ಅಫ್ಘಾನಿಸ್ತಾನದ ಶಾಲೆಗಳಲ್ಲಿ ಬಾಲಕಿಯರಿಗೆ ಶೀಘ್ರ ಪ್ರವೇಶ
ಕಾಬೂಲ್, ಅಕ್ಟೋಬರ್ 16: ಅಫ್ಘಾನಿಸ್ತಾನದ ಶಾಲೆಗಳಿಗೆ ಬಾಲಕಿಯರಿಗೆ ತಾಲಿಬಾನ್ ಶೀಘ್ರ ಪ್ರವೇಶ ನೀಡಲಿದೆ ಎಂದು ಯುನಿಸೆಫ್ ಹೇಳಿದೆ.
ಅಫ್ಘಾನಿಸ್ತಾನದಲ್ಲಿ ಬಾಲಕಿಯರಿಗೆ ಮಾಧ್ಯಮಿಕ ಶಾಲೆಗಳಿಗೆ ಪ್ರವೇಶಾವಕಾಶ ಕಲ್ಪಿಸುವ ಕುರಿತು ಶೀಘ್ರದಲ್ಲೇ ಘೋಷಣೆ ಪ್ರಕಟಿಸಲಾಗುವುದು ಎಂದು ತಾಲಿಬಾನ್ ಹೇಳಿದೆ ಎಂದು ಯುನಿಸೆಫ್ ತಿಳಿಸಿದೆ.
ಅಫ್ಘಾನಿಸ್ತಾನದ 34 ಪ್ರಾಂತ್ಯಗಳ ಪೈಕಿ ವಾಯುವ್ಯ ಭಾಗದ ಬಾಲ್ಖ್, ಜವ್ಜಾನ್ ಹಾಗೂ ಸಮಂಗನ್, ಈಶಾನ್ಯದಲ್ಲಿ ಕುಂಡುಜ್ ಹಾಗೂ ನೈಋತ್ಯದಲ್ಲಿರುವ ಉರೋಜ್ಗನ್ ಪ್ರಾಂತ್ಯಗಳಲ್ಲಿ ಮಾಧ್ಯಮಿಕ ಶಾಲೆಗಳಿಗೆ ಬಾಲಕಿಯರು ಹೋಗಲು ಈಗಾಗಲೇ ಅವಕಾಶ ನೀಡಲಾಗಿದೆ ಎಂದು ಯುನಿಸೆಫ್‌ನ ಉಪ ಕಾರ್ಯನಿರ್ವಾಹಕ ಒಮರ್ ಅಬ್ದಿ ತಿಳಿಸಿದ್ದಾರೆ.

ಆರನೇ ತರಗತಿ ಬಳಿಕ ಎಲ್ಲಾ ಬಾಲಕಿಯರು ತಮ್ಮ ವಿದ್ಯಾಭ್ಯಾಸ ಮುಂದುವರೆಸಲು ಅನುವು ಮಾಡಿಕೊಡುವ ಕುರಿತು ನಿಯಮಗಳನ್ನು ರೂಪಿಸುತ್ತಿರುವುದಾಗಿ ತಾಲಿಬಾನ್ ಶಿಕ್ಷಣ ಸಚಿವರು ತಿಳಿಸಿದ್ದಾರೆ. ಈ ಕುರಿತು ಒಂದೆರಡು ತಿಂಗಳುಗಳಲ್ಲಿ ಅಧಿಕೃತ ಪ್ರಕಟಣೆ ಹೊರಡಿಸಲಾಗುವುದು ಎಂದು ಹೇಳಿದ್ದಾರೆ.
ಕಳೆದ ವಾರ ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್‌ಗೆ ಭೇಟಿ ನೀಡಿದ ವೇಳೆ ಈ ವಿಷಯ ಕುರಿತು ಚರ್ಚಿಸಲಾಗಿದೆ. ಮಹಿಳೆಯರ ಶಿಕ್ಷಣಕ್ಕೆ ಷರತ್ತುಬದ್ಧ ಅನುಮತಿ: ಮಹಿಳೆಯರ ಶಿಕ್ಷಣದ ವಿಷಯದಲ್ಲಿ ಕಠಿಣ ನಿಲುವುಗಳನ್ನು ಹೊಂದಿರುವ ತಾಲಿಬಾನ್ ಉಗ್ರರು, ಮಹಿಳೆಯರ ಉನ್ನತ ಶಿಕ್ಷಣಕ್ಕೆ ಷರತ್ತಿನ ಅನುಮತಿ ನೀಡಿದ್ದರು.
