಪಾಯಿ ಪ್ರೋತ್ಸಾಹಧನ ನೀಡಲಾಗುವುದು. ಇದರಿಂದ ಒಂದು ಲಕ್ಷ ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ,' ಎಂದು ಸಿಎಂ ಡಿಕೆ ಶಿವಕುಮಾರ್ ಅವರು ತಿಳಿಸಿದರು.
'ಗ್ರಾಮೀಣ ವಿದ್ಯಾರ್ಥಿಗಳಿಗೆ ವೃತ್ತಿಪರ ಶಿಕ್ಷಣದ ಅವಕಾಶ'
'ಗ್ರಾಮೀಣ ಸರ್ಕಾರಿ ಶಾಲೆಗಳಲ್ಲಿ 1ರಿಂದ 10ನೇ ತರಗತಿವರೆಗೆ ಓದಿದ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸ್‌ಗಳ ಪ್ರವೇಶದಲ್ಲಿ ಈಗಿರುವ ಶೇಕಡ 15ರ ಗ್ರಾಮೀಣ ಮೀಸಲಾತಿಯೊಳಗೆ ಶೇ.7.5 ಮೀಸಲಾತಿ ನೀಡುವ ಸಹಾಯ ಹಸ್ತ ಯೋಜನೆ ಜಾರಿಯಾಗಲಿದೆ. ಇದರಿಂದ ವೈದ್ಯಕೀಯ, ಇಂಜಿನಿಯರಿಂಗ್ ಸೇರಿದಂತೆ ಗುಣಮಟ್ಟದ ವೃತ್ತಿಪರ ಉನ್ನತ ಶಿಕ್ಷಣದ ಅವಕಾಶಗಳು ಮತ್ತಷ್ಟು ವಿಸ್ತರಿಸಲಿವೆ,' ಎಂದು ತಿಳಿಸಿದರು.
'ಸಾಮಾಜಿಕ ನ್ಯಾಯವೇ ಸರ್ಕಾರದ ಬದ್ಧತೆ'
'ಯಾವ ಜಾತಿ ಅಥವಾ ಧರ್ಮದಲ್ಲಿ ಹುಟ್ಟಿದ್ದಾನೆ ಎಂಬುದು ಮುಖ್ಯವಲ್ಲ. ಪ್ರತಿಯೊಬ್ಬರಿಗೂ ಸಮಾನ ಅವಕಾಶ ಸಿಗಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕಾಗಿ ₹44,631 ಕೋಟಿ ಮೀಸಲಿಡಲಾಗಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ 2026-27ರಲ್ಲಿ ಸುಮಾರು ₹4,000 ಕೋಟಿ ಅನುದಾನ ನೀಡಲಾಗಿದೆ. ಬುಡಕಟ್ಟು ಮಕ್ಕಳಿಗಾಗಿ 119 ಏಕಲವ್ಯ ಮಾದರಿ ವಸತಿ ಶಾಲೆಗಳು ಹಾಗೂ 2.60 ಲಕ್ಷ ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯ ಕಲ್ಪಿಸಲಾಗುತ್ತಿದೆ. ಅಲ್ಪಸಂಖ್ಯಾತ ಸಮುದಾಯದ 8.60 ಲಕ್ಷ ವಿದ್ಯಾರ್ಥಿಗಳಿಗೆ ₹494 ಕೋಟಿ ವಿದ್ಯಾರ್ಥಿವೇತನ ನೀಡಲಾಗುತ್ತಿದೆ,' ಎಂದು ಹೇಳಿದರು.
'ಮೋಟಾರು ವಾಹನ ವಿಮಾ ಸಂಸ್ಥೆ ಸ್ಥಾಪನೆ'
'ಹೆಚ್ಚುತ್ತಿರುವ ವಾಹನ ವಿಮಾ ವೆಚ್ಚ ಮತ್ತು ಅಪಘಾತದ ವೇಳೆ ವಿಮೆ ಹಣ ಪಡೆಯುವುದು ಸಾಮಾನ್ಯ ಕುಟುಂಬಗಳಿಗೆ ದೊಡ್ಡ ಸವಾಲಾಗಿದೆ. ವಾಹನ ಮಾಲೀಕರಿಗೆ ಸರಳ ವಿಮಾ ಸೇವೆ ನೀಡಲು ಕರ್ನಾಟಕ ರಾಜ್ಯ ಮೋಟಾರು ವಾಹನ ವಿಮಾ ಸಂಸ್ಥೆ ಸ್ಥಾಪಿಸಲಾಗುವುದು,' ಎಂದು ತಿಳಿಸಿದರು.
'ಜನಸ್ನೇಹಿ ಆಡಳಿತಕ್ಕೆ ಒತ್ತು'
'ಮುಖ್ಯಮಂತ್ರಿಯಾದ ಬಳಿಕ ಜನಸ್ನೇಹಿ ಮತ್ತು ಜನಪರ ಆಡಳಿತಕ್ಕೆ ಆದ್ಯತೆ ನೀಡಿದ್ದು, ಪಂಚಾಯಿತಿ ಮಟ್ಟದಿಂದ ರಾಜ್ಯಮಟ್ಟದವರೆಗೆ ಜನರ ಸಮಸ್ಯೆಗಳನ್ನು ಆಲಿಸಲು 'ಪ್ರಜಾಸೇವೆ ಇಲಾಖೆ' ಸ್ಥಾಪಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಪ್ರತಿ ತಿಂಗಳ ಮೊದಲ ಮತ್ತು ಮೂರನೇ ಶನಿವಾರ ಪ್ರಜಾಸಂಪರ್ಕ ಸಭೆ ನಡೆಸಲಿದ್ದು, ಶಾಸಕರೂ ಪಂಚಾಯಿತಿ ಮಟ್ಟದಲ್ಲಿ ಜನಸಂಪರ್ಕ ಸಭೆಗಳನ್ನು ನಡೆಸಲಿದ್ದಾರೆ ಎಂದು ತಿಳಿಸಿದರು.
