US Iran Israel War: ಮಧ್ಯಪ್ರಾಚ್ಯ ಸಂಘರ್ಷ ತೀವ್ರ: ಇರಾನ್–ಇಸ್ರೇಲ್ ಉದ್ವಿಗ್ನತೆ: ಹಾರ್ಮುಜ್ ಜಲಸಂಧಿ ನಮ್ಮ ವಶದಲ್ಲಿ: ಟ್ರಂಪ್
US-Iran-Israel war: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷವು ಸುದೀರ್ಘ ಒಂದೂವರೆ ತಿಂಗಳಿನ ನಂತರವೂ ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಪಶ್ಚಿಮ ಏಷ್ಯಾ ಸಂಘರ್ಷವು ತಾರ್ಕಿಕ ಅಂತ್ಯ ಕಾಣದೆ ಇರುವಾಗಲೇ ದಕ್ಷಿಣ ಲೆಬನಾನ್‌ನ ಮೇಲೆ ಇಸ್ರೇಲ್‌ನ ನಿರಂತರ ದಾಳಿಗಳನ್ನು ಇರಾನ್ ತೀವ್ರವಾಗಿ ಖಂಡಿಸಿದೆ. ಇಸ್ರೇಲ್ - ಲೆಬನಾನ್‌ನ ಮೇಲೆ ಮಾಡಿದ ದಾಳಿಯಲ್ಲಿ ಪತ್ರಕರ್ತ ಸೇರಿದಂತೆ ಐವರು ಮೃತಪಟ್ಟಿದ್ದಾರೆ ಎಂದು ಲೆಬನಾನ್‌ನ ರಾಷ್ಟ್ರೀಯ ಸುದ್ದಿ ಸಂಸ್ಥೆ ಹೇಳಿದೆ. ಈ ದಾಳಿಯು ಇರಾನ್ - ಅಮೆರಿಕ ಹಾಗೂ ಇಸ್ರೇಲ್‌ನ ನಡುವೆ ನಡೆಯಬೇಕಾಗಿದ್ದ ಕದನ ವಿರಾಮ ಒಪ್ಪಂದಕ್ಕೆ ತಣ್ಣೀರು ಎರಚಿದಂತೆ ಆಗಿದೆ.
ಈ ನಡುವೆ ಇಸ್ರೇಲ್‌ನ ದಾಳಿಗಳಿಂದಾಗಿ ಇರಾನ್ ಸಹ ತಿರುಗಿ ಬಿದ್ದಿದೆ. ಯುದ್ಧ ವಿರಾಮ ವಿಸ್ತರಣೆಯ ನಂತರವೂ ಅಮೆರಿಕದ ನೌಕಾ ದಿಗ್ಬಂಧನ ಜಾರಿಯಲ್ಲಿರುವುದರಿಂದಾಗಿ ಹಾರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯುವುದಿಲ್ಲ ಎಂದು ಇರಾನ್ ಬುಧವಾರ ಹೇಳಿದೆ. ಈ ಜಲಮಾರ್ಗವನ್ನು ದಾಟಲು ಪ್ರಯತ್ನಿಸುತ್ತಿರುವ ಎರಡು ಹಡಗುಗಳನ್ನು ವಶಪಡಿಸಿಕೊಳ್ಳುವುದಾಗಿ ಇರಾನ್ ಘೋಷಿಸಿದೆ.

