Bagalkote By Election: ಬಾಗಲಕೋಟೆ ಉಪಚುನಾವಣೆ: ಕಾಂಗ್ರೆಸ್-ಬಿಜೆಪಿ ಪ್ರತಿಷ್ಠೆ ಕದನ, ಜಾತಿ ಸಮೀಕರಣ - ಗ್ಯಾರಂಟಿಗಳ ಪರೀಕ್ಷೆ
Bagalkote By Election: ಕರ್ನಾಟಕದ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಉಪ ಚುನಾವಣೆಯು ಚುರುಕು ಪಡೆದುಕೊಂಡಿದೆ. ದಾವಣಗೆರೆ ಹಾಗೂ ಬಾಗಲಕೋಟೆ ವಿಧಾನಸಭೆ ಚುನಾವಣಾ ಕಣವು ರಂಗೇರಿದ್ದು, ಎರಡೂ ಕ್ಷೇತ್ರಗಳ ಉಪ ಚುನಾವಣೆಯು ಒಂದೊಂದು ಕಾರಣಕ್ಕೆ ಮಹತ್ವ ಪಡೆದುಕೊಂಡಿದೆ. ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕರಾಗಿದ್ದ ಎಚ್.ವೈ. ಮೇಟಿ (ಹುಲ್ಲಪ್ಪ ಯಮನಪ್ಪ ಮೇಟಿ) ಅವರ ನಿಧನದಿಂದ ತೆರವಾದ ಸ್ಥಾನಕ್ಕಾಗಿ ಈ ಉಪಚುನಾವಣೆ ನಡೆಯುತ್ತಿದೆ. ಕಾಂಗ್ರೆಸ್ ಪಕ್ಷವು ದಿವಂಗತ ಎಚ್.ವೈ. ಮೇಟಿ ಅವರ ಪುತ್ರ ಉಮೇಶ್ ಮೇಟಿ ಅವರಿಗೆ ಟಿಕೆಟ್ ಕೊಟ್ಟಿದ್ದರೆ, ಬಿಜೆಪಿಯು ಮಾಜಿ ಶಾಸಕ ಡಾ. ವೀರಣ್ಣ ಚರಂತಿಮಠ ಅವರನ್ನು ಕಣಕ್ಕಿಳಿಸಿದೆ. ಈ ಕ್ಷೇತ್ರವು ಈ ಬಾರಿ ಹಲವು ಕಾರಣಗಳಿಗೆ ಮಹತ್ವ ಪಡೆದುಕೊಂಡಿದೆ.
ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ದಿನಾಂಕ ಸಮೀಪಿಸುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಅವರ ಪರವಾಗಿ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಡಾ. ವೀರಣ್ಣ ಚರಂತಿಮಠ ಅವರ ಪರವಾಗಿ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಈ ಕ್ಷೇತ್ರದ ಉಪ ಚುನಾವಣೆಯು ಪ್ರತಿಷ್ಠೆಯ ಕಣವಾಗಿದೆ. ಇನ್ನು ಬಿಜೆಪಿ ಪಕ್ಷಕ್ಕೆ ಕರ್ನಾಟಕದಲ್ಲಿ ಕಾಂಗ್ರೆಸ್ ವಿರುದ್ಧ ಆಡಳಿತ ವಿರೋಧ ಅಲೆ ಎದ್ದಿದೆ ಎಂದು ಸಾಬೀತು ಮಾಡುವುದಕ್ಕೆ ಈ ಉಪ ಚುನಾವಣೆ ಮಹತ್ವದ್ದಾಗಿದೆ.