ಈ ಕುರಿತು ಹೇಳಿಕೆ ನೀಡಿರುವ ತಾಲಿಬಾನ್ ಸರ್ಕಾರ, ಮುಂದಿನ ದಿನಗಳಲ್ಲೂ ದೇಶದ ಮಹಿಳೆಯರು ಸ್ನಾತಕೋತ್ತರ ಪದವಿ ಸೇರಿ ವಿವಿಗಳಲ್ಲಿ ಉನ್ನತ ಶಿಕ್ಷಣ ಪಡೆಯಬಹುದು. ಆದರೆ ತರಗತಿ ಕೊಠಡಿಗಳು ಯುವತಿ ಮತ್ತು ಯುವಕರಿಗೆ ಪ್ರತ್ಯೇಕವಾಗಿರುತ್ತವೆ. ಜೊತೆಗೆ ಇಸ್ಲಾಮಿಕ್ ವಸ್ತ್ರ ಸಂಹಿತೆ ಕಡ್ಡಾಯ ಎಂದು ತಾಲಿಬಾನ್ ಸರ್ಕಾರ ಸ್ಪಷ್ಟಪಡಿಸಿದೆ.
ಹೊಸ ಶಿಕ್ಷಣ ನೀತಿ ಬಗ್ಗೆ ಮಾತನಾಡಿದ ನೂತನ ಶಿಕ್ಷಣ ಸಚಿವ ಅಬ್ದುಲ್ ಹಕ್ಕಾನಿ, 'ತಾಲಿಬಾನ್ 20 ವರ್ಷಗಳ ಹಿಂದಕ್ಕೆ ಹೋಗಲು ಇಷ್ಟಪಡಲ್ಲ. ಹಾಗಾಗಿ ಮಹಿಳೆಯರ ಶಿಕ್ಷಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ ಪುರುಷ ಮತ್ತು ಮಹಿಳೆಯರ ಸಹ ಶಿಕ್ಷಣಕ್ಕೆ ಅವಕಾಶ ನೀಡುವುದಿಲ್ಲ. ಮಹಿಳಾ ವಿದ್ಯಾರ್ಥಿಗಳು ಹಿಜಾಬ್(ಬುರ್ಖಾ) ಧರಿಸಬೇಕು ಎಂದು ಹೇಳಿದರು. ಆದರೆ ಇದು ಕೇವಲ ಶಿರಸ್ತಾ್ರಣವೋ ಅಥವಾ ಕಡ್ಡಾಯವಾಗಿ ಮುಖದ ಮೇಲಿನ ಹೊದಿಕೆಯೋ ಎಂಬುದನ್ನು ಹಕ್ಕಾನಿ ವಿವರಿಸಿಲ್ಲ.
ತಾಲಿಬಾನ್ ಈ ಹಿಂದೆ ಮಹಿಳೆಯರಿಗೆ ಶಿಕ್ಷಣ ನಿರಾಕರಿಸಿತ್ತು: 1990ರ ದಶಕದಲ್ಲಿ ಅಫ್ಘಾನ್‌ನಲ್ಲಿ ಆಳ್ವಿಕೆ ನಡೆಸಿದ್ದ ತಾಲಿಬಾನ್ ಮಹಿಳೆಯರಿಗೆ ಶಿಕ್ಷಣವನ್ನು ನಿರಾಕರಿಸಿತ್ತು ಮತ್ತು ಸಾರ್ವಜನಿಕ ಜೀವನದಿಂದಲೂ ಹೊರಗಿಟ್ಟಿತ್ತು.
1996ರಿಂದ 2001ರವರೆಗಿನ ತಮ್ಮ ಮೊದಲ ಅಧಿಕಾರಾವಧಿಯಲ್ಲಿ ತಾಲಿಬಾನಿಗಳು ಕ್ರೂರವಾದ ಕಾನೂನುಗಳನ್ನು ಹೇರಿದ್ದರು. ಮಹಿಳೆಯರು ಸಂಪೂರ್ಣವಾಗಿ ತಮ್ಮ ಮುಖ ಮುಚ್ಚಿಕೊಳ್ಳದೆ ಮತ್ತು ಪುರುಷ ಸಂಬಂಧಿ ಜೊತೆಗಿಲ್ಲದೆ ಮನೆಯಿಂದ ಹೊರಗೆ ಕಾಲಿಟ್ಟರೆ, ಅವರನ್ನು ತಾಲಿಬಾನಿ ಧಾರ್ಮಿಕ ಪೊಲೀಸರು ಸಾರ್ವಜನಿಕವಾಗಿ ಥಳಿಸುತ್ತಿದ್ದರು.
ತಾಲಿಬಾನ್ ಹೆಂಗಸರ ಹಕ್ಕುಗಳನ್ನು ಗೌರವಿಸುವುದಾಗಿ ಹೇಳಿಕೊಂಡಿದ್ದರೂ, ಅಫ್ಘಾನಿಸ್ತಾನ ಮಹಿಳೆಯರಿಗೆ ನೀಡಿರುವ ಸ್ವಾತಂತ್ರ್ಯವನ್ನು ತಾಲಿಬಾನ್ ಖಂಡಿತವಾಗಿಯೂ ಕಿತ್ತುಕೊಳ್ಳಲಿದೆ ಎಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ.