ಪಾಕಿಸ್ತಾನದಲ್ಲಿ ಎರಡನೇ ಹಂತದ ಮಾತುಕತೆ
ಇನ್ನು ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಏಪ್ರಿಲ್11 ಹಾಗೂ 12ರಂದು ಇರಾನ್ ಮತ್ತು ಅಮೆರಿಕದ ನಡುವೆ ಶಾಂತಿ ಮಾತುಕತೆ ನಡೆದಿತ್ತು. ಆದರೆ ಎರಡೂ ದೇಶಗಳು ಯಾವುದೇ ಒಮ್ಮತಕ್ಕೆ ಬರಲು ಸಾಧ್ಯವಾಗದೆ, ಮಾತುಕತೆ ಮುಕ್ತಾಯವಾಗಿತ್ತು. ಇದೀಗ ಎರಡನೇ ಹಂತದ ಮಾತುಕತೆಯ ಬಗ್ಗೆ ಚರ್ಚೆ ನಡೆದಿದೆ. ಮುಂದಿನ ಹಂತದ ಮಾತುಕತೆಗಳು ಇನ್ನೂ ಅನಿಶ್ಚಿತವಾಗಿರುವಾಗಲೇ ಲೆಬನಾನ್‌ನ ಮೇಲೆ ತೀವ್ರ ದಾಳಿಗಳು ನಡೆದಿವೆ. ಪಾಕಿಸ್ತಾನವು ಇರಾನ್ - ಅಮೆರಿಕದ ನಡುವೆ ಶಾಂತಿ ಒಪ್ಪಂದಕ್ಕೆ ನಿರಂತರವಾಗಿ ಪ್ರಯತ್ನಿಸುತ್ತಿದೆ ಎಂದು ಹೇಳಲಾಗಿದೆ. ಇರಾನ್‌ನೊಂದಿಗಿನ ಎರಡನೇ ಸುತ್ತಿನ ಮಾತುಕತೆಗೆ ಸಂಬಂಧಿಸಿದಂತೆ ಒಳ್ಳೆಯ ಸುದ್ದಿ ಶುಕ್ರವಾರ ಬರಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಸುಳಿವು ನೀಡಿದ್ದಾರೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
ಹಾರ್ಮುಜ್ ಜಲಸಂಧಿಯ ಮೇಲೆ ಸಂಪೂರ್ಣ ನಿಯಂತ್ರಣ: ಟ್ರಂಪ್
ಇನ್ನು ಹಾರ್ಮುಜ್ ಜಲಸಂಧಿಯ ಮೇಲೆ ಸಂಪೂರ್ಣ ನಿಯಂತ್ರಣ ಪಡೆದುಕೊಂಡಿರುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಗುರುವಾರ ಹೇಳಿದ್ದಾರೆ. ಅಮೆರಿಕ ನೌಕಾಪಡೆಯ ಸ್ಪಷ್ಟ ಅನುಮತಿಯಿಲ್ಲದೆ ಯಾವುದೇ ಹಡಗು ಪ್ರಮುಖ ಜಲಮಾರ್ಗವನ್ನು ದಾಟಲು ಸಾಧ್ಯವಿಲ್ಲ ಎಂದು ಅವರು ಘೋಷಿಸಿದ್ದಾರೆ. ಟ್ರೂತ್ ಸೋಷಿಯಲ್‌ನಲ್ಲಿ ಈ ಸಂಬಂಧ ಅವರು ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ಜಲಸಂಧಿಯನ್ನು ಈಗ ಪರಿಣಾಮಕಾರಿಯಾಗಿ ಮುಚ್ಚಲಾಗಿದೆ ಮತ್ತು ಟೆಹ್ರಾನ್ ಮಾತುಕತೆಯ ಮೂಲಕ ಇತ್ಯರ್ಥಕ್ಕೆ ಒಪ್ಪುವವರೆಗೆ ಅಮೆರಿಕದ ಕಟ್ಟುನಿಟ್ಟಾದ ಮೇಲ್ವಿಚಾರಣೆಯಲ್ಲಿ ಈ ಪ್ರದೇಶ ಇರಲಿದೆ ಎಂದಿದ್ದಾರೆ.
ನಿಯಮ ಉಲ್ಲಂಘಿಸಿದರೆ ದಾಳಿ
ಇನ್ನು ಮಧ್ಯಪ್ರಾಚ್ಯದ ಹಾರ್ಮುಜ್ ಜಲಸಂಧಿಯಲ್ಲಿ ಅಪ್ಪಣೆ ಇಲ್ಲದೆ ಪ್ರವೇಶಿಸುವುದಕ್ಕೆ ಪ್ರಯತ್ನಿಸಿದರೆ, ಯಾವುದೇ ಹಡಗಿನ ಮೇಲಾದರೂ ದಾಳಿ ಮಾಡುವಂತೆ ಯುನೈಟೆಡ್ ಸ್ಟೇಟ್ಸ್ ನೌಕಾಪಡೆಗೆ ನಿರ್ದೇಶನ ನೀಡಿರುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಘೋಷಿಸಿದ್ದಾರೆ. ತಮ್ಮ ಟ್ರೂತ್ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಟ್ವೀಟ್ ಮಾಡಿರುವ ಅವರು, ಅಂತಹ ನೌಕೆಗಳು ಸಣ್ಣ ಪ್ರಮಾಣದಲ್ಲಿದ್ದರೂ ಸಹ ಅವುಗಳನ್ನು ತಟಸ್ಥಗೊಳಿಸುವಲ್ಲಿ ಯಾವುದೇ ಹಿಂಜರಿಕೆ ಬೇಡ ಎಂದು ಸೇನೆಗೆ ನಿರ್ದೇಶನ ನೀಡಿದ್ದಾರೆ. ಇರಾನಿನ ಸಂಪೂರ್ಣ ನೌಕಾಪಡೆಯು ಈ ಹಿಂದೆ ನಿಷ್ಕ್ರಿಯಗೊಂಡಿತ್ತು ಎಂದು ಹೇಳಿದ್ದಾರೆ.












Click it and Unblock the Notifications