ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಆಟಕ್ಕೆ ಇಂಗ್ಲೆಂಡ್ ಮೈಕೆಲ್ ವಾಘನ್ ಫಿದಾ; ಬಿಸಿಸಿಐಗೆ ವಿಶೇಷ ಮನವಿ
ಸೋಮವಾರ (ಮಾರ್ಚ್ 30) ನಡೆದ ಐಪಿಎಲ್ 2026ರ 3ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿತು. ಈ ಪಂದ್ಯದಲ್ಲಿ 15 ವರ್ಷದ ವೈಭವ್ ಸೂರ್ಯವಂಶಿ ಕೇವಲ 15 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಆರ್‌ಆರ್ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು. ಇದರ ಬೆನ್ನಲ್ಲೇ ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕೆಲ್ ವಾಘನ್ ಅವರು ವೈಭವ್ ಕುರಿತು ಬಿಸಿಸಿಐಗೆ ವಿಶೇಷ ಮನವಿ ಮಾಡಿದ್ದಾರೆ.
ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾಘನ್, ಭಾರತದ ಉದಯೋನ್ಮುಖ ಪ್ರತಿಭೆ ವೈಭವ್ ಸೂರ್ಯವಂಶಿ ಅವರನ್ನು ಭಾರತದ ಹಿರಿಯ ಪುರುಷರ ತಂಡಕ್ಕೆ ಸೇರಿಸಿಕೊಳ್ಳುವಂತೆ ಬಿಸಿಸಿಐಗೆ ವಿಶೇಷ ಮನವಿ ಮಾಡಿದ್ದಾರೆ. ಸೋಮವಾರ ನಡೆದ ಐಪಿಎಲ್ 2026 ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ 8 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸುವಲ್ಲಿ ವೈಭವ್ ಪ್ರಮುಖ ಪಾತ್ರ ವಹಿಸಿದ ಬೆನ್ನಲ್ಲೇ ವಾಘನ್ ಈ ಮನವಿ ಮಾಡಿದ್ದಾರೆ.

ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ರಾಜಸ್ಥಾನ್ ರಾಯಲ್ಸ್, ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಕೇವಲ 127 ರನ್‌ಗಳಿಗೆ ಕಟ್ಟಿಹಾಕಿತು. ತಂಡದ ಪರ ನಾಂದ್ರೆ ಬರ್ಗರ್, ರವೀಂದ್ರ ಜಡೇಜಾ ಹಾಗೂ ಜೋಫ್ರಾ ಆರ್ಚರ್ ತಲಾ ಎರಡು ವಿಕೆಟ್ ಕಬಳಿಸಿದರೆ, ಬ್ರಿಜೇಶ್ ಶರ್ಮಾ, ಸಂದೀಪ್ ಶರ್ಮಾ ಹಾಗೂ ರವಿ ಬಿಷ್ಣೋಯಿ ತಲಾ ಒಂದು ವಿಕೆಟ್ ಪಡೆದರು.
ಸಿಎಸ್‌ಕೆ ವಿರುದ್ಧ ಅಬ್ಬರಿಸಿ ವೈಭವ್
ಚೆನ್ನೈ ಸೂಪರ್ ಕಿಂಗ್ಸ್ ನೀಡಿದ ಸಾಧಾರಣ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ತಂಡದ ಪರ ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್ ಮಾಡಿದರು. ಅವರು ಕೇವಲ 17 ಎಸೆತಗಳಲ್ಲಿ 4 ಬೌಂಡರಿ, 5 ಸಿಕ್ಸರ್‌ಗಳೊಂದಿಗೆ ಬರೋಬ್ಬರಿ 52 ರನ್ ಚಚ್ಚಿ ಕೇವಲ 12.1 ಓವರ್‌ಗಳಲ್ಲಿ ರಾಜಸ್ಥಾನ್ ತಂಡ ಗುರಿ ತಲುಪಲು ನೆರವಾದರು.
ವೈಭವ್ ಪರ ಮೈಕಲ್ ವಾಘನ್ ಬಿಸಿಸಿಐಗೆ ವಿಶೇಷ ಮನವಿ
ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಈ ಅದ್ಭುತ ಗೆಲುವಿನ ನಂತರ ಮಾತನಾಡಿದ ಮೈಕಲ್ ವಾಘನ್, "ಭಾರತ ತಂಡದ ಮ್ಯಾನೇಜ್‌ಮೆಂಟ್‌ಗೆ ಒಂದು ಪ್ರಮುಖ ಸಲಹೆ ನೀಡಿದ್ದಾರೆ. ಮುಂಬರುವ ಭಾರತದ ಇಂಗ್ಲೆಂಡ್ ಪ್ರವಾಸದ ಸೀಮಿತ ಓವರ್‌ಗಳ ಸರಣಿಗೆ ವೈಭವ್ ಸೂರ್ಯವಂಶಿ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಿ," ಎಂದು ಅವರು ಮನವಿ ಮಾಡಿದ್ದಾರೆ. ಅಲ್ಲದೆ, "ಈ ಉದಯೋನ್ಮುಖ ಪ್ರತಿಭೆ ಈಗಾಗಲೇ ಹಲವಾರು ಸಂದರ್ಭಗಳಲ್ಲಿ ತನ್ನ ಸಾಮರ್ಥ್ಯವನ್ನು ಸತತವಾಗಿ ಸಾಬೀತುಪಡಿಸಿದ್ದಾನೆ," ಎಂದು ಅಂತಲೂ ಹೇಳಿದರು.
