70 ನೇ ವಯಸ್ಸಿನಲ್ಲಿ ಮೊದಲ ಮಗುವಿಗೆ ಜನ್ಮ ನೀಡಿದ ಮಹಿಳೆ!
ಕಚ್(ಗುಜರಾತ್), ಅಕ್ಟೋಬರ್ 21: ವಯಸ್ಸಾದರೆ ಮಗುವಿಗೆ ಜನನ ನೀಡುವುದು ಬಹಳ ಕಷ್ಟ ಎಂಬ ಕಾಲವಿತ್ತು. ಆದರೆ ಈಗ ಎಲ್ಲವೂ ಬದಲಾಗುವಂತಿದೆ. ಅಜ್ಜಿಯೊಬ್ಬರು ತನ್ನ 70 ವರ್ಷ ಪ್ರಾಯದಲ್ಲಿ ತನ್ನ ಮೊದಲ ಮಗುವಿಗೆ ಜನನ ನೀಡಿದ್ದಾರೆ.
ಹೌದು, ಈ ಘಟನೆಯನ್ನು ನಾವು ಪವಾಡವೆಂದರೂ ಸರಿಯೇ ಅಥವಾ ತೀರಾ ವಿರಳವೆಂದರೂ ಸರಿಯೇ. ಈ ಬಲು ಅಪರೂಪದ ಘಟನೆಯು ಗುಜರಾತ್‌ನ ಕಚ್‌ನಲ್ಲಿ ನಡೆದಿದೆ. ಮಹಿಳೆ ಜೀವುನ್‌ಬೇನ್ ರಬರಿ ಐವಿಎಫ್ ಮೂಲಕ ತನ್ನ ಮೊದಲ ಮಗುವಿಗೆ 70 ವರ್ಷ ಪ್ರಾಯದಲ್ಲಿ ಜನ್ಮ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ಮಹಿಳೆ ಜೀವುನ್‌ಬೇನ್ ರಬರಿ, "ನಾನು ಗಂಡು ಮಗುವಿಗೆ ಜನ್ಮ ನೀಡಿದ್ಧೇನೆ. ನಾನು ಐವಿಎಫ್ ಮೂಲಕ ಬಸರಿಯಾಗಿದ್ದೆ," ಎಂದು ತಿಳಿಸಿದರು.

ತನ್ನ ವಯಸ್ಸು ಎಷ್ಟು ಎಂದು ಹೇಳಲು ಸರಿಯಾದ ಯಾವುದೇ ದಾಖಲೆಗಳು ಇಲ್ಲ ಎಂದು ಹೇಳಿರುವ ಜೀವುನ್‌ಬೇನ್ ರಬರಿ, ಆದರೆ ನನ್ನ ವಯಸ್ಸು 70 ಆಗಿದೆ ಎಂದು ತಿಳಿಸಿದರು. ಈ ಮೂಲಕ ಗುಜರಾತ್‌ನ ಜೀವುನ್‌ಬೇನ್ ರಬರಿ ವಿಶ್ವದ ಮೊದಲ ವಯಸ್ಸಾದ ತಾಯಿ ಎಂದು ಅನಿಸಿಕೊಂಡಿದ್ದಾರೆ.
70 ನೇ ವಯಸ್ಸಿನಲ್ಲಿ ಮಹಿಳೆಯರಲ್ಲಿ ಮುಟ್ಟಾಗುವುದು ಸ್ಥಗಿತವಾಗಿರುವ ಕಾರಣದಿಂದಾಗಿ ಬಸರಿ ಆಗುವ ಸಾಧ್ಯತೆ ಇರುವುದಿಲ್ಲ. ನಾವು ಸಾಧ್ಯವೇ ಇಲ್ಲ ಎಂದು ಕೂಡಾ ಹೇಳಬಹುದು. 45 ವರ್ಷದ ಬಳಿಕ ಬಹುತೇಕ ಮಹಿಳೆಯರು ಮಗುವಿಗೆ ಜನ್ಮ ನೀಡಲು ಸಾಧ್ಯವಾಗುವುದಿಲ್ಲ. ಆದರೆ ಈ 70 ವಯಸ್ಸಿನ ಜೀವುನ್‌ಬೇನ್ ರಬರಿ ಈ ಎಲ್ಲಾ ಅಡೆತಡೆಗಳ ಬೇಲಿಯನ್ನು ದಾಟಿ ಬಂದಿದ್ದಾರೆ.