ಬಾಗಲಕೋಟೆಯಲ್ಲಿ ಚರ್ಚೆ ಆಗುತ್ತಿರುವ ಪ್ರಮುಖ ವಿಷಯಗಳು
ಇನ್ನು ಬಾಗಲಕೋಟೆ ವಿಧಾನಸಭೆ ಉಪ ಚುನಾವಣೆಯಲ್ಲಿ ಹಲವು ಪ್ರಮುಖ ವಿಷಯಗಳು ಚರ್ಚೆ ಆಗುತ್ತಿವೆ. ಈ ರೀತಿ ನೋಡಿದರೆ ಕೆಲವು ವಿಷಯಗಳು ಈಗಾಗಲೇ ಹಲವು ವರ್ಷಗಳಿಂದ ಚರ್ಚೆ ಆಗಿರುವ ವಿಷಯವೂ ಆಗಿದೆ. ಕೃಷ್ಣಾ ಮೇಲ್ದಂಡೆ ಯೋಜನೆ, ಒಳಮೀಸಲಾತಿ ಹಾಗೂ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡಬೇಕು ಎನ್ನುವ ವಿಷಯಗಳು ಪ್ರಮುಖ ಚರ್ಚಿತ ವಿಷಯಗಳಾಗಿವೆ.
ಜಾತಿ ಸಮೀಕರಣ ವಿಷಯವೂ ಪ್ರಮುಖ ಚರ್ಚೆ ಆಗಿದೆ
ಇನ್ನು ಬಾಗಲಕೋಟೆ ವಿಧಾನಸಭೆ ಉಪ ಚುನಾವಣೆಯಲ್ಲಿ ಜಾತಿ ಸಮೀಕರಣ ವಿಚಾರವು ಸಹ ಪ್ರಮುಖ ಚರ್ಚೆಯ ಭಾಗವಾಗಿದೆ. ಬಾಗಲಕೋಟೆ ಕ್ಷೇತ್ರದಲ್ಲಿ ಕುರುಬ ಮತ್ತು ಲಿಂಗಾಯತ ಸಮುದಾಯದ ಮತಗಳು ನಿರ್ಣಾಯಕವಾಗಿದೆ. ಕುರುಬ ಸಮುದಾಯದ ನಾಯಕರಾಗಿದ್ದ ಮೇಟಿ ಅವರ ಪರವಾಗಿ ಸಿದ್ದರಾಮಯ್ಯ ಅವರ ಪ್ರಭಾವ ಎಷ್ಟಿದೆ ಮತ್ತು ಲಿಂಗಾಯತ ಮತಗಳು ಬಿಜೆಪಿ ಅಭ್ಯರ್ಥಿ ಡಾ. ವೀರಣ್ಣ ಚರಂತಿಮಠ ಅವರ ಪರವಾಗಿ ಎಷ್ಟು ಧ್ರುವೀಕರಣಗೊಳ್ಳುವ ಸಾಧ್ಯತೆ ಇದೆ ಎನ್ನುವುದು ಉಪ ಚುನಾವಣೆ ಫಲಿತಾಂಶದಲ್ಲಿ ತಿಳಿಯಲಿದೆ.
Bagalkote By Election: ಗ್ಯಾರಂಟಿ ಯೋಜನೆಗಳ ಪ್ರಭಾವ
ಈ ವಿಧಾನಸಭೆ ಉಪ ಚುನಾವಣೆಯಲ್ಲಿ ಗ್ಯಾರಂಟಿ ಯೋಜನೆಗಳ ಪ್ರಭಾವ ಹೇಗೆ ಇರಲಿದೆ ಎನ್ನುವುದು ಸಹ ಮುಖ್ಯವಾಗಿದೆ. ಈ ಕ್ಷೇತ್ರದ ಫಲಿತಾಂಶವು ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿ ಹಾಗೂ ಗ್ಯಾರಂಟಿ ಯೋಜನೆಗಳ ವಿಷಯವನ್ನೂ ಸಹ ಒರೆಗೆ ಹಚ್ಚಲಿದೆ ಎಂಧೇ ವಿಶ್ಲೇಷಿಸಲಾಗಿದೆ.












Click it and Unblock the Notifications