Pakistan Crisis: ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಪಾಕಿಸ್ತಾನ: ಪೆಟ್ರೋಲ್ - ಡೀಸೆಲ್ ಬೆಲೆ ಶೇ.20ರಷ್ಟು ಹೆಚ್ಚಳ, ಕಾರಣವೇನು
Pakistan Crisis: ಕಳೆದ ಕೆಲವೇ ತಿಂಗಳುಗಳ ಮುಂಚೆ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಪಾಕಿಸ್ತಾನವು ಇದೀಗ ಮತ್ತೊಮ್ಮೆ ಅದೇ ಪರಿಸ್ಥಿತಿಯನ್ನು ತಲುಪಿದೆ. ಅಮೆರಿಕ, ಇಸ್ರೇಲ್ Vs ಇರಾನ್ ದೇಶಗಳ ನಡುವೆ ನಡೆಯುತ್ತಿರುವ ಯುದ್ಧವು 15 ದಿನಗಳನ್ನು ದಾಟಿದೆ. ಇದರ ಪರಿಣಾಮವು ಭಾರತ ಸೇರಿದಂತೆ ವಿವಿಧ ದೇಶಗಳ ಮೇಲೆ ಆಗುತ್ತಿವೆ. ಆದರೆ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದಿಂದ ಪಾಕಿಸ್ತಾನಕ್ಕೆ ತೀವ್ರ ಆರ್ಥಿಕ ಸಂಕಷ್ಟವನ್ನು ತಂದೊಡ್ಡಿದೆ. ಇದರೊಂದಿಗೆ ಆಫ್ಗಾನಿಸ್ತಾನದ ದಾಳಿ ಹಾಗೂ ಬಲೂಚಿಸ್ತಾನದ ಬಲೂಚ್ ಲಿಬರೇಷನ್ ಆರ್ಮಿಯ ಬಂಡುಕೋರರು ನಡೆಸಿರುವ ದಾಳಿಯಿಂದ ನಲುಗಿದೆ. ಪಾಕಿಸ್ತಾನವು ಅಮೆರಿಕ ಸೇರಿದಂತೆ ವಿವಿಧ ದೇಶಗಳಿಂದ ತೆಗೆದುಕೊಂಡಿರುವ ಸಾಲದ ಪ್ರಮಾಣವು ವರ್ಷದಿಂದ ವರ್ಷಕ್ಕೆ ಬೆಳೆಯುತ್ತಲೇ ಇದೆ. ಈಗಾಗಲೇ ಭಾರೀ ಸಾಲವನ್ನು ಮಾಡಿಕೊಂಡಿರುವುದರಿಂದ ಸಣ್ಣ ಸಂಕಷ್ಟ ಎದುರಾದರೂ ಪಾಕಿಸ್ತಾನವು ಇನ್ನಿಲ್ಲದಂತೆ ವಿಲವಿಲ ಎನ್ನುವ ಪರಿಸ್ಥಿತಿ ಸೃಷ್ಟಿಯಾಗಿದೆ. ಮಧ್ಯಪ್ರಾಚ್ಯದಲ್ಲಿ ಎದುರಾಗಿರುವ ಯುದ್ಧದಿಂದ ಇಡೀ ವಿಶ್ವವೇ ಸಂಕಷ್ಟಕ್ಕೆ ಸಿಲುಕಿದೆ. ಆದರೆ, ಪಾಕಿಸ್ತಾನವು ಮತ್ತೆ ದಿವಾಳಿ ಆಗುವ ಕಡೆ ಹೆಜ್ಜೆ ಇರಿಸಿದೆ.
