Davanagere By Election: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ನಿರೀಕ್ಷೆಗೂ ಮೀರಿ ಜನಸ್ಪಂದನೆ: ಸಿ.ಎಂ ಸಿದ್ದರಾಮಯ್ಯ
Davanagere By Election: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ನಿರೀಕ್ಷೆಗೂ ಮೀರಿ ಜನಸ್ಪಂದನೆ ಸಿಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಬಿಜೆಪಿಯವರು ನಾಲ್ಕು ವರ್ಷದಲ್ಲಿ ಯಾವ ಅಭಿವೃದ್ಧಿಯನ್ನು ಮಾಡದೇ, ರಾಜ್ಯವನ್ನು ಲೂಟಿ ಮಾಡಿದ್ದಾರೆ ಎಂಬ ಸತ್ಯವನ್ನು ಜನರು ಅರಿತಿದ್ದಾರೆ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ಜಾರಿಯಾಗುತ್ತಿದ್ದು, ಬಿಜೆಪಿಯವರ ಸುಳ್ಳುಗಳ ನಡುವೆಯೂ ಜನ ನಮ್ಮನ್ನು ನಂಬಿದ್ದಾರೆ.
ರಾಜ್ಯದಲ್ಲಿ ಪ್ರತಿ ಚುನಾವಣೆಯ ನಂತರ ಗ್ಯಾರಂಟಿಗಳನ್ನು ಸ್ಥಗಿತಗೊಳಿಸಲಾಗುತ್ತದೆ ಎಂದು ಬಿಜೆಪಿಯವರು ಅಪಪ್ರಚಾರ ಮಾಡಿದರೂ, ನಮ್ಮ ಗ್ಯಾರಂಟಿಗಳು ನಿರಂತರವಾಗಿ ಮುಂದುವರಿದಿದೆ. ಇದಕ್ಕಾಗಿ 52,000 ಕೋಟಿ ರೂ. ಮೀಸಲಿಟ್ಟಿದ್ದು, ಇದುವರೆಗೆ 1,31,000 ಕೋಟಿ ರೂ. ವೆಚ್ಚ ಮಾಡಲಾಗಿದೆ. ರಾಜ್ಯ ಸರ್ಕಾರ ಮಿತಿಯೊಳಗೆ ಸಾಲ ಮಾಡಬೇಕು. ಆರ್ಥಿಕ ಹೊಣೆಗಾರಿಕೆ ಕಾಯ್ದೆಯ ಮಾನದಂಡದಂತೆ, ರಾಜ್ಯದ ಜಿಡಿಪಿಯ ಶೇ. 25 ರ ಮಿತಿಯೊಳಗೆ ಸಾಲದ ಮೊತ್ತವಿದೆ. ನಮ್ಮ ವಿತ್ತೀಯ ಕೊರತೆ 2.95 ರಷ್ಟಿದೆ. ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ನ್ಯಾಯಬದ್ಧ ಅನುದಾನಗಳು ಬರದ ಕಾರಣ, ರೆವಿನ್ಯೂ ಸರ್ಪ್ಲಸ್ ಸಾಧಿಸಲು ಸಾಧ್ಯವಾಗಲಿಲ್ಲ. ಬಿಹಾರ ಚುನಾವಣೆಯ ಸಂಬಂಧ ಜಿಎಸ್‌ಟಿ ದರವನ್ನು ಕಡಿತಗೊಳಿಸಿದರು. ಇದರಿಂದಾಗಿ ರಾಜ್ಯದ ಬೊಕ್ಕಸಕ್ಕೆ 10,000 ಕೋಟಿ ರೂ. ನಷ್ಟವಾಗಿದೆ. ಜಿಎಸ್‌ಟಿ ಕಡಿತದ ಮುಂಚೆ 10% ಇದ್ದ ಜಿಎಸ್‌ಟಿ ಬೆಳವಣಿಗೆ ಈಗ ಶೇ. 4 ಕ್ಕೆ ಕುಸಿದಿದೆ.

ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಬೇಕಾದ ಜಿಎಸ್‌ಟಿ ಪರಿಹಾರವನ್ನು ಮತ್ತು ವಿಶೇಷ ಅನುದಾನಗಳನ್ನು ನೀಡದ ಕಾರಣ ಬಜೆಟ್ ರೆವಿನ್ಯೂ ಸರ್ಪ್ಲಸ್ ಆಗಲು ಸಾಧ್ಯವಾಗಿಲ್ಲ. ಆರ್ಥಿಕತೆಗೆ ಶ್ವೇತಪತ್ರ ಮಂಡಿಸಬೇಕು ಎಂದು ಹೇಳುವ ಬಿಜೆಪಿಯ ರಾಜ್ಯಾಧ್ಯಕ್ಷ ವಿಜಯೇಂದ್ರರವರು ಈ ಎಲ್ಲ ಅಂಶಗಳನ್ನು ಪರಿಶೀಲಿಸದೇ, ಕೇವಲ ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಹಜರತ್ ಖಡಕ್ ಶಾ ವಲಿ ದರ್ಗಾಗೆ ಭೇಟಿ
ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಪ್ರಚಾರ ಕಾರ್ಯದಲ್ಲಿ ಪಾಲ್ಗೊಳ್ಳುವ ಮುನ್ನ ಶಿವಾಜಿನಗರದಲ್ಲಿರುವ ಹಜರತ್ ಖಡಕ್ ಶಾ ವಲಿ ದರ್ಗಾಗೆ ಭೇಟಿ ನೀಡಿದ್ದರು. ದಾವಣಗೆರೆ ದಕ್ಷಿಣ ವಿಧಾನಸಭೆಯ ಉಪ ಚುನಾವಣೆಯ ಸಂದರ್ಭದಲ್ಲಿ ದರ್ಗಾಗೆ ಭೇಟಿ ನೀಡಿದ್ದು, ಮುಸ್ಲಿಂ ಬಾಂಧವರ ಜೊತೆ ಪ್ರಾರ್ಥನೆಯಲ್ಲಿ ಭಾಗವಹಿಸಿದೆ ಎಂದು ಸಿದ್ದರಾಮಯ್ಯ ಅವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಕರ್ನಾಟಕದ ಆರ್ಥಿಕ ಪರಿಸ್ಥಿತಿ ಹೇಗಿದೆ
ಇನ್ನು ಕರ್ನಾಟಕದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಮಾತನಾಡಿರುವ ಅವರು, ರಾಜ್ಯದ ಆರ್ಥಿಕತೆಯ ಸ್ಥಿತಿಗತಿಗಳ ಎಲ್ಲಾ ಅಂಶಗಳ ದಾಖಲೆಗಳನ್ನು ಬಜೆಟ್ ನಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಬಿಜೆಪಿಯವರ ಅವಧಿಯಲ್ಲಿ 5,30,000 ಕೋಟಿ ರೂ. ಸಾಲ ಮಾಡಲಾಗಿದೆ. ಗ್ಯಾರಂಟಿ ಯೋಜನೆಯು ನೇರವಾಗಿ ಫಲಾನುಭವಿಗಳ ಖಾತೆಗೆ ತಲುಪುತ್ತಿದ್ದು, ಇದರಲ್ಲಿ ಭ್ರಷ್ಟಾಚಾರಕ್ಕೆ ಆಸ್ಪದವಿಲ್ಲ.
ಬಿಜೆಪಿ ಸರ್ಕಾರ ಗುತ್ತಿಗೆದಾರರ 29 ಸಾವಿರ ಕೋಟಿಯಷ್ಟು ಬಿಲ್ ಬಾಕಿ ಉಳಿಸಿತ್ತು. ಅದರಲ್ಲಿ 24 ಸಾವಿರ ಕೋಟಿ ಬಾಕಿ ಬಿಲ್ಲು ಪಾವತಿಸಲಾಗಿದೆ. ಈ ಬಗ್ಗೆ ದಾಖಲಾತಿಯ ಆಧಾರದಲ್ಲಿ ಸ್ಪಷ್ಟ ಉತ್ತರವನ್ನು ಅಧಿವೇಶನದಲ್ಲಿ ನೀಡಲಾಗಿದೆ. ಬೆಲೆ ಏರಿಕೆಯನ್ನು ನಿಯಂತ್ರಿಸುವ ಹೊಣೆಗಾರಿಕೆ ಕೇಂದ್ರ ಸರ್ಕಾರಕ್ಕೆ ಸೇರಿದ್ದು. ಕೇಂದ್ರ ಪೂರೈಸುವ ಗ್ಯಾಸ್, ಪೆಟ್ರೋಲ್, ಡೀಸೆಲ್ ಗಳನ್ನು ವಿತರಿಸುವುದು ರಾಜ್ಯ ಸರ್ಕಾರದ ಜವಾಬ್ದಾರಿಯಾಗಿರುತ್ತದೆ. ನೆರೆರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಬೆಲೆಗಳು ಕಡಿಮೆಯಿದೆ.
ರಾಜ್ಯದಲ್ಲಿ ಒಳಮೀಸಲಾತಿಯನ್ನು ಜಾರಿಗೊಳಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಬಿಜೆಪಿಯವರಿಗೆ ಅಹಿಂದ ವರ್ಗಗಳ ಮೇಲೆ ಕಾಳಜಿಯಿಲ್ಲ. ಬಿಜೆಪಿಯವರು ಎಂದಿಗೂ ಶ್ರೀಮಂತರ ಪರ. ನಮ್ಮ ಸರ್ಕಾರ ಯೂನಿವರ್ಸಲ್ ಬೇಸಿಕ್ ಇನ್ಕಂ ತತ್ವದಂತೆ ನಡೆದು, ತಳಸಮುದಾಯದವರಿಗೆ ಅನುಕೂಲ ಕಲ್ಪಿಸುತ್ತಿದೆ. ಬಿಜೆಪಿ ಬೆಂಬಲಿಗ ಮತದಾರರನ್ನು ಸೇರಿಸಿ, ಸರ್ವರಿಗೂ ಗ್ಯಾರಂಟಿ ಯೋಜನೆಗಳನ್ನು ನೀಡಲಾಗುತ್ತಿದೆ. ಬಡತನ ರೇಖೆಗಿಂತ ಕೆಳಗಿನ ಜನರನ್ನು ಸಬಲೀಕರಣಗೊಳಿಸಲು ಇವುಗಳು ನೆರವಾಗುತ್ತವೆ. ಈ ವರ್ಷ 56,432 ಹುದ್ದೆಗಳ ನೇಮಕಾತಿ ಮಾಡಲಿದ್ದು, ಹೀಗೆ ಹಂತ ಹಂತವಾಗಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದಾರೆ.












Click it and Unblock the Notifications