ರೈಲ್ವೆಯಲ್ಲಿ ಭಾರೀ ಬದಲಾವಣೆ! ಸ್ಟೇಷನ್ ಮಾಸ್ಟರ್‌ಗಳ ಕೈಗೆ ಬರಲಿದೆ ಈ ಹೊಸ ಸೂಪರ್ ಪವರ್
ಭಾರತೀಯ ರೈಲ್ವೆ ಇಲಾಖೆ ಪ್ರಯಾಣಿಕರ ಸೇವೆಯನ್ನು ಇನ್ನಷ್ಟು ಉತ್ತಮಗೊಳಿಸುವ ನಿಟ್ಟಿನಲ್ಲಿ ಮಹತ್ವದ ಕ್ರಮಕ್ಕೆ ಮುಂದಾಗಿದೆ. ರೈಲ್ವೆ ನಿಲ್ದಾಣಗಳ ಸರಳವಾಗಿ ನಿರ್ವಹಣೆ ಮತ್ತು ತ್ವರಿತ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಹೆಚ್ಚಿಸಲು ಸ್ಟೇಷನ್ ಮಾಸ್ಟರ್‌ಗಳಿಗೆ ಹೆಚ್ಚಿನ ಆಡಳಿತಾತ್ಮಕ ಮತ್ತು ಕಾರ್ಯಾಚರಣೆಯ ಅಧಿಕಾರ ನೀಡುವ ಪ್ರಸ್ತಾವನೆಯನ್ನು ಪರಿಶೀಲನೆ ನಡೆಸಿದೆ.
ಕೇಂದ್ರ ರೈಲ್ವೆ ಇಲಾಖೆ ಸಚಿವ ಅಶ್ವಿನಿ ವೈಷ್ಣವ್ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಸ್ಟೇಷನ್ ಮಾಸ್ಟರ್‌ಗಳು ದಿನನಿತ್ಯದ ಕರ್ತವ್ಯ ನಿರ್ವಹಣೆಯಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು. ಪ್ರಯಾಣಿಕರಿಗೆ ಉತ್ತಮ ಸೇವೆ ಒದಗಿಸುವುದು, ಸುರಕ್ಷಿತ ರೈಲು ಸಂಚಾರ ಖಚಿತಪಡಿಸುವುದು ಹಾಗೂ ನಿಲ್ದಾಣಗಳ ಕಾರ್ಯಕ್ಷಮತೆ ಹೆಚ್ಚಿಸುವ ಉದ್ದೇಶದಿಂದ ಹಲವು ಮಹತ್ವದ ಸಲಹೆಗಳನ್ನು ಸಹ ಪರಿಶೀಲಿಸಲಾಗಿದೆ.

ಸ್ಟೇಷನ್ ಮಾಸ್ಟರ್‌ಗಳಿಗೆ ಸಿಗಲಿರುವ ಪ್ರಮುಖ ಅಧಿಕಾರಗಳು ಯಾವುವು
ರೈಲ್ವೆ ನಿಲ್ದಾಣಗಳ ದಕ್ಷ ನಿರ್ವಹಣೆಗಾಗಿ ಸ್ಟೇಷನ್ ಮಾಸ್ಟರ್‌ಗಳಿಗೆ ಮುಂಬರುವ ದಿನಗಳಲ್ಲಿ ಹಲವು ಪ್ರಮುಖ ಅಧಿಕಾರಗಳನ್ನು ನೀಡುವ ಸಾಧ್ಯತೆಯಿದೆ
ಆಡಳಿತಾತ್ಮಕ ಸ್ವಾತಂತ್ರ್ಯ: ರೈಲ್ವೆ ನಿಲ್ದಾಣದ ಮಟ್ಟದಲ್ಲೇ ಕ್ಷಿಪ್ರವಾಗಿ ಕಾರ್ಯನಿರ್ವಹಿಸಲು ಸ್ಟೇಷನ್ ಮಾಸ್ಟರ್‌ಗಳಿಗೆ ಹೆಚ್ಚಿನ ಆಡಳಿತಾತ್ಮಕ ಅಧಿಕಾರ ಲಭ್ಯವಾಗಲಿದೆ.
ಬಜೆಟ್ ಮತ್ತು ಆರ್ಥಿಕ ಸಡಿಲಿಕೆ: ಸ್ಥಳೀಯ ಸಮಸ್ಯೆಗಳ ತಕ್ಷಣದ ಮುಕ್ತಾಯಕ್ಕಾಗಿ ಆರ್ಥಿಕ ಅಧಿಕಾರಗಳ ಮಿತಿಯನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ.