ಇರಾನ್ vs ಇಸ್ರೇಲ್ ನಡುವಿನ ಸಂಘರ್ಷವು ಪಾಕಿಸ್ತಾನಕ್ಕೆ ಗಂಭೀರ ಆರ್ಥಿಕ ಬಿಕ್ಕಟ್ಟನ್ನು ತಂದೊಡ್ಡಿದೆ. ಪಾಕ್ ಹೆಚ್ಚಾಗಿ ಹಾರ್ಮುಜ್ ಜಲಸಂಧಿ ಮಾರ್ಗವಾಗಿ ಇಂಧನ ಆಮದು ಮಾಡಿಕೊಳ್ಳುತ್ತದೆ. ಈಗ ಯುದ್ಧ ನಡೆಯುತ್ತಿರುವುದರಿಂದ ಸಂಕಷ್ಟ ಎದುರಾಗಿದೆ. ಇದು ಪಾಕಿಸ್ತಾನದ ಮೇಲೆ ನೇರ ಪರಿಣಾಮವನ್ನು ತಂದೊಡ್ಡಿದೆ. ಪರ್ಷಿಯನ್ ಕೊಲ್ಲಿಯಲ್ಲಿ ಹಡಗುಗಳ ಮೇಲಿನ ದಾಳಿಯಿಂದಾಗಿ ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವ ಪಾಕಿಸ್ತಾನದ ತೈಲ ಟ್ಯಾಂಕರ್ಗಳ ಸಂಖ್ಯೆ ಕಡಿಮೆಯಾಗಿದೆ. ಇಂಧನ ಬೆಲೆಗಳು ಪಾಕಿಸ್ತಾನದಲ್ಲಿ ಏಕಾಏಕಿ ವಿಪರೀತವಾಗಿ ಹೆಚ್ಚಳವಾಗಿದೆ.

ಇಂಧನ ಬೆಲೆ ದಿಢೀರ್ ಶೇ.20ರಷ್ಟು ಹೆಚ್ಚಳ
ಮಧ್ಯಪ್ರಾಚ್ಯದಲ್ಲಿ ಕಳೆದ 17 ದಿನಗಳಿಂದಲೂ ಯುದ್ಧ ನಡೆಯುತ್ತಿದೆ. ಈ ಯುದ್ಧದ ತೀವ್ರತೆಯು ಭಾರತವೂ ಸೇರಿದಂತೆ ವಿವಿಧ ದೇಶಗಳ ಮೇಲೆ ಪರಿಣಾಮ ಬೀರಿದೆ. ಆದರೆ, ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿ ಸಮಸ್ಯೆಗಳಿದ್ದರೂ, ಪರಿಸ್ಥಿತಿ ನಿಯಂತ್ರಣದಲ್ಲಿದೆ. ಆದರೆ, ಪಾಕಿಸ್ತಾನದಲ್ಲಿ ಮತ್ತೆ ಜನ ಬೀದಿಗೆ ಇಳಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಪಾಕಿಸ್ತಾನದಲ್ಲಿ ಇಂಧನ ಖಾಲಿಯಾಗುವ ಭೀತಿಯಿಂದ ಜನ ಪೆಟ್ರೋಲ್ ಬಂಕ್ಗಳಲ್ಲಿ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಇಂಧನದ ಭೀತಿಯಿಂದ ಜನ ಪೆಟ್ರೋಲ್ ಮತ್ತು ಡೀಸೆಲ್ ಖರೀದಿ ಮಾಡುವುದನ್ನು ತಪ್ಪಿಸುವ ಉದ್ದೇಶದಿಂದ ಈಚೆಗೆ ಪಾಕಿಸ್ತಾನವು ಇಂಧನ ಬೆಲೆಗಳನ್ನು ಶೇ.20ರಷ್ಟು ಹೆಚ್ಚಳ ಮಾಡಿದೆ. ಆದರೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯು ಏಕಾಏಕಿ ಹೆಚ್ಚಳವಾಗಿರುವುದು ಪಾಕಿಸ್ತಾನದ ಜನರ ಮೇಲೆ ನೇರವಾದ ಪರಿಣಾಮವನ್ನು ಬೀರಿದೆ. ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಹೆಚ್ಚಳದಿಂದಾಗಿ ಪಾಕ್ನಲ್ಲಿ ವಿವಿಧ ವಸ್ತುಗಳ ಬೆಲೆಯು ಏಕಾಏಕಿ ಹೆಚ್ಚಳವಾಗಿದೆ.
