ಕ್ಯಾನ್ಸರ್ ವಿರುದ್ಧ ಹೋರಾಡುತ್ತ ಪ್ರಧಾನಿ ಮೋದಿ ಹೆಸರಿನಲ್ಲಿ ಬಡವರಿಗೆ 7 ಉಚಿತ ಮನೆ ಕಟ್ಟಿಕೊಟ್ಟ ಉಳ್ಳಾಲ ಸಂತೋಷ್
ಮಂಗಳೂರು: "ಕ್ಯಾನ್ಸರ್ ನನ್ನ ದೇಹವನ್ನ ಬಾಧಿಸುತ್ತಿರಬಹುದು, ಆದರೆ ಸೇವೆ ಮಾಡಬೇಕು ಎಂದು ಹೊರಟಿರುವ ನನಗೆ ಈ ಕಾಯಿಲೆ ಎಂದಿಗೂ ಅಡ್ಡಿಯಾಗಲೂ ಸಾಧ್ಯವಿಲ್ಲ" - ಇದು ಕರುಳಿನ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ಉಳ್ಳಾಲದ ಬೋಳಿಯಾರ್ ನಿವಾಸಿ ಸಂತೋಷ್ ಕುಮಾರ್ ರೈ ಅವರ ಮಾತು.
ತಮ್ಮ ಅನಾರೋಗ್ಯದ ನೋವಿನ ನಡುವೆಯೂ, ಪ್ರಧಾನಿ ನರೇಂದ್ರ ಮೋದಿ ಅವರ ಮೇಲಿನ ಅಪಾರ ಅಭಿಮಾನದಿಂದ ಬಡವರಿಗಾಗಿ ಉಚಿತ ಮನೆಗಳನ ನಿರ್ಮಿಸಿಕೊಡುವ ಒಳ್ಳೆಯ ಕೆಲಸವನ್ನಾ ಅವರು ನಿರಂತರವಾಗಿ ಮಾಡುತ್ತಲೇ ಬರುತ್ತಿದ್ದಾರೆ.

ಕ್ಯಾನ್ಸರ್ ಗೆದ್ದವರ ಸಮಾಜ ಸೇವೆ
ಈ ವರ್ಷ ಕೇರಳ ವಿಧಾನಸಭಾ ಚುನಾವಣೆ ಉಸ್ತುವಾರಿ ವಹಿಸಿಕೊಂಡ ಸಂದರ್ಭದಲ್ಲಿ ಸಂತೋಷ್ ರೈ ಅವರ ದೇಹದ ತೂಕ ದಿಢೀರನೆ 20 ಕೆ.ಜಿ.ಯಷ್ಟು ಕಡಿಮೆಯಾಗಿತ್ತು. ಆ ಅವರೂ ಡಾಕ್ಟರ್ ಬಳಿ ಹೋಗಿ ವೈದ್ಯಕೀಯ ತಪಾಸಣೆಗೆ ಮಾಡಿದಾಗ ತಿಳಿಯಿತು ಅವರಿಗೆ ಕರುಳಿನ ಕ್ಯಾನ್ಸರ್ ಇರುವುದು. ಕಳೆದ ಮಾರ್ಚ್ ತಿಂಗಳಿನಿಂದಲೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇವರಿಗೆ ಈಗಾಗಲೇ, 10.5 ಗಂಟೆಗಳ ಕಾಲದ ಸುದೀರ್ಘ ಶಸ್ತ್ರಚಿಕಿತ್ಸೆ ಕೂಡ ಆಗಿದೆ .