ಭರವಸೆಯನ್ನು ಬಿಡದ ದಂಪತಿ:
ಟೈಮ್ಸ್ ಆಫ್ ಇಂಡಿಯಾದ ಪ್ರಕಾರ, ಈ ದಂಪತಿಯ ವಿವಾಹವಾಗಿ 45 ವರ್ಷಗಳು ಆಗಿದೆ. 70 ವರ್ಷ ಪ್ರಾಯದ ಜೀವುನ್‌ಬೇನ್ ರಬರಿ ಹಾಗೂ 75 ವರ್ಷ ಪ್ರಾಯದ ಪತಿ ಮಲ್ದಾರಿಗೆ ಈವರೆಗೂ ಮಕ್ಕಳು ಆಗಿಲ್ಲ. ಹಲವಾರು ಕಡೆಗಳಲ್ಲಿ ಈ ದಂಪತಿಯು ಮದ್ದು ಮಾಡಿದ್ದರೂ ಕೂಡಾ ಮಗು ಆಗಲೇ ಇಲ್ಲ. ಆದರೆ ತಮ್ಮ ಈ ಪ್ರಾಯದಲ್ಲೂ ಭರವಸೆಯನ್ನು ಬಿಡದ ಈ ದಂಪತಿ ಐವಿಎಫ್ ಅನ್ನು ಮಾಡಿಸಿಕೊಂಡಿದ್ದು, ಈಗ ಮಗುವಿಗೆ ಜನನ ನೀಡಿದ್ದಾರೆ.
ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ಡಾ. ನರೇಶ್ ಭಾನುಶಾಲಿ, "ಈ ದಂಪತಿಗಳು ಮೊದಲು ನಮ್ಮ ಬಳಿ ಬಂದಾಗ ಈ ವಯಸ್ಸಿನಲ್ಲಿ ಅವರಿಗೆ ಮಕ್ಕಳು ಆಗಲು ಸಾಧ್ಯವಿಲ್ಲ ಎಂದು ನಾವು ಹೇಳಿದೆವು. ಆದರೆ ಈ ದಂಪತಿಗಳು ಅದನ್ನು ಒಪ್ಪಲಿಲ್ಲ. ನಮ್ಮ ಕುಟುಂಬದ ಹಲವಾರು ಮಂದಿಗೆ ಮಕ್ಕಳು ಆಗಿದೆ ಎಂದು ಹೇಳಿಕೊಂಡರು. ಈಗ ಈ ದಂಪತಿಗೆ ಮಕ್ಕಳು ಆಗಿದೆ. ಇದು ನನಗೆ ಬಹಳ ವಿರಳ ವಿಚಾರ," ಎಂದು ತಿಳಿಸಿದರು.
"ನಾವು ಮೊದಲು ಜೀವುನ್‌ಬೇನ್ ರಬರಿಗೆ ಕೆಲವು ಮಾತ್ರೆಗಳನ್ನು ನೀಡಿ ಮತ್ತೆ ತಿಂಗಳು ತಿಂಗಳು ಮುಟ್ಟಾಗುವಂತೆ ಮಾಡಿದೆವು. ಪ್ರತಿ ತಿಂಗಳು ಮುಟ್ಟಾಗಲು ಆರಂಭವಾಯಿತು. ವಯಸ್ಸಾದ ಕಾರಣ ಆಕೆಯ ಗರ್ಭಕೋಶ ಕುಗ್ಗಿತ್ತು. ನಾವು ಆಕೆಯ ಅಂಡಾಣು ಸಕ್ರಿಯವಾಗುವಂತೆ ಚಿಕಿತ್ಸೆ ನೀಡಿ ಬಳಿಕ ಬ್ಲಾಸ್ಟೊಸಿಸ್ಟ್ ಅನ್ನು ರಚಿಸಿ ಅದನ್ನು ಗರ್ಭಾಶಯದಲ್ಲಿ ಇರಿಸಿದೆವು. ಅದು ಸಫಲವಾಗಿದ್ದು ಭ್ರೂಣ ಬೆಳೆದಿದೆ," ಎಂದು ವಿವರಿಸಿದ್ದಾರೆ. "ಎಂಟು ತಿಂಗಳ ಬಳಿಕ ಭ್ರೂಣವು ಸಂಪೂರ್ಣವಾಗಿ ಬೆಳೆದಿದ್ದು, ಈಗ ಜನನ ನೀಡಿದ್ದಾರೆ," ಎಂದು ಹೇಳಿದ್ದಾರೆ.
ಜುಲೈನಲ್ಲಿ ಇಂತಹದ್ದೆ ಒಂದು ಘಟನೆ ನಡೆದಿತ್ತು. ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ವಿವಾಹವಾದ ಎಂಟು ವರ್ಷದ ಬಳಿಕ ಐವಿಎಫ್ ತಂತ್ರಜ್ಞಾನದ ಮೂಲಕ ಮಗುವಿಗೆ ಜನ್ಮ ನೀಡಿದ್ದರು, ಆದರೆ ನಾಲ್ಕು ಮಕ್ಕಳಿಗೆ ಜನನ ನೀಡಿದ್ದಾರೆ. ಮೂರು ಗಂಡು ಮಕ್ಕಳು ಹಾಗೂ ಒಂದು ಹೆಣ್ಣು ಮಗುವಿಗೆ ಮಹಿಳೆ ಜನನ ನೀಡಿದ್ದಾರೆ.
(ಒನ್‌ಇಂಡಿಯಾ ಸುದ್ದಿ)












Click it and Unblock the Notifications