ಪಾಕಿಸ್ತಾನವು ಆಮದು ಮಾಡಿಕೊಳ್ಳುವ ಇಂಧನದ ಮೇಲೆ ಬಹುತೇಕ ಅವಲಂಬಿತವಾಗಿದೆ. ಕಚ್ಚಾ ತೈಲದ ಶೇ. 85ಕ್ಕಿಂತ ಹೆಚ್ಚು ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ನಿಂದ ಪಾಕಿಸ್ತಾನವು ಆಮದು ಮಾಡಿಕೊಳ್ಳುತ್ತದೆ. ಇನ್ನು ಅದರಲ್ಲಿ ಹೆಚ್ಚಿನವು ಹಾರ್ಮುಜ್ ಜಲಸಂಧಿಯ ಮೂಲಕವೇ ಹಾದು ಬರುತ್ತದೆ.
ಹಾರ್ಮುಜ್ ಜಲಸಂಧಿಯಲ್ಲಿ ತೀವ್ರ ದಾಳಿಗಳು ನಡೆಯುತ್ತಿವೆ. ಈ ಪ್ರದೇಶದಲ್ಲಿ ನಡೆಯುತ್ತಿರುವ ಸಂಘರ್ಷದಿಂದಾಗಿ ಹಡಗುಗಳ ಸಂಚಾರ ಭಾರೀ ಕಷ್ಟವನ್ನು ತಂದೊಡ್ಡಿದೆ. ಫೆಬ್ರವರಿ ಅಂತ್ಯದಿಂದ ಪರ್ಷಿಯನ್ ಕೊಲ್ಲಿಯಲ್ಲಿ ತೈಲ ಟ್ಯಾಂಕರ್ಗಳು ಸೇರಿದಂತೆ ಕನಿಷ್ಠ 16 ಹಡಗುಗಳ ಮೇಲೆ ದಾಳಿ ಮಾಡಲಾಗಿದೆ. ಈ ಭದ್ರತಾ ಅಪಾಯಗಳಿಂದಾಗಿ ತೈಲ ಟ್ಯಾಂಕರ್ಗಳ ಸಂಚಾರ ದುಸ್ತರವಾಗಿದೆ. ಪಾಕಿಸ್ತಾನದ ಪ್ರಮುಖ ಆರ್ಥಿಕ ಕೇಂದ್ರವಾಗಿರುವ ಕರಾಚಿ ಬಳಿ ಹಲವು ಹಡಗುಗಳು ನಿಂತಲ್ಲೇ ನಿಂತಿವೆ.
ಈ ಅಡಚಣೆಯು ಪಾಕ್ನಲ್ಲಿ ಇಂಧನ ಪೂರೈಕೆಯನ್ನು ಉಸಿರುಗಟ್ಟಿಸಿದೆ. ಪರಿಸ್ಥಿತಿಯನ್ನು ನಿರ್ವಹಿಸಲು, ಅಧಿಕಾರಿಗಳು ಮನೆಗಳಿಂದಲೇ ಕೆಲಸ ಮಾಡುವುದು, ಕೆಲವು ಶಾಲೆಗಳನ್ನು ಆನ್ಲೈನ್ ತರಗತಿಗಳಿಗೆ ಪರಿವರ್ತಿಸುವುದು, ಅಧಿಕೃತ ಪ್ರಯಾಣವನ್ನು ಕಡಿಮೆ ಮಾಡುವುದು ಮತ್ತು ವಾರದಲ್ಲಿ ನಾಲ್ಕು ದಿನಗಳ ಕೆಲಸದ ಅವಧಿಯನ್ನು ಪರಿಗಣಿಸುವುದು ಸೇರಿದಂತೆ ಕೆಲವೊಂದು ತುರ್ತು ಕ್ರಮಗಳನ್ನು ಅಲ್ಲಿನ ಸರ್ಕಾರವು ತೆಗೆದುಕೊಂಡಿದೆ. ಆದರೆ ಪರಿಸ್ಥಿತಿ ಕೈ ಮೀರುತ್ತಿರುವುದು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ಗೆ ಸಂಕಷ್ಟವನ್ನು ತಂದೊಡ್ಡಿದೆ.