ಗ್ಯಾರಂಟಿಗಳಿಂದ ಕುಟುಂಬಗಳಿಗೆ ಭದ್ರತೆ
ಪ್ರತಿ ಕುಟುಂಬಕ್ಕೂ ಭದ್ರತೆ, ಪ್ರತಿಯೊಬ್ಬ ನಾಗರಿಕನಿಗೂ ಗೌರವ ಹಾಗೂ ಯುವಜನರಿಗೆ ಅವಕಾಶ ಕಲ್ಪಿಸುವುದು ಸರ್ಕಾರದ ಮೂಲತತ್ವವಾಗಿದೆ. ಪಂಚ ಗ್ಯಾರಂಟಿ ಯೋಜನೆಗಳು ಸಾಮಾಜಿಕ ಮತ್ತು ಆರ್ಥಿಕ ಭದ್ರತೆಗೆ ಅಡಿಪಾಯ ಹಾಕಿವೆ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹೇಳಿದರು.
'ಗೃಹಲಕ್ಷ್ಮಿ ಯೋಜನೆಯಡಿ 1.28 ಕೋಟಿ ಮಹಿಳೆಯರಿಗೆ ತಿಂಗಳಿಗೆ 2,000 ರೂಪಾಯಿ ನೀಡಲಾಗುತ್ತಿದ್ದು, ಈವರೆಗೆ 77 ಸಾವಿರ ಕೋಟಿ ರೂಪಾಯಿಗೂ ಅಧಿಕ ಮೊತ್ತವನ್ನು ನೇರವಾಗಿ ಖಾತೆಗಳಿಗೆ ವರ್ಗಾಯಿಸಲಾಗಿದೆ. ಶಕ್ತಿ ಯೋಜನೆಯಡಿ ರಾಜ್ಯದ ಮಹಿಳೆಯರು ಸುಮಾರು 796 ಕೋಟಿ ಉಚಿತ ಪ್ರಯಾಣ ಮಾಡಿದ್ದು, ಗೃಹಜ್ಯೋತಿ ಯೋಜನೆಯಡಿ 1.65 ಕೋಟಿ ಕುಟುಂಬಗಳಿಗೆ ಉಚಿತ ವಿದ್ಯುತ್ ಸಿಗುತ್ತಿದೆ,' ಎಂದು ವಿವರಿಸಿದರು.
ಮಹಾತ್ಮ ಗಾಂಧೀಜಿ, ಜವಾಹರಲಾಲ್ ನೆಹರೂ, ಸರ್ದಾರ್ ವಲ್ಲಭಭಾಯಿ ಪಟೇಲ್, ಮೌಲಾನಾ ಆಜಾದ್, ಸರೋಜಿನಿ ನಾಯ್ಡು, ಭಗತ್ ಸಿಂಗ್, ಅಷ್ಫಾಕುಲ್ಲಾ ಖಾನ್, ಸುಭಾಷ್ ಚಂದ್ರಬೋಸ್ ಸೇರಿದಂತೆ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ಸ್ಮರಿಸಿದರು. 1924ರ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಸ್ಫೂರ್ತಿಯನ್ನೂ ನೆನಪಿಸಿಕೊಂಡರು. ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಮೈಲಾರ ಮಹಾದೇವಪ್ಪ ಅವರ ಹೋರಾಟ ಯುವಜನತೆಗೆ ಸದಾ ಪ್ರೇರಣೆಯಾಗಬೇಕು ಎಂದರು.
'ಭಾರತ ಒಂದು ದೇಗುಲವಾದರೆ, ರಾಜ್ಯಗಳು ದೇಗುಲದ ಕಂಬಗಳು. ಹೀಗಾಗಿ ದೇಗುಲ ಮತ್ತು ಕಂಬಗಳ ಸಂಬಂಧ ಇನ್ನಷ್ಟು ಗಟ್ಟಿಯಾಗಬೇಕು. ನಮ್ಮ ಸಾಂಸ್ಕೃತಿಕ ನಾಯಕ ಬಸವಣ್ಣನವರು ಸಮಾನತೆ, ಕಾಯಕ ಮತ್ತು ದಾಸೋಹದ ದಾರಿ ತೋರಿಸಿದರು. ಸಮಾಜದ ಪ್ರತಿ ವ್ಯಕ್ತಿಯ ಬದುಕು ಚೆನ್ನಾಗಿದ್ದರೆ ಮಾತ್ರ ಸಮಾಜ ಚೆನ್ನಾಗಿರುತ್ತದೆ. ಇದೇ ಬಸವಾದಿ ಶರಣರ ಆಶಯವಾಗಿತ್ತು,' ಎಂದು ಹೇಳಿದರು.


Click it and Unblock the Notifications