ಪ್ರಸ್ತುತ ಕೀಮೋಥೆರಪಿ ಹಾಗೂ ರೇಡಿಯೇಷನ್ ಚಿಕಿತ್ಸೆ ಆಗುತ್ತಿದ್ದರೂ ಕೂಡ ಅವರಿಗೆ ಬಡವರ ಸೇವೆ ಮಾಡಬೇಕು ಹಂಬಲ ದುಪ್ಪಟ್ಟಾಗಿದೆ. ಈ ಮಹಾಮಾರಿ ಕ್ಯಾನ್ಸರ್ ದೃಢ ಪಟ್ಟಾಗ ಇದರ ತೀವ್ರತೆ ಬಗ್ಗೆ ಡಾಕ್ಟರ್ ವಿವರಿಸಿದಾಗ ಹೆಂಡತಿ, ಮಕ್ಕಳು ಎಲ್ಲಾ ಕಣ್ಣೀರು ಹಾಕಿದ್ರು. ಆದರೆ ಸಂತೋಷ್ ಮಾತ್ರ ಧೃತಿಗೆಡಲಿಲ್ಲ, ಬದಲಿಗೆ ಅವರು 'ನನ್ನ ಜೀವನದಲ್ಲಿ ನಾನು ಯಾರಿಗೂ ಅನ್ಯಾಯ ಮಾಡಿಲ್ಲ. ಹಾಗಾಗಿ ಇದು ದೇವರು ನನಗೆ ನೀಡಿದ ಹೊಸ ಬದುಕು' ಎಂದು ನಗುಮುಖದಿಂದಲೇ ಈ ಹೊಸ ಸವಾಲನ್ನ ಎದುರಿಸುತ್ತಿದ್ದಾರೆ.
ನಮೋ ಕುಟೀರ ಯೋಜನೆ: ಬಡವರಿಗೆ ಉಚಿತ ಮನೆ ಕೊಡುಗೆ
ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ಮತ್ತು ಅವರ ವ್ಯಕ್ತಿತ್ವದಿಂದ ಪ್ರಭಾವಿತರಾಗಿರುವ ಸಂತೋಷ್ ಕುಮಾರ್ ರೈ, ವಸತಿ ರಹಿತ ಬಡ ಕುಟುಂಬಗಳಿಗೆ ತಮ್ಮ ಸ್ವಂತ ವೆಚ್ಚದಲ್ಲಿ 'ನಮೋ ಕುಟೀರ' ಹೆಸರಿನಲ್ಲಿ ಉಚಿತ ಮನೆಗಳನ್ನ ಕಟ್ಟಿಕೊಡುವ ಒಂದು ಮಹತ್ವದ ಸಂಕಲ್ಪ ಮಾಡಿದ್ದಾರೆ. ಈಗಾಗಲೇ 10 ಮನೆಗಳನ್ನ ಕಟ್ಟಿಕೊಡುವ ಗುರಿಯನ್ನ ಹೊಂದಿದ್ದು, ಅದರಲ್ಲಿ 7 ಮನೆಗಳ ನಿರ್ಮಾಣ ಕೆಲಸ ಯಶಸ್ವಿಯಾಗಿ ಪೂರ್ಣಗೊಂಡಿದೆ.
ಯಾವುದೇ ಜಮೀನುಗಳಿಲ್ಲದ, 16 ವರ್ಷಗಳ ಹಿಂದೆ ಪತಿಯನ್ನು ಸಹ ಕಳೆದುಕೊಂಡ ಬಡ ವಿಧವೆಗೆ, ಆಸರೆ ಇಲ್ಲದ ವೃದ್ಧ ದಂಪತಿಗೆ ಹಾಗೂ ಕೋಟೇಕಾರಿನ ಅಡ್ಡ ಶ್ರೀಭಗವತಿ ಕ್ಷೇತ್ರದ ದರ್ಶನ ಪಾತ್ರಿ ಶ್ರವಣ್ ಬೆಳಪ್ಪಾಡ ಅವರ ಕುಟುಂಬಕ್ಕೆ ಈ ನಮೋ ಕುಟೀರಗಳು ಆಸರೆಯಾಗಿವೆ ನೋಡಿ. ಭವಿಷ್ಯದಲ್ಲಿ ಕನಿಷ್ಠ 100 ಮನೆಗಳನ್ನಾದರೂ ಬಡವರಿಗೆ ನಿರ್ಮಿಸಿಕೊಡಬೇಕು ಎನ್ನುವುದು ಸಂತೋಷ ಅವರ ಬದುಕಿನ ಅತಿದೊಡ್ಡ ಕನಸು.