ಪಾಕಿಸ್ತಾನವು ಸೌದಿ ಅರೇಬಿಯಾಗೆ ಇಂಧನ ಪೂರೈಕೆಗೆ ಸಂಬಂಧಿಸಿದಂತೆ ಮನವಿ ಮಾಡಿದೆ. ಕೆಂಪು ಸಮುದ್ರದ ಬಂದರುಗಳ ಮೂಲಕ ಪರ್ಯಾಯ ಮಾರ್ಗವಾಗಿ ತೈಲವನ್ನು ಸಾಗಿಸಲು ವಿನಂತಿಸಿದೆ. ಮತ್ತೊಂದೆಡೆ, ಆಮದು ಮಾಡಿಕೊಂಡ ದ್ರವೀಕೃತ ನೈಸರ್ಗಿಕ ಅನಿಲ (LNG) ಕೊರತೆಯಿಂದ ಉಂಟಾದ ಸಮಸ್ಯೆಯನ್ನು ನಿವಾರಿಸಲು ಸರ್ಕಸ್ ಮುಂದುವರಿಸಿದೆ.
ಶಾಲಾ - ಕಾಲೇಜುಗಳು ಬಂದ್
ಇಂಧನದ ಸಂಕಷ್ಟವು ಪಾಕಿಸ್ತಾನದಲ್ಲಿ ಅಘೋಷಿತ ಬಂದ್ ವಾತಾವರಣವನ್ನು ನಿರ್ಮಾಣ ಮಾಡಿದೆ. ತೀವ್ರ ಇಂಧನ ಕೊರತೆ ಹಾಗೂ ಇಂಧನ ಬಳಕೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ದೇಶದಾದ್ಯಂತ ಸರ್ಕಾರಿ ಹಾಗೂ ಖಾಸಗಿ ಶಾಲೆಗಳನ್ನು ಮುಂದಿನ ಎರಡು ವಾರಗಳ ಅವಧಿಗೆ ಮುಚ್ಚುವುದಕ್ಕೆ ಪಾಕಿಸ್ತಾನ ಸರ್ಕಾರವು ನಿರ್ಧರಿಸಿದೆ. ಪಾಕ್ ವಿದ್ಯಾರ್ಥಿಗಳು ಶಾಲೆಗೆ ಬರುವುದಕ್ಕೆ ಬಳಸುವ ಸಾರಿಗೆ ವ್ಯವಸ್ಥೆ ಮತ್ತು ಶಾಲೆಗಳನ್ನು ನಡೆಸುವುದಕ್ಕೆ ಬಳಸುವ ವಿದ್ಯುತ್ ಮತ್ತು ಇಂಧನವನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ.
ಕೃಷಿ ಕ್ಷೇತ್ರಕ್ಕೂ ತಟ್ಟಿದ ಸಂಕಷ್ಟ
ಇನ್ನು ಪಾಕಿಸ್ತಾನದಲ್ಲಿ ಎದುರಾಗಿರುವ ಇಂಧನ ಕೊರತೆ ಹಾಗೂ ಆರ್ಥಿಕ ಸಂಕಷ್ಟವು ಅಲ್ಲಿನ ಕೃಷಿ ಕ್ಷೇತ್ರಕ್ಕೂ ಮುಟ್ಟಿದೆ. ಪಾಕಿಸ್ತಾನದ ಆರ್ಥಿಕತೆಗೆ ಕೃಷಿ ಕ್ಷೇತ್ರದಿಂದ ಭಾರೀ ಆದಾಯ ಬರುತ್ತದೆ. ದೇಶದ ಜಿಡಿಪಿಯ ಶೇ.23% ಕ್ಕಿಂತ ಹೆಚ್ಚು ಕೊಡುಗೆ ಕೃಷಿಯಿಂದಲೇ ಬರುತ್ತದೆ. ರೈತರು ವಸಂತ ಕಾಲದ ಸುಗ್ಗಿಗೆ ಸಜ್ಜಾಗುತ್ತಿರುವಾಗಲೇ ಡೀಸೆಲ್ ಇಂಧನ ಬೆಲೆ ಏರಿಕೆ ಆಗಿದೆ. ಇದರಿಂದ ಟ್ರ್ಯಾಕ್ಟರ್ಗಳು ಮತ್ತು ಇತರ ಕೃಷಿ ಉಪಕರಣಗಳ ನಿರ್ವಹಣಾ ವೆಚ್ಚ, ಬೆಳೆಗಳನ್ನು ಮಾರುಕಟ್ಟೆಗಳಿಗೆ ಸಾಗಿಸುವ ವೆಚ್ಚ ದುಬಾರಿಯಾಗಿದ್ದು, ಕೆಲವು ಭಾಗಗಳಲ್ಲಿ ಕೃಷಿ ಉತ್ಪನ್ನಗಳನ್ನು ಚೆಲ್ಲುವ ಪರಿಸ್ಥಿತಿ ಸೃಷ್ಟಿಯಾಗಿದೆ. ಪಾಕಿಸ್ತಾನವು ರಷ್ಯಾದಿಂದ ತೈಲ ಖರೀದಿ ಮಾಡಬೇಕಿತ್ತು ಎಂದು ಇಲ್ಲಿನ ಜನ ಆಗ್ರಹಿಸುತ್ತಿದ್ದಾರೆ. ಆದರೆ ಪಾಕಿಸ್ತಾನ ಈ ನಿಟ್ಟಿನಲ್ಲಿ ಇಲ್ಲಿಯ ವರೆಗೆ ದಿಟ್ಟ ನಿರ್ಧಾರ ತೆಗೆದುಕೊಂಡಿಲ್ಲ.
ಇಂಧನ ಉಳಿತಾಯಕ್ಕೆ ಸರ್ಕಸ್
ಪಾಕಿಸ್ತಾನವು ಇಂಧನ ಉಳಿತಾಯಕ್ಕೆ ಭಾರೀ ಸರ್ಕಸ್ ಮುಂದುವರಿಸಿದೆ. ಆದರಲ್ಲಿ ಪ್ರಮುಖವಾಗಿ
ಇಂಧನ ಬಳಕೆಯನ್ನು ಕಡಿಮೆ ಮಾಡಲು ಸರ್ಕಾರಿ ಕಚೇರಿಗಳಲ್ಲಿ ನಾಲ್ಕು ದಿನಗಳು ಮಾತ್ರ ಕೆಲಸದ ಅವಧಿ ಎಂದು ಘೋಷಿಸಲಾಗಿದೆ.
ಹಲವು ಸರ್ಕಾರಿ ಸಿಬ್ಬಂದಿಗೆ ವರ್ಕ್ ಫ್ರಮ್ ಹೋಮ್ ವ್ಯವಸ್ಥೆ ಕಲ್ಪಿಸಲಾಗಿದೆ.
ಸರ್ಕಾರಿ ವಾಹನಗಳ ಬಳಕೆಯನ್ನು ಕಡಿಮೆ ಮಾಡಲು ಪಾಕ್ ಸರ್ಕಾರವು ನಿರ್ದೇಶನ ನೀಡಿದೆ.
ಅನಗತ್ಯ ವಿದ್ಯುತ್ ಮತ್ತು ಇಂಧನ ಬಳಕೆಯನ್ನು ನಿಯಂತ್ರಿಸಲು ಮುಂದಾಗಿದೆ.
