Property: ಕಟ್ಟಡ ಮಾಲೀಕರಿಗೆ ಬಂಪರ್ ಆಫರ್: ಶೇ.15ರವರೆಗಿನ ನಿಯಮ ಉಲ್ಲಂಘನೆ ಸಕ್ರಮಕ್ಕೆ ಜಿಬಿಎ ಅವಕಾಶ!
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿ ಕಟ್ಟಡ ಉಪವಿಧಿಗಳ ತಿದ್ದುಪಡಿಗಾಗಿ ಕರಡು ಅಧಿಸೂಚನೆ ಪ್ರಕಟಿಸಿದೆ. ಮುಂದಿನ 30 ದಿನಗಳಲ್ಲಿ ಆಯಾ ನಗರ ಪಾಲಿಕೆಗಳಲ್ಲಿ ಆಕ್ಷೇಪಣೆ ಹಾಗೂ ಸಲಹೆಗಳನ್ನು ಅವಕಾಶ ಕಲ್ಪಿಸಲಾಗಿದೆ ಎಂದು ಜಿಬಿಎ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ತಿಳಿಸಿದ್ದಾರೆ.
ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ನಿರ್ಮಾಣ ಮಾಡಿರುವ ಹಲವಾರು ಕಟ್ಟಡ ನಿರ್ಮಾಣದಾರರ ಸಂಕಷ್ಟವನ್ನು ಪರಿಗಣಿಸಿದೆ. ಕಟ್ಟಡ ನಿರ್ಮಾಣಗಳಲ್ಲಿನ ಉಲ್ಲಂಘನೆ ಮಿತಿಯನ್ನು ಹಾಲಿ ಇರುವ ಶೇ. 5 ರಿಂದ ಶೇ.15ಕ್ಕೆ ಹೆಚ್ಚಿಸಲು ಸರ್ಕಾರವು ಮಹತ್ವಪೂರ್ಣವಾದ ಮತ್ತು ಜನಪರವಾದ ನಿರ್ಧಾರವನ್ನು ಕೈಗೊಂಡಿದೆ.

ಬೆಂಗಳೂರು ನಗರದ ವ್ಯಾಪ್ತಿಯಲ್ಲಿ ಭೂಮಿಯ ಅತೀವವಾದ ಬೆಲೆಯಿಂದ ಮತ್ತು ಹಲವು ಅನಿವಾರ್ಯ ಕಾರಣಗಳಿಂದ ನಿವೇಶನ ಮಾಲೀಕರು ಮಂಜೂರಾತಿ ನಕ್ಷೆಗೆ ವ್ಯತಿರಿಕ್ತವಾಗಿ ಕೆಲವೊಂದು ಬದಲಾವಣೆಗಳೊಂದಿಗೆ ಕಡಿಮೆ ನಡುಜಾಗಗಳನ್ನು ಬಿಟ್ಟು ಹೆಚ್ಚುವರಿ ಕಟ್ಟಡ ನಿರ್ಮಾಣ ಮಾಡಿ ಸಂಕಷ್ಟ ಅನುಭವಿಸುತ್ತಿರುವುದು ಕಂಡು ಬಂದಿರುತ್ತದೆ. ಕಾರಣ ಹಾಲಿ ನಿಯಮಗಳಲ್ಲಿ ಶೇ.5 ರಷ್ಟು ಉಲ್ಲಂಘನೆಗಳನ್ನು ಮಾತ್ರ ಸಕ್ರಮಗೊಳಿಸಲು ಅವಕಾಶ ಇದೆ ಎಂದು ಜಿಬಿಎ ತಿಳಿಸಿದೆ.
ಕಟ್ಟಡ ಉಲ್ಲಂಘನೆ ಪ್ರಮಾಣ ಹೆಚ್ಚಳ
ಬಹುತೇಕ ಕಟ್ಟಡಗಳಲ್ಲಿ ಉಲ್ಲಂಘನೆ ಪ್ರಮಾಣವು ಶೇ.5 ಕ್ಕಿಂತ ಹೆಚ್ಚಾಗಿರುತ್ತದೆ. ಈ ರೀತಿ ನಿರ್ಮಾಣವಾಗಿರುವ ಹಲವಾರು ಕಟ್ಟಡಗಳಿಗೆ ನಗರ ಪಾಲಿಕೆಗಳಿಂದ ಸ್ವಾಧೀನಾನುಭವ ಪ್ರಮಾಣ ಪತ್ರ ದೊರೆಯದೇ ಕಟ್ಟಡಗಳಿಗೆ ನೀರು ಸರಬರಾಜು ಹಾಗೂ ವಿದ್ಯುತ್ ಸಂಪರ್ಕ ಪಡೆಯಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ, ವಾಸ್ತವಿಕ ಅಂಶಗಳನ್ನು ಮನಗಂಡು ಜನರ ಸಂಕಷ್ಟಕ್ಕೆ ಪರಿಹಾರ ನೀಡಲು ಕಟ್ಟಡ ಉಪವಿಧಿಗಳು 2003ರ ಉಪವಿಧಿ 6ಕ್ಕೆ ತಿದ್ದುಪಡಿ ತಂದು, ಕಟ್ಟಡಗಳ ಉಲ್ಲಂಘನೆ ಮಿತಿಯನ್ನು ಶೇ.5 ರ ಬದಲಾಗಿ ಶೇ.15 ರ ವರೆಗೆ ಹೆಚ್ಚಿಸಲಾಗಿದೆ. ಅದಕ್ಕೆ ದಂಡ ಪಾವತಿಸಿಕೊಂಡು ಕ್ರಮಬದ್ದಗೊಳಿಸಲು ಸರ್ಕಾರವು ತೀರ್ಮಾನಲಾಗಿದೆ.