ಹಿಂದೆಯೂ ಕ್ಯಾನ್ಸರ್ ಪೀಡಿತರಿಗೆ ನೆರವು
ಸಂತೋಷ್ ರೈ ಅವರ ಈ ಸಮಾಜ ಸೇವೆ ಇಂದು ನಿನ್ನೆಯದಲ್ಲ. ಈ ಹಿಂದೆ ಸಂತೋಷ್ ಅವರು ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ಸಮಯದಲ್ಲಿ ತಮಗೆ ಬರುತ್ತಿದ್ದ ಗೌರವ ಧನವನ್ನು ಸಂಪೂರ್ಣವಾಗಿ 162 ಕ್ಯಾನ್ಸರ್ ರೋಗಿಗಳ ಚಿಕಿತ್ಸೆಗಾಗಿ ಮೀಸಲಿಟ್ಟಿದ್ದರು. ಸಾವಿರಕ್ಕೂ ಅಧಿಕ ರೋಗಿಗಳಿಗೆ ಆಸ್ಪತ್ರೆಗೆ ದಾಖಲಾಗಲು ಮಾರ್ಗದರ್ಶನ ನೀಡಿ, ಅನೇಕ ಬಡ ರೋಗಿಗಳ ಆಸ್ಪತ್ರೆ ಬಿಲ್‌ಗಳನ್ನ ಸಹ ಸ್ವತಃ ತಾವೇ ಭರಿಸಿದ್ದರು. ಈಗ ತಾವೇ ಕ್ಯಾನ್ಸರ್ ಪೀಡಿತರಾಗಿದ್ದರೂ ಅವರ ದಾನ ಮಾಡುವ ಈ ಒಳ್ಳೆಯ ಗುಣ ಕಿಂಚಿತ್ತೂ ಕಡಿಮೆಯಾಗಿಲ್ಲ. ಅವರ ಈ ಕೆಲಸಕ್ಕೆ ಕುಟುಂಬದ ಸಂಪೂರ್ಣ ಬೆಂಬಲ ಕೂಡ ಇದೆ.
ಹಿಂದೆ ಕರ್ನಾಟಕ ಸರ್ಕಾರದ ಮೈಸೂರು ಎಲೆಕ್ಟ್ರಿಕಲ್ಸ್ ಅಧ್ಯಕ್ಷರಾಗಿದ್ದಾಗ ನಷ್ಟದಲ್ಲಿದ್ದ ಆ ಸಂಸ್ಥೆಯನ್ನು ಲಾಭದ ಹಾದಿಗೆ ತಂದಿದ್ದಲ್ಲದೆ, ಸಿಎಸ್‌ಆರ್ ನಿಧಿಯ ಮೂಲಕ 42 ಸರ್ಕಾರಿ ಶಾಲೆಗಳಿಗೆ ನೆರವು ನೀಡಿದ್ದರು. "ನನ್ನ ಆಸ್ತಿಯನ್ನ ಮಾರಾಟ ಮಾಡಿಯಾದರೂ ಸರಿ, ಬಡವರಿಗೆ ಮನೆಗಳನ್ನು ಕಟ್ಟಿಕೊಡುತ್ತೇನೆ. ಇದರಲ್ಲಿ ನನಗೆ ಸಿಗುವ ಖುಷಿಯೇ ಬೇರೆ" ಎನ್ನುವ ಸಂತೋಷ್ ರೈ ಬೋಳಿಯಾರ್ ಅವರ ಮಾತು ಮತ್ತು ನಿಸ್ವಾರ್ಥ ಸೇವೆ ಸಮಾಜಕ್ಕೆ ಒಳ್ಳೇಯ ಮಾದರಿ.


Click it and Unblock the Notifications