ಆದರೆ, ತಾಲಿಬಾನ್ ವಕ್ತಾರ ಸುಹೈಲ್ ಶಾಹೀನ್, ತಾಲಿಬಾನ್ ತಾನು ಸ್ವಾಧೀನಪಡಿಸಿಕೊಂಡ ಪ್ರದೇಶಗಳಲ್ಲಿ ಮಹಿಳೆಯರಿಗೆ ಮತ್ತು ಹೆಣ್ಣು ಮಕ್ಕಳಿಗೆ ಶಿಕ್ಷಣ ಪಡೆಯಲು ಅವಕಾಶ ನೀಡುತ್ತಿತ್ತು ಎಂದು ಹೇಳಿದ್ದಾರೆ.
ಅಫ್ಘಾನಿಸ್ತಾನದ ಮೊದಲ ಮಹಿಳಾ ಪೈಲೆಟ್ ಆಗಿದ್ದ ರೆಹಮಾನಿ ಪ್ರಕಾರ, ತಾಲಿಬಾನಿಗಳು "ಮಹಿಳೆಯರಿಗೆ ಹೆಚ್ಚು ನೋವು ಕೊಡುತ್ತಾರೆ", ತಾಲಿಮಾನಿಗಳು ಈಗ ನೀಡಿರುವ ಭರವಸೆಯನ್ನು ಉಳಿಸಿಕೊಳ್ಳುವ ಬಗ್ಗೆ ರೆಹಮಾನಿಗೆ ಸಂದೇಹವಿದೆ.
ಮಹಿಳೆಯರು ವಿಶ್ವವಿದ್ಯಾನಿಲಯಗಳಲ್ಲಿ ಅಧ್ಯಯನ ನಡೆಸಲು ತಾಲಿಬಾನ್ ಅವಕಾಶ ನೀಡಿದೆ. ಆದರೆ, ಹೊಸ ನಿಯಮಗಳ ಅಡಿಯಲ್ಲಿ ಯುವಕ ಮತ್ತು ಯುವತಿಯರು ಒಟ್ಟಿಗೆ ಕಲಿಕೆಯಲ್ಲಿ ಭಾಗಿಯಾಗಲು ಅವಕಾಶ ಇರುವುದಿಲ್ಲ ಎಂದು ತಾಲಿಬಾನ್ ಹಂಗಾಮಿ ಉನ್ನತ ಶಿಕ್ಷಣ ಸಚಿವ ಭಾನುವಾರ ಹೇಳಿದ್ದಾರೆ.
ತಾಲಿಬಾನ್ ಆಡಳಿತ 90ರ ದಶಕದಲ್ಲಿ ಹುಡುಗಿಯರು ಮತ್ತು ಮಹಿಳೆಯರು ಶಿಕ್ಷಣ ಪಡೆಯುವುದನ್ನು ನಿಷೇಧಿಸಿತ್ತು, ಆಗಸ್ಟ್ 15 ರಂದು ಮತ್ತೆ ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದಿರುವ ತಾಲಿಬಾನ್ ಗಳು ಭಿನ್ನ ಆಡಳಿತ ನೀಡುವ ಭರವಸೆ ನೀಡಿದ್ದರು.
ಶರಿಯಾ ಕಾನೂನಿನ ಅನ್ವಯ ಅಫ್ಘಾನಿಸ್ತಾನದ ಜನತೆ ಉನ್ನತ ಶಿಕ್ಷಣ ಪಡೆಯುವುದನ್ನು ಮುಂದುವರೆಸಬಹುದಾಗಿದೆ. ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕವಾಗಿ ಕಲಿಯುವ ವಾತಾವರಣ ಸೃಷ್ಟಿಸಲಾಗುತ್ತದೆ ಎಂದು ತಾಲಿಬಾನ್ ಹಂಗಾಮಿ ಉನ್ನತ ಶಿಕ್ಷಣ ಸಚಿವ ಅಬ್ದುಲ್ ಬಖಿ ಹಖಾನಿ ಸಭೆಯಲ್ಲಿ ತಿಳಿಸಿದರು.
ಇಸ್ಲಾಮಿಕ್ , ರಾಷ್ಟ್ರೀಯತೆ ಮತ್ತು ಐತಿಹಾಸಿಕ ಮೌಲ್ಯಗಳ ಆಧಾರದ ಮೇಲೆ ಇಸ್ಲಾಮಿಕ್ ಶೈಕ್ಷಣಿಕ ವ್ಯವಸ್ಥೆ ಸೃಷ್ಟಿಸುವುದು ಹಾಗೂ ಮತ್ತೊಂದು ಕಡೆ ಇತರೆ ರಾಷ್ಟ್ರಗಳೊಂದಿಗೆ ಸ್ಪರ್ಧಿಸುವುದು ತಾಲಿಬಾನ್ ನಿರೀಕ್ಷೆಯಾಗಿದೆ ಎಂದಿದ್ದಾರೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮಟ್ಟದಿಂದಲೂ ಹುಡುಗು- ಹುಡುಗಿ ಪ್ರತ್ಯೇಕವಾಗಿ ಕಲಿಯುವ ವ್ಯವಸ್ಥೆ ಅಫ್ಘಾನಿಸ್ತಾನದಲ್ಲಿದೆ.












Click it and Unblock the Notifications