Pakistan Crisis ಸಾಲದ ಸುಳಿಯಲ್ಲಿ ಪಾಕಿಸ್ತಾನ
ಪಾಕಿಸ್ತಾನಕ್ಕೆ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧ ಮಾತ್ರ ಸಂಕಷ್ಟವನ್ನು ತಂದೊಡ್ಡಿಲ್ಲ. ಈಗಾಗಲೇ ಪಾಕಿಸ್ತಾನವು ಆರ್ಥಿಕ ಸಂಕಷ್ಟದಲ್ಲಿತ್ತು. ಪಾಕಿಸ್ತಾನ ಮಾಡಿಕೊಂಡಿರುವ ಸಾಲವು ವಿಪರೀತವಾಗಿದೆ. ಸಾಲದ ಸುಳಿಯಿಂದಾಗಿ ಪಾಕ್ನಲ್ಲಿ ಹಣದುಬ್ಬರ ಗಗನಕ್ಕೇರಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನ ತತ್ತರಿಸುತ್ತಿದ್ದಾರೆ. ಚೀನಾ ಮತ್ತು ಅಂತರರಾಷ್ಟ್ರೀಯ ಹಣಕಾಸು ನಿಧಿಯಿಂದ ಪಾಕಿಸ್ತಾನವು ಭಾರೀ ಮೊತ್ತದ ಸಾಲವನ್ನು ಪಡೆದುಕೊಂಡಿದೆ. ಈ ಸಾಲದ ಬಡ್ಡಿ ಮೊತ್ತವೇ ಪಾಕಿಸ್ತಾನಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ನಮ್ಮ (ಪಾಕಿಸ್ತಾನ) ಆರ್ಥಿಕತೆಯು ತೀವ್ರ ಕುಸಿತ ಕಂಡಿದೆ. ನಮ್ಮ ದೇಶದ ಆರ್ಥಿಕ ಪರಿಸ್ಥಿತಿ ಎಷ್ಟು ಹದಗೆಟ್ಟಿದೆ ಎಂದರೆ, ನಾವು ಯಾವುದಾದರೂ ದೇಶಗಳಿಗೆ ಭೇಟಿ ನೀಡಿದರೆ, ಆ ದೇಶದವರು ನಾವು ಸಹಾಯ ಕೇಳುವುದಕ್ಕೇ ಬಂದಿದ್ದೇವೆ ಎಂದು ಭಾವಿಸುತ್ತಾರೆ ಎಂದು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಈಚೆಗೆ ಹೇಳಿದ್ದರು. ಈಗ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತಿದೆ.
2025-26 ಹಣಕಾಸು ವರ್ಷದಲ್ಲಿ ಮಾತ್ರ ಪಾಕಿಸ್ತಾನವು ಸುಮಾರು 23 ಬಿಲಿಯನ್ ಡಾಲರ್ (ಸುಮಾರು ₹1.9 ಲಕ್ಷ ಕೋಟಿ) ವಿದೇಶಿ ಸಾಲವನ್ನು ತೀರಿಸಬೇಕಾದ ಅನಿವಾರ್ಯ ಪರಿಸ್ಥಿತಿಗೆ ತಲುಪಿದೆ. ದೇಶದ ಒಟ್ಟು ಸಾಲವೇ ಅಂದಾಜು 76 ಟ್ರಿಲಿಯನ್ ಪಾಕಿಸ್ತಾನಿ ರೂಪಾಯಿಗೆ ಏರಿಕೆ ಕಂಡಿದೆ. ಇದರಲ್ಲಿ ದೇಶೀಯ ಸಾಲ ಹಾಗೂ ವಿದೇಶಿ ಸಾಲ ಎರಡು ಸಹ ಸೇರಿದೆ.
ಪಾಕಿಸ್ತಾನದ ಆರ್ಥಿಕತೆಯ ಬಗ್ಗೆ ಜನ ಹೆಚ್ಚಾಗಿ ಕೇಳುವ ಪ್ರಶ್ನೆಗಳು
1. ಪಾಕಿಸ್ತಾನ ಯಾಕೆ ಭಾರೀ ಸಾಲದ ಸಂಕಷ್ಟಕ್ಕೆ ಸಿಲುಕಿದೆ ?
ಪಾಕಿಸ್ತಾನ ವರ್ಷಗಳಿಂದ ವಿದೇಶಿ ಸಾಲಗಳ ಮೇಲೆ ಅವಲಂಬಿತವಾಗಿದ್ದು, ಹೆಚ್ಚಿನ ಆಮದು ಹಾಗೂ ಕಡಿಮೆ ಆದಾಯದಿಂದ ಸಾಲದ ಭಾರ ಹೆಚ್ಚಾಗಿದೆ.
2. ಪಾಕಿಸ್ತಾನ ಯಾವ ದೇಶಗಳಿಂದ ಹೆಚ್ಚು ಸಾಲ ಪಡೆಯುತ್ತಿದೆ ?
ಪಾಕಿಸ್ತಾನವು ಚೀನಾ, ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್ ಹಾಗೂ ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ಸೇರಿದಂತೆ ಹಲವು ದೇಶಗಳಿಂದ ಮತ್ತು ಸಂಸ್ಥೆಗಳಿಂದ ಸಾಲ ಪಡೆದುಕೊಂಡಿದೆ.
3. ಪಾಕಿಸ್ತಾನದ ಒಟ್ಟು ಸಾಲ ಎಷ್ಟು ಇದೆ ?
ಪಾಕಿಸ್ತಾನದ ಒಟ್ಟು ಸಾಲವು ಅಂದಾಜು 76 ಟ್ರಿಲಿಯನ್ ಪಾಕಿಸ್ತಾನಿ ರೂಪಾಯಿಗೆ ಏರಿಕೆ ಕಂಡಿದೆ.
4. ಪಾಕಿಸ್ತಾನಕ್ಕೆ ಇಂಧನ ಕೊರತೆ ಏಕೆ ಉಂಟಾಗಿದೆ?
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದಿಂದ ಹಾರ್ಮುಜ್ ಜಲಸಂಧಿಯಲ್ಲಿ ಹಡಗು ಸಂಚಾರಕ್ಕೆ ಅಡಚಣೆ ಉಂಟಾಗಿ ತೈಲ ಪೂರೈಕೆ ಕಡಿಮೆ ಆಗಿದೆ. ಇದರ ಪರಿಣಾಮ ಪಾಕಿಸ್ತಾನದಲ್ಲಿ ಇಂಧನ ಕೊರತೆ ಎದುರಾಗಿದೆ.
5. ಮಧ್ಯಪ್ರಾಚ್ಯದ ಯುದ್ಧವು ಪಾಕಿಸ್ತಾನಕ್ಕೆ ಹೇಗೆ ಪರಿಣಾಮ ಬೀರಿದೆ?
ತೈಲ ಪೂರೈಕೆ ಅಡಚಣೆಯಿಂದ ಇಂಧನ ಬೆಲೆ ಏರಿಕೆ ಹಾಗೂ ಆರ್ಥಿಕ ಒತ್ತಡ ಹೆಚ್ಚಾಗಿದೆ.
6. ಪಾಕಿಸ್ತಾನದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳಕ್ಕೆ ಕಾರಣವೇನು?
ಇಂಧನ ಕೊರತೆ ಮತ್ತು ಜಾಗತಿಕ ತೈಲ ಬೆಲೆ ಏರಿಕೆಯಿಂದ ಪಾಕಿಸ್ತಾನದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆಗಳು ಸುಮಾರು ಶೇ. 20ರಷ್ಟು ಹೆಚ್ಚಾಗಿವೆ.
7. ಪಾಕಿಸ್ತಾನ ಮತ್ತೆ ದಿವಾಳಿ ಆಗುವ ಪರಿಸ್ಥಿತಿ ಸೃಷ್ಟಿಯಾಗಿದೆಯೇ?
ಭಾರೀ ಸಾಲ, ಹಣದುಬ್ಬರ ಮತ್ತು ಇಂಧನ ಸಂಕಷ್ಟದಿಂದ ಪಾಕಿಸ್ತಾನ ಮತ್ತೆ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದೆ.
8. ಪಾಕಿಸ್ತಾನ ಸರ್ಕಾರ ಯಾವ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ?
ಇಂಧನ ಬಳಕೆಯನ್ನು ಕಡಿಮೆ ಮಾಡಲು ನಾಲ್ಕು ದಿನಗಳ ಕೆಲಸದ ವಾರ, ವರ್ಕ್ ಫ್ರಮ್ ಹೋಮ್, ಶಾಲೆಗಳನ್ನು ತಾತ್ಕಾಲಿಕವಾಗಿ ಮುಚ್ಚುವುದು ಸೇರಿದಂತೆ ಹಲವು ಕ್ರಮಗಳನ್ನು ಪಾಕಿಸ್ತಾನ ಸರ್ಕಾರವು ತೆಗೆದುಕೊಂಡಿದೆ.
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಆಟಕ್ಕೆ ಇಂಗ್ಲೆಂಡ್ ಮೈಕೆಲ್ ವಾಘನ್ ಫಿದಾ; ಬಿಸಿಸಿಐಗೆ ವಿಶೇಷ ಮನವಿ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ












Click it and Unblock the Notifications