ವೈಭವ್‌ನನ್ನು ಸೀನಿಯರ್ ತಂಡಕ್ಕೆ ಸೇರಿಸಿಕೊಳ್ಳಲು ಮನವಿ
"ವೈಭವ್ ಸೂರ್ಯವಂಶಿ ಭಾರತದ ಸೀನಿಯರ್ ತಂಡಕ್ಕೆ ಯಾವಾಗ ಪಾದಾರ್ಪಣೆ ಮಾಡುತ್ತಾನೆ ಎಂದು ಎದುರುನೋಡುತ್ತಿದ್ದೇವೆ. ಇದು ಐಪಿಎಲ್‌ನ ಮೊದಲ ಇನ್ನಿಂಗ್ಸ್ ಅಷ್ಟೇ. ಆದರೆ ಇನ್ನು ಕೆಲವೇ ತಿಂಗಳಲ್ಲಿ ಭಾರತದ ಇಂಗ್ಲೆಂಡ್ ಪ್ರವಾಸದ ಸೀಮಿತ ಓವರ್‌ಗಳ ಸರಣಿ ಇದೆ. ಒಂದು ವೇಳೆ ನಾನು ಭಾರತೀಯ ಕ್ರಿಕೆಟ್ ಮಂಡಳಿಯಲ್ಲಿದ್ದರೆ, ಆ ಪ್ರವಾಸಕ್ಕೆ ಅವನನ್ನು ಖಂಡಿತವಾಗಿಯೂ ಕರೆದೊಯ್ಯುತ್ತಿದ್ದೆ. ಅವನಿಗೆ ಈಗ ಅಗತ್ಯವಿರುವುದು ಭಾರತೀಯ ಕ್ರಿಕೆಟ್‌ನ ವಾತಾವರಣಕ್ಕೆ ಹೊಂದಿಕೊಳ್ಳುವುದು. ಆದ್ದರಿಂದ ಅವನು ಯಾವಾಗ ತಂಡಕ್ಕೆ ಬರುತ್ತಾನೆ ಎಂದು ಕಾಯುತ್ತಿದ್ದೇನೆ," ಎಂದು ಕ್ರಿಕ್‌ಬಜ್‌ನಲ್ಲಿ ಹೇಳಿದರು.
'ವೈಭವ್ ಮೇಲೆ ಸಂಪೂರ್ಣ ನಂಬಿಕೆಯಿದೆ'
"ವೈಭವ್‌ನನ್ನು ತಂಡಕ್ಕೆ ಸೇರಿಸಿಕೊಳ್ಳಿ, ಒಂದು ಅಥವಾ ಎರಡು ಪಂದ್ಯಗಳಲ್ಲಿ ಆಡುವ ಅವಕಾಶ ಸಿಕ್ಕರೆ ಉತ್ತಮ. ಆದರೆ, ಅವನನ್ನು ಪ್ರವಾಸಕ್ಕೆ ಕರೆದೊಯ್ಯಲೇಬೇಕು. ನೇರವಾಗಿ ತಂಡಕ್ಕೆ ಸೇರಿಸಿಕೊಳ್ಳಲೇಬೇಕು ಅಂತಾ ಏನಿಲ್ಲ. ಆದರೆ, ತಂಡದ ಜೊತೆಗಿದ್ದರೆ ಸಾಕು. ಅವನು ಆಡಲು ಅರ್ಹನಿದ್ದಾನೆ ಎಂಬ ಬಗ್ಗೆ ನನಗೆ ಯಾವುದೇ ಅನುಮಾನವಿಲ್ಲ," ಎಂದು ಹೇಳಿದರು. ಒಟ್ಟಿನಲ್ಲಿ ಹೇಳುವುದಾದರೆ, ವೈಭವ್ ಸೂರ್ಯವಂಶಿಗೆ ಭಾರತದ ಸೀನಿಯರ್ ತಂಡದಲ್ಲಿ ಅವಕಾಶ ಕೊಡದಿದ್ದರೂ ಪರವಾಗಿಲ್ಲ. ಅವನನ್ನು ಟೀಂ ಇಂಡಿಯಾ ಪ್ರವಾಸದ ವೇಳೆ ಜೊತೆಗೆ ಕರೆದುಕೊಂಡು ಬರಲು ಅವಕಾಶ ನೀಡಿ, ಅವನಲ್ಲಿ ಅದ್ಭುತ ಪ್ರತಿಭೆಯಿದೆ ಎಂದು ಮೈಕಲ್ ವಾನ್ ಬಿಸಿಸಿಐಗೆ ಮನವಿ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಇದು ಈಡೇರುತ್ತದೆಯಾ ಎಂದು ಕಾದುನೋಡಬೇಕಿದೆ.












Click it and Unblock the Notifications