ಗೌರಿಬಿದನೂರಿನಲ್ಲಿ ಹರಿದ ರಕ್ತ, ಕಾಂಗ್ರೆಸ್ ಕಾರ್ಯಕರ್ತನ ಕೈ ಕಟ್
ಗೌರಿಬಿದನೂರು (ಚಿಕ್ಕಬಳ್ಳಾಪುರ ಜಿಲ್ಲೆ), ಫೆಬ್ರವರಿ 23 : ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿ ಹೋಬಳಿಯ ಪುರ ಪಂಚಾಯಿತಿ ವ್ಯಾಪ್ತಿಗೆ ಬರುವ ಆರ್ಕುಂದ ಗ್ರಾಮದಲ್ಲಿ ಗುರುವಾರ ರಾತ್ರಿ ರಾಜಕಾರಣದ ಜಗಳಕ್ಕೆ ರಕ್ತ ಹರಿದಿದೆ. ವ್ಯಕ್ತಿಯೊಬ್ಬರ ಕೈಯನ್ನು ಮಚ್ಚಿನಿಂದ ಕತ್ತರಿಸಲಾಗಿದೆ.
ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರ ಮಧ್ಯೆ ನಡೆದ ಘರ್ಷಣೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ಎಸ್.ರವಿಕುಮಾರ್ ಎಡಗೈಯನ್ನು ಜೆಡಿಎಸ್ ಕಾರ್ಯಕರ್ತ ಲೋಕೇಶ್ ಮಚ್ಚಿನಿಂದ ಕತ್ತರಿಸಿದ್ದಾನೆ. ಆರ್ಕುಂದ ಗ್ರಾಮದಲ್ಲಿ ಗುರುವಾರ ಸಂಜೆ 5 ಗಂಟೆಯಿಂದ ಕಾಂಗ್ರೆಸ್ ಕಾರ್ಯಕರ್ತರಾದ ಶ್ರೀನಿವಾಸರೆಡ್ಡಿ, ದೇವರಾಜ್, ಎಸ್.ರವಿಕುಮಾರ್, ನಾರಾಯಣಸ್ವಾಮಿ ಇನ್ನಿತರರು ಸಂಕ್ರಾಂತಿ ಸುಗ್ಗಿಯ ಅಂಗವಾಗಿ ಮನೆಮನೆಗೆ ತೆರಳಿ ಸೀರೆ ಹಂಚಿಕೊಂಡು ವಾಪಸಾಗಿದ್ದರು.
ಏಕಾಏಕಿಯಾಗಿ ರವಿಕುಮಾರ್ ಮನೆ ಮುಂಭಾಗದಲ್ಲಿದ್ದ ಅಂಗಡಿಯಿಂದ ಬಂದ ರಮೇಶ, ಗೋವರ್ಧನ, ಲೋಕೇಶ್, ನರಸಿಂಹಮೂರ್ತಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ದಾರೆ. ರವಿಕುಮಾರ್ ತನ್ನ ಆತ್ಮರಕ್ಷಣೆಗಾಗಿ ಕೈ ಅಡ್ಡ ಇಟ್ಟಾಗ ಮಚ್ಚಿನಿಂದ ಬಿದ್ದ ಏಟಿಗೆ ಎಡಗೈ ಕತ್ತರಿಸಿ ನೆಲಕ್ಕುರುಳಿದೆ.

ರವಿಕುಮಾರ್ ಮೇಲೆ ಹಲ್ಲೆ ಮಾಡಿದ ಯುವಕರು ಸ್ಥಳದಿಂದ ಪರಾರಿಯಾಗಿದ್ದಾರೆ. ರವಿಕುಮಾರ್ ನನ್ನು ಕೂಡಲೇ ಗೌರಿಬಿದನೂರು ಪಟ್ಟಣದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ರವಾನಿಸಲಾಗಿದೆ. ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ.












Click it and Unblock the Notifications