Bengaluru Rain: ಬೆಂಗಳೂರಲ್ಲಿ ಮಳೆ ನೀರಿನಿಂದ ಸಮಸ್ಯೆ: ಎರಡು ಪಾಲಿಕೆಗಳ ನಡುವೆ ಫೈಟ್!
Bengaluru Rain: ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಸಣ್ಣ ಮಳೆ ಬಂದರೂ ನೀರು ನಿಲ್ಲುತ್ತಿದೆ. ಹೀಗಾಗಿ ನೀರುವ ನಿಲ್ಲುವ ಪ್ರದೇಶಗಳ ಪರಿಶೀಲನೆಯನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ಮಾಡುತ್ತಿದ್ದಾರೆ. ಇದೀಗ ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತರಾದ ಪೋಮ್ಮಲ ಸುನೀಲ್ ಕುಮಾರ್ ಅವರು ಬೆಂಗಳೂರು ಸಂಚಾರ ಪೊಲೀಸ್ ಇಲಾಖೆಯಿಂದ ಗುರುತಿಸಿ ನಗರ ಪಾಲಿಕೆಗೆ ಸಲ್ಲಿಸಿರುವ ನೀರು ನಿಲುಗಡೆ (Waterlogging) ಸಮಸ್ಯೆ ಉಂಟಾಗುವ ಸ್ಥಳಗಳ ಕುರಿತು ಜೂನ್ 22ರ ಸೋಮವಾರ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಸಂಚಾರ ಪೊಲೀಸ್ ಇಲಾಖೆಯು ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ವಿವಿಧ ಭಾಗಗಳಲ್ಲಿ ಗುರುತಿಸಿರುವ 81 ನೀರು ನಿಲುಗಡೆ ಪ್ರದೇಶಗಳ ಪೈಕಿ, ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಗೆ ಸಂಬಂಧಿಸಿದ ಸಮಸ್ಯೆಗಳ ಪರಿಹಾರಕ್ಕಾಗಿ ಈಗಾಗಲೇ ವ್ಯಾಪಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದುವರೆಗೆ 50 ಸ್ಥಳಗಳಲ್ಲಿನ ಸಮಸ್ಯೆಗಳನ್ನು ನಿವಾರಿಸಲಾಗಿದ್ದು, 4 ಸ್ಥಳಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ ಹಾಗೂ 2 ಸ್ಥಳಗಳಲ್ಲಿ ಡಿಸಿಲ್ಟಿಂಗ್ (ಹೂಳೆತ್ತುವಿಕೆ) ಕಾರ್ಯ ನಡೆಯುತ್ತಿದೆ. ಸಂಚಾರ ಪೊಲೀಸ್ ಇಲಾಖೆಯ ಅಧಿಕಾರಿಗಳು ಗುರುತಿಸಿರುವ 81 ನೀರು ನಿಲುಗಡೆ ಪ್ರದೇಶಗಳ ಪೈಕಿ, 20 ಸ್ಥಳಗಳು ಉತ್ತರ ನಗರ ಪಾಲಿಕೆಯ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ನಗರ ಪಾಲಿಕೆಯ ಎಂಜಿನಿಯರರು ತಿಳಿಸಿದ್ದಾರೆ. ಹೀಗಾಗಿ, ಇಲ್ಲಿನ 20 ಸ್ಥಳಗಳ ಪೈಕಿ ಕೆಲವು ಆಯ್ದ ಪ್ರದೇಶಗಳಲ್ಲಿ ಸೋಮವಾರ ಆಯುಕ್ತರು 2 ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ಹೆಣ್ಣೂರು-ಬಾಗಲೂರು ಮುಖ್ಯರಸ್ತೆಯಲ್ಲಿರುವ ಸ್ಪರ್ಶ್ ಆಸ್ಪತ್ರೆ ಸಮೀಪದ ರಾಜಕಾಲುವೆ (Storm Water Drain) ಪ್ರದೇಶವನ್ನು ಪರಿಶೀಲಿಸಿ, ಭಾರೀ ಮಳೆಯ ಸಂದರ್ಭದಲ್ಲಿ ಉಂಟಾಗುವ ನೀರು ನಿಲುಗಡೆ ಸಮಸ್ಯೆಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ಮಳೆ ನೀರಿನ ಸರಾಗ ಹರಿವಿಗೆ ಅಡ್ಡಿಯಾಗುವಂತೆ ರಾಜಕಾಲುವೆಯಲ್ಲಿ ಸಂಗ್ರಹವಾಗಿರುವ ತೇಲುವ ತ್ಯಾಜ್ಯ (Floating Waste) ಹಾಗೂ ಇತರೆ ತಡೆಗಳನ್ನು ತಕ್ಷಣ ತೆರವುಗೊಳಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿದರು. ಸ್ಥಳ ಪರಿಶೀಲನೆಯ ವೇಳೆ ರಾಜಕಾಲುವೆಯ ವ್ಯಾಪ್ತಿಯು ಬೆಂಗಳೂರು ಉತ್ತರ ನಗರ ಪಾಲಿಕೆ ಹಾಗೂ ಬೆಂಗಳೂರು ಪೂರ್ವ ನಗರ ಪಾಲಿಕೆ ಎರಡರ ವ್ಯಾಪ್ತಿಗೂ ಒಳಪಡುವುದು ಗಮನಕ್ಕೆ ಬಂದಿದ್ದು, ಉಭಯ ಪಾಲಿಕೆಗಳ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ಸಮಸ್ಯೆ ಬಗೆಹರಿಸುವಂತೆ ನಿರ್ದೇಶನ ನೀಡಲಾಗಿದೆ.