ಹೆಚ್ಚುವರಿ ಸಿಬ್ಬಂದಿ ನೇಮಕ: ನಿಲ್ದಾಣದ ಟ್ರಾಫಿಕ್ ಹಾಗೂ ಮಲ್ಟಿಪಲ್ ಟ್ರ್ಯಾಕ್‌ಗಳನ್ನು ನಿರ್ವಹಿಸಲು ಹೆಚ್ಚುವರಿ ಅಧಿಕಾರಿಗಳನ್ನು ನಿಯೋಜಿಸಲಾಗುತ್ತದೆ.
ಪ್ರಯಾಣಿಕರಿಗೆ ಏನು ಲಾಭ?
ಇಲಾಖೆಗೆ ಪ್ರಸ್ತಾಪಿಸಿದ ಬದಲಾವಣೆಗಳು ಅನುಷ್ಠಾನಕ್ಕೆ ಬಂದರೆ ರೈಲ್ವೆ ಇಲಾಖೆಯ ಕಾರ್ಯವೈಖರಿಯಲ್ಲಿ ದೊಡ್ಡ ಬದಲಾವಣೆ ಆಗಲಿದೆ. ಸಾರ್ವಜನಿಕರ ದೂರುಗಳಿಗೆ ತಕ್ಷಣದ ಪರಿಹಾರ, ನಿಲ್ದಾಣಗಳ ಉನ್ನತ ಮಟ್ಟದ ಉಸ್ತುವಾರಿ ಮತ್ತು ಮೂಲಸೌಕರ್ಯಗಳ ತ್ವರಿತ ದುರಸ್ತಿ ಕಾರ್ಯಗಳಿಗೆ ಈ ನಿಯಮಗಳು ವೇಗ ನೀಡಲಿವೆ. ಅಂತಿಮವಾಗಿ ಇವೆಲ್ಲವೂ ಒಟ್ಟಾರೆ ರೈಲು ಪ್ರಯಾಣವನ್ನು ಮತ್ತಷ್ಟು ಸುಗಮ ಹಾಗೂ ನೆಮ್ಮದಿದಾಯಕವಾಗಿಸಲಿವೆ ಎಂದು ರೈಲ್ವೆ ಇಲಾಖೆ ಅಭಿಪ್ರಾಯಪಟ್ಟಿದೆ.
ಖಾಲಿ ಹುದ್ದೆಗಳ ಭರ್ತಿಗೂ ಒತ್ತು
ಖಾಲಿ ಇರುವ ಸ್ಟೇಷನ್ ಮಾಸ್ಟರ್ ಹುದ್ದೆಗಳನ್ನು ಆಧ್ಯತೆಯ ಮೇರೆಗೆ ಭರ್ತಿ ಮಾಡುವುದರ ಬಗ್ಗೆ ಸಭೆಯಲ್ಲಿ ಒತ್ತಿ ಹೇಳಲಾಗಿದೆ. ರೈಲು ಸಂಚಾರ ಒತ್ತಡ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಇದು ಸಮರ್ಥವಾಗಿ ಕೆಲಸ ನಿಭಾಯಿಸಲು ಸಹಾಯವಾಗುತ್ತದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಏಕೀಕೃತ ಸ್ಟೇಷನ್ ನಿರ್ವಹಣಾ ವ್ಯವಸ್ಥೆ
ಪ್ರಯಾಣಿಕರ ಸಮಸ್ಯೆಗಳಿಗೆ ವೇಗವಾಗಿ ಸ್ಪಂದಿಸಲು ವಿವಿಧ ವಿಭಾಗಗಳ ನಡುವೆ ಸಮನ್ವಯ ಸಾಧಿಸುವ ಇಂಟಿಗ್ರೇಟೆಡ್ ಸ್ಟೇಷನ್ ಮ್ಯಾನೇಜ್‌ಮೆಂಟ್ ಸಿಸ್ಟಮ್ ರೂಪಿಸುವ ಪ್ರಸ್ತಾವನೆಯೂ ಚರ್ಚೆಗೆ ಬಂದಿದೆ.
ಸ್ಟೇಷನ್ ಮಾಸ್ಟರ್‌ಗಳಿಗೆ ಹೆಚ್ಚಿನ ಅಧಿಕಾರ ನೀಡುವ ಮೂಲಕ ಭಾರತೀಯ ರೈಲ್ವೆ ಪ್ರಯಾಣಿಕರ ಸ್ನೇಹಿ, ವೇಗ ಹಾಗೂ ಹೆಚ್ಚು ಪರಿಣಾಮಕಾರಿ ಸೇವೆಯನ್ನು ರೂಪಿಸಲು ಮುಂದಾಗಿದೆ. ಈ ಕ್ರಮ ಜಾರಿಯಾದರೆ ದೇಶದ ರೈಲು ನಿಲ್ದಾಣಗಳ ಕಾರ್ಯನಿರ್ವಹಣೆಯಲ್ಲಿ ಮಹತ್ವದ ಬದಲಾವಣೆ ಕಾಣುವ ಸಾಧ್ಯತೆ ಇದೆ.














Click it and Unblock the Notifications