ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ
1968ರಿಂದ ಕರ್ನಾಟಕ ತ್ರಿಭಾಷಾ ಸೂತ್ರವನ್ನು ಅಂಗೀಕರಿಸಿದ್ದರಿಂದ ಏನು ಲಾಭವಾಗಿದೆ. 1968ರಿಂದ ದ್ವಿಭಾಷಾ ಸೂತ್ರವನ್ನು ಅಂಗೀಕರಿಸಿದ್ದರಿಂದ ತಮಿಳುನಾಡಿಗೆ ಏನು ನಷ್ಟವಾಗಿದೆ, ಅವರಿಗೆ ಏನಾದರೂ ಲಾಭವಾಗಿದ್ದರೆ, ನಮಗೆ ನಷ್ಟವಾಗಿರಬೇಕಲ್ಲ! ಅದು ಏನು ಎಂಬುದರ ಕುರಿತು ವಿಶ್ಲೇಷಣೆ ಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಅವರು ಅಭಿಪ್ರಾಯಪಟ್ಟಿದ್ದಾರೆ. ತ್ರಿಭಾಷಾ ಸೂತ್ರಕ್ಕೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾದಲ್ಲಿ ಅವರು ಹಂಚಿಕೊಂಡಿರುವ ಬರಹ ಇಲ್ಲಿದೆ.
ಹಿಂದಿ ಕಲಿತದ್ದರಿಂದ ಎಷ್ಟು ಜನರಿಗೆ ಉದ್ಯೋಗ ದೊರಕಿದೆ, ಅದರ ಅಂಕಿ- ಅಂಶಗಳು ತುರ್ತಾಗಿ ಬೇಕು. ಯಾಕೆ ಹಿಂದಿ ಓದಿದ ಕನ್ನಡಿಗರು ಬ್ಯಾಂಕ್, ಅಂಚೆ ಕಚೇರಿ, ಎಚ್‌ಎಎಲ್ ಮೊದಲಾದೆಡೆಗಳಲ್ಲಿ ಕಾಣಸಿಗುವುದಿಲ್ಲ, ಉತ್ತರ ಬೇಕು. 2011ರ ಜನಗಣತಿ ಪ್ರಕಾರ ಹಿಂದಿ ಮಾತಾಡುವ ಆರು ರಾಜ್ಯಗಳಲ್ಲಿರುವ ಕನ್ನಡಿಗರ ಸಂಖ್ಯೆ 25000 ಮೀರುವುದಿಲ್ಲ (ದೆಹಲಿಯಲ್ಲಿ 11 ಸಾವಿರ). ಉದ್ಯೋಗ ಕಾರಣವಾಗಿ ಅವರೆಲ್ಲ ಅಲ್ಲಿದ್ದಾರೆ ಮತ್ತು ಹಿಂದಿ ಕಲಿತಿದ್ದಾರೆ. ಈ 25,000 ಜನರಿಗಾಗಿ ಏಳೂವರೆ ಲಕ್ಷ ವಿದ್ಯಾರ್ಥಿಗಳು ಹಿಂದಿ ಕಲಿತು ಒಂದು ಲಕ್ಷ ಮಕ್ಕಳು ಫೈಲಾಗಬೇಕೇ ?

ಆರಂಭಿಕ ಹಂತದಲ್ಲಿ ಹಿಂದಿ ಮೂರನೇ ಭಾಷೆಯಾದರೂ ಪಾಸಾಗುವುದು ಕಡ್ಡಾಯವಿರಲಿಲ್ಲ. ಆ ಮೇಲೆ ಕಡ್ಡಾಯ ಮಾಡಲಾಯಿತು. ಆನಂತರ ಹಿಂದಿಯನ್ನು ಸರಾಸರಿ ಅಂಕಗಳಿಗೆ ಸೇರಿಸಲಾಯಿತು. ಇದರಿಂದ ಲಕ್ಷಾಂತರ ಮಕ್ಕಳ ಎಸ್‌ಎಸ್‌ಎಲ್‌ಸಿ ಸರಾಸರಿಯಲ್ಲಿ ಕುಸಿತ ಉಂಟಾಯಿತು. ಹಿಂದಿ ಪ್ರೇಮಿಗಳು ಆಗ ಯಾಕೆ ಮಕ್ಕಳ ರಕ್ಷಣೆಗೆ ಬರಲಿಲ್ಲ? ದೆಹಲಿ, ಗುರುಗಾಂವ್, ನೋಯ್ಡಾ ಮತ್ತು ಫರಿದಾಬಾದಲ್ಲಿರುವ ಖಾಸಗಿ ಕಂಪೆನಿಗಳಲ್ಲಿ ಸುಮಾರು ಹತ್ತು ಲಕ್ಷ ಉದ್ಯೋಗಿಗಳಿದ್ದಾರೆ. ಅದರಲ್ಲಿ ಸುಮಾರು ನಾಲ್ಕೂವರೆ ಲಕ್ಷ ತಮಿಳರಿದ್ದಾರೆ. ಅವರು ಶಾಲೆಗಳಲ್ಲಿ ಹಿಂದಿ ಕಲಿತಿಲ್ಲ. ಹಿಂದಿ ಕಲಿತ ಕನ್ನಡಿಗರ ಸಂಖ್ಯೆ ಕೇವಲ ಒಂದು ಸಾವಿರದಷ್ಟು. ಏಕೆ ಹೀಗೆ?
ಕಲಿತು ಮರೆಯುವುದಕ್ಕೆ ಯಾವುದೇ ಭಾಷೆಯನ್ನು ಅಭ್ಯಾಸ ಮಾಡುವ ಅಗತ್ಯ ಇಲ್ಲ. ಅಗತ್ಯ ಇದ್ದವರು ಯಾವ ಭಾಷೆಯನ್ನಾದರೂ ಕಲಿಯಲು ಇವತ್ತು ಅವಕಾಶ ಇದೆ.
ಸದ್ಯ ನಮ್ಮ ಮಕ್ಕಳು ಕನ್ನಡ ಮತ್ತು ಇಂಗ್ಲಿಷ್ ಚೆನ್ನಾಗಿ ಕಲಿಯಲಿ. ಅವರ ಕಾಲುಗಳು ನೆಲದಲ್ಲಿರಲಿ. ಬಾಹುಗಳು ಆಗಸದೆತ್ತರಕೆ ಚಾಚಿಕೊಳ್ಳಲಿ. ನಾನು ಯಾವುದೇ ಭಾಷೆಯ ದ್ವೇಷಿಯಲ್ಲ. ಆದರೆ ಒಂದು ಭಾಷೆ ಇನ್ನೊಂದರ ಮೇಲೆ ಸವಾರಿ ಮಾಡುವುದನ್ನು ವಿರೋಧಿಸುತ್ತೇನೆ.












Click it and Unblock the Notifications