ಇದೇ ವೇಳೆ ಕೃಷ್ಣರಾಜಪುರದ ವಡ್ಡರಪಾಳ್ಯ ರಸ್ತೆಯಲ್ಲಿ ನೀರು ನಿಲುಗಡೆಗೆ ಸಂಬಂಧಿಸಿದ ಮತ್ತೊಂದು ಸ್ಥಳವನ್ನು ಪರಿಶೀಲಿಸಲಾಯಿತು. ಈ ಪ್ರದೇಶವು ಬೆಂಗಳೂರು ಪೂರ್ವ ನಗರ ಪಾಲಿಕೆಯ ವ್ಯಾಪ್ತಿಗೆ ಒಳಪಡುವುದರಿಂದ, ಪೂರ್ವ ನಗರ ಪಾಲಿಕೆಯ ಎಂಜಿನಿಯರರೊಂದಿಗೆ ಸಮನ್ವಯ ಸಾಧಿಸಿ, ಸಂಬಂಧ ಪಟ್ಟ ಪೂರ್ವ ನಗರ ಪಾಲಿಕೆಯ ಎಂಜಿನಿಯರರು ಅಗತ್ಯ ಕ್ರಮ ಕೈಗೊಂಡು, ಯಾವುದೇ ಸಮಸ್ಯೆಗಳಿಗೆ ಎಡೆ ಮಾಡಿಕೊಡದಂತೆ ಮುಂಜಾಗೃತಾ ಕ್ರಮ ವಹಿಸಲು ಮಾಹಿತಿ ನೀಡಲು ಸೂಚನೆ ನೀಡಲಾಯಿತು.
ಉತ್ತರ ನಗರ ಪಾಲಿಕೆಯ ವ್ಯಾಪ್ತಿಗೆ ಸೇರಿದ ನೀರುನಿಲುಗಡೆ ಪ್ರದೇಶಗಳಲ್ಲಿಯೂ ಸಹ ಮುಂಜಾಗೃತಾ ಕ್ರಮ ಕೈಗೊಳ್ಳಲು ನಗರ ಪಾಲಿಕೆಯ ಎಂಜಿನಿಯರರಿಗೆ ಸೂಚನೆ ನೀಡಲಾಯಿತು. ಇನ್ನೂ ಕೆಲವು ನೀರು ನಿಲುಗಡೆ ಪ್ರದೇಶಗಳು ಬೆಂಗಳೂರು ಉತ್ತರ ನಗರ ಪಾಲಿಕೆಯ ವ್ಯಾಪ್ತಿಗೆ ನೇರವಾಗಿ ಸೇರದಿದ್ದರೂ, ಸಾರ್ವಜನಿಕರಿಗೆ ಉಂಟಾಗುತ್ತಿರುವ ತೊಂದರೆಯನ್ನು ಪರಿಗಣಿಸಿ, ಈ ಸಮಸ್ಯೆಗೆ ಉತ್ತರ ನಗರ ಪಾಲಿಕೆಯಿಂದ ಏನಾದರೂ ಅಡೆತಡೆಗಳು ಇದ್ದಲ್ಲಿ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸಲು ಕ್ರಮವಹಿಸುವಂತೆ ಆಯುಕ್ತರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಅಲ್ಲದೆ, ಬೇರೆ ಪಾಲಿಕೆಯಲ್ಲಿರುವ ಸಮಸ್ಯೆಗಳಿಂದಾಗಿ ಉತ್ತರ ನಗರ ಪಾಲಿಕೆಯ ವ್ಯಾಪ್ತಿಯ ರಸ್ತೆಗಳಲ್ಲಿ ನೀರು ನಿಲುಗಡೆಯಾಗುತ್ತಿದ್ದರೆ, ಸಂಬಂಧಿತ ಅನ್ಯ ಪಾಲಿಕೆಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಅಗತ್ಯ ಕ್ರಮಗಳನ್ನು ಕೈಗೊಂಡು ಸಮಸ್ಯೆ ಪರಿಹಾರಕ್ಕೆ ಆದ್ಯತೆ ನೀಡಬೇಕು ಎಂದು ನಿರ್ದೇಶನ ನೀಡಲಾಗಿದೆ. ಮಳೆಗಾಲದಲ್ಲಿ ಸಾರ್ವಜನಿಕರಿಗೆ ತೊಂದರೆ ಉಂಟಾಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು, ರಾಜಕಾಲುವೆಗಳ ನಿರ್ವಹಣೆ, ಹೂಳೆತ್ತುವಿಕೆ ಹಾಗೂ ಮಳೆ ನೀರಿನ ಹರಿವಿನ ವ್ಯವಸ್ಥೆಯನ್ನು ಸುಧಾರಿಸಲು ಬೆಂಗಳೂರು ಉತ್ತರ ನಗರ ಪಾಲಿಕೆ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಪಾಲಿಕೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.












Click it and Unblock the Notifications