ನಗರದ ಕಟ್ಟಡ ಉಪವಿಧಿಗಳಿಗೆ ತಿದ್ದುಪಡಿ ತಿದ್ದುಪಡಿಯು ಬೆಂಗಳೂರು ನಗರದ ಕಟ್ಟಡ ನಿರ್ಮಾಣ ಕ್ಷೇತ್ರಕ್ಕೆ ಸರ್ಕಾರವು ಕೈಗೊಂಡಿರುವ ಒಂದು ಮಹತ್ವಪೂರ್ಣವಾದ ಮತ್ತು ಜನಪರ ಕಾಳಜಿಯ ನಿರ್ಧಾರವಾಗಿದೆ. ಇದರ ಹೊರತಾದ ಹೆಚ್ಚುವರಿ ಉಲ್ಲಂಘನೆಗಳ ವಿಚಾರದಲ್ಲಿ ಇನ್ನೂ ಹೆಚ್ಚಿನ ಕಠಿಣ ಅನುಷ್ಠಾನ ಕ್ರಮಗಳನ್ನು ಜಾರಿಗೊಳಿಸುವ ಚಿಂತನೆ ಇದೆ.
ಆನ್‌ಲೈನ್, ಆಫ್‌ಲೈನ್ ಸಲಹೆ ನೀಡಲು ಅವಕಾಶ
ಬೆಂಗಳೂರು ನಾಗರಿಕರ ಸಂಕಷ್ಟಗಳನ್ನು ಪರಿಹರಿಸಲು ಕೈಗೊಂಡಿರುವ ನಿರ್ಧಾರ ಇದಾಗಿದೆ. ಈ ತಿದ್ದುಪಡಿ ಉಪವಿಧಿಗಳಲ್ಲಿ ಈಗ ಪ್ರಸ್ತಾಪಿಸಿರುವ ಶೇ.15 ರ ಉಲ್ಲಂಘನೆ ಪ್ರಮಾಣದ ವಿನಾಯಿತಿಯನ್ನು ಸಕಾರಾತ್ಮಕವಾಗಿ ಸ್ವೀಕರಿಸಿ, ಈ ಉಪವಿಧಿಗಳ ಬಗ್ಗೆ ಸಂಬಂಧಪಟ್ಟ ನಗರ ಪಾಲಿಕೆಗಳ ಆಯುಕ್ತರಿಗೆ ಸಲಹೆಗಳು ಇದ್ದಲ್ಲಿ ಏಪ್ರಿಲ್ 30ರೊಳಗೆ ಆಯಾ ಹತ್ತಿರದ ಪಾಲಿಕೆ ಕಚೇರಿಯಲ್ಲಿ ಸಲ್ಲಿಸಬಹುದು.
ಆನ್‌ಲೈನ್ ಮೂಲಕ ಜಿಬಿಎ ಅಧಿಕೃತ ಜಾಲತಾಣ https://updates.bbmpgov.in/public ಮೂಲಕವು ಸಾರ್ವಜನಿಕರು ಕರಡು ಕಟ್ಟಡ ಉಪವಿಧಿಗಳ ಬಗ್ಗೆ ರಚನಾತ್ಮಕವಾದ ಸಲಹೆ ಸೂಚನೆ ನೀಡುವಂತೆ ಕೋರಿದೆ. ನಿಮ್ಮ ಸಲಹೆ ಸೂಚನೆಗಳನ್ನು ಧನಾತ್ಮಕವಾಗಿ ಪರಿಗಣಿಸಲಾಗುವುದು. ಬಳಿಕ ತೀರ್ಮಾನ ಕೈಗೊಂಡು ಸಾರ್ವಜನಿಕರ ಹಿತದೃಷ್ಟಿಯಿಂದ ಉಪವಿಧಿಗಳನ್ನು ಅಂತಿಮವಾಗಿ ಹೊರಡಿಸಲಾಗುವುದು ಎಂದು ಜಿಬಿಎ ಪ್ರಕಟಣೆಯಲ್ಲಿ ಗುರುವಾರ ತಿಳಿಸಿದೆ.












Click it and Unblock